ನಾಟ್ಯಾಮೃತ ಇದು ನಯನಾಮೃತ...

7

ನಾಟ್ಯಾಮೃತ ಇದು ನಯನಾಮೃತ...

Published:
Updated:

ಮೈಸೂರು: `ಭಾವ ರಾಗ ತಾಳ ಲಯ ಲಾಸ್ಯ ಪಂಚಾಮೃತ... ಭರತಾಗಮ ವೇದ ನಾಟ್ಯಾಮೃತ~ ಎಂಬ ಮಧುರ ಗಾಯನ ಅಲೆ ಅಲೆಯಾಗಿ ತೇಲಿ ಬರುತ್ತಿದ್ದರೆ ಅದನ್ನು ಮೀರಿ ಬಾಲೆಯರ ಹೆಜ್ಜೆಯ ಝಣತ್ಕಾರ ನಾಟ್ಯ ವೈಭವ ಸೃಷ್ಟಿ ಮಾಡಿತ್ತು. ಹೆಜ್ಜೆ-ಗೆಜ್ಜೆಗಳ ಲಾಸ್ಯದಲ್ಲೇ ಭರತಮುನಿಯ ನಾಟ್ಯ ಶಾಸ್ತ್ರದ ಮಹತ್ವವನ್ನು ವಿವರಿಸುವ ಸುಂದರ ಕೃತಿಯನ್ನು ನೃತ್ಯದ ಮೂಲಕ ಈ ಕನ್ನಿಕೆಯರು ಬಿಡಿಸಿಟ್ಟಿದ್ದರು.ಬೆಂಗಳೂರಿನ ನೃತ್ಯಗಂಗಾ ಅಕಾ ಡೆಮಿಯ ವಿದುಷಿ ರೂಪಶ್ರೀ ಮಧು ಸೂದನ್ ಅವರ ಶಿಷ್ಯೆಯರು ಕಣಗಲ್ ಪ್ರಭಾಕರ ಶಾಸ್ತ್ರಿಗಳ ಕೃತಿ `ನಾಟ್ಯಾ ಮೃತ~ಕ್ಕೆ ಹೆಜ್ಜೆ ಹಾಕಿದ್ದು ಮೈಸೂರಿನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ. ಸಂಸ್ಕಾರ ಭಾರತಿಯು ಭಾನುವಾರ ಏರ್ಪಡಿಸಿದ್ದ ಭರತಮುನಿ ಜಯಂತಿಯಲ್ಲಿ 18 ನೃತ್ಯಶಾಲೆಗಳ ಮಕ್ಕಳು ನಾಟ್ಯವಾಡಿದರು. ನಾಟ್ಯ ಶಾಸ್ತ್ರ ಬರೆದ ಭರತ ಮುನಿಗೆ ನೃತ್ಯದ ಮೂಲಕವೇ ಅರ್ಥಪೂರ್ಣ ಗೌರವ ಅರ್ಪಿಸಿದರು.ಕೇಸರಿ ಹಸಿರು ಬಣ್ಣದ ವಸ್ತ್ರಾ ಭೂಷಣದಲ್ಲಿ ಕಂಗೊಳಿಸುತ್ತಿದ್ದ ನೃತ್ಯಗಂಗಾ ಶಾಲೆಯ 16 ಮಕ್ಕಳು ಏಕಕಾಲಕ್ಕೆ ವೇದಿಕೆಯ ತುಂಬ ಶಿಸ್ತುಬದ್ಧವಾಗಿ ನೃತ್ಯ ಮಾಡಿದರು. ಕೆಂಪು-ಬಿಳಿ ವಸ್ತ್ರದಲ್ಲಿ ಶೋಭಿಸಿದ ನೃತ್ಯಗಿರಿ ತಂಡದ 10 ಮಕ್ಕಳು `ಗಣನಾಯಕಾಯ ಗಣದೈವತಾಯ~ ಹಾಡಿಗೆ ಆಕರ್ಷಕ ನೃತ್ಯ ಸಾದರ ಪಡಿಸಿದರು. ಕೃಪಾ ಫಡ್ಕೆ ಅವರ ಶಿಷ್ಯಂದಿರು ನೃತ್ಯದ ಮೂಲಕ ವಿವಿಧ ರೀತಿಯಲ್ಲಿ ಗಜಮುಖನ ದರ್ಶನ ಮಾಡಿಸಿದರು.ಯೋಗ ಹಾಗೂ ನೃತ್ಯ ಸಂಯೋಗದ ವಿಶಿಷ್ಟ ನೃತ್ಯವನ್ನು ವಿದ್ವಾನ್ ಶ್ರೀಧರ ಜೈನ್ ನೇತೃತ್ವದ ನಿಮಿಷಾಂಬ ನೃತ್ಯ ಶಾಲೆಯವರು `ಭೋ ಶಂಭೋ ಶಿವಶಂಭೋ... ಸ್ವಯಂಭೋ..~ ಹಾಡಿ ನೊಂದಿಗೆ ಪ್ರಸ್ತುತ ಪಡಿಸಿದಾಗ ರುದ್ರ ರಮಣೀಯತೆ ತಾಂಡವವಾಡಿ ದಂತಾಗಿತ್ತು. ಭೂಷಣ್ ಅಕಾಡೆಮಿಯ ವಿದ್ವಾನ್ ಬದ್ರಿ ದಿವ್ಯಭೂಷಣ್ ಅವರ ಇಬ್ಬರು ಶಿಷ್ಯೆಯರು ಸಾದರ ಪಡಿಸಿದ ಮೂರೂ ನೃತ್ಯಗಳೂ ಅತ್ಯಂತ ಪ್ರಬುದ್ಧವೆನಿಸಿದವು.ವಸುಂಧರಾ ನೃತ್ಯ ಪ್ರದರ್ಶಕ ಕಲೆಗಳ ಕೇಂದ್ರದ ವಿದುಷಿ ವಸುಂಧರಾ ದೊರೆಸ್ವಾಮಿ ಅವರ ಶಿಷ್ಯೆಯರು ಪ್ರದರ್ಶಿಸಿದ `ನೃತ್ಯ ಕುಸುಮಾಂಜಲಿ~ ಹಾಗೂ `ಗಜವದನ.. ಕರುಣಾ ಸದನ~ ನೃತ್ಯಗಳು ಪ್ರೇಕ್ಷಕರನ್ನು ಮೋಡಿ ಮಾಡಿದವು. ಗುರುದೇವ ಅಕಾಡೆಮಿಯ ವಿದುಷಿ ಚೇತನಾ ರಾಧಾಕೃಷ್ಣ ಅವರ ಶಿಷ್ಯೆಯರು `ಶ್ರೀ ರಮಾ ಸರಸ್ವತಿಂ ಸೇವಿತಾಂ...~ ಹಾಡಿಗೆ ಹೆಜ್ಜೆಯಿಟ್ಟರು.ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶಕ ಕಲೆಗಳ ವಿಶ್ವವಿದ್ಯಾ ಲಯ, ನೃತ್ಯಾಲಯ ಟ್ರಸ್ಟ್, ಗಾನ ಭಾರತಿ ಸಂಗೀತ ನೃತ್ಯ ಶಾಲೆ, ಬ್ರಹ್ಮವಿದ್ಯಾ ಸಂಸ್ಥೆ, ಅತ್ರಿ ನಾಟ್ಯ ಶಾಲೆ, ಕೃಷ್ಣಿ ನೃತ್ಯಶಾಲೆ, ನಟರಾಜ ನೃತ್ಯಶಾಲೆ, ಈಶ್ವರಿ ನೃತ್ಯಶಾಲೆ, ನೃತ್ಯಕೃಪಾ ಕಲಾಶಾಲೆ, ಶ್ರೀನೃತ್ಯ ನಿಕೇತನ ಶಾಲೆಗಳ ವಿದ್ಯಾರ್ಥಿನಿಯರು ಭರತನಾಟ್ಯದ ವಿವಿಧ ಪ್ರಕಾರಗಳನ್ನು ಪ್ರದರ್ಶಿಸಿದರು.ಭರತಮುನಿಯ ಬಗ್ಗೆ ಉಪನ್ಯಾಸ ನೀಡಿದ ವಿದುಷಿ ರೂಪಶ್ರೀ ಮಧು ಸೂದನ, ನಾಟ್ಯ ಎನ್ನುವುದು ಪರಿ ಪೂರ್ಣ ವಿಷಯ. ಇದನ್ನು ಪರಿಪಕ್ವ ವಾಗಿ ಜನತೆಗೆ ನೀಡಿದವರು ಭರತ ಮುನಿ. ಇವರು ರಚಿಸಿದ ನಾಟ್ಯಶಾಸ್ತ್ರ ಸಾರ್ವಕಾಲಿಕ ಸತ್ಯ ಎಂದರು.ನಟರಾಜನ ಮೂರ್ತಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ವಿದುಷಿ ಡಾ.ವಸುಂಧರಾ ದೊರೆಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು.ಸಂಸ್ಕಾರ ಭಾರತಿಯ ಮೈಸೂರು ಘಟಕ ಅಧ್ಯಕ್ಷ ಅ.ಚ.ಅಶೋಕಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕಾರ ಭಾರತಿಯ ರಾಜ್ಯ ನೃತ್ಯ ವಿಧಾ ಪ್ರಮುಖರಾದ ವಿದುಷಿ ಕೃಪಾ ಫಡ್ಕೆ, ಕಾರ್ಯದರ್ಶಿ ಡಿ.ವಿ.ಪ್ರಹ್ಲಾದರಾವ್, ಪದ್ಮಾಅನಂತ್, ಮೀನಾಕ್ಷಿ ಲಕ್ಷ್ಮೀಕುಮಾರ್ ಉಪಸ್ಥಿತರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry