ನಾಟಕ - ಹಾಡುಗಳೇ ನೈಜ ದಲಿತ ಸಾಹಿತ್ಯ

7

ನಾಟಕ - ಹಾಡುಗಳೇ ನೈಜ ದಲಿತ ಸಾಹಿತ್ಯ

Published:
Updated:

ತಮ್ಮ ಬದುಕಿನ ಬಹುಭಾಗವನ್ನು ದಲಿತ ಸಂಘಟನೆ ಮತ್ತು ಹೋರಾಟಕ್ಕೆ ಮೀಸಲಿಟ್ಟಿರುವ ಡಾ. ಚೆನ್ನಣ್ಣ ವಾಲೀಕಾರ, 80-90ರ ದಶಕದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ದಲಿತ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು. ಅವರ ಸಾಹಿತ್ಯ ದಲಿತರ ಬದುಕು, ನೋವು, ಅಪಮಾನ, ಜಮೀನ್ದಾರಿ ವ್ಯವಸ್ಥೆಯ ಕೌರ್ಯದ ಸ್ಫೋಟಕ ಅಭಿವ್ಯಕ್ತಿಯಾಗಿದೆ. `ಮರದ ಮೇಲಿನ ಗಾಳಿ', `ಕರಿತೇಲಿ ಮಾನವನ ಜೀಪದ ಹಾಡು', `ಪ್ಯಾಂಥರ್ ಪದ್ಯಗಳು', `ಬಂಡೆದ್ದ ದಲಿತರ ಬೀದಿ ಹಾಡುಗಳು', `ಕಪ್ಪು ಕತೆಗಳು', `ಕುತ್ತದಲ್ಲಿ ಕುದ್ದವರ ಕತೆಗಳು', `ಹೆಪ್ಪುಗಟ್ಟಿದ ಸಮುದ್ರ', `ಗ್ರಾಮಭಾರತ', `ವ್ಯೋಮಾವ್ಯೋಮ' ಸೇರಿದಂತೆ ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಚೆನ್ನಣ್ಣ ರಚಿಸಿದ್ದಾರೆ.ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅನುಭವ ಚೆನ್ನಣ್ಣ ಅವರದು. ಅವರಿಗೀಗ, ಬೆಳಗಾವಿಯಲ್ಲಿ ಡಿ. 29-30ರಂದು ನಡೆಯುವ `ಅಖಿಲ ಭಾರತ 4ನೇ ದಲಿತ ಸಾಹಿತ್ಯ ಸಮ್ಮೇಳನ'ದ ಅಧ್ಯಕ್ಷ ಗೌರವ. ಈ ಸಂದರ್ಭದಲ್ಲಿ ಚೆನ್ನಣ್ಣನವರೊಂದಿಗೆ `ಸಾಪ್ತಾಹಿಕ ಪುರವಣಿ'ಯೊಂದಿಗೆ ಮಾತನಾಡಿದರು.

ದಲಿತ ಸಾಹಿತ್ಯದ ಇಂದಿನ ಸ್ಥಿತಿಗತಿ ಬಗ್ಗೆ ಏನನ್ನಿಸುತ್ತದೆ?

ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕನ್ನಡ ದಲಿತ ಸಾಹಿತ್ಯ ಪ್ರಬಲವಾಗಿಯೇ ಬೆಳೆದಿದೆ. ಆದರೆ ಮರಾಠಿ ದಲಿತ ಸಾಹಿತ್ಯಕ್ಕೆ ಹೋಲಿಸಿದರೆ ನಮ್ಮಲ್ಲಿ ಆತ್ಮಕತೆಗಳು ತುಸು ಕಡಿಮೆ. ಮರಾಠಿ ದಲಿತ ಸಾಹಿತ್ಯದಲ್ಲಿ ತನ್ನ ತಾಯಿ ವೇಶ್ಯೆ, ತನ್ನ ಬದುಕು ಇಂತಹ ಕೆಳಮಟ್ಟದ ಸ್ಥಿತಿಯಿಂದ ಬಂದಿದ್ದು ಎನ್ನುವುದನ್ನು ಅಲ್ಲಿನ ಸಾಹಿತಿಗಳು ಮುಕ್ತವಾಗಿ ಅಭಿವ್ಯಕ್ತಿಸಿದ್ದಾರೆ. ನಮ್ಮಲ್ಲಿ ಇಂತಹ ಅಭಿವ್ಯಕ್ತಿ ಕಡಿಮೆ. ನಾಟಕ ಮತ್ತು ಹಾಡುಗಳೇ ನೈಜ ದಲಿತ ಸಾಹಿತ್ಯ.ನಿರಕ್ಷರಿ ದಲಿತರನ್ನು ಚಳವಳಿಗಳಿಗೆ ಪ್ರಭಾವಿಸಲು ಮತ್ತು ಜಾಗೃತಗೊಳಿಸಲು ನಾಟಕ ಮತ್ತು ಹಾಡುಗಳಿಗಿಂತ ಉತ್ತಮ ಮಾಧ್ಯಮ ಮತ್ತೊಂದಿಲ್ಲ. ದಲಿತ ಚಳವಳಿ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿಯೇ ಬೆಳೆದಿವೆ. ಆದರೆ ಪ್ರಸಕ್ತ ದಲಿತ ಚಳವಳಿ ಮತ್ತು ಸಾಹಿತ್ಯದಲ್ಲಿ ಅಂತರವಿದೆ. ದಲಿತ ಸಾಹಿತ್ಯಕ್ಕಿಂತ ಇಂದಿನ ದಲಿತ ಸಂಘಟನೆಗಳ ಸ್ಥಿತಿಗತಿಗಳ ಬಗ್ಗೆ ಮುಖ್ಯವಾಗಿ ಅವಲೋಕಿಸಬೇಕಿದೆ.   

ದಲಿತ ಸಾಹಿತಿಗಳ ಅನುಭವ ಮತ್ತು ಸಂವೇದನೆ ಆಡುನುಡಿಯಲ್ಲಿ ಅಭಿವ್ಯಕ್ತಗೊಂಡಿದೆ. ಆದರೆ ಇಂದಿನ ಯುವ ದಲಿತ ಸಾಹಿತ್ಯ  ಜನಪ್ರಿಯ ಸಾಹಿತ್ಯದ ಪರಿಭಾಷೆಗೆ ಒಳಗಾಗುತ್ತಿದೆ. ಇದರಿಂದಾಗಿ ದಲಿತ ಸಂವೇದನೆಗಳು

ದೂರವಾಗುವುದಿಲ್ಲವೆ?
ನೋವು, ಹಸಿವು, ಬದುಕಿನ ಸಂಕಟಗಳ ಅರಿವು ಸಾಹಿತಿಗೆ ಇರಬೇಕು. ಇದರಿಂದ ಆತ ತನ್ನ ಅನುಭವಗಳನ್ನು ಕಟ್ಟಿಕೊಡಲು ಸಾಧ್ಯ. ನಾವುಗಳು ಹಳ್ಳಿಗಳಿಂದ ಬಂದ ಜನ. ಪ್ರಾಮಾಣಿಕ ಬರಹಕ್ಕೆ ಪ್ರಾಮುಖ್ಯ ನೀಡಿದೆವು. ಅಕ್ಷರಸ್ಥ ಭಾಷೆ ಸತ್ತ ಭಾಷೆ, ಆಡುವ ಭಾಷೆ ಜೀವಂತ ಎನ್ನುವ ನಿಲುವಿನಲ್ಲಿ ಉತ್ಪ್ರೇಕ್ಷೆ, ಅಲಂಕಾರ, ಅತಿಶಯೋಕ್ತಿ ಇಲ್ಲದೆ ಬರೆದೆವು. ಹೈದರಾಬಾದ್ ಕರ್ನಾಟಕದ ಗ್ರಾಮ್ಯ ಭಾಷೆಯಲ್ಲಿ ನನ್ನ ಬರವಣಿಗೆಗಳು ಇದ್ದರೆ, ದೇವನೂರು ಮಹಾದೇವ ಅವರ ಬರವಣಿಗೆಗಳಿಗೆ ಹಳೇ ಮೈಸೂರು ಭಾಗದ ಭಾಷೆಯ ಸೊಗಡಿದೆ. ಆಯಾ ಭಾಗದ ಸಾಹಿತಿಗಳು ಅಲ್ಲಿನ ಗ್ರಾಮ್ಯ ಭಾಷೆಯಲ್ಲಿ ಬರವಣಿಗೆಯನ್ನು ದಾಖಲಿಸಿದ್ದಾರೆ. ದಲಿತ ಸಾಹಿತ್ಯ ನಗರಗಳಲ್ಲಿ ಹುಟ್ಟುವ ಸಾಧ್ಯತೆ ಕಡಿಮೆ. ಪ್ರಶಸ್ತಿಗೋ ಇಲ್ಲವೇ ಸ್ವಹಿತಾಸಕ್ತಿಗಾಗಿಯೋ ವಸ್ತುಸ್ಥಿತಿಯ ಬದುಕನ್ನು ತಿರುಚಿ ಉತ್ಪ್ರೇಕ್ಷಿಸಿ ಬರೆಯಲಾಗುತ್ತಿದೆ. ಆದರೆ ಇಂತಹ ಸಾಹಿತ್ಯಗಳು ದಲಿತ ಪಂಥದಲ್ಲಿ ಗಟ್ಟಿಯಾಗಿ ನಿಲ್ಲಲು ಸಾಧ್ಯವಿಲ್ಲ ಎಂಬುವುದು ನನ್ನ ನಂಬಿಕೆ.  ದಶಕಗಳಿಂದ ದಲಿತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೀರಿ. ಅಂದು ಮತ್ತು ಇಂದಿನ ಸಂಘಟನೆಯಲ್ಲಿ ವ್ಯತ್ಯಾಸ ಆಗಿದೆಯಾ?

ಆಗ, ಸಂಘಟನೆ ಅಥವಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಹಳ್ಳಿಗಳಲ್ಲಿ ಜನರು ಸ್ವ ಪ್ರೇರಣೆಯಿಂದ ಅನ್ನ, ನೀರು ಕೊಟ್ಟು ಸಹಕಾರ ನೀಡುತ್ತಿದ್ದರು. ದುಡ್ಡು ಕೊಡುತ್ತೇವೆ ತೆಗೆದುಕೊಳ್ಳಿ, ನೀವು ಸಂಘಟನೆ ಮಾಡಿಕೊಳ್ಳಿ, ನಿಮ್ಮ ತಂಟೆ ಬೇಡ ಎನ್ನುವ ಮಂದಿ ಈಗ  ಬಹಳ ಸಂಖ್ಯೆಯಲ್ಲಿ ಇದ್ದಾರೆ.ದಲಿತ ಸಂಘರ್ಷ ಸಮಿತಿ ಸ್ಥಾಪಕರಲ್ಲಿ ಒಬ್ಬರಾದ ಬಿ. ಕೃಷ್ಣಪ್ಪನವರು ಬದುಕಿರುವವರೆಗೂ ಸಂಘಟನೆಗೆ ಶಿಸ್ತು ಇತ್ತು. ಹೋರಾಟಗಳು ಪ್ರಾಮಾಣಿಕವಾಗಿದ್ದವು. ಆನಂತರ ದೇವನೂರು ಮಹಾದೇವ ಅವರು ದಸಂಸ ಮುನ್ನಡೆಸುವಾಗ ಕೆಲವರು ವಿನಾಕಾರಣ ಜಗಳ ತೆಗೆದರು. ಇದರಿಂದ ನೊಂದ ಅವರು ಸಂಘಟನೆಯಿಂದ ಅಂತರ ಕಾಯ್ದುಕೊಂಡರು. ಪ್ರಾಮಾಣಿಕರು ಸಂಘಟನೆಯಿಂದ ದೂರ ಸರಿದಂತೆ ರಾಜಕೀಯ ಮನೋಭಾವದವರು ತಳವೂರಿದರು. ರಾಜ್ಯದಲ್ಲಿ 34 ದಲಿತ ಸಂಘಟನೆಗಳಿವೆ ಎನ್ನುವ ಅಂದಾಜಿದೆ. ಎಡಗೈ, ಬಲಗೈ ತಾರತಮ್ಯ ಸಂಘಟನೆಗಳಲ್ಲೂ ಇದೆ.ದಲಿತ ಸಂಘರ್ಷ ಸಮಿತಿಯ ಸಂಚಾಲಕತ್ವಕ್ಕೆ ಹಾತೊರೆಯುವವರು ಹೆಚ್ಚಾದರೇ ಹೊರತು, ಸಂಘಟನೆಗೆ ಶಿಸ್ತು ರೂಪಿಸಿ ಪ್ರಾಮಾಣಿಕತೆಯಿಂದ ಮುನ್ನಡೆಸುವವರು ಕಡಿಮೆಯಾದರು. ದೊಡ್ಡ ದೊಡ್ಡ ಮಾತು ಹೇಳಿದೊಡ್ಡಿ(ಪಾಯಖಾನೆ)ಯಲ್ಲಿ ಕೂಡುವ ಜನ ನಮ್ಮಲ್ಲಿ ಹೆಚ್ಚಾಗಿದ್ದಾರೆ. ಅಂಬೇಡ್ಕರ್‌ರ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಹೋರಾಟ ನಡೆಸಿದವರು ನಗಣ್ಯರಾದರು. ಚಳವಳಿಗಳಲ್ಲೂ ರಾಜಕಾರಣ ನುಸುಳಿದ ಮೇಲಂತೂ ಪರಿಸ್ಥಿತಿ ಮತ್ತಷ್ಟೂ ಬಿಗಡಾಯಿಸಿತು. ಸಾಮೂಹಿಕತೆಗೆ ಒತ್ತು ನೀಡುತ್ತಿದ್ದ ದಲಿತ ಸಂಘಟನೆಗಳು, ವ್ಯಕ್ತಿ ಕೇಂದ್ರಿತವಾದವು.

ಬರಹಕ್ಕಿಂತ ನೀವು ಹೆಚ್ಚು ತೊಡಗಿಸಿಕೊಂಡಿದ್ದು ಸಂಘಟನೆಯಲ್ಲಿ. ವೃತ್ತಿ, ಕುಟುಂಬ, ಸಂಘಟನೆ ದಿನಗಳು ಹೇಗಿದ್ದವು?

ದಲಿತ ಸಾಹಿತ್ಯ ಮತ್ತು ಚಳವಳಿಗೆ ಪ್ರಮುಖ ತಿರುವು ನೀಡಿದ ಬಸವಲಿಂಗಪ್ಪನವರ `ಬೂಸಾ' ಪ್ರಕರಣವೇ ನನ್ನ ಬದುಕಿನಲ್ಲೂ ಮಹತ್ವದ ಬದಲಾವಣೆಗೆ ಮುನ್ನುಡಿ ಬರೆಯಿತು. ಆಗ ರಾಯಚೂರಿನಲ್ಲಿ ಅಧ್ಯಾಪಕನಾಗಿದ್ದೆ. ಬರಹಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದ ನಾನು, ಬಸವಲಿಂಗಪ್ಪನವರನ್ನು ಬೆಂಬಲಿಸಿ ಹೋರಾಟದಲ್ಲಿ ತೊಡಗಿದೆ. ದಲಿತರು ತಮ್ಮ ಹಕ್ಕುಗಳ ಪ್ರತಿಪಾದನೆಗೆ ಚಳವಳಿ ಅನಿವಾರ್ಯ ಎಂಬುದು ಅರಿವಾಯಿತು. ಅಲ್ಲಿಂದ ಸಂಘಟನೆ ಮತ್ತು ಹೋರಾಟವೇ ಪ್ರಮುಖವಾಯಿತು.ತಿರುಗಾಟ ಆರಂಭವಾದ ನಂತರ ಕುಟುಂಬದ ಜವಾಬ್ದಾರಿ ಪೂರ್ಣ ನನ್ನ ಹೆಂಡತಿಯದ್ದೇ. ಎಸ್‌ಟಿಡಿ, ಕಿರಾಣಿ ಅಂಗಡಿ ಇಟ್ಟುಕೊಂಡು ಜೀವನ ತೂಗಿಸಿದಳು. ನನ್ನವಳು, ಸಂಸಾರದ ಜವಾಬ್ದಾರಿ ಹೊತ್ತು ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರಿಂದಲೇ ಚಳವಳಿಯಲ್ಲಿ ತೊಡಗಲು ಸಾಧ್ಯವಾಗಿದ್ದು.

ಜಾಗೃತಿ ಮತ್ತು ಬದಲಾವಣೆಗೆ ಸಮ್ಮೇಳನ ಯಾವ ರೀತಿ ಪೂರಕ ಆಗಬಲ್ಲದು?

ಎರಡು ದಿನಗಳ ಸಮ್ಮೇಳನದಲ್ಲಿ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ಇರುವ ಅಲ್ಪ ಅವಧಿಯಲ್ಲೇ ಮುಕ್ತ ಚರ್ಚೆ ನಡೆಯಬೇಕು. ಮೇಲ್ವರ್ಗಗಳ ವಿರುದ್ಧಕ್ಕಿಂತ ಇಂದು ನಮ್ಮ ಜನರ ವಿರುದ್ಧವೇ ಹೋರಾಟ ನಡೆಸಬೇಕಾದ ಸ್ಥಿತಿಯ ಬಗ್ಗೆಯೂ ವಿವೇಚಿಸಬೇಕಿದೆ. ಭಾಷಣ, ಸಾಹಿತ್ಯದಿಂದ ದಲಿತರ ಬದುಕು ಸುಧಾರಿಸದು. ಆದರೆ ಇಂತಹ ಸಮ್ಮೇಳನಗಳ ಮೂಲಕ ನಮ್ಮ ಸ್ಥಿತಿಗತಿಗಳ ಬಗ್ಗೆ ಚರ್ಚಿಸಬಹುದು. ರಾಜಕಾರಣಿಗಳನ್ನು ಕರೆಸಿ ನಮ್ಮ ಹಕ್ಕೊತ್ತಾಯಗಳನ್ನು ವಿವರಿಸಬಹುದು. ಸಮ್ಮೇಳನದಲ್ಲಿ ಕೈಗೊಳ್ಳುವ ನಿರ್ಣಯಗಳ ಜಾರಿ ಹೊಣೆಯನ್ನು ಅಧ್ಯಕ್ಷರು ಮತ್ತು ಸಂಚಾಲಕರು ವಹಿಸಿಕೊಳ್ಳಬೇಕು. ಸಮ್ಮೇಳನದ ನಂತರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನಿರ್ಣಯಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು.

ಚಿತ್ರ: ಜಿ.ಎಸ್.ಕೃಷ್ಣಕುಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry