ಶುಕ್ರವಾರ, ನವೆಂಬರ್ 22, 2019
22 °C

`ನಾಟಕಕಾರನ ಮೇಲೆ ಚಿಕಿತ್ಸಕ ಜವಾಬ್ದಾರಿ ಇದೆ'

Published:
Updated:

ಶಿವಮೊಗ್ಗ: ಪ್ರಜಾಪ್ರಭುತ್ವದ ಬಗ್ಗೆ ಗಾಢವಾದ ವಿಶ್ವಾಸವಿಟ್ಟು; ಸಮಾಜವನ್ನು ಚಿಕಿತ್ಸಕ ಮನೋಭಾವದಿಂದ ನೋಡುವ ಜವಾಬ್ದಾರಿ ನಾಟಕಕಾರನ ಮೇಲಿದೆ ಎಂದು ಚಲನಚಿತ್ರ ನಿರ್ದೇಶಕ ಡಾ.ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯ ಪಟ್ಟರು.ನಗರದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ಹೊಂಗಿರಣ ಹಮ್ಮಿಕೊಂಡಿದ್ದ `ಬಿ. ಚಂದ್ರೇಗೌಡ ಅವರ ನಾಟಕೋತ್ಸವ' ಉದ್ಘಾಟಿಸಿ ಅವರು ಮಾತನಾಡಿದರು.ಸಮಾಜ ಹೊಸ -ಹೊಸ ನಾಟಕಗಳಿಂದ ದಿನನಿತ್ಯ ಅನಾವರಣಗೊಳ್ಳುತ್ತಿದೆ. ನಾಟಕಕಾರ ಪ್ರಜಾಪ್ರಭುತ್ವನ್ನು ಚುಚ್ಚುತ್ತಲೇ ಅದರ ಹೆಚ್ಚುಗಾರಿಕೆಯನ್ನು ತೋರಿಸಬೇಕಿದೆ. ರಂಗಭೂಮಿ ಒಡನಾಟದಿಂದ ಪ್ರಬುದ್ದ ಸಮಾಜ, ಹೊಸಜೀವನ ದೃಷ್ಟಿ ಸಿಗುತ್ತದೆ ಎಂದರು.ರಂಗನಿರ್ದೇಶಕ ನಟರಾಜ್ ಹೊನ್ನವಳ್ಳಿ ಮಾತನಾಡಿ, ಇಂದು ಪ್ರಜಾಪ್ರಭುತ್ವ ಬಿಕ್ಕಟ್ಟಿನಲ್ಲಿದೆ. ಶ್ರೀಮಂತರು ಪ್ರಭುತ್ವದಿಂದ ನಡೆಸುವ ಪರ್ಯಾಯ ವ್ಯವಸ್ಥೆಗಳಿಂದ ಈ ಅಪಾಯ ಬಂದಿದೆ. ನಾಟಕಕಾರ ಇಂತಹ ಪ್ರಭುತ್ವಗಳ ವಿರುದ್ಧದ ಪಾತ್ರಗಳನ್ನು ಸೃಷ್ಟಿಸಲು ಪ್ರಯತ್ನಿಸಬೇಕು ಎಂದರು.ಪ್ರಭುತ್ವದ ಜತೆಗಿನ ನಂಟು ನಾಟಕಕಾರನಿಗೆ ಇದ್ದರೆ, ಆತ ಸೃಜನಶೀಲನಾಗಿರಲು ಸಾಧ್ಯವಿಲ್ಲ. ಅಧಿಕಾರದಿಂದ ದೂರವಿದ್ದು, ಬದ್ದತೆ, ಸಿದ್ದತೆ ತೋರುವ ಅವಶ್ಯಕತೆ ಇದೆ ಎಂದು ಹೇಳಿದರು.ರಂಗಭೂಮಿ ದೈನಂದಿನ ಬದುಕಿನಲ್ಲಿ ಕಾಣದಿರುವುದನ್ನು ಸೂಕ್ಷ್ಮವಾಗಿ ಜನರಿಗೆ ತೋರಿಸುತ್ತದೆ. ಮನುಷ್ಯನ ಜತೆ ಮನುಷ್ಯರಾಗಿ ವರ್ತಿಸುವಂತಹ ಮನೋಭಾವ ಸೃಷ್ಟಿಸಲು ರಂಗಭೂಮಿಯಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದರು.ನಾಟಕಕಾರ ಬಿ. ಚಂದ್ರೇಗೌಡ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಉಪಸ್ಥಿತರಿದ್ದರು. ಶಿವಕುಮಾರ್ ಮಾವುಲಿ ಸ್ವಾಗತಿಸಿದರು.  ನಂತರ ಸಾಗರದ ಸ್ಪಂದನ ತಂಡದಿಂದ `ಕಲ್ಲು ಕರಗುವ ಸಮಯ' ನಾಟಕ ಪ್ರದರ್ಶನ ನಡೆಯಿತು.

ಪ್ರತಿಕ್ರಿಯಿಸಿ (+)