ಶುಕ್ರವಾರ, ಮೇ 27, 2022
30 °C

ನಾಜೂಕು ತಂತಿಗಳ ಸಂತೂರ್

ಅವನೀಶ್ Updated:

ಅಕ್ಷರ ಗಾತ್ರ : | |

ಸಂತೂರ್ ವಾದ್ಯದ ಬಗ್ಗೆ ಬರೆಯುವಾಗ ಎಲ್ಲೋ ಓದಿದ ಒಂದು ಸಣ್ಣ ಕತೆಯ ತುಣುಕು ನೆನಪಾಗುತ್ತದೆ. ಸಂಗೀತ ಕಲಾವಿದನೊಬ್ಬ ಸಂತೂರ್ ವಾದ್ಯವನ್ನು ನೋಡಿದನಂತೆ. ಅದರ ಬ್ರಿಡ್ಜ್ ಮತ್ತು ಸ್ಟ್ರಿಂಗ್‌ಗಳನ್ನು ಕಂಡು, ಅದರಿಂದ ಹೊಮ್ಮುವ ಸುನಾದ ಕೇಳಿ ವಾದ್ಯ ಕಲಿಯುವುದಾದರೆ ಸಂತೂರನ್ನೇ ಕಲಿಯಬೇಕು ಎಂದು ನಿರ್ಧರಿಸಿದನಂತೆ. ಅತ್ಯಂತ ಕಠಿಣ ಪರಿಶ್ರಮ ಬೇಕಿರುವ ವಾದ್ಯ ಸಂತೂರನ್ನು ಶ್ರುತಿ ಮಾಡಲಾರಂಭಿಸಿದ.ಬರೋಬ್ಬರಿ ನೂರು ತಂತಿಗಳಿರುವ ಸಂತೂರ್‌ನ ಎಲ್ಲ ತಂತಿಗಳನ್ನೂ ಶ್ರುತಿ ಮಾಡಲೇಬೇಕು. ಶ್ರುತಿ ಮಾಡುವುದು ಕೊಂಚ ಹೆಚ್ಚು ಕಡಿಮೆಯಾದರೂ ಬರುವುದು ಅಪಶ್ರುತಿಯೇ. ಹೀಗೆ ಆತನಿಂದ ಸಂತೂರ್ ಕಲಿಯಲಾಗಲೇ ಇಲ್ಲವಂತೆ. ಕೊನೆಗೆ ತನ್ನ ಆತ್ಮಕತೆಯಲ್ಲಿ ಹೀಗೆ ಬರೆಯುತ್ತಾನೆ.... `ನಾನು ಸಂತೂರ್ ಕಲಿಯಲು ಹೋದೆ; ಮುದುಕನಾದೆ.~ಬಹಳ ಪುರಾತನ ತಂತಿ ವಾದ್ಯ ಸಂತೂರ್. ಉಗಮವಾದದ್ದು ಕಾಶ್ಮೀರದಲ್ಲಿ. ಹಿಂದೆ ಶತ ತಂತಿ ವೀಣೆ (100 ತಂತಿಗಳ ವೀಣೆ) ಬಳಕೆಯಲ್ಲಿತ್ತು. ಅಂದಹಾಗೆ, ಎಲ್ಲ ತಂತಿ ವಾದ್ಯಗಳ  ತಾಯಿ ಪಿನಾಕಿನಿ ವೀಣೆ. ಇದರಿಂದ ಹುಟ್ಟಿದ ವಿಶಿಷ್ಟ ವಾದ್ಯ ಸಂತೂರ್.ಕಾಶ್ಮೀರದಲ್ಲಿ ಇದನ್ನು ಜನಪದ ಮತ್ತು ಸೂಫಿ ಸಂಗೀತಕ್ಕೆ ಸಾಥಿ ವಾದ್ಯವಾಗಿ ಬಳಸುತ್ತಿದ್ದರು. ಗಜಲ್ ಹಾಡುಗಾರರೂ ಸಂತೂರ್ ಉಪಯೋಗಿಸುತ್ತಿದ್ದರು.ಇದು ಅತ್ಯಂತ ಸೂಕ್ಷ್ಮ ವಾದ್ಯವಾದ್ದರಿಂದ ಇದರ ತಂತಿಗಳೂ ಬಹಳ ನಾಜೂಕು. ಇದನ್ನು ನುಡಿಸಲು ಎರಡು ಮರದ `ಮ್ಯಾಲೆಟ್~ ಬಳಸುವರು. ಸಾಥಿ ವಾದ್ಯದವರಿಂದಲೂ ಈಗೀಗ ಸೋಲೊ ಕಛೇರಿಗಳಲ್ಲಿ ಜನಪ್ರಿಯವಾಗುತ್ತಿದೆ.

 ತಬಲಾ ಇದಕ್ಕೆ ಪ್ರಮುಖ ಸಾಥಿ ವಾದ್ಯ. ಹಿಂದೂಸ್ತಾನಿ ಸಂಗೀತದಲ್ಲಿ ಗಾಯಕರು ಬಳಸುವ `ಸ್ವರ ಮಂಡಲ~ ಹೆಚ್ಚು ಕಡಿಮೆ ಸಂತೂರನ್ನೇ ಹೋಲುತ್ತದೆ. ಪಿಯಾನೊ ಕೂಡ ಸಂತೂರ್‌ನ ಗುಣಕ್ಕೆ ಹೆಚ್ಚು ಹೋಲುವ ವಾದ್ಯ.ವಾದ್ಯ ಒಂದೇ; ನಾಮ ಹಲವು

ಸಂತೂರ್ ವಾದ್ಯ ವಿವಿಧ ರೂಪಗಳಲ್ಲಿ ವಿಶ್ವದ ನಾನಾ ದೇಶಗಳಲ್ಲೂ ಬಳಕೆಯಲ್ಲಿದೆ. ಪಾಶ್ಚಾತ್ಯರು ಇದನ್ನು `ಹಾರ್ಪ್~ ಎನ್ನುವರು. ಚೀನಾದಲ್ಲಿ `ಯಾಂಗ್ ಕ್ವಿನ್~, ಮಧ್ಯ ಏಷ್ಯಾ ರಾಷ್ಟ್ರಗಳಲ್ಲಿ `ಸಿಂಬಾಲೆ~, ಇರಾನ್‌ನಲ್ಲಿ ಸಂತೂರ್, ಗ್ರೀಸ್‌ನಲ್ಲಿ ಸಂತೂರಿ, ಜರ್ಮನಿಯಲ್ಲಿ ಹ್ಯಾಕ್‌ಬ್ರೆತ್, ಹಂಗೇರಿಯಲ್ಲಿ ಸಿಂಬಲಾಮ್ ಹಾಗೂ ಯೂರೋಪ್ ಮತ್ತು ಅಮೆರಿಕಗಳಲ್ಲಿ ಇದನ್ನು `ಹ್ಯಾಮರ್ ಡಲ್ಸಿಮರ್~ ಎಂದು ಕರೆಯುತ್ತಾರೆ.ಹಾಗೆ ನೋಡಿದರೆ ಸಂತೂರ್‌ನಲ್ಲಿ ಶಾಸ್ತ್ರೀಯ ಸಂಗೀತ ಹೆಚ್ಚು ಚಾಲ್ತಿಗೆ ಬಂದದ್ದು 1950ರ ನಂತರವೇ. ಪಂ. ಶಿವಕುಮಾರ್ ಶರ್ಮ ಅವರ ತಂದೆ ಪಂ. ಉಮಾದತ್ತ ಶರ್ಮ ಉತ್ತಮ ಗಾಯಕರು, ತಬಲಾ ಮತ್ತು ಹಾರ್ಮೋನಿಯಂ ವಾದಕರೂ ಆಗಿದ್ದರು.ಅವರು ಒಮ್ಮೆ ಕಾಶ್ಮೀರಕ್ಕೆ ಹೋದಾಗ ಅಲ್ಲಿ ಸಂತೂರ್ ವಾದ್ಯವನ್ನು ನೋಡಿ ಅದನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸುವ ಪ್ರಯತ್ನ ಮಾಡಿದರು. ಇದರಲ್ಲಿ ಯಶ ಕಂಡ ಬಳಿಕ ಸಂತೂರನ್ನು ತಮ್ಮ ಮಗ ಶಿವಕುಮಾರ್ ಶರ್ಮ ಅವರಿಗೆ ಕಲಿಸಿದರು.ನೂರು ತಂತಿಗಳ ಸಂತೂರ್ ವಾದ್ಯವನ್ನು ಕೊಂಚ ಮಾರ್ಪಾಡು ಮಾಡಿ ಮತ್ತಷ್ಟು ಜನಪ್ರಿಯಗೊಳಿಸಿದವರು ಪಂ. ಶಿವಕುಮಾರ ಶರ್ಮ ಅವರೇ. ಒಟ್ಟು 91 ತಂತಿಗಳನ್ನು ಮಾತ್ರ ಉಳಿಸಿಕೊಂಡು ಶಾಸ್ತ್ರೀಯ ಸಂಗೀತವನ್ನು ನುಡಿಸುತ್ತಾ ಬಂದರು. ಕಳೆದ 40 ವರ್ಷಗಳಿಂದ ಸಂತೂರ್‌ನಲ್ಲಿ ವಿವಿಧ ರಾಗಗಳನ್ನು ನುಡಿಸಿ ಈ ವಾದ್ಯಕ್ಕೆ ಉತ್ತಮ ಮನ್ನಣೆ ದೊರೆಯುವಂತೆಯೂ ಮಾಡಿದರು.ಪಂ. ಶಿವಕುಮಾರ್ ಶರ್ಮ, ರಾಹುಲ್ ಶರ್ಮ, ಕಿರಣ್‌ಪಾಲ್ ಸಿಂಗ್, ಉಲ್ಲಾಸ್ ಬಾಪಟ್ ದೇಶದ ಪ್ರಮುಖ ಸಂತೂರ್ ವಾದಕರು. ನಮ್ಮ ಕರ್ನಾಟಕದಲ್ಲಿ ಸಂತೂರ್ ಕಲಾವಿದರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅಶ್ವಿನ್ ವಲಾವಲ್ಕರ್ ಬೆಂಗಳೂರಿನಲ್ಲಿದ್ದು, ಕೇಶವ ಕುಮಾರ್ ಬಳವಿ ಸದ್ಯ ಧಾರವಾಡದಲ್ಲಿರುವ ಸಂತೂರ್ ಕಲಾವಿದರು.ಸ್ವರ ಜ್ಞಾನ ಅಗತ್ಯ

ಸಂತೂರ್ ಕಲಿಯಬೇಕಾದರೆ ಉತ್ತಮ ಸ್ವರ ಜ್ಞಾನ, ಕಠಿಣ ಪರಿಶ್ರಮ ಅತ್ಯಗತ್ಯ ಎನ್ನುತ್ತಾ ತಾವು ಸಂತೂರ್ ಕಲಿತ ಪರಿಯನ್ನು ವಿವರಿಸುತ್ತಾರೆ ಸಂತೂರ್‌ನ ವಿರಳಾತಿ ವಿರಳ ಕಲಾವಿದರಲ್ಲಿ ಒಬ್ಬರಾದ ಪಂ. ಅಶ್ವಿನ್ ವಲಾವಲ್ಕರ್.`ಸುಮಾರು 10 ವರ್ಷಗಳಿಂದ ನಾನು ಸಂತೂರ್ ನುಡಿಸುತ್ತಿದ್ದು, ನಮ್ಮ ತಂದೆ ಪಂ.ಶ್ರೀರಾಮ್ ವಲಾವಲ್ಕರ್ ಅವರಿಂದ ಸಂತೂರ್ ಕಲಿತೆ. ಖ್ಯಾತ ಸಿತಾರ್ ವಾದಕ ಉಸ್ತಾದ್ ಶಫೀಕ್ ಖಾನ್ ಅವರಲ್ಲೂ ಮಾರ್ಗದರ್ಶನ ಪಡೆದಿದ್ದೆ.ಅನೇಕ ಕಡೆಗಳಲ್ಲಿ ಸೋಲೊ ಕಛೇರಿ ನೀಡಿದ್ದು, ಇದರಲ್ಲಿ ಇನ್ನೂ ಹೆಚ್ಚಿನ ಅಧ್ಯಯನ ಮಾಡಬೇಕಾಗಿದೆ. ಪಂ. ಶಿವಕುಮಾರ್ ಶರ್ಮ ಅವರ ಶಿಷ್ಯರಾದ ಸತೀಶ್ ವ್ಯಾಸ್ ಮುಂಬಯಿಯಲ್ಲಿದ್ದು, ಅವರ ಬಳಿ ಇನ್ನೂ ಹೆಚ್ಚಿನ ಅಭ್ಯಾಸ ನಡೆಸುತ್ತಿದ್ದೇನೆ ಎನ್ನುತ್ತಾರೆ ಪಂ. ಅಶ್ವಿನ್.ಸಂತೂರ್‌ನಲ್ಲಿ ವಿಲಂಬಿತ್ ಮತ್ತು ಧೃತ್ ಎರಡೂ ಕೇಳಲು ಚೆನ್ನಾಗಿರುತ್ತದೆ. ಹೆಚ್ಚಾಗಿ ತೀನ್‌ತಾಲ್, ರೂಪಕ್‌ತಾಲ್ ಮತ್ತು ಝಪ್ ತಾಲ್‌ಗಳನ್ನೇ ನುಡಿಸಾಣಿಕೆಗೆ ಆಯ್ಕೆ ಮಾಡಿಕೊಳ್ಳುವುದು ಎನ್ನುತ್ತಾರೆ ಅವರು.ಸಂತೂರ್ ಕಲಿಯಬೇಕಾದರೆ ಕನಿಷ್ಠ 12 ವರ್ಷವಾದರೂ ಆಗಿರಬೇಕು. ಸಂಗೀತ ಗೊತ್ತಿರಲೇಬೇಕು, ಸ್ವರಜ್ಞಾನ ಚೆನ್ನಾಗಿರಬೇಕು. ವಾದ್ಯವನ್ನು ಪ್ರತಿ ಬಾರಿ ಶ್ರುತಿ ಮಾಡುವಾಗಲೂ ಎಲ್ಲ 91 ತಂತಿಗಳನ್ನೂ ಶ್ರುತಿ ಮಾಡಬೇಕಾಗುತ್ತದೆ ಎಂದು ವಿವರಿಸುತ್ತಾರೆ ಪಂ. ಅಶ್ವಿನ್.ಮುಂಬಯಿ, ಕೋಲ್ಕತ್ತಾ, ದೆಹಲಿ, ಹೈದ್ರಾಬಾದ್, ಪುಣೆ ಮುಂತಾದ ಕಡೆಗಳಲ್ಲಿ ಸಂತೂರ್ ಸಿಗುತ್ತದೆ. ಬೆಲೆ 13 ಸಾವಿರ ರೂಪಾಯಿಗಳಿಂದ ಆರಂಭ. ಅಂದಾಜು 60 ಸಾವಿರ ರೂಪಾಯಿವರೆಗೂ ಬೆಲೆ ಬಾಳುತ್ತದೆ. ಅಶ್ವಿನ್ ವಲಾವಲ್ಕರ್ ಅವರನ್ನು 98451 79002 ನಲ್ಲಿ ಸಂಪರ್ಕಿಸಬಹುದು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.