ಶುಕ್ರವಾರ, ಮೇ 7, 2021
22 °C

ನಾಚಿಕೆಗೇಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪರೀಕ್ಷೆ ನಡೆಸಲು ವಿಫಲವಾಗಿರುವುದಕ್ಕೆ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾ ಗಿರುವುದು ಕಾರಣ ಎಂದು ಸಮರ್ಥಿಸಿಕೊಳ್ಳುವವರನ್ನು ಬೇಜವಾಬ್ದಾರಿ ಗಳೆನ್ನದೆ ಬೇರೆ ಹೇಗೆ ಕರೆಯಲು ಸಾಧ್ಯ? ಈ ರೀತಿ ಜವಾಬ್ದಾರಿ ಮರೆತಂತೆ ನಡೆದುಕೊಂಡಿರುವುದು ರಾಜ್ಯದ ಉನ್ನತ ಶಿಕ್ಷಣ ಇಲಾಖೆ. ಸರ್ಕಾರಿ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳ ಉಪನ್ಯಾಸಕರ ಹುದ್ದೆಗೆ ಅರ್ಜಿ ಹಾಕುವವರು ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ- ಸೆಟ್) ಪಾಸಾಗುವುದು ಈಗ ಕಡ್ಡಾಯ. ವಿಶ್ವವಿದ್ಯಾಲಯ ಅನುದಾನ ಆಯೋಗ ವರ್ಷಕ್ಕೆರಡು ಬಾರಿ ನಡೆಸುವ ರಾಷ್ಟ್ರಮಟ್ಟದ ಅರ್ಹತಾ ಪರೀಕ್ಷೆ (ಎನ್‌ಇಟಿ) ಇಂಗ್ಲಿಷ್ ಇಲ್ಲವೇ ಹಿಂದಿಯಲ್ಲಿ ಬರೆಯಬೇಕಾಗಿರುವುದರಿಂದ ಕನ್ನಡ ಮಾಧ್ಯಮದ ಕೆ-ಸೆಟ್‌ಗೆ ರಾಜ್ಯದಲ್ಲಿ ವಿಪರೀತ ಬೇಡಿಕೆ ಇದೆ. ದೂರ ದೃಷ್ಟಿ ಹೊಂದಿರಬೇಕಾದ ಸರ್ಕಾರಕ್ಕೆ ಇದು ಅನಿರೀಕ್ಷಿತವೇನಲ್ಲ. ಇದರ ಹೊರ ತಾಗಿಯೂ ಕಳೆದ ಆರು ವರ್ಷಗಳಿಂದ ರಾಜ್ಯ ಸರ್ಕಾರ ಕೆ-ಸೆಟ್ ಪರೀಕ್ಷೆ ಯನ್ನೇ ನಡೆಸಿಲ್ಲ. ಇದರಿಂದಾಗಿ ಈ ವರ್ಷದ ಕೆ-ಸೆಟ್‌ಗೆ 54 ಸಾವಿರ ಅಭ್ಯರ್ಥಿಗಳು ಅರ್ಜಿ ಹಾಕಿದ್ದಾರೆ. ಈ ಪ್ರತಿಕ್ರಿಯೆಯಿಂದ ಕಕ್ಕಾಬಿಕ್ಕಿಯಾಗಿ ರುವ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಅಭ್ಯರ್ಥಿಗಳಿಗೆ ಪ್ರವೇಶಪತ್ರವನ್ನೂ ಕೂಡಾ ಕಳುಹಿಸಲಾಗದೆ ಎರಡು ಬಾರಿ ಪರೀಕ್ಷೆಯನ್ನು ಮುಂದೂಡಿದೆ. ಈ ಪರೀಕ್ಷೆಗಳನ್ನು ಸರದಿ ಮೇಲೆ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳು ನಡೆಸಬೇಕು. ಈ ಬಾರಿ ಇದನ್ನು ನಡೆಸುವ ಹೊಣೆ ಹೊತ್ತಿರುವ ರಾಜ್ಯದ ಅತ್ಯಂತ ಹಳೆಯದಾದ ಮೈಸೂರು ವಿ ವಿ ಇಂತಹದ್ದೊಂದು ಸಾಮಾನ್ಯ ಜವಾಬ್ದಾರಿಯನ್ನು ನಿರ್ವಹಿಸಲಿಕ್ಕಾಗದೆ ತನ್ನ ಬಣ್ಣವನ್ನು ತಾನೇ ಬಯಲು ಮಾಡಿಕೊಂಡಿದೆ.ಈ ರೀತಿ ಪರೀಕ್ಷೆಗಳನ್ನು ಮುಂದೂಡುತ್ತಾ ಬಂದಿರುವುದರಿಂದ ಅಭ್ಯರ್ಥಿ ಗಳು ಮಾತ್ರವಲ್ಲ, ವಿದ್ಯಾರ್ಥಿಗಳೂ ತೊಂದರೆಗೀಡಾಗಿದ್ದಾರೆ. ನಿಯಮಿತ ವಾಗಿ ನೇಮಕಾತಿ ನಡೆಯದೆ ಇರುವುದರಿಂದಾಗಿ ರಾಜ್ಯದ ಅನುದಾನಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ನೂರಾರು ಉಪನ್ಯಾಸಕರ ಹುದ್ದೆಗಳು ಖಾಲಿ ಬಿದ್ದಿವೆ. ಕಾಲೇಜುಗಳು ಮತ್ತು ಶಿಕ್ಷಣ ಇಲಾಖೆ ಈಗ ಮೊದಲಿನಂತಲ್ಲ. ಇದಕ್ಕೆ ಇಬ್ಬರು ಸಂಪುಟ ದರ್ಜೆಯ ಸಚಿವರಿದ್ದಾರೆ. ಉನ್ನತ ಶಿಕ್ಷಣ ಖಾತೆಯ ಹೊಣೆ ಹೊತ್ತವರು ಸಚಿವ ಸಂಪುಟದಲ್ಲಿರುವ ಬೆರಳೆಣಿಕೆಯ ದಕ್ಷರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇಲಾಖೆಯ ಈಗಿನ ಕಾರ‌್ಯವೈಖರಿ ಅವರ ದಕ್ಷತೆಯನ್ನೇ ಪ್ರಶ್ನಿಸುವಂತಿದೆ. ರಾಜ್ಯದಲ್ಲಿ 21 ವಿಶ್ವವಿದ್ಯಾಲಯಗಳಿವೆ.  ಸಾವಿರಾರು ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದ ಜಾಲ ಇದೆ. ಹೀಗಿದ್ದರೂ ಇಂತಹದ್ದೊಂದು ಸಾಮಾನ್ಯ ಪರೀಕ್ಷೆಯನ್ನು ನಡೆಸಲು ಸಾಧ್ಯವಾಗದೆ ಇರುವುದು ನಾಚಿಕೆ ಗೇಡಿತನವಲ್ಲದೆ ಮತ್ತೇನು? ಇತ್ತೀಚಿನ ದಿನಗಳಲ್ಲಿ ಈ ವಿಶ್ವವಿದ್ಯಾಲಯಗಳು ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯ ಖ್ಯಾತಿಗಿಂತ ಹೆಚ್ಚಾಗಿ ಭ್ರಷ್ಟಾಚಾರದ ಹಗರಣಗಳ ಮೂಲಕ ಕುಖ್ಯಾತಿ ಪಡೆದಿರುವುದೇ ಹೆಚ್ಚು. ಕೆ-ಸೆಟ್ ಪರೀಕ್ಷೆಯ ನಿರ್ವಹಣೆಯಲ್ಲಿ ಆಗಿರುವ ಅವಾಂತರಗಳು ಇವುಗಳಲ್ಲೊಂದು ಅಷ್ಟೆ. ಇದರ ನೇರ ಹೊಣೆಯನ್ನು ಉನ್ನತ ಶಿಕ್ಷಣ ಸಚಿವರಾದ ಡಾ.ವಿ.ಎಸ್.ಆಚಾರ್ಯ ಅವರೇ ವಹಿಸಿಕೊಳ್ಳಬೇಕಾಗುತ್ತದೆ. ಅವರು ತಮ್ಮ ತಲೆಯ ಮೇಲಿರುವ ದಕ್ಷತೆಯ ಕಿರೀಟವನ್ನು ಉಳಿಸಿಕೊಳ್ಳಬೇಕಾದರೆ ಮೊದಲು ಅದಕ್ಷತೆ, ಬೇಜವಾಬ್ದಾರಿತನ ಮತ್ತು ಭ್ರಷ್ಟಾಚಾರಗಳಿಂದಾಗಿ ಸಾರ್ವಜನಿಕ ನಿಂದೆಗೆ ಗುರಿಯಾಗಿರುವ ಉನ್ನತ ಶಿಕ್ಷಣ ಇಲಾಖೆಯ ಸುಧಾರಣೆಗೆ ಮುಂದಾಗಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.