ನಾಟಕದ ಛಾಯೆ

7

ನಾಟಕದ ಛಾಯೆ

Published:
Updated:
ನಾಟಕದ ಛಾಯೆ

ಚಿತ್ರ: ರಂಗಪ್ಪ ಹೋಗ್ಬಟ್ನಾ

ಎಂ.ಎಲ್.ಪ್ರಸನ್ನ ಅವರ ಚಿತ್ರಕಥೆ, ಸಂಭಾಷಣೆ, ಸಂಗೀತ ಹಾಗೂ ನಿರ್ದೇಶನ ಇರುವ ‘ರಂಗಪ್ಪ ಹೋಗ್ಬಿಟ್ನಾ’ ಪ್ರೇಕ್ಷಕರನ್ನು ನಗಿಸುವ ಉದ್ದೇಶದಿಂದ ತಯಾರಾದ ಸಾಧಾರಣ ಬಜೆಟ್‌ನ ಚಿತ್ರ. ಬಜೆಟ್ ಹಾಗೂ ನಗುವಿನ ವಿಷಯಗಳು ತಳುಕು ಹಾಕಿಕೊಂಡಾಗಲೆಲ್ಲ ಚಿತ್ರದ ತಾಂತ್ರಿಕ ಅಂಶಗಳು ಸೊರಗಿ, ಆ ಸಿನಿಮಾ ನಾಟಕದ ರೂಪು ಪಡೆಯುತ್ತದೆ. ಈ ಗುಣ ‘ರಂಗಪ್ಪ ಹೋಗ್ಬಿಟ್ನಾ’ ಚಿತ್ರದಲ್ಲೂ ಇದೆ.

ಯಾವ ಕ್ಷಣದಲ್ಲಾದರೂ ಸಾಯಬಹುದಾದ ಪ್ರಜ್ಞಾಹೀನ ವ್ಯಕ್ತಿಯೊಬ್ಬನ ಸಮ್ಮುಖದಲ್ಲಿ ಸಿನಿಮಾದ ಕಥೆ ನಡೆಯುತ್ತದೆ. ರಂಗಪ್ಪನ ಸಾವಿನ ನಿರೀಕ್ಷೆಯಲ್ಲಿ ಆತನನ್ನು ನೋಡಲು ಬರುವವರು, ಆತ ಸತ್ತೇಹೋಗಿದ್ದಾನೆಂದು ಬರುವವರು ಸೇರಿಕೊಂಡು ಸೂತಕದ ಮನೆಯಲ್ಲೊಂದು ನಾಟಕ ಸೃಷ್ಟಿಯಾಗುತ್ತದೆ. ದುಡ್ಡುಬಾಕ ನೆಂಟ, ಗದ್ದಲದ ಪ್ರೇಮಿಗಳು, ಸ್ತ್ರೀಲೋಲ ಮಗ, ನಗೆಗಾರರ ಸಂಘದವರ ಕಸರತ್ತು, ಕುಡುಕನ ದುಃಖದ ಅಭಿನಯ, ಸೊಸೆಯಂದಿರ ಜುಗ್ಗತನ, ಅಕ್ರಮ ಸಂಬಂಧ, ಸಾಕ್ಷಿಪ್ರಜ್ಞೆಯಂತೆ ಕಾಣಿಸುವ ಮುದುಕಿ- ಹೀಗೆ ಅನೇಕ ಪಾತಳಿಗಳಲ್ಲಿ ಮನುಷ್ಯ ಸ್ವಭಾವವನ್ನು ಚಿತ್ರಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಈ ಪ್ರಯತ್ನ ಮೇಲ್ನೋಟಕ್ಕೆ ರಂಜನೀಯವಾಗಿಯೂ ಕಾಣಿಸುತ್ತದೆ.

ಸೂತಕದ ಸಂದರ್ಭದಲ್ಲಿ ಮನುಷ್ಯ ಸ್ವಭಾವವನ್ನು ವಿಶ್ಲೇಷಿಸುವ ಪ್ರಯತ್ನ ಸಾಹಿತ್ಯ-ಸಿನಿಮಾಕ್ಕೆ ಹೊಸತೇನಲ್ಲ. ಆದರೆ, ಅಂಥ ಸಂದರ್ಭಗಳಲ್ಲಿ ನಡೆಯುವ ಜಿಜ್ಞಾಸೆ ಗಂಭೀರ ಸ್ವರೂಪದ್ದಾಗಿರುತ್ತದೆ. ಸಿನಿಮಾದಲ್ಲಿ ಪ್ರಸನ್ನ ಅವರು ಆರಿಸಿಕೊಂಡಿರುವುದು ಲಘುಹಾಸ್ಯದ ಮಾದರಿಯನ್ನು. ಈ ಮಾದರಿ ಸಾವಿನ ಘನತೆ ಕುಗ್ಗಿಸುತ್ತದೆ. ಮೌನ ಇರಬೇಕಾದೆಡೆ ಗದ್ದಲ ಅಸಹನೀಯ ಎನ್ನಿಸುತ್ತದೆ.

ಹೆಂಡತಿಯ ಹೊರತಾಗಿ ಉಳಿದೆಲ್ಲರೂ ರಂಗಪ್ಪನ ಸಾವಿನ ನಿರೀಕ್ಷೆಯಲ್ಲಿ ವಿಪರೀತ ಚಟುವಟಿಕೆಗಳಲ್ಲಿ ತೊಡಗಿರುವಾಗ ಉಪಪತ್ನಿಯ ಪಾತ್ರವೊಂದು ಪ್ರತ್ಯಕ್ಷವಾಗುತ್ತದೆ. ಹೆಣ್ಣಲ್ಲದ ಗಂಡಲ್ಲದ ಈ ಪಾತ್ರದ ಕಲ್ಪನೆಯೇ ಅತಿರೇಕದಿಂದ ಕೂಡಿದೆ. ಅಪ್ಪನ ಉಪಪತ್ನಿಯನ್ನು ಆಸೆಗಣ್ಣಿಂದ ನೋಡುವ ಮಗನ ಪಾತ್ರವೂ ಹಾಸ್ಯದ ಹೆಸರಿನ ವಿಕೃತಿಯೇ ಆಗಿದೆ.

ನಟನೆಯ ದೃಷ್ಟಿಯಿಂದ ಇಡೀ ಚಿತ್ರದಲ್ಲಿ ಎದ್ದುಕಾಣುವುದು ಸ್ತ್ರೀಲೋಲನ ಪಾತ್ರದಲ್ಲಿ ನಟಿಸಿರುವ ರವಿಕಿರಣ್. ಸಹಜ ಮ್ಯಾನರಿಸಂನಿಂದ ಗಮನಸೆಳೆಯುವ ಅವರಿಗೆ ಬಹುಸಮಯದ ನಂತರ ಅವರಿಗೊಪ್ಪುವ, ಅಭಿನಯಕ್ಕೆ ಅವಕಾಶವಿರುವ ಪಾತ್ರ ದೊರಕಿದೆ. ಉಳಿದಂತೆ ರಮೇಶ್ ಲವಲವಿಕೆಯಿಂದ ಗಮನಸೆಳೆಯುತ್ತಾರೆ. ರಮೇಶ್ ಪತ್ನಿಯ ಪಾತ್ರದಲ್ಲಿ ನಟಿಸಿರುವ ಸಂಜನಾ ಬಾಯಿಯ ವೇಗಕ್ಕೆ ಸರಿಯಾಗಿ ಕೈಗಳನ್ನೂ ಆಡಿಸುತ್ತಾರೆ. ಅವರ ಬಳೆಗಳ ಕಿಂಕಿಣಿಯೊಂದಿಗೆ ಮಾತುಗಳೂ ಸೇರಿಕೊಳ್ಳುವುದು ಕಿರುತೆರೆ ಧಾರಾವಾಹಿ ಪಾತ್ರಗಳನ್ನು ನೆನಪಿಸುತ್ತದೆ.

ಪ್ರಸನ್ನ ಅವರ ಮಾತುಗಳು ಆಗಾಗ ಗಮನಸೆಳೆಯುವುದನ್ನು ಬಿಟ್ಟರೆ, ತಾಂತ್ರಿಕ ಅಂಶಗಳ ಬಗ್ಗೆ ಹೇಳುವಂಥ ವಿಶೇಷಗಳೇನೂ ‘ರಂಗಪ್ಪ ಹೋಗ್ಬಿಟ್ನಾ’ ಚಿತ್ರದಲ್ಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry