ಶುಕ್ರವಾರ, ಮೇ 7, 2021
26 °C

ನಾಗಸಮುದ್ರ: ಬರಗಾಲದ ತೀವ್ರತೆಗೆ ಸಾಕ್ಷಿ:ಗ್ರಾಮದಲ್ಲಿ ನೀರಿಲ್ಲ, ವೈದ್ಯರಿಲ್ಲ, ಶಿಕ್ಷಕರಿಲ್ಲ

ಪ್ರಜಾವಾಣಿ ವಾರ್ತೆ/ಕೊಂಡ್ಲಹಳ್ಳಿ ಜಯಪ್ರಕಾಶ Updated:

ಅಕ್ಷರ ಗಾತ್ರ : | |

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಊರಿನ ಹೆಸರಿನಲ್ಲಿ ಮಾತ್ರ `ಸಮುದ್ರ~ ಹೊಂದಿರುವ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನ ನಾಗಸಮುದ್ರ ಗ್ರಾಮವು ಈಗ ರಾಜ್ಯದ ಬರ ಪರಿಸ್ಥಿತಿಯ ತೀವ್ರತೆಗೆ ಕನ್ನಡಿ ಹಿಡಿದಂತಿದೆ.ರಾಜ್ಯದ ಬರಸ್ಥಿತಿ ಬಗ್ಗೆ ಸೋನಿಯಾ ಗಾಂಧಿ ಸ್ವತಃ ಸ್ಥಳ ಪರಿಶೀಲನೆಗೆ ಆಯ್ಕೆ ಮಾಡಿಕೊಂಡಿರುವುದು ನಾಗಸಮುದ್ರ ಗ್ರಾಮ.  ಗ್ರಾಮದಲ್ಲಿ ಪೂರ್ಣ ಬತ್ತಿ ಹೋಗಿರುವ ಕೆರೆ, ಬರಗಾಲದ ತೀವ್ರತೆಗೆ ಸಾಕ್ಷಿಯಾಗಿ ನಿಂತಿದೆ. ಸೋನಿಯಾ ಭೇಟಿಯಲ್ಲಿ ಕೆರೆ ವೀಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ಇದರ ಜತೆಗೆ ಗ್ರಾಮಸ್ಥರ ಅಹವಾಲು, ಬರಸ್ಥಿತಿ ಪ್ರತಿಕೂಲ ಪರಿಣಾಮಗಳ ಕುರಿತು ವಿವರಣೆ ಪಡೆದುಕೊಳ್ಳಲಿದ್ದಾರೆ.ನಾಗಸಮುದ್ರ ಗ್ರಾಮ ರಾಜ್ಯ ಹೆದ್ದಾರಿಯಿಂದ 2 ಕಿ.ಮೀ. ದೂರದಲ್ಲಿದೆ.10 ಸಾವಿರ ಜನಸಂಖ್ಯೆ ಹೊಂದಿದೆ. 600 ಜನಸಂಖ್ಯೆ ಇರುವ ಹುಚ್ಚಂಗಿದುರ್ಗ ನಾಗಸಮುದ್ರ ಗ್ರಾಮ ಪಂಚಾಯಿತಿಗೆ ಸೇರಿದೆ. ಹುಚ್ಚಂಗಿ ದುರ್ಗದಿಂದ ಕೇವಲ 600 ಮೀಟರ್ ದೂರದಲ್ಲಿ ಆಂಧ್ರಪ್ರದೇಶದ ಗಡಿ ಇದೆ.ಶೇ 75ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರನ್ನು ಹೊಂದಿರುವ ಈ ಗ್ರಾಮಗಳಲ್ಲಿ ಯಾವುದೇ ಗುಡಿ ಕೈಗಾರಿಕೆಗಳು ಇಲ್ಲ. ಬಳ್ಳಾರಿ ಸೇರಿದಂತೆ ವಿವಿಧೆಡೆ ಕೂಲಿ ಕೆಲಸಕ್ಕೆ ಹೋಗುವುದು ಇಲ್ಲಿನವರ ಮುಖ್ಯ ಕಸುಬು ಎಂದು ಮುಖಂಡ ಗೋವಿಂದಪ್ಪ ಹೇಳುತ್ತಾರೆ.ಶಾಲೆಯಲ್ಲಿ ಶಿಕ್ಷಕರಿಲ್ಲ, ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಬಸ್ಸುಗಳು ಬರುವುದಿಲ್ಲ. ಈ ಗ್ರಾಮಗಳ ಗ್ರಾಮಸ್ಥರು ಏ.28ರಂದು ಸೋನಿಯಾ ಎದುರು ತಮ್ಮೆಲ್ಲ  ಸಮಸ್ಯೆಗಳನ್ನು ತೋಡಿಕೊಳ್ಳಲಿದ್ದಾರೆ.ನಾಗಸಮುದ್ರ ಕೆರೆಯನ್ನು 1906ರಲ್ಲಿ ನಿರ್ಮಿಸಲಾಗಿದೆ. 450 ಎಕರೆ ಅಚ್ಚುಕಟ್ಟು ಹೊಂದಿರುವ ಈ ಕೆರೆಗೆ ಮಳೆ ನೀರು ಹಾಗೂ ರಂಗಯ್ಯನದುರ್ಗ ಜಲಾಶಯವೇ ನೀರಿನ ಮೂಲವಾಗಿದೆ.

 

ಒಟ್ಟು 16 ಅಡಿ ಎತ್ತರದ ಈ ಕೆರೆಯಲ್ಲಿ ಆರು ಅಡಿಗೂ ಹೆಚ್ಚು ಹೂಳು ತುಂಬಿದೆ. ಕೆಲವೆಡೆ ಇದು ಇನ್ನೂ ಜಾಸ್ತಿಯಾಗಿದೆ. ಈ ಮೊದಲು ಒಂದು ಸಾರಿ ಈ ಕೆರೆ ತುಂಬಿದರೆ ಎರಡು ಬೆಳೆ ಬೆಳೆಯಾಗುತ್ತಿತ್ತು, ಈಗ ಒಂದು ಬೆಳೆಗೂ ಸಹ ಸಾಕಾಗುತ್ತಿಲ್ಲ ಎಂದು ರೈತ ಮಂಜುನಾಥ್, ತಿಪ್ಪೇಸ್ವಾಮಿ ಹೇಳುತ್ತಾರೆ. ಕೆರೆ ಒಣಗಿರುವುದರಿಂದ `ಸಮುದ್ರ~  ಎಂಬುದು ಈಗ ಊರಿನ ಹೆಸರಿನಲ್ಲಿ ಮಾತ್ರ ಸೀಮಿತವಾಗುವುದೇನೋ ಎಂಬ ಭಯ ಗ್ರಾಮಸ್ಥರದ್ದು. ತುಂಗಭದ್ರಾ ಹಿನ್ನೀರನ್ನು ರಂಗಯ್ಯನದುರ್ಗ ಜಲಾಶಯಕ್ಕೆ ಹರಿಸಿ ಅಲ್ಲಿಂದ ಅಚ್ಚುಕಟ್ಟುನಲ್ಲಿರುವ ಎಂಟು ಕೆರೆಗಳಿಗೆ ನೀರು ತುಂಬಬೇಕು ಎಂಬುದು ಈ ಭಾಗದ ಜನತೆಯ ಬಹು ದಿನಗಳ ಬೇಡಿಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.