ನಾಚಿಕೆ ಇಲ್ಲದ ನಡಿಗೆ

7

ನಾಚಿಕೆ ಇಲ್ಲದ ನಡಿಗೆ

ಸಿ.ಜಿ.ಮಂಜುಳಾ
Published:
Updated:
ನಾಚಿಕೆ ಇಲ್ಲದ ನಡಿಗೆ

`ನೀನು ನನ್ನನ್ನು ದಿಟ್ಟಿಸಿ ನೋಡುತ್ತಿದ್ದೀಯ. ಇದಕ್ಕೆ ಕಾರಣ ನನ್ನ ಬಟ್ಟೆಗಳಲ್ಲ. ನಾನು ಹೆಣ್ಣೆಂಬುದು ಕಾರಣ~.ದೆಹಲಿಯಲ್ಲಿ ಕಳೆದ ಭಾನುವಾರ ನಡೆದ  ವಿನೂತನ ಪ್ರತಿಭಟನಾ ಕಾರ್ಯಕ್ರಮದಲ್ಲಿ ಕಂಡು ಬಂದ ಪೋಸ್ಟರ್ ಇದು. ಈ ಪ್ರತಿಭಟನಾ ಕಾರ್ಯಕ್ರಮದ ಹೆಸರು `ಸ್ಲಟ್‌ವಾಕ್ ಅರ್ಥಾತ್ ಬೇಶರ್ಮಿ ಮೋರ್ಚಾ~ (ನಾಚಿಕೆ ಇಲ್ಲದವರ ಮೆರವಣಿಗೆ). ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳಕ್ಕೆ ಮಹಿಳೆಯ ಪ್ರಚೋದನಾತ್ಮಕ ಉಡುಗೆ ತೊಡುಗೆಗಳೇ ಕಾರಣ ಎಂಬಂತಹ ಮನೋಭಾವದ ವಿರುದ್ಧ ದನಿ ಎತ್ತುವುದು ಇದರ ಉದ್ದೇಶ.`ಸ್ಲಟ್‌ವಾಕ್~ಗಳು ವಿಶ್ವದಾದ್ಯಂತ ಹೊಸ ಆವೇಶವನ್ನೇ ಹುಟ್ಟು ಹಾಕಿವೆ. ಇದಕ್ಕೆ ಕಾರಣವಾದದ್ದು ಪೊಲೀಸ್ ಅಧಿಕಾರಿಯೊಬ್ಬರ ನುಡಿ. `ಲೈಂಗಿಕ ಅಪರಾಧಗಳಿಗೆ ಬಲಿಪಶುಗಳಾಗಬಾರದು ಎಂದಿದ್ದರೆ `ಸ್ಲಟ್~(ನಡತೆಗೆಟ್ಟವಳು)ಗಳ ರೀತಿ  ಬಟ್ಟೆ ಧರಿಸುವುದನ್ನು ಬಿಡಬೇಕು~ ಎಂದಿದ್ದರು ಈತ.

 

ಕೆನಡಾದ ಟೊರೊಂಟೊದ ಯಾರ್ಕ್ ವಿಶ್ವವಿದ್ಯಾಲಯದಲ್ಲಿ  ವಿದ್ಯಾರ್ಥಿಗಳನ್ನುದ್ದೇಶಿಸಿ ಸುರಕ್ಷತಾ ನಿಯಮಗಳ ಬಗ್ಗೆ ಕಳೆದ ಜನವರಿಯಲ್ಲಿ ಭಾಷಣ ಮಾಡಿದ ಸಂದರ್ಭದಲ್ಲಿ ಹೇಳಿದ ಮಾತುಗಳವು.  ಮಹಿಳೆ ವಿರುದ್ಧದ ಅಪರಾಧಗಳನ್ನು ಸದಾ ಅವಳ ಚಾರಿತ್ರ್ಯದೊಂದಿಗೇ ಅನ್ವಯಿಸಿ  ತೀರ್ಮಾನಿಸುವಂತಹ  ಜಾಯಮಾನ ಏನೇನೂ ಬದಲಾಗಲಿಲ್ಲ ಎಂಬುದನ್ನು ಈ ಪೊಲೀಸ್ ಅಧಿಕಾರಿಯ ಮಾತುಗಳು ಮತ್ತೆ ಸೂಚಿಸಿದ್ದವು.

 

ಈ ಮಾತಿಗೆ ವಿದ್ಯಾರ್ಥಿನಿಯರು ಬರೀ ಕೋಪತಾಪ ತೋರಿ ಸುಮ್ಮನಾಗಲಿಲ್ಲ. ಪ್ರತಿಭಟನೆಗಾಗಿ, ಟೊರೊಂಟೊದ ವಿದ್ಯಾರ್ಥಿನಿ ಹೀದರ್ ಜಾರ್ವಿಸ್, ಜನರನ್ನು ಸಂಘಟಿಸಿದರು.

 

ಕನಿಷ್ಠ 100 ಮಂದಿ ಪ್ರತಿಭಟನಾ ರ‌್ಯಾಲಿಯಲ್ಲಿ ಪಾಲ್ಗೊಳ್ಳಬಹುದೆಂಬ ನಿರೀಕ್ಷೆ ಅವರದಾಗಿತ್ತು. ಆದರೆ 3000ಕ್ಕೂ ಅಧಿಕ ಜನ ಪಾಲ್ಗೊಂಡರು. ಪ್ರಚೋದನಾತ್ಮಕವಾಗಿ ಬಟ್ಟೆ ಧರಿಸುವುದು ಲೈಂಗಿಕ ಹಿಂಸಾಚಾರಕ್ಕೆ ಕಾರಣವಾಗಬೇಕಿಲ್ಲ ಎಂಬುದನ್ನು ಪ್ರತಿಪಾದಿಸಲು ರಸ್ತೆಗಳಲ್ಲಿ ತುಂಡುಡುಗೆ ತೊಟ್ಟು ಪ್ರದರ್ಶನ ನಡೆಸಿದರು.`ಸ್ಲಟ್~ ಪದವನ್ನು ಅನೇಕ ಮಂದಿ ಮೈತುಂಬಾ ಬರೆದುಕೊಂಡು ಜನರ ಗಮನ ಸೆಳೆದರು. `ಸ್ಲಟ್ ಪ್ರೈಡ್ ` (ನಾಚಿಕೆಗೆಟ್ಟವಳ ಹೆಮ್ಮೆ) ಅಥವಾ `ಮೈ ಡ್ರೆಸ್ ಈಸ್ ನಾಟ್ ಎ ಯೆಸ್~ (ನನ್ನ ಉಡುಪು, ಆಹ್ವಾನವಲ್ಲ) ಎಂಬಂತಹ ಫಲಕಗಳನ್ನು ಈ ಮಹಿಳೆಯರು ಹಿಡಿದಿದ್ದರು.

 

ತುಂಡು ಬಟ್ಟೆ ತೊಟ್ಟ ಮಾತ್ರಕ್ಕೆ ಲೈಂಗಿಕ ಆಕ್ರಮಣಗಳಿಗೆ  ಆಕೆ ಅರ್ಹಳೆಂದೇನಲ್ಲ ಎಂಬಂತಹ ಸಂದೇಶ  ಅದು. `ಆಕೆಯೇ ಸರಿ ಇಲ್ಲ~ ಎಂದು ಹೆಣ್ಣಿನ ಮೇಲೇ ಸದಾ ಗೂಬೆ ಕೂರಿಸುವ ಸಂಸ್ಕೃತಿಯಲ್ಲಿ ಪುರುಷನ `ನಾಚಿಕೆಗೆಟ್ಟ~ ವರ್ತನೆಗಳನ್ನು ಪ್ರಶ್ನಿಸದಿರುವ ದ್ವಿಮುಖ ಧೋರಣೆಗಳಿಗೆ  ಖಂಡನೆಯನ್ನು ವ್ಯಕ್ತಪಡಿಸಿದ ರೀತಿ ಅದು.  ಏಪ್ರಿಲ್‌ನಲ್ಲಿ ಶುರುವಾದ ಈ ಆಂದೋಲನ, ವಿಶ್ವದಾದ್ಯಂತ ವಿವಿಧ ನಗರಗಳಿಗೆ ಹಬ್ಬುತ್ತಿದೆ. ಪ್ರದರ್ಶನ ನಡೆದ ಎಲ್ಲಾ ನಗರಗಳಲ್ಲಿ ಅಪಾರ ಸಂಖ್ಯೆಯಲ್ಲಿ ತುಂಡುಡುಗೆ ತೊಟ್ಟ ಮಹಿಳೆಯರು ಬೀದಿಗಿಳಿದಿದ್ದರು. ಕೆನಡಾ, ಅಮೆರಿಕ, ಆಸ್ಟ್ರೇಲಿಯಾಗಳಿಂದ ಸ್ವೀಡನ್, ದಕ್ಷಿಣ ಆಫ್ರಿಕಾದವರೆಗೆ  75ಕ್ಕೂ ಹೆಚ್ಚು ನಗರಗಳಲ್ಲಿ ಈ ಆಂದೋಲನವನ್ನು ಆಯೋಜಿಸುವ  ಕಾರ್ಯಕ್ರಮಗಳು ನಡೆಯುತ್ತಿವೆ. ಭಾರತದ  ಸಂದರ್ಭಕ್ಕೆ, ಈ ಆಂದೋಲನವನ್ನು `ಸ್ಲಟ್‌ವಾಕ್ ಅರ್ಥಾತ್ ಬೇಶರ್ಮಿ ಮೋರ್ಚಾ~ ಎಂದು ಬದಲಾಯಿಸಿಕೊಳ್ಳಲಾಯಿತು. `ಸ್ಲಟ್~ ಪದ ಬಳಕೆ ಬಗ್ಗೆ  ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ಈ ಬದಲಾವಣೆ.19 ವರ್ಷದ ದೆಹಲಿಯ ಕಾಲೇಜು ವಿದ್ಯಾರ್ಥಿನಿ ಉಮಂಗ್ ಸಬರ್‌ವಾಲ್, `ಫೇಸ್‌ಬುಕ್~ ಪುಟದಲ್ಲಿ  `ಸ್ಲಟ್‌ವಾಕ್ ಡೆಲ್ಲಿ~ ಎಂಬಂತಹ ಪ್ರಚೋದನಾತ್ಮಕ ಹೆಸರಿನ ಕಾರ್ಯಕ್ರಮಕ್ಕೆ  ಬೆಂಬಲ ನೀಡಬೇಕೆಂದು ಕರೆ ನೀಡಿದಾಗ ಅದು ದೊಡ್ಡದೊಂದು  ವಿವಾದವನ್ನೇ ಸೃಷ್ಟಿಸಿತು. ಭಾರತೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ಇದರ ಪ್ರಸ್ತುತತೆ ಎಷ್ಟು ಎಂಬ ಚರ್ಚೆ ಶುರುವಾಯಿತು. ಇದೊಂದು ಸುಮ್ಮನೆ ಪ್ರಚಾರದ ಹುಚ್ಚಿಗಾಗಿ ಮಾಡುವ ಪ್ರತಿಭಟನೆ.ಭಾರತದಲ್ಲಿ ಇದು ನಡೆಯುವುದಿಲ್ಲ. ಅಪೇಕ್ಷಣೀಯವೂ ಅಲ್ಲ ಎಂಬಂತಹ ಮಾತುಗಳು ಕೇಳಿ ಬಂದವು. ಹೀಗಾಗಿ, ಜೂನ್ ತಿಂಗಳಲ್ಲಿ ನಡೆಯಬೇಕಿದ್ದ ಈ ರ‌್ಯಾಲಿ ಜುಲೈ 31ಕ್ಕೆ  ಮುಂದೂಡಿಕೆಯಾಯಿತು. ಜೊತೆಗೆ `ಸ್ಲಟ್‌ವಾಕ್~ ಸ್ವರೂಪವೂ ಬದಲಾಯಿತು.

 ಪ್ರತಿದಿನ ಧರಿಸುವ ಬಟ್ಟೆಗಳನ್ನೇ ಧರಿಸಲು ಪ್ರತಿಭಟನಾಕಾರರಿಗೆ ಉತ್ತೇಜಿಸಲಾಯಿತು.

ಈ ನಿಟ್ಟಿನಲ್ಲಿ ಭಾರತದ `ಸ್ಲಟ್‌ವಾಕ್~ನ ವಿಶೇಷವೆಂದರೆ ಇಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ಪ್ರಚೋದನಾತ್ಮಕವಾದ ಬಟ್ಟೆಗಳನ್ನು ಧರಿಸಿರಲಿಲ್ಲ. ಬಹುತೇಕ ಮಹಿಳೆಯರು ಜೀನ್ಸ್, ಕುರ್ತಾ, ಟೀ ಷರ್ಟ್ ಅಥವಾ ಸೆಲ್ವಾರ್ ಕಮೀಜ್ ಎಂಬಂತಹ ದಿನ ನಿತ್ಯದ ಉಡುಗೆಗಳನ್ನೇ ಧರಿಸಿದ್ದರು. ಭಾರತದ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ವಿರುದ್ಧದ ಹಿಂಸಾಚಾರಗಳ  ಘಟನೆಗಳ ಬಗ್ಗೆ ರೋಸತ್ತು ಪ್ರತಿಕ್ರಿಯಿಸುತ್ತಿರುವುದಾಗಿ ಸಬರ್‌ವಾಲ್ ಪ್ರತಿಪಾದಿಸುತ್ತಾರೆ.ಭಾರತದ ಪ್ರಮುಖ ನಗರಗಳಲ್ಲಿ, ದೆಹಲಿ - ಅತ್ಯಂತ ಹೆಚ್ಚಿನ ಅತ್ಯಾಚಾರಗಳು ವರದಿಯಾಗುವ ನಗರ (2010ರಲ್ಲಿ, 489 ಅತ್ಯಾಚಾರ ಪ್ರಕರಣಗಳು  ದೆಹಲಿಯಲ್ಲಿ ವರದಿಯಾಗಿವೆ). ಇನ್ನು ರಸ್ತೆಗಳಲ್ಲಿನ ಹಿಂಸಾಚಾರ, ಕಿರುಕುಳಗಳಂತೂ ಮಾಮೂಲು.`ದೆಹಲಿಯ ರಸ್ತೆಗಳಲ್ಲಿ ಬೆಳಗಿನ ಜಾವ 2 ಗಂಟೆಯಲ್ಲಿ  ಏಕಾಂಗಿಯಾಗಿ ಡ್ರೈವ್ ಮಾಡಲಾಗದು. ನಂತರ ರಾಜಧಾನಿ ಅಸುರಕ್ಷಿತವಾಗಿದೆ ಎಂದು ದೂರಲಾಗದು.ತಡರಾತ್ರಿ ಹೊರಹೋಗಬೇಕಿದ್ದರೆ ಪುರುಷ ಸಂಬಂಧಿಯನ್ನು ಜೊತೆಗೆ ಕರೆದುಕೊಂಡು ಹೋಗಿ~ ಎಂಬಂತಹ ಹೇಳಿಕೆ ನೀಡಿದ್ದ ದೆಹಲಿ ಪೊಲೀಸ್ ಕಮಿಷನರ್ ಬಿ ಕೆ ಗುಪ್ತಾ ಧೋರಣೆಯನ್ನೂ ಇದೇ ಸಂದರ್ಭದಲ್ಲಿ ಖಂಡಿಸಲಾಯಿತು.  ತನ್ನ ಎರಡು ವರ್ಷದ ಕಂದನ ಜೊತೆ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗೃಹಿಣಿ ನಿಶಿತಾ ಹೇಳಿದ ಮಾತುಗಳು ಮಾರ್ಮಿಕ. `ಭವಿಷ್ಯದಲ್ಲಿ ನನ್ನ ಮಗಳು ಇಂತಹ ಘಟನೆಯ ಭಾಗವಾಗದಿರಲೆಂದು ಇಲ್ಲಿಗೆ ಆಗಮಿಸಿದ್ದೇನೆ. ಈಗ ನಾವು ಪ್ರತಿಭಟಿಸದಿದ್ದಲ್ಲಿ, ನಮ್ಮ ಮಕ್ಕಳೂ ಮುಂದೆ ಇದೇ ಹಿಂಸೆ, ದುರ್ವರ್ತನೆ ಹಾಗೂ ನಿರ್ಲಕ್ಷ್ಯಗಳನ್ನು ಅನುಭವಿಸಬೇಕಾಗುತ್ತದೆ.~ಸಮಸ್ಯೆ ಇರುವುದು ಸಮಾಜದ ಮನಸ್ಥಿತಿಯಲ್ಲಿ. ಹೆಣ್ಣಿನ ಕುರಿತಂತೆ ಇರುವ ದ್ವಿಮುಖ ನೀತಿಯಲ್ಲಿ. ನಿರ್ದಿಷ್ಟ ರೀತಿಯಲ್ಲೇ ಡ್ರೆಸ್ ಮಾಡು ಎಂದು ಎಷ್ಟು ಬಾರಿ ಪುರುಷರಿಗೆ ಹೇಳಲಾಗುತ್ತದೆ? ಬಟ್ಟೆ ಸರಿಯಾಗಿ ತೊಟ್ಟ್ಲ್ದಿಲವೆಂದು ಹುಡುಗಿಯರಿಗೆ  ಮಾತ್ರ ನಿರಂತರವಾಗಿ ಚುಚ್ಚಲಾಗುತ್ತದೆ ಎಂದೆಲ್ಲಾ ಪ್ರತಿಭಟನಾಕಾರರು ಖಂಡಿಸಿದರು. `ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಡೆದದ್ದಕ್ಕಿಂತ ಭಿನ್ನವಾಗಿ `ಬೇಶರ್ಮಿ ಮೋರ್ಚಾ~ ಗಂಭೀರ ರೀತಿಯಲ್ಲಿ ದೆಹಲಿಯಲ್ಲಿ ನಡೆದಿದೆ. ಈವ್ ಟೀಸಿಂಗ್ ಇರಲಿ, ಅತ್ಯಾಚಾರವಾಗಿರಲಿ ಅವಳು ಯಾವ ರೀತಿ ಬಟ್ಟೆ ತೊಟ್ಟಿದ್ದಳೆಂದೇ ಮೊದಲು ಆಲೋಚಿಸಲಾಗುತ್ತದೆ. ಆದರೆ ಸೀರೆ ಉಟ್ಟು ಸೆರಗು ಹಾಕಿಕೊಂಡಿದ್ದರೂ ರಸ್ತೆಗಳಲ್ಲಿ ಕೆಟ್ಟ ದೃಷ್ಟಿ, ಮಾತುಗಳಿಂದ ಪಾರಾಗುವುದು ಸಾಧ್ಯವಿಲ್ಲ.

 

ಈ ಕುರಿತ ಪ್ರತಿಭಟನೆಯ ಸಂದೇಶವನ್ನು ಈ ಮೋರ್ಚಾ ಪಸರಿಸಿದೆ. ಬೀದಿಗಳು ಸುರಕ್ಷಿತವಾಗಬೇಕು. ಅದು ನಮ್ಮದೂ ಜಾಗ, ನಮ್ಮ ಹಕ್ಕು ಎಂಬಂತಹ ಪ್ರತಿಪಾದನೆ ಇಲ್ಲಿ ಮುಖ್ಯ. ಜೊತೆಗೆ ಈ ಮೋರ್ಚಾಗೆ ಯುವಕರು ವ್ಯಕ್ತ ಪಡಿಸಿದ ಬೆಂಬಲ ಸಕಾರಾತ್ಮಕವಾದದ್ದು~ ಎನ್ನುತ್ತಾರೆ ಬೆಂಗಳೂರಿನ ಮಹಿಳಾ ಹಕ್ಕುಗಳ ಸಂಘಟನೆ `ವಿಮೋಚನಾ~ದ ಸದಸ್ಯೆಯೊಬ್ಬರು. ಆದರೆ `ಜನವಾದಿ~ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಕೆ. ಎಸ್. ವಿಮಲಾ ಅವರ ಅಭಿಪ್ರಾಯ ವಿಭಿನ್ನವಾದದ್ದು. `ಈ ಬಗೆಯ ಅತಿರೇಕದ  ವರ್ತನೆಗಳು ಇಡೀ ಪ್ರಜಾಸತ್ತಾತ್ಮಕ ಚಳವಳಿಯನ್ನೇ ದುರ್ಬಲಗೊಳಿಸುತ್ತದೆ~ ಎಂಬುದು ಅವರ ವಾದ. `ಟೊರೆಂಟೊ ಪೊಲೀಸ್ ಅಧಿಕಾರಿಯ ಮಾತನ್ನು ಖಂಡನೆ ಮಾಡಬೇಕು ಎಂಬುದು ನಿರ್ವಿವಾದ. ಆದರೆ ಖಂಡನೆ ಪ್ರಜಾಸತ್ತಾತ್ಮಕ ರೀತಿಯಲ್ಲಿರಬೇಕು. ಈ ಹಿಂದೆ ನಡೆದ `ಪಿಂಕ್ ಚಡ್ಡಿ~ ಆಂದೋಲನವನ್ನು ಅಭಿವ್ಯಕ್ತಿಯ ಒಂದು ಕ್ರಮ ಎಂದು ಒಪ್ಪಿಕೊಂಡರೂ ಅದು ಆರೋಗ್ಯಕರ ಅಲ್ಲ.

 

ಮಣಿಪುರದಲ್ಲಿ ಭಾರತೀಯ  ಸೇನಾ ಅಧಿಕಾರಿಗಳ ದೌರ್ಜನ್ಯಗಳನ್ನು  ತಡೆಯಲಾಗದೆ ಬೀದಿಗೆ ಬಂದ ಮಹಿಳೆಯರು ನಗ್ನರಾಗಿ ` ಇಂಡಿಯನ್ ಆರ್ಮಿ ರೇಪ್ ಅಸ್~ (`ಭಾರತೀಯ ಸೇನೆಯೇ, ನಮ್ಮ ಮೇಲೆ ಬಲಾತ್ಕಾರವೆಸಗಿ~) ಎಂದು ಸವಾಲೆಸೆದಿದ್ದೂ  ಇದೆ.  ಹೀಗಿದ್ದೂ ಪ್ರತಿಭಟನೆಗಳು ಚಳವಳಿಯ ಭಾಗವಾಗಿದ್ದರೆ ಅದಕ್ಕೊಂದು ಸಮರ್ಪಕ ದೃಷ್ಟಿಕೋನ ಹಾಗೂ ಅರಿವು ಇರುತ್ತದೆ~ ಎನ್ನುತ್ತಾರೆ ವಿಮಲಾ.1000 ಮಂದಿ `ಬೇಶರ್ಮಿ ಮೋರ್ಚಾ~ದಲ್ಲಿ ಪಾಲ್ಗೊಂಡಿದ್ದರು ಎಂದು ಸಂಘಟಕರು ಹೇಳಿಕೊಂಡರೂ,  700ರಿಂದ 800 ಮಂದಿ ಇದ್ದದ್ದಂತೂ ನಿಜ ಎಂಬುದೂ ಸಾಧನೆಯೇ. ಇಂತಹದೇ ಮೋರ್ಚಾ ಭೋಪಾಲ್‌ನಲ್ಲಿ ಜುಲೈ17ರಂದು ನಡೆಸಲು ಯತ್ನಿಸಲಾಯಿತು. ಆದರೆ ಹೆಚ್ಚಿನ ಸಂಖ್ಯೆಯ ಜನ ಪಾಲ್ಗೊಳ್ಳದೆ ಅದು ವಿಫಲವಾಗಿತ್ತು.`ಬ್ರಾ ಬರ್ನಿಂಗ್~ನಿಂದ ಸ್ಲಟ್‌ವಾಕ್‌ವರೆಗೆ...

1968 ನೇ ಇಸವಿಯಲ್ಲಿ `ಮಿಸ್ ಅಮೆರಿಕ ಸೌಂದರ್ಯ ಸ್ಪರ್ಧೆ~ ವಿರೋಧಿಸಿ ನಡೆಸಿದ ಪ್ರದರ್ಶನದ ವೇಳೆ ಅಲ್ಲಿರಿಸಿದ್ದ `ಫ್ರೀಡಂ ಟ್ರ್ಯಾಷ್ ಕ್ಯಾನ್~ ( ಸ್ವಾತಂತ್ರ್ಯದ ಡಬ್ಬ) ಗೆ  ಎತ್ತರದ ಹಿಮ್ಮಡಿಯ ಪಾದರಕ್ಷೆ, ಪ್ರಸಾಧನ ಸಾಮಗ್ರಿಗಳು, ಬ್ರಾ ಇತ್ಯಾದಿಗಳನ್ನು ಪ್ರತಿಭಟನಾರ್ಥ ಎಸೆಯಲಾಗಿತ್ತು.ಇದು ಮಾಧ್ಯಮಗಳಲ್ಲಿ ಅತಿರಂಜಿತವಾಗಿ ವರದಿಯಾಗಿ, `ಬ್ರಾ ಬರ್ನಿಂಗ್~  ಸ್ತ್ರೀವಾದಿಗಳೆಂಬ ನುಡಿಗಟ್ಟು ಚಾಲ್ತಿಗೆ  ಕಾರಣವಾಯಿತು: ಜೊತೆಗೆ ಚಳವಳಿಯ ಉದ್ದೇಶ ತಪ್ಪಾಗಿ ವ್ಯಾಖ್ಯಾನಗೊಂಡಿದ್ದೂ ಈಗ ಇತಿಹಾಸ.ಈ ಘಟನೆ ನಡೆದ 43 ವರ್ಷಗಳ ನಂತರ, ಮಹಿಳೆಯರ ವಿರುದ್ಧ ನಡೆಯುತ್ತಿರುವ ಲೈಂಗಿಕ ಹಿಂಸಾಚಾರಗಳನ್ನು ಪ್ರತಿಭಟಿಸಲು ಜಗತ್ತಿನಾದ್ಯಂತ ಯುವ ಮಹಿಳೆಯರು ಮತ್ತೊಂದು  ವಿನೂತನ  ರೀತಿಯ ಪ್ರತಿಭಟನೆಗೆ ಬೀದಿಗಿಳಿದಿದ್ದಾರೆ.ತುಂಡುಡುಗೆ ತೊಟ್ಟು ಬೀದಿಗಳಲ್ಲಿ ನಡೆಸುವ ಮೆರವಣಿಗೆಯ ಹೆಸರು `ಸ್ಲಟ್‌ವಾಕ್.~ ಲೈಂಗಿಕ ಕಿರುಕುಳಕ್ಕೆ ಮಹಿಳೆ ಧರಿಸುವ ಬಟ್ಟೆಗಳೇ ಕಾರಣ ಎಂಬಂತಹ ಮನೋಭಾವ ಖಂಡಿಸುವ ಉದ್ದೇಶದ ನಡಿಗೆ ಇದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry