ನಾಟಕದ ಮೂಲಕ ವಿಜ್ಞಾನದ ಅರಿವು ಮೂಡಿಸಿದ ಮಕ್ಕಳು

7

ನಾಟಕದ ಮೂಲಕ ವಿಜ್ಞಾನದ ಅರಿವು ಮೂಡಿಸಿದ ಮಕ್ಕಳು

Published:
Updated:

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ಪರಿಸರದ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲಾ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ಶುಕ್ರವಾರ ನಡೆದ ಜಿಲ್ಲಾಮಟ್ಟದ `ವಿಜ್ಞಾನ ಮತ್ತು ಸಮಾಜ' ನಾಟಕ ಸ್ಪರ್ಧೆಯಲ್ಲಿ ಶಿಡ್ಲಘಟ್ಟದ ತುಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ ಪ್ರಥಮ ಸ್ಥಾನ ಗಳಿಸಿದೆ.

ಚಿಂತಾಮಣಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆ-ದ್ವಿತೀಯ ಮತ್ತು ಗೌರಿಬಿದನೂರು ಎಚ್.ನಾಗಸಂದ್ರ ಸರ್ಕಾರಿ ಪ್ರೌಢಶಾಲೆ-ತೃತೀಯ ಸ್ಥಾನ ಪಡೆದಿದೆ. ಪ್ರಥಮ ಸ್ಥಾನ ಪಡೆದಿರುವ ಶಾಲೆ ವಿಭಾಗ ಮಟ್ಟದಲ್ಲಿ ಸ್ಪರ್ಧಿಸಲಿದ್ದು, ಅಲ್ಲಿ ವಿಜೇತರಾದವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ಗೌರಿಬಿದನೂರು ಸರ್ಕಾರಿ ಪ್ರೌಢಶಾಲೆಯ ಆರ್.ವಿಶ್ವಾಸ್ ಕುಮಾರ್-ಪ್ರಥಮ, ಬಾಗೇಪಲ್ಲಿ ಆದರ್ಶ ವಿದ್ಯಾಲಯದ ಶ್ರಾವಣಿಲಕ್ಷ್ಮಿ-ದ್ವಿತೀಯ ಮತ್ತು ಗುಡಿಬಂಡೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಕೀರ್ತಿ-ತೃತಿಯ ಸ್ಥಾನ ಪಡೆದಿದ್ದಾರೆ. ಇದರಲ್ಲಿಯೂ ಪ್ರಥಮ ಸ್ಥಾನ ಗಳಿಸಿದವರು ವಿಭಾಗಮಟ್ಟದಲ್ಲಿ ಸ್ಪರ್ಧಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ.ಪ್ರೌಢಶಾಲೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ `ವಿಜ್ಞಾನ ಮತ್ತು ಸಮಾಜ' ನಾಟಕ ಸ್ಪರ್ಧೆ ಮತ್ತು ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆ ಏರ್ಪಡಿಸುತ್ತೇವೆ. ಈ ಸಲದ ನಾಟಕ ಸ್ಪರ್ಧೆಗೆ ನೀರಿನ ಸಹಕಾರ, ವೈಜ್ಞಾನಿಕ ಮನೋಭಾವ ಅವಶ್ಯಕ, ಹಸಿರು ಶಕ್ತಿ ಹಾಗೂ ಆರೋಗ್ಯ ಮತ್ತು ಸ್ವಸ್ಥ್ಯ ವಿಷಯಗಳನ್ನು ನೀಡಲಾಗಿತ್ತು. ಆರು ತಾಲ್ಲೂಕುಗಳಿಂದಲೂ ಒಂದೊಂದು ತಂಡಗಳು ಸ್ಪರ್ಧಿಸಿವೆ.ಒಂದೊಂದು ತಂಡಕ್ಕೆ ಅರ್ಧ ಗಂಟೆಯ ಅವಧಿಯಿದ್ದು, ಅಷ್ಟರಲ್ಲಿ ಅವರು ವಿಷಯವನ್ನು ಪ್ರಸ್ತುತಪಡಿಸಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಡಯಟ್ ಉಪಪ್ರಾಂಶುಪಾಲ ಅಶ್ವತ್ಥ್‌ರೆಡ್ಡಿ `ಪ್ರಜಾವಾಣಿ'ಗೆ ತಿಳಿಸಿದರು. ಡಯಟ್ ಪ್ರಾಂಶುಪಾಲರಾದ ವಿ.ಎಸ್.ಗೀತಮ್ಮ, ಪ್ರಾಧ್ಯಾಪಕ ಗೋಪಾಲಪ್ಪ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry