ಮಂಗಳವಾರ, ಅಕ್ಟೋಬರ್ 15, 2019
27 °C

ನಾಚಿಕೆಗೇಡು

Published:
Updated:

ಇನ್ನು ಎರಡು ತಿಂಗಳ ಅವಧಿಯಲ್ಲಿ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂಬ ಹೈಕೋರ್ಟ್ ನಿರ್ದೇಶನ ರಾಜ್ಯಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ.ರಾಜ್ಯದ 46,400 ಪ್ರಾಥಮಿಕ ಶಾಲೆಗಳ ಪೈಕಿ 41,556 ಶಾಲೆಗಳಲ್ಲಿ ಕುಡಿಯುವ ನೀರಿನ ಪೂರೈಕೆ, 989 ಬಾಲಕರ ಮತ್ತು 1,818 ಬಾಲಕಿಯರ ಶಾಲೆಗಳು ಹಾಗೂ 4278 ಪ್ರೌಢಶಾಲೆಗಳ ಪೈಕಿ 409 ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ ಎನ್ನುವ ಆಘಾತಕಾರಿ ಅಂಶ ಹೈಕೋರ್ಟ್ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಕಳೆದ ವರ್ಷದ ಡಿಸೆಂಬರ್ ಅಂತ್ಯದೊಳಗೆ ಮೂಲಸೌಕರ್ಯಗಳನ್ನು ಒದಗಿಸುವುದಾಗಿ ಹೈಕೋರ್ಟ್‌ಗೆ ನೀಡಿದ್ದ ವಾಗ್ದಾನವನ್ನು ಉಳಿಸಿಕೊಳ್ಳಲು ರಾಜ್ಯಸರ್ಕಾರಕ್ಕೆ ಸಾಧ್ಯವಾಗಿಲ್ಲ.

 

ಇದೇ ಸರ್ಕಾರ ವಿದ್ಯಾರ್ಥಿಗಳ ಕೊರತೆಯ ಕಾರಣ ನೀಡಿ ರಾಜ್ಯದ 617 ಪ್ರಾಥಮಿಕ ಶಾಲೆಗಳನ್ನು ಮುಚ್ಚಲು ಹೊರಟಿದೆ. ಈ ಕೊರತೆ ಉದ್ಭವವಾಗಿರುವ ಹಿಂದಿನ ಕಾರಣಗಳೇನು ಎನ್ನುವ ಮೂಲಭೂತ ಪ್ರಶ್ನೆಗೆ ಕೂಡಾ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉತ್ತರ ಇದೆ.ಪ್ರಾಥಮಿಕ ಶಿಕ್ಷಣದ ಸುಧಾರಣೆಯ ಮೂಲಕ ಮಕ್ಕಳು ಶಾಲೆಗೆ ಬರುವಂತೆ ಮಾಡಲು  ಕೇಂದ್ರ ಮತ್ತು ರಾಜ್ಯಸರ್ಕಾರಗಳು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಕುಡಿಯುವ ನೀರಿನ ಪೂರೈಕೆ ಮತ್ತು ಶೌಚಾಲಯದಂತಹ ಕನಿಷ್ಠ ಮೂಲಸೌಕರ್ಯವನ್ನು ಕಲ್ಪಿಸಲು ಸಾಧ್ಯವಾಗಿಲ್ಲ.ರಾಜ್ಯದ ಶೇಕಡಾ 42ರಷ್ಟು ಪ್ರಾಥಮಿಕ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳೇ ಇಲ್ಲ ಎಂದು ಇತ್ತೀಚಿನ ಒಂದು ಸಮೀಕ್ಷೆ ಹೇಳಿದೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೊಂದಿರಲಾರದು.ಅವಶ್ಯಕ ಮೂಲಸೌಕರ್ಯ ಮತ್ತು ಉತ್ತಮ ಬೋಧನಾ ವ್ಯವಸ್ಥೆ ಹೊಂದಿರುವ ಖಾಸಗಿ ಶಾಲೆಗಳು ಊರಲ್ಲಿ ಇರುವಾಗ, ಈ ಸೌಲಭ್ಯಗಳಿಲ್ಲದೆ ದುರವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಯಾವ ತಂದೆ-ತಾಯಿ ತಮ್ಮ ಮಕ್ಕಳನ್ನು ಸೇರಿಸಲು ಸಾಧ್ಯ?ಮೂಲಭೂತವಾದ ಈ ಸಮಸ್ಯೆಯನ್ನು ನಿವಾರಣೆ ಮಾಡಬೇಕಾದ ರಾಜ್ಯಸರ್ಕಾರ ಶಾಲೆಗಳನ್ನೇ ಮುಚ್ಚಲು ಹೊರಟಿರುವುದು ಅಕ್ಷಮ್ಯ ಅಪರಾಧ. ಸರ್ಕಾರ ಆದ್ಯತೆಯನ್ನು ಮರೆತು ಭಗವದ್ಗೀತೆ ಬೋಧನೆಯಂತಹ ಅನಗತ್ಯ ಕಾರ‌್ಯಕ್ರಮಗಳನ್ನು ಜಾರಿಗೆ ಹೊರಟಿರುವುದು ಕೂಡಾ ಶಿಕ್ಷಣ ಕ್ಷೇತ್ರ ಹಳಿ ತಪ್ಪಲು ಕಾರಣ.

 

ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ. ಇದರ ಬದಲಾಗಿ ಮಕ್ಕಳು ಬರುತ್ತಿಲ್ಲ ಎಂಬ ನೆಪ ಮುಂದೊಡ್ಡಿ ಶಾಲೆಗಳನ್ನು ಮುಚ್ಚಲು ಹೊರಟಿರುವುದು ದ್ರೋಹದ ಕೆಲಸ.ಸಂಪೂರ್ಣ ಸ್ವಚ್ಛತಾ ಆಂದೋಲನ ದೇಶದಾದ್ಯಂತ ಜಾರಿಯಲ್ಲಿದ್ದು ಇದಕ್ಕಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡುತ್ತಿದೆ. ಜಾಗತಿಕ ಸಂಸ್ಥೆಗಳ ಸಹಯೋಗ ಇರುವ ಈ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಸಲು ಅವಕಾಶ ಇದೆ. ಹೀಗಿದ್ದರೂ ರಾಜ್ಯಸರ್ಕಾರ ಕರ್ತವ್ಯನಿರ್ವಹಣೆಯಲ್ಲಿ ವಿಫಲಗೊಂಡಿದೆ.

 

ಇದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ  ಕ್ರಮಕೈಗೊಳ್ಳುವ ರಾಜಕೀಯ ಇಚ್ಛಾಶಕ್ತಿಯನ್ನು ರಾಜ್ಯ ಸರ್ಕಾರ ತೋರಬೇಕು. ನ್ಯಾಯಾಲಯದಿಂದ ಮತ್ತೊಮ್ಮೆ ಛೀಮಾರಿಗೊಳಗಾಗದೆ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯವನ್ನು ಆದ್ಯತೆ ಮೇಲೆ ಕಲ್ಪಿಸಲು ಮುಂದಾಗಬೇಕು.

Post Comments (+)