ನಾಟಕವೇ ನಾಡಿ ಮಿಡಿತ

7
ನನ್ನ ಕಥೆ

ನಾಟಕವೇ ನಾಡಿ ಮಿಡಿತ

Published:
Updated:
ನಾಟಕವೇ ನಾಡಿ ಮಿಡಿತ

ಕೆಲವು ಕ್ಷೇತ್ರಗಳೆ ಹಾಗೆ... ಕಾಲಿಟ್ಟರೆ ಸಾಕು ಕಾಲು ಕೀಳೊಕೆ ಆಗುವುದೇ ಇಲ್ಲ. ಹಟ ಹುಟ್ಟಿಸಿ ಅಲ್ಲೇ ನಮ್ಮನ್ನು ಕಟ್ಟಿ ಹಾಕುತ್ತದೆ. ರಂಗಭೂಮಿ ಕೂಡ ಅಂಥ ಕಾರ್ಯಕ್ಷೇತ್ರಗಳಲ್ಲಿ ಒಂದು. ಬಿಟ್ಟರೂ ಬಿಡದೀ ಮಾಯೆ ಎನ್ನುವಂತೆ. ನಟನೆ, ನಿರ್ದೇಶನ, ಬೆಳಕು, ಸಂಗೀತ ಇತ್ಯಾದಿಗಳೊಂದಿಗೆ ಜನರ ಪ್ರಶಂಸೆ ನಮ್ಮ ಜೊತೆಗಿದ್ದರೆ ಇಡೀ ಬದುಕು ರೊಮ್ಯಾಂಟಿಕ್ ಜರ್ನಿ.

ರಂಗಭೂಮಿಯ ಈ ಪಯಣದಲ್ಲಿ ಪಯಣಿಗರಿಗೆ ಎಂದೂ ಕೊರತೆ ಕಂಡಿಲ್ಲ. ಮಹಾನ್ ಕಲಾವಿದರ ಕೊಡುಗೆಗಳಿಂದ ಇದು ಶತಮಾನಗಳಿಂದಲೂ ಜೀವಂತ. ಜನರ ಬದುಕಿನ ಒಂದಿಲ್ಲೊಂದು ಹಾದಿಯ ಜೊತೆಜೊತೆಗೆ ಸಾಗೋದು ರಂಗಭೂಮಿಯ ಜೀವಂತಿಕೆಗೆ ಕಾರಣ. ಇಂಥ ರಂಗಭೂಮಿಯಲ್ಲಿ ನಾನು ಕಳೆದ 16 ವರ್ಷಗಳಿಂದ ನಿರಂತರವಾಗಿ ಉಸಿರಾಡಿಕೊಂಡಿದ್ದೇನೆ.ಅದು ಬದುಕು ಕುತೂಹಲಗಳ ಬೊಗಸೆಯಲ್ಲಿ ಕಣ್ಣರಳಿಸುವ ಕಾಲ. ಜೀವನದಲ್ಲಿ ಏನಾದರೊಂದು ಸಾಧಿಸಬೇಕು ಎಂಬ ಕನಸು ಅರಳುವ ಮುನ್ನವೇ ನಾನು ರಂಗಭೂಮಿ ಒಡನಾಟಕ್ಕೆ ಬಂದಿದ್ದೆ; ಅದೂ ಮೂರನೇ ಕ್ಲಾಸಿನಲ್ಲಿದ್ದಾಗ! ಆ ಹೊತ್ತಿಗಾಗಲೇ ಮಕ್ಕಳ ರಂಗಭೂಮಿ ಅನ್ನೋದು ಪ್ರೊಫೆಷನಲ್ ಆಗಿತ್ತು.

ನಿಜ ಹೇಳಬೇಕೆಂದರೆ ನಾಟಕ ಅಂದರೇನು? ನಟನೆ ಅಂದರೆ ಏನು ಅನ್ನೋದೇ ನನಗೆ ಗೊತ್ತಿರಲಿಲ್ಲ. ಆದರೂ ಮುಖಕ್ಕೆ ಬಣ್ಣ ಹಚ್ಚಿಕೊಂಡು, ಸಿಕ್ಕ ಪಾತ್ರವನ್ನು ಮನಸಿಗೆ ಮೆತ್ತಿಕೊಂಡು ನಟಿಸುತ್ತಿದ್ದೆ. ಆದರೆ ರಂಗಭೂಮಿಯ ವಿಸ್ತಾರಗಳು ತಿಳಿದದ್ದು ಹೈಸ್ಕೂಲಿಗೆ ಬಂದ ನಂತರವಷ್ಟೇ.

ನನಗೆ ಆರಂಭದಿಂದಲೂ ಹೆಚ್ಚಾಗಿ ಹುಡುಗನ ಪಾತ್ರವೇ ಸಿಗುತ್ತಿತ್ತು.

ಅಂತಹದ್ದೇ ಪಾತ್ರ ಮಾಡುತ್ತಿದ್ದ ಸಂದರ್ಭದಲ್ಲಿ ಮೊದಲ ಬಾರಿಗೆ ನನ್ನನ್ನು ವೇದಿಕೆ ಮೇಲೆ ನೋಡಿ ನನ್ನ ಅಜ್ಜಿ ಭವಾನಿ ಹೆಗ್ಡೆ ಮೆಚ್ಚಿದ್ದರು. ಕಿತ್ತೂರು ಚೆನ್ನಮ್ಮನ ಪಾತ್ರದಲ್ಲಿ ನಟಿಸಿದ್ದನ್ನು ನೋಡಿ ಇಡೀ ಊರಿನವರೇ ಕೊಂಡಾಡಿದ್ದರು. ಆದರೂ ನಾನು ನಟಿಸೋದು ಅಮ್ಮನಿಗೆ ಇಷ್ಟ ಇರಲಿಲ್ಲ. ಆದರೆ ಅಜ್ಜಿ ಅಮ್ಮನನ್ನು ನನ್ನ ಪರವಾಗಿ ಒಪ್ಪಿಸುತ್ತಿದ್ದರು. ಅದರಿಂದಲೇ ಈ ಬದುಕು ಕಷ್ಟ ಕೋಟಲೆಗಳ ನಡುವೆಯೂ ರಂಗದ ಮೇಲೆ ನೆಲೆ ನಿಂತಿದೆ.ಗೊತ್ತಿರದ ದಿನಗಳಲ್ಲಿ ಹಚ್ಚಿಕೊಂಡ ರಂಗಭೂಮಿ ಇಂದು ನನ್ನ ಉಸಿರಾಗಿದೆ. ಆದರೂ ಕೆಲ ಬಾರಿ ಬಾಲ್ಯದ ನೈಜ ಖುಷಿಗಳನ್ನು ಕಳೆದುಕೊಂಡೆನಾ ಎನ್ನುವ ಕೊರಗೊಂದು ಕಾಡುತ್ತದೆ. ಯಾಕೆಂದರೆ ಬಾಲ್ಯದ ಬದುಕೆಲ್ಲ ಮೈಸೂರು, ದಾವಣಗೆರೆ, ಚಿತ್ರದುರ್ಗ ಹೀಗೆ ಇಡೀ ಕರ್ನಾಟಕದ ತುಂಬಾ ಅಲೆದಾಡುವುದರಲ್ಲಿಯೇ ಕಳೆದು ಹೋಗಿತ್ತು. ಹಾಗೆ ನಾಟಕಗಳಲ್ಲಿ ಅಭಿನಯಿಸುತ್ತಲೇ ರಾಶಿ ರಾಶಿ ಪ್ರಶಸ್ತಿಗಳನ್ನು ತರುತ್ತಿದ್ದೆ. ಆದರೆ ನಿಜ ಹೇಳುತ್ತೇನೆ, ಅದರ ಘನತೆ, ಗೌರವಗಳೇನೆಂಬುದೇ ಆ ವಯಸ್ಸಿಗೆ ನನಗೆ ಗೊತ್ತಿರಲಿಲ್ಲ.ಒಂದು ಕಡೆಯಿಂದ ನನಗರಿವಿಲ್ಲದೆಯೇ ಬದುಕು ಬಣ್ಣದಿಂದ ಕಳೆಗಟ್ಟುತ್ತಿತ್ತು. ಆದರೆ ಮನೆಯಲ್ಲಿ ಕಲೆ, ಕಳೆ ಎಲ್ಲವನ್ನೂ ಕಿತ್ತು ತಿನ್ನುವ ಬಡತನ. ನಾನು ರಂಗಭೂಮಿ ಪ್ರವೇಶಿಸುವ ಹೊತ್ತಿಗೆಲ್ಲ ನನ್ನ ಅಪ್ಪ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು. ಕಾಡುವ ಬಡತನದ ಅರಿವಾಗುವ ಹೊತ್ತಿಗೆ ಅಪ್ಪನ ಪ್ರೀತಿಯಿಲ್ಲದ ಕೂಗು ಕಂಗೆಡಿಸಲಾರಂಭಿಸಿತ್ತು. ಅದೆಲ್ಲದರ ನಡುವೆಯೇ ಬಿ. ನಾರಾಯಣಪುರದ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರಾಢಶಾಲೆಯಲ್ಲೇ ಓದು ಮುಂದುವರೆದಿತ್ತು. ನಾನು ರಂಗಭೂಮಿಯಲ್ಲಿದ್ದ ಕಾರಣಕ್ಕೆ ಶಾಲಾ ಶುಲ್ಕ ಕಟ್ಟಿಸಿಕೊಳ್ಳುತ್ತಿರಲಿಲ್ಲ.ಆ ಸಮಯದಲ್ಲಿಯೇ ಭರತನಾಟ್ಯದ ಗುಂಗು ಶುರುವಾಗಿ ಅದನ್ನು ಕಲಿಯಲು ಸೇರಿದ್ದೆ. ಆದರೆ ಫೀಸು ಕಟ್ಟಲು ಹಣವಿರಲಿಲ್ಲ. ನನಗೆ ಭರತನಾಟ್ಯ ಹೇಳಿಕೊಡುತ್ತಿದ್ದ ನನ್ನ ಗುರುಗಳಾದ ಲೀಲಾವತಿ ಉಪಾಧ್ಯಾಯ ಅವರು ನಮ್ಮ ಮನೆಯ ಆರ್ಥಿಕ ಸಂಕಷ್ಟ ಕಂಡು ಸುಮಾರು ಆರು ವರ್ಷಗಳ ಕಾಲ ಉಚಿತವಾಗಿ ನೃತ್ಯ ಹೇಳಿಕೊಟ್ಟರು. ಅದರ ಫಲವಾಗಿ ಭರತ ನಾಟ್ಯದಲ್ಲಿ ಜೂನಿಯರ್ ಹಂತ ಮುಗಿಸಿದೆ.ನಮ್ಮೂರು ಉಡುಪಿ ಬಳಿಯ ಹೆಬ್ರಿಯಾದರೂ ನಮ್ಮ ಕುಟುಂಬ ನೆಲೆಸಿದ್ದು ಶಿವಮೊಗ್ಗದಲ್ಲಿ. ಆದರೆ ಕಾಲಕ್ರಮೇಣ ಹೋಟೆಲ್ ಉದ್ಯಮವನ್ನು ನೆಚ್ಚಿಕೊಂಡು ನಮ್ಮ ತಾತ ಮತ್ತು ಅಜ್ಜಿ ನಮ್ಮನ್ನೆಲ್ಲ ಬೆಂಗಳೂರಿಗೆ ಕರೆತಂದರು. ಅಷ್ಟರಲ್ಲಾಗಲೇ ಅಪ್ಪ ಬಿಟ್ಟು ಹೋಗಿದ್ದರು. ಆಗ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿದ್ದು ಅಮ್ಮ.ಅಮ್ಮನ ವಿರೋಧದ ನಡುವೆಯೂ ಕಾಲೇಜಿನಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ರಂಗಭೂಮಿಯ ಒಡನಾಟದಲ್ಲಿದ್ದೆ. ಕಾಲೇಜು ದಿನಗಳಲ್ಲಿ ಕೊಳೆಗೇರಿಗಳಿಗೆ ಹೋಗಿ ಅನಾಥ ಮಕ್ಕಳಿಗೆ ನಾಟಕ, ಹಾಡುಗಳನ್ನು ಹೇಳಿಕೊಡುತ್ತಿದ್ದೆ. ಆದರೆ ನಾನು ಹುಮ್ಮಸ್ಸಿನಲ್ಲಿ ಹೋಗಿ ಮಕ್ಕಳಿಗೆ ಸಾಂಸ್ಕೃತಿಕವಾಗಿ ಉತ್ತೇಜನ ನೀಡಿಬರುತ್ತಿದ್ದಕ್ಕೆ ಮತ್ಯಾರೋ ಸರ್ಕಾರದಿಂದ ಹಣ ಪಡೆಯುತ್ತಿದ್ದರು!ರಂಗಪಯಣದ ಹಾದಿಯಲ್ಲಿ ಹಲವಾರು ರೀತಿಯ ಅನುಭವಗಳೂ ನನಗೆ ದಕ್ಕಿವೆ. ಮಾದರಿ ಮಾದಯ್ಯ ನಾಟಕದಲ್ಲಿ ಭೂಮಿತಾಯಿ ಪಾತ್ರ ಮಾಡಿದಾಗ ಮಲೆಮಹದೇಶ್ವರ ಬಳಿಯ ಮುಗ್ಧ ಹಳ್ಳಿ ಜನ ನನ್ನನ್ನು ಭೂಮಿತಾಯಿ ಎಂದೇ ಭಾವಿಸಿ, ನನ್ನ ಕಾಲಿಗೆ ನಮಸ್ಕರಿಸಲು ಬಂದಿದ್ದರು.  ಶ್ರದ್ಧಾ ನಾಟಕದಲ್ಲಿ ಬ್ರಾಹ್ಮಣ್ಯವನ್ನು ವಿರೋಧಿಸಿದ್ದ ಕಾರಣಕ್ಕಾಗಿಯೇ ಅನೇಕ ಅವಕಾಶಗಳನ್ನು ಕಳೆದುಕೊಂಡಿದ್ದೇನೆ.ಒಮ್ಮೆ ಉತ್ತರಕರ್ನಾಟಕದಲ್ಲಿ `ಮೌನ ಕೋಗಿಲೆ' ನಾಟಕದ ಪ್ರದರ್ಶನವಿತ್ತು. ಅದು ದೇವದಾಸಿ ಪದ್ಧತಿಯ ವಿರುದ್ಧ ದನಿಯೆತ್ತುವ ಅಂಶ ಹೊಂದಿದ್ದ ನಾಟಕ. ಆದರೆ ಅದೇ ಹಳ್ಳಿಯಲ್ಲಿ ದೇವದಾಸಿ ಪದ್ಧತಿ ಜಾರಿಯಲ್ಲಿತ್ತು. ಅಲ್ಲಿನ ಜನ ಏನು ಮಾಡುತ್ತಾರೋ ಎಂಬ ಭಯದಲ್ಲೇ ಅಭಿನಯಿಸಬೇಕಾದ ಅನಿವಾರ್ಯತೆ ಒದಗಿ ಬಂತು. ಆದರೆ ನಾಟಕ ಮುಗಿದ ನಂತರ ಅಲ್ಲಿದ್ದ ದೇವದಾಸಿ ಹೆಣ್ಣುಮಗಳೊಬ್ಬರು ಬಂದು `ನೋಡಮ್ಮೋ  ನೀನು ನಮ್ಮ ಮಕ್ಕಳನ್ನಾದರೂ ದೇವದಾಸಿಯರಾಗೋದನ್ನು ತಪ್ಪಿಸು' ಎಂದು ಕೇಳಿದಾಗ ಅಸಹಾಯಕಳಾದ ನನ್ನ ಕಣ್ಣುಗಳು ತೇವವಾಗಿದ್ದವು.  ಮೊದಮೊದಲು `ಮಸಣದ ಮಕ್ಕಳು', `ಮೋಡಣ್ಣನ ತಮ್ಮ', `ನನ್ನ ಗೋಪಾಲ', `ಕಾರಣಿಕ ಶಿಶು' ನಾಟಕಗಳನ್ನು ನೂರಾರು ಪ್ರದರ್ಶನ ಮಾಡಿ ದೇಶದ ಮೂಲೆಮೂಲೆ ಸುತ್ತಿದೆ. ಸರ್ಕಾರ ರಾಜ್ಯಾದ್ಯಂತ ಕುವೆಂಪು ಮಕ್ಕಳ ನಾಟಕೋತ್ಸವ ಹಮ್ಮಿಕೊಂಡಿತ್ತು. ಆಗ ಲಕ್ಷ್ಮಣ್ ಸರ್ ಜೊತೆ ನಾನು ನಟನೆ-ನಿರ್ದೇಶನ- ಆಯೋಜಕಿಯಾಗಿ ದುಡಿದೆ. ಆಮೇಲೆ ಕನ್ನಡ ರಂಗಭೂಮಿಯ ಖ್ಯಾತನಾಮ ನಿರ್ದೇಶಕರ ಜೊತೆ ನಟನೆ ಮಾಡಿದೆ.

ಇವುಗಳ ಮಧ್ಯೆ ಅನೇಕ ನಾಟಕಗಳಲ್ಲಿ ನಟಿಯಾಗಿ ತೊಡಗಿಸಿಕೊಂಡಿದ್ದೆ.

`ಗಾಜಿಪುರದ ಹಜಾಮ', `ಭಾರತಾಂಬೆಯ ರಾಮಕ್ಕ', ನಿರಂಜನರ `ಚಿರಸ್ಮರಣೆ', `ಕೆಂಪೇಗೌಡ', `ಬುಡ್ಗನಾದ', ಡಿ.ಕೆ. ಚೌಟರ `ಹುಲಿ ಹಿಡಿದ ಕಡಸು', `ಒಂದು ಬೊಗಸೆ ನೀರು', `ಬದುಕು ಜಟಕಾಬಂಡಿ', `ಕ್ರಾಂತಿ' ಸೇರಿದಂತೆ ಅನೇಕ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದೇನೆ. ನಾಡಿನಾದ್ಯಂತ ಈ ನಾಟಕಗಳನ್ನು ಪ್ರದರ್ಶಿಸಿದ್ದೇವೆ. ನಾಡಿನ ಖ್ಯಾತ ಯುವ ರಂಗಕರ್ಮಿ ರಾಜಗುರು ಹೊಸಕೋಟೆ ನಮ್ಮ ತಂಡದ ಪ್ರಮುಖ ನಿರ್ದೇಶಕರು.

ಹಾಗೆ ರಾಜಗುರು ಹೊಸಕೋಟೆ ಅವರೇ ಕಟ್ಟಿದ `ಸಾತ್ವಿಕ' ಎಂಬ ಮತ್ತೊಂದು ತಂಡದಲ್ಲೂ ನಾನು ಸಕ್ರಿಯಳಾಗಿದ್ದೇನೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ನನಗೆ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳು ಸಿಕ್ಕಿರುವುದು ನನ್ನನ್ನು ರಂಗಭೂಮಿಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡಿತು.

ರಂಗಶ್ರೀ, ಕಾಲಭೈರವ, ಅತ್ಯುತ್ತಮ ಪೋಷಕ ನಟಿ, ಅಖಿಲ ಭಾರತ ಕನ್ನಡ ನಾಟಕ ಸಂಘ, ಮುಂಬೈ ನೀಡಿರುವ ಸರಣಿಯ ಅತ್ಯುತ್ತಮ ನಟಿ (ರಾಷ್ಟ್ರ ಮಟ್ಟದ ಪ್ರಶಸ್ತಿ), ಬಾಷ್ ಲಲಿತಾ ಕಲಾ ಕನ್ನಡ ಸಂಘ ಇವರಿಂದ ಅತ್ಯುತ್ತಮ ನಟಿ... ಹೀಗೆ ಸುಮಾರು 30 ರಾಜ್ಯಮಟ್ಟದ ಪ್ರಶಸ್ತಿಗಳು ದೊರೆತಿರುವುದು ರಂಗಭೂಮಿಯ ಮೇಲಿನ ಒಲವನ್ನು ಮತ್ತಷ್ಟು ಹೆಚ್ಚಿಸಿವೆ.ನನ್ನ ಇಷ್ಟು ವರ್ಷಗಳ ಕಲಾಪಯಣದಲ್ಲಿ ನನ್ನನ್ನು ಜನತೆಗೆ ಹೆಚ್ಚು ಪರಿಚಯಿಸಿದ, ಅದರಲ್ಲೂ ಬುಡಕಟ್ಟು ಜನಾಂಗದವರ ಮನಗೆಲ್ಲುವಂತೆ ಮಾಡಿದ ಪಾತ್ರವೆಂದರೆ ಬುಡ್ಗನಾದ ನಾಟಕದ ಮುಂಗೌರಿ ಪಾತ್ರ. `ರಂಗಪಯಣ'ದ ಮೂಲಕ ಇನ್ನಷ್ಟು ಪ್ರಯೋಗಾತ್ಮಕ ನಾಟಕಗಳನ್ನು ಮಾಡಬೇಕು ಎಂಬ ಹಂಬಲ ನನ್ನದು.ಸದ್ಯದಲ್ಲೇ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ರಾಜಗುರು ಹೊಸಕೋಟೆ ಅವರ ಬಾಳ ಸಂಗಾತಿಯಾಗುತ್ತಿದ್ದೇನೆ. ರಾಜಗುರು ಖ್ಯಾತ ಗಾಯಕ, ಕಲಾವಿದ ಗುರುರಾಜ ಹೊಸಕೋಟೆ ಅವರ ಪುತ್ರ. ಅವರು ನನ್ನ ಪ್ರತಿ ಹೆಜ್ಜೆಗೂ ಬೆನ್ನೆಲುಬಾಗಿ ನಿಂತಿದ್ದಾರೆ. ಈ ನಡುವೆ ನನ್ನ ಕಲಾಪಯಣದಲ್ಲಿ ಕಹಿ ಅನುಭವಗಳು ಇಲ್ಲವೇ ಇಲ್ಲ ಎಂದಲ್ಲ, ಆದರೆ ನಟನೆಯ ಯಶಸ್ಸು ಕಹಿಯನ್ನು ಮನಸ್ಸಿನಲ್ಲಿ ಕೂರಲು ಬಿಡಲಿಲ್ಲ.

ಕೆಲ ಸ್ವಾರ್ಥಿ, ದುರಾಸೆ ಜನರ ನಡುವೆಯೂ ನನಗೆ ರಂಗಭೂಮಿ ಅನ್ನ ಕೊಡುತ್ತಿದೆ. ಒಟ್ಟಾರೆಯಾಗಿ ರಂಗಭೂಮಿ ನನ್ನ ಅನ್ನ ಹಾಗೂ ಬದುಕು. ನನ್ನ ನಾಡಿ ಮಿಡಿತದಲ್ಲೂ ನನಗೆ ಕೇಳುವುದು ಯಾವುದಾದರೂ ಒಂದು ನಾಟಕದ ಡೈಲಾಗು, ಹಾಡು...

-ನಿರೂಪಣೆ    ಬಿ.ಕೆ. ರಮ್ಯಶ್ರೀ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry