ನಾಟಕಕಾರನಾದ ನಟ ಹುಲಿ

7

ನಾಟಕಕಾರನಾದ ನಟ ಹುಲಿ

Published:
Updated:

ಬಹುದೊಡ್ಡ ನಟರೇ ನಾಟಕಕಾರರೂ ಆಗಿ ಯಶಸ್ಸು ಪಡೆದ ಪ್ರತೀತಿ ವೃತ್ತಿರಂಗಭೂಮಿಗಿದೆ. ಗರುಡ, ವಾಮನರಾವ್, ಓಬಳೇಶ್, ದುರ್ಗಾದಾಸ್, ಹೂಗಾರ, ಗುಡಿಗೇರಿ, ಹಿರಣ್ಣಯ್ಯ ಮುಂತಾದವರ ಸಾಲಿಗೆ ಸೇರುವ ಹೆಸರು ಹುಲಿಮನೆ ಸೀತಾರಾಮಶಾಸ್ತ್ರಿ ಅವರದು.`ಎಚ್ಚಮ ನಾಯಕ'ದ ದುರ್ಗಸಿಂಹ, `ಕೀಚಕವಧೆ'ಯ ಭೀಮ, `ಸತ್ಯವಾನ ಸಾವಿತ್ರಿ'ಯ ಯಮನ ಪಾತ್ರದ ಮೂಲಕ ಪ್ರೇಕ್ಷಕರ ಎದೆಯಲ್ಲಿ ನಡುಕ ಉಂಟು ಮಾಡುತ್ತಿದ್ದ ಹುಲಿಮನೆಯವರು; ಸ್ವತಃ ತಾವೇ ರಚಿಸಿದ `ಪನ್ನಾದಾಸಿ'ಯಲ್ಲಿ ಬನಬೀರ, `ಸಂಶಯ ಸಾಗರ'ದ ಫಲ್ಗುಣರಾಯ, `ವರದಕ್ಷಿಣೆ'ಯ ಲಕ್ಷ್ಮೀಪತಿರಾಯ, `ಟಿಪ್ಪುಸುಲ್ತಾನ' ನಾಟಕದ ಮೈಸೂರು ಹುಲಿ ಟಿಪ್ಪುವಾಗಿ ರಂಗದ ಮೇಲೆ ಪ್ರತ್ಯಕ್ಷ ಹುಲಿ(ಮನೆ)ಯೇ ಆಗಿಬಿಡುತ್ತಿದ್ದರಂತೆ.ಹುಲಿಮನೆ ಸೀತಾರಾಮಶಾಸ್ತ್ರಿ ಕನ್ನಡ ವೃತ್ತಿರಂಗಭೂಮಿ ಕಂಡ ಬಹುದೊಡ್ಡ ನಟರು. 13 ವರ್ಷ ಸ್ವಂತ, 5 ವರ್ಷ ಸಹಕಲಾವಿರೊಂದಿಗೆ ನಾಟಕ ಕಂಪೆನಿ ಸೂತ್ರಧಾರರಾಗಿದ್ದ ಶಾಸ್ತ್ರಿಗಳು, ಗರುಡರ ನಾಟಕ ಕಂಪೆನಿಯ ಪ್ರಮುಖ ನಟರಾಗಿಯೂ ಕೆಲಕಾಲ ಸೇವೆ ಸಲ್ಲಿಸಿದ್ದರು. ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕು ಹುಲಿಮನೆಯಲ್ಲಿ 1906ರಲ್ಲಿ ಜನಿಸಿದ ಶಾಸ್ತ್ರಿಗಳಿಗೆ ಶಾಲಾ ದಿನಗಳಲ್ಲೇ ಯಕ್ಷಗಾನ ಪ್ರಭಾವ ಬೀರಿತ್ತು. ಸಂಸ್ಕೃತ ಕಲಿಯಲು ಮನೆಯಿಂದ ಬೆಂಗಳೂರಿಗೆ ಓಡಿಹೋದ ಶಾಸ್ತ್ರಿಗಳು ಕರ್ಪೂರಿ ಶ್ರೀನಿವಾಸರಾಯರ ನೆರವಿನಿಂದ ಸಂಸ್ಕೃತ ಪಾಠಶಾಲೆ ಸೇರುತ್ತಾರೆ.

ನಾಟಕ ಶಿರೋಮಣಿ ವರದಾಚಾರ್ಯರ ಸಲಹೆ ಮೇರೆಗೆ ಗದುಗಿನ ಗರುಡರ ದತ್ತಾತ್ರೇಯ ನಾಟಕ ಮಂಡಳಿಯ ನಟನಾಗಿ (1925) ಸೇರುತ್ತಾರೆ. ಕಂಚಿನ ಕಂಠ ಹಾಗೂ ತಮ್ಮ ಚಾಲಾಕಿತನದಿಂದ ಗರುಡರ ಮನಸ್ಸು ಗೆದ್ದು ಅವರಿಂದ ಅಭಿನಯದ ಪಟ್ಟುಗಳನ್ನು ಕಲಿತುಕೊಂಡು ಪ್ರಮುಖ ಪಾತ್ರಗಳಲ್ಲಿ ನಟಿಸುವ ಅವಕಾಶ ಪಡೆಯುತ್ತಾರೆ. ಗರುಡರ ಸರಿಸಾಟಿ ನಟನೆಂಬ ಹೆಸರು ಬಂದುಬಿಡುತ್ತದೆ. 1929ರಲ್ಲಿ ಅಲ್ಲಿಂದ ಹೊರಬಿದ್ದ ಸಹನಟ ಜಗನ್ನಾಥರಾವ್ ಕುಲಕರ್ಣಿ ಸ್ಥಾಪಿಸಿದ ಶ್ರೀ ಗುರು ಸಮರ್ಥ ನಾಟಕ ಸಂಘಕ್ಕೆ ಹೆಗಲುಕೊಟ್ಟು ಪಾಲುದಾರರಾಗುತ್ತಾರೆ.ಹೊಸ ನಾಟಕಗಳ ಅವಶ್ಯಕತೆ ಇದೆ ಎನಿಸಿದಾಗ ಶಾಸ್ತ್ರಿಗಳೇ ಸ್ವತಃ ನಾಟಕ ರಚನೆಗೆ ತೊಡಗುತ್ತಾರೆ. ನಟನೇ ನಾಟಕಕಾರನೂ ಆಗುವ ಅನಿವಾರ್ಯತೆ ನಾಟಕ ಕಂಪೆನಿಗಳಲ್ಲಿ ಹಲವು ಬಾರಿ ಹೀಗೆಯೇ ಸೃಷ್ಟಿಯಾಗುತ್ತದೆ. ಮರಾಠಿಯ `ಪಂತಾಚಿಸೂನ್' ಎಂಬ ನಾಟಕವನ್ನು ಆಧಾರವಾಗಿ ಇಟ್ಟುಕೊಂಡು ಶಾಸ್ತ್ರಿಗಳು `ವರದಕ್ಷಿಣೆ' ನಾಟಕ ರಚಿಸುತ್ತಾರೆ. ಧನದಾಹಿ ಲಕ್ಷ್ಮೀಪತಿರಾಯನ ಪಾತ್ರದಲ್ಲಿ ಶಾಸ್ತ್ರಿಗಳು ಅಪಾರ ಜನಮನ್ನಣೆ ಗಳಿಸುತ್ತಾರೆ.ಐದಾರು ವರ್ಷಗಳಲ್ಲಿ ಸಮರ್ಥ ಮಂಡಳಿ ಸ್ಥಗಿತಗೊಳ್ಳುತ್ತದೆ. 1935ರಲ್ಲಿ ತಾವೇ ಸ್ವತಃ ಶ್ರೀ ಜಯಕರ್ನಾಟಕ ನಾಟಕ ಮಂಡಳಿ ಸ್ಥಾಪಿಸುತ್ತಾರೆ. 1948ರಲ್ಲಿ ರಾಯಚೂರಿನಲ್ಲಿ ರಜಾಕಾರರ ಹಾವಳಿಗೆ ತುತ್ತಾಗುವವರೆಗಿನ 13ವರ್ಷಗಳ ಅವಧಿಯಲ್ಲಿ ಮಾಲೀಕತ್ವದ ಹೊಣೆ ಜತೆಗೆ ಪ್ರಮುಖ ಪಾತ್ರಗಳಲ್ಲೂ ಅವರು ನಟಿಸಬೇಕಿತ್ತು. ತಮ್ಮ ನಟನಾ ಸಾಮರ್ಥ್ಯಕ್ಕೆ ಸವಾಲೆನಿಸುವ ಮತ್ತಷ್ಟು ಹೊಸ ನಾಟಕಗಳು ಅವರಿಗೆ ಬೇಕಿತ್ತು. `ವರದಕ್ಷಿಣೆ' ನಾಟಕದ ಯಶಸ್ಸು ಅವರ ಬೆನ್ನಿಗಿತ್ತು.

ಬಹುಶಃ ಈ ಕಾರಣಕ್ಕೆ ನಡೆಸಿದ ಹುಡುಕಾಟದ ಫಲವಾಗಿ ನಿರಂತರವಾಗಿ ನಾಟಕಗಳನ್ನು ಬರೆಯುತ್ತ, ಪ್ರಯೋಗಿಸುತ್ತಲೇ ಹೋದರು. ಶಾಸ್ತ್ರಿಗಳು ಒಟ್ಟು 12 ನಾಟಕಗಳನ್ನು ರಚಿಸಿದ್ದಾರೆಂದು `ಹುಲಿಮನೆ' ಪುಸ್ತಕದಲ್ಲಿ ಆರ್.ಪಿ.ಹೆಗಡೆ ಬರೆದಿದ್ದಾರೆ. ಆದರೆ ಹಸ್ತಪ್ರತಿ ದೊರೆತ 9 ನಾಟಕಗಳನ್ನು ಎರಡು ಸಂಪುಟಗಳಲ್ಲಿ ಸೀತಾರಾಮಶಾಸ್ತ್ರಿ ಹುಲಿಮನೆ ಸ್ಮಾರಕ ಪ್ರತಿಷ್ಠಾನ ಇದೀಗ ಪ್ರಕಟಿಸಿದೆ. ನಟರುಗಳೇ ಬರೆದ ನಾಟಕಗಳು ತನ್ನ ಕಾಲದ ಪ್ರಯೋಗದ ಅಗತ್ಯಕ್ಕೆಂದು ಬಿಡಿಬಿಡಿಯಾಗಿ ಪ್ರಕಟವಾಗಿದ್ದನ್ನು ಬಿಟ್ಟರೆ ಹೀಗೆ ಸಂಪುಟದ ರೂಪದಲ್ಲಿ ಬಂದಿರುವುದು ತೀರಾ ವಿರಳ.ಮೊದಲ ಸಂಪುಟ ಐದು ನಾಟಕಗಳನ್ನು ಒಳಗೊಂಡಿದೆ. ಎರಡನೇ ಮದುವೆ ತರುವ ವಿರಸವನ್ನು ಚಿತ್ರಿಸುವ `ಪುತ್ರಾಪೇಕ್ಷೆ' ಇಡೀ ಕುಟುಂಬವನ್ನೇ ಸಾವಿನ ಅಗ್ನಿಕುಂಡವಾಗಿಸುತ್ತದೆ. `ಕುಲವಧು' ಮರಾಠಿ ನಾಟಕದ ಭಾವಾನುವಾದ. ಪತಿಯ ನೌಕರಿ ಕಳೆದು ಹೋದಾಗ ಸಂಸಾರವನ್ನು ದಡ ಸೇರಿಸಲು ಪತ್ನಿ ಸಿನಿಮಾ ನಟಿಯಾಗುತ್ತಾಳೆ, ದೊಡ್ಡ ಹೆಸರನ್ನೂ ಸಂಪಾದಿಸುತ್ತಾಳೆ. ಈರ್ಷೆ, ಮತ್ಸರಗಳನ್ನು ಸಹಿಸದೆ ಇರಿದುಕೊಂಡು ಸಾವನ್ನಪ್ಪುತ್ತಾಳೆ. `ನಡುದಾರಿಯಲ್ಲಿ' ಮತ್ತೊಂದು ಮರಾಠಿ ನಾಟಕ. ಈ ಮೂರೂ ನಾಟಕಗಳು ಪ್ರದರ್ಶನ ಕಂಡಿದ್ದರ ಬಗ್ಗೆ ದಾಖಲೆ ಸಿಗುತ್ತಿಲ್ಲ. ಆದರೆ ಇದೇ ಸಂಪುಟದಲ್ಲಿರುವ `ನಾಟ್ಯಾಚಾರ್ಯ' ಹಾಗೂ `ವರದಕ್ಷಿಣೆ' ಅಪಾರ ಯಶಸ್ಸು ಕಂಡ ನಾಟಕಗಳು.ಪ್ರಯೋಗಗಳಲ್ಲಿ ಜಯಭೇರಿ ಹೊಡೆದ `ಟಿಪ್ಪುಸುಲ್ತಾನ', `ಪನ್ನಾದಾಸಿ', `ಧರ್ಮಸಾಮ್ರಾಜ್ಯ', `ಸಂಶಯ ಸಾಗರ' -ನಾಲ್ಕು ನಾಟಕಗಳನ್ನು ಎರಡನೇ ಸಂಪುಟ ಒಳಗೊಂಡಿದೆ. ಪಾರತಂತ್ರ್ಯದ ವಿರುದ್ಧ ದಿಟ್ಟತನದಿಂದ ಹೋರಾಡಿದ ಟಿಪ್ಪುವಿನ ಅಸೀಮ ರಾಷ್ಟ್ರಪ್ರೇಮವನ್ನು `ಟಿಪ್ಪುಸುಲ್ತಾನ' ನಾಟಕ ವೀರೋಚಿತವಾಗಿ ಚಿತ್ರಿಸುತ್ತದೆ. 1938ರಲ್ಲಿಯೇ ಈ ನಾಟಕವನ್ನು ಶಾಸ್ತ್ರಿಗಳು ಬರೆದಿದ್ದರು. ಆದರೆ ಬ್ರಿಟಿಷರು ಭಾರತ ಬಿಟ್ಟು ಹೋಗುವವರೆಗೂ ಈ ನಾಟಕದ ಪ್ರದರ್ಶನಕ್ಕೆ ಅನುಮತಿ ಸಿಗಲಿಕ್ಕಿಲ್ಲವೆಂದು ಅಂದಿನ ಮೈಸೂರು ದಿವಾನ್ ಮಿರ್ಜಾ ಇಸ್ಮಾಯಿಲ್ ಸಾಹೇಬರು ಅನುಮತಿ ನೀಡಿರಲಿಲ್ಲ.

ಸ್ವಾತಂತ್ರ್ಯ ಚಳವಳಿಯನ್ನು ಪ್ರೇರೇಪಿಸುವ ಆ ಕಾಲದ ಇಂತಹ ಹಲವಾರು ನಾಟಕಗಳಿಗೆ ಇದೇ ಪರಿಸ್ಥಿತಿ ಬಂದಿತ್ತು. ಹೆಸರು ಬದಲಾಯಿಸಿ ಅಥವಾ ಬೇರೆ ನಾಟಕ ಎಂದು ಸುಳ್ಳುಹೇಳಿ ನಾಟಕ ಪ್ರದರ್ಶಿಸಿದ ಅಂದಿನ ಒಟ್ಟು ನಾಟಕ ಕಂಪೆನಿಗಳ ಹೋರಾಟ, ಸ್ವಾತಂತ್ರ್ಯ ಸಂಗ್ರಾಮಕ್ಕೆ ವೃತ್ತಿ ರಂಗಭೂಮಿ ಸಲ್ಲಿಸಿದ ಸೇವೆಯೂ ಹೌದು. ಹುಲಿಮನೆಯವರ ಟಿಪ್ಪು ಸಹ ಅದರ ಒಂದು ಭಾಗ. ಪೆಟ್ಟಿಗೆ ತಳಭಾಗ ಸೇರಿದ್ದ ಟಿಪ್ಪು ಹಸ್ತಪ್ರತಿ 1942ರಲ್ಲಿ ಹೊರಕ್ಕೆ ಬರುತ್ತದೆ. ಅಲ್ಲಿಂದ ಮುಂದಿನದು ಶಾಸ್ತ್ರಿಗಳ ಜಯ ಕರ್ನಾಟಕ ನಾಟಕ ಮಂಡಳಿಯ ಉತ್ತುಂಗದ ಕಾಲ. `ಟಿಪ್ಪುಸುಲ್ತಾನ' ನಾಟಕ ಹಾಗೂ ಅದರಲ್ಲಿ ಶಾಸ್ತ್ರಿಗಳ ಟಿಪ್ಪು ಪಾತ್ರ ವೃತ್ತಿರಂಗಭೂಮಿಯ ವೀರಗಾಥೆಯ ಒಂದು ಭಾಗವೂ ಹೌದು.ಶಾಸ್ತ್ರಿಗಳ `ಟಿಪ್ಪುಸುಲ್ತಾನ' ನಾಟಕವನ್ನು ಆ ಕಾಲಕ್ಕೆ ಇನ್ನೂ ಕೆಲವು ನಾಟಕ ಕಂಪೆನಿಗಳು ಪ್ರದರ್ಶಿಸಿವೆ. ವೃತ್ತಿರಂಗಭೂಮಿ ಜಾನಪದದಂತೆ ಮೌಖಿಕ ಸಂಪ್ರದಾಯಕ್ಕೆ ಸಂದಿರುವುದರಿಂದ ಅದಕ್ಕೆ ಪ್ರಕಟಿತ ಕೃತಿಯೇ ಬೇಕೆಂದೇನಿಲ್ಲ. ಶಾಸ್ತ್ರಿಗಳ ನಾಟಕದಿಂದ ಪ್ರೇರಣೆ ಪಡೆದು ಹಲವು ಮಾರ್ಪಾಡುಗಳನ್ನು ಮಾಡಿಕೊಂಡ ನಾಟಕಗಳೂ ಇರುತ್ತಿದ್ದವು. ಆರ್.ಡಿ.ಕಾಮತ ಅವರೂ `ಟಿಪ್ಪು ಸುಲ್ತಾನ' ನಾಟಕ ಪ್ರಕಟಿಸಿದ್ದಾರೆ. ಶಾಸ್ತ್ರಿಗಳು ಬರೆದ ನಾಟಕವನ್ನೇ ಅಲ್ಪಸ್ವಲ್ಪ ತಿದ್ದುಪಡಿಯೊಂದಿಗೆ ತಮ್ಮ ಹೆಸರಿನಲ್ಲಿ ಪ್ರಕಟಿಸಿದ್ದಾರೆಂದೂ ಆ ಕಾಲಕ್ಕೆ ಕಾಮತರ ಮೇಲೆ ಆರೋಪ ಮಾಡಲಾಗಿತ್ತು.ಇತಿಹಾಸ, ಐತಿಹ್ಯ, ಕಾಲ್ಪನಿಕ ಅಂಶಗಳನ್ನು ಒಳಗೊಂಡ `ಪನ್ನಾದಾಸಿ' ಶಾಸ್ತ್ರಿಗಳ ಮತ್ತೊಂದು ಯಶಸ್ವಿ ನಾಟಕ. ಚಿತ್ತೂರಿನ ರಾಜ ವಿಕ್ರಮಸಿಂಹನ್ನು ಹೊಡೆದೋಡಿಸಿ ಸಿಂಹಾಸನ ಏರುವ ಬನಬೀರ ಎಂಬ ದುಷ್ಟನ ಯತ್ನವನ್ನು ಸರದಾರನೊಬ್ಬನ ಪತ್ನಿ ಪನ್ನಾದಾಸಿ ಎಂಬ ವೀರಮಹಿಳೆ ವಿಫಲಗೊಳಿಸುತ್ತಾಳೆ. ಬನಬೀರ ಎಂಬ ಖಳನ ಪಾತ್ರವನ್ನು ಶಾಸ್ತ್ರಿಗಳು ಅಮೋಘವಾಗಿ ಕಳೆಗಟ್ಟಿಸುತ್ತಿದ್ದರಂತೆ.

ಪೌರಾಣಿಕ ಹಿನ್ನೆಲೆಯಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಆಂತರಿಕ ಕಲಹ ಹಾಗೂ ದೇಶ ವಿಭಜನೆಯನ್ನು ಅನನ್ಯವಾಗಿ ಚಿತ್ರಿಸಿರುವ ನಾಟಕ `ಧರ್ಮ ಸಾಮ್ರಾಜ್ಯ'. ಕುಟುಂಬವನ್ನೇ ನಾಶ ಮಾಡುವ ಸಂಶಯ ಎಂಬ ಪಿಶಾಚಿಯನ್ನು ನಿವಾರಿಸಿಕೊಳ್ಳುವ `ಸಂಶಯ ಸಾಗರ' ರಂಗದ ಮೇಲೆ ಯಶಸ್ವಿಯಾದ ಮತ್ತೆರಡು ನಾಟಕಗಳು.ಶಾಸ್ತ್ರಿಗಳಿಗೆ ಓದುವ, ಬರೆಯುವ ಹವ್ಯಾಸ ಇತ್ತು. ಸಾಹಿತಿಗಳ ಸಂಪರ್ಕವನ್ನೂ ಇಟ್ಟುಕೊಂಡಿದ್ದರು. ಶಿವರಾಮ ಕಾರಂತರಿಂದ ಸಮರ್ಥ ನಾಟಕ ಮಂಡಳಿಗೆ ಒಮ್ಮೆ `ಕಠಾರಿ ಭೈರವ' ಎಂಬ ನಾಟಕವನ್ನು ಬರೆಸಿಕೊಂಡಿದ್ದರು. ಕಾರಂತರ ನಾಟಕ ಸಂಪೂರ್ಣ ವಿಫಲವಾಗಿ ಒಂದೆರಡು ಪ್ರದರ್ಶನಕ್ಕೆ ನಿಂತುಹೋಯಿತು! ಆದರೆ ಶಾಸ್ತ್ರಿಗಳ ನಾಟಕಗಳು ರಂಗದ ಮೇಲೆ ಎಂದೂ ವಿಫಲವಾಗಲಿಲ್ಲ! ಯಾಕೆಂದರೆ ಶಾಸ್ತ್ರಿಗಳು ನಾಟಕಕಾರನಾಗಿ ರೂಪುಗೊಂಡಿದ್ದೇ ನಟನ ಅನುಭವ ಪಡೆದ ಮೇಲೆ. ನಾಟಕಕಾರ ಶಾಸ್ತ್ರಿಗಿಂತ ನಟ ಹುಲಿಮನೆ ಇನ್ನೂ ದೊಡ್ಡವರು. ಶಾಸ್ತ್ರಿಗಳ ಮೊಮ್ಮಗ ಗಣಪತಿ ಹೆಗಡೆ ಹುಲಿಮನೆ ಸಾರಥ್ಯದಲ್ಲಿ ನಡೆದಿರುವ `ರಂಗಸೌಗಂಧ' ಶಾಸ್ತ್ರಿಗಳ ನಟನಾ ಪರಂಪರೆಯನ್ನು ಮುಂದುವರಿಸಿದೆ.ಶಾಸ್ತ್ರಿಗಳು ಬದುಕಿದ್ದಾಗಲೇ ಎಲ್ಲ ನಾಟಕಗಳನ್ನು ಪ್ರಕಟಿಸುವ ಕನಸು ಕಂಡಿದ್ದರು. ಅದೀಗ ನನಸಾಗಿದೆ. ನಾಟಕಕಾರರಾಗಿಯೂ ಹೆಸರು ಮಾಡಿರುವ ಎಲ್ಲ ದೊಡ್ಡ ನಟರಿಗೂ ತಮ್ಮ ಒಟ್ಟು ನಾಟಕಗಳನ್ನು ಸಂಪುಟ ರೂಪದಲ್ಲಿ ತರಲು ಸಾಧ್ಯವಾಗಿಲ್ಲ. ಶಾಸ್ತ್ರಿಗಳ ಸಹೋದರನ ಪುತ್ರ ಶ್ರೀಧರ ಹೆಗಡೆ ಸ್ಥಾಪಿಸಿರುವ ಪ್ರತಿಷ್ಠಾನವು ಪ್ರಯೋಗನಿರತರಿಗೆ ಹಾಗೂ ವೃತ್ತಿರಂಗಭೂಮಿ ಇತಿಹಾಸಕ್ಕೆ ಒಂದು ಆಕರಗ್ರಂಥ ನೀಡಿದ ಸಾರ್ಥಕ ಕೆಲಸ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry