ನಾಗಲಮಡಿಕೆ: ವಿಜೃಂಭಣೆಯ ಬ್ರಹ್ಮರಥೋತ್ಸವ

7

ನಾಗಲಮಡಿಕೆ: ವಿಜೃಂಭಣೆಯ ಬ್ರಹ್ಮರಥೋತ್ಸವ

Published:
Updated:
ನಾಗಲಮಡಿಕೆ: ವಿಜೃಂಭಣೆಯ ಬ್ರಹ್ಮರಥೋತ್ಸವ

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಗ್ರಾಮದಲ್ಲಿ ಸೋಮವಾರ ವಲ್ಲೀ ದೇವ ಸೇನಾ ಸಮೇತ ಸುಬ್ರಹ್ಮಣ್ಯೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯ ಅಂಗವಾಗಿ ದೇವಾಲಯದಲ್ಲಿ ಪ್ರಾಕಾರೋತ್ಸವ, ಧ್ವಜಾರೋಹಣ, ಕಲ್ಯಾಣೋತ್ಸವ, ಅಂಕುರಾರ್ಪಣೆ ಇತ್ಯಾದಿ ಪೂಜೆಗಳು ನಡೆದವು.2 ಕಿ.ಮೀ. ದೂರದವರೆಗೂ ಭಕ್ತರು ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಹಾತೊ­ರೆಯುತ್ತಿದ್ದರು. ಅಲ್ಲಲ್ಲಿ ಕೆಲ ಸಂಘ ಸಂಸ್ಥೆಗಳ ಸದಸ್ಯರು ಭಕ್ತರಿಗೆ ಕುಡಿ­ಯುವ ನೀರು, ಮಜ್ಜಿಗೆ ವಿತರಿಸಿ, ದಾಹ ತಣಿಸಿದರು. ಲಕ್ಷಾಂತರ ಮಂದಿ ಸೇರುವ ಜಾತ್ರೆಗೆ ಆಡಳಿತ ಮಂಡಳಿ, ಇಲಾಖೆ ಮೂಲ ಸೌಕರ್ಯ ಕಲ್ಪಿಸದ ಬಗ್ಗೆ ಸಾರ್ವ­ಜನಿ­ಕರು ಅಸಮಾಧಾನ ವ್ಯಕ್ತಪಡಿಸಿದರು.‘ಸುಮಾರು 45 ವರ್ಷದ ಹಿಂದೆ ಜಾತ್ರೆಗೆ ಬಂದಿದ್ದೆ. ಅಂದು ಇದ್ದಂತೆಯೇ ಇಂದೂ ಇದೆ. ಐದು ನೂರು ವರ್ಷ ಇತಿಹಾಸವಿರುವ ದೇಗುಲ ಶಿಥಿಲಾವಸ್ಥೆ ತಲುಪಿರುವುದು ಶೋಚನೀಯ ಸಂಗತಿ’ ಎಂದು ಹಿಂದೂಪುರದ ರಾಮಾಂಜಿ­ನೇಯ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.ಲಕ್ಷಾಂತರ ಮಂದಿ ಜಾತ್ರೆಗೆ ಬರುತ್ತಾರೆಂಬ ವಿಷಯ ತಿಳಿದಿದ್ದರೂ ಯಾವುದೇ ಸೌಕರ್ಯ ಒದಗಿಸಿಲ್ಲ. ಕುಡಿಯುವ ನೀರು, ಶೌಚಾಲಯ, ವಸತಿ ಗೃಹದಂಥ ವ್ಯವಸ್ಥೆ ಕಲ್ಪಿಸ­ಬೇಕಿತ್ತು. ಹೆಚ್ಚಿನ ಸಂಖ್ಯೆಯ ಪೊಲೀಸ­ರನ್ನು ನಿಯೋಜಿಸಬೇಕಿತ್ತು. ಅಂತ್ಯ ಸುಬ್ರಹ್ಮಣ್ಯ ಎಂದೇ ಖ್ಯಾತಿಯಾಗಿರುವ ದೇವಸ್ಥಾನ ಸುಧಾರಣೆ ಕಾಣಬೇಕಿದೆ ಎಂದು ಬೆಂಗಳೂರಿನಿಂದ ಜಾತ್ರೆಗೆ ಆಗಮಿಸಿದ್ದ ಸುಬ್ರಹ್ಮಣ್ಯ ರಾವ್ ಹೇಳಿದರು.ಕಾಲು ಬಾಯಿ ರೋಗದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮತ್ತು ಮುಜರಾಯಿ ಇಲಾಖೆ ದನಗಳ ಜಾತ್ರೆ ನಿಷೇಧಿಸಿದ್ದರೂ ತಾಲ್ಲೂಕಿನ ಹಾಗೂ ಆಂಧ್ರದ ಪೆನುಗೊಂಡ, ಮಡಕಶಿರ, ಹಿಂದೂಪುರ ಪ್ರದೇಶಗಳಿಂದ  ಹಲ ರೈತರು ರಾಸುಗಳನ್ನು ಜಾತ್ರೆಗೆ ತಂದಿದ್ದರು.

ಜಾತ್ರೆ ಪ್ರಯುಕ್ತ ವಿಶೇಷ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಅಲ್ಲಲ್ಲಿ ಜೂಜಾಟ, ಅಂದರ್ ಬಾಹರ್, ಬಿಲ್ಲೆಯಾಟಗಳು ರಸ್ತೆ ಪಕ್ಕದಲ್ಲಿಯೇ ಜೋರಾಗಿ ನಡೆಯುತ್ತಿತ್ತು.ನದಿ ದಡದಲ್ಲಿ ತಾವು ಬೆಳೆದ ಧಾನ್ಯಗಳಿಂದ ತಾಲ್ಲೂಕಿನ ರೈತರು ವಿಶೇಷ ಅಡುಗೆ ತಯಾರಿಸಿ ಕುಟುಂಬದ­ವರೊಟ್ಟಿಗೆ ಊಟ ಮಾಡಿ ಉಪವಾಸ ಬಿಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry