ನಾಟ್ಯ ಮಯೂರಿ!

7

ನಾಟ್ಯ ಮಯೂರಿ!

Published:
Updated:

ನೃತ್ಯ ಸಂಯೋಜನೆಯ ಸವಾಲುಗಳೇನು?

ಸಂದರ್ಭ ಮತ್ತು ವಿಷಯದ ಆಧಾರದ ಮೇಲೆ ನೃತ್ಯ ಸಂಯೋಜನೆ ಮಾಡುತ್ತೇವೆ. ಹಾಗಾಗಿ ಅದನ್ನು ಸಾರ್ವತ್ರೀಕರಿಸಿ ಹೇಳುವುದು ಕಷ್ಟ. ಯಾವ ಪ್ರಕಾರ ಸುಲಭ, ಯಾವುದು ಕಷ್ಟ ಎನ್ನುವುದು ನಿರ್ಧರಿತವಲ್ಲ. ಆದರೆ ನಮ್ಮ ಬಳಿ ಇರುವ ನೃತ್ಯಗಾರರು, ಅವರ ಸಾಮರ್ಥ್ಯ, ಪ್ರದರ್ಶನದ ಸ್ಥಳ, ಬೆಳಕು, ಉಡುಪು ಇವೆಲ್ಲವೂ ಗಮನದಲ್ಲಿರಬೇಕು. ಮುಖ್ಯವಾಗಿ ಸಂಗೀತದ ಹಿನ್ನೆಲೆ ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಷ್ಟೆಲ್ಲ ಒಟ್ಟಾಗಿ ನೃತ್ಯದಲ್ಲಿ ಒಂದು ಭಾವವನ್ನು ಕಟ್ಟಿಕೊಡಬೇಕು.

ಸಿನಿಮಾ ನೃತ್ಯಕ್ಕೂ ಸ್ಟೇಜ್ ಷೋಗಳಿಗೂ ಏನು ವ್ಯತ್ಯಾಸ?

ಎರಡೂ ಕಡೆಗಳಲ್ಲಿನ ಕ್ಯಾನ್ವಾಸ್ ಬೇರೆಯೇ. ವೇದಿಕೆಯಲ್ಲಿ ಪ್ರೇಕ್ಷಕರಿಗಾಗಿ, ಸಿನಿಮಾದಲ್ಲಿ ಕ್ಯಾಮೆರಾಕ್ಕಾಗಿ ಡಾನ್ಸ್ ಮಾಡಬೇಕು. ವೇದಿಕೆಯಲ್ಲಿ ನೋಡುಗರು ಎದುರಿಗೇ ಇರುತ್ತಾರೆ. ಆದರೆ ಕ್ಯಾಮೆರಾ ಎಲ್ಲಿ ಬೇಕಾದರೂ ಇಡಬಹುದು. ಸ್ಟೇಜ್‌ನಲ್ಲಿ ‘ರೀಟೇಕ್’ ಇರುವುದಿಲ್ಲ. ವೇದಿಕೆಯ ಹಿಂಭಾಗ ಖಾಲಿ ಇಡಬಹುದು. ಕ್ಯಾಮೆರಾದಲ್ಲಿ ‘ಸ್ಪೇಸ್’ ಶ್ರೀಮಂತವಾಗಿರಬೇಕು. ಸ್ಟೇಜ್ ಷೋಗಳಿಗೆ ಹೋಲಿಸಿದರೆ ಜನರನ್ನು ತಲುಪುವಲ್ಲಿ ಕ್ಯಾಮೆರಾದ ಸಾಮರ್ಥ್ಯ ಅನೂಹ್ಯ.

ನೀವು ಸಿನಿಮಾ ಕಡೆ ಹೆಚ್ಚು ಗಮನ ಹರಿಸಿದಂತಿಲ್ಲ.

ಸಿನಿಮಾ ಮತ್ತು ವೇದಿಕೆ ಎರಡೂ ಭಿನ್ನ. ಎರಡರಲ್ಲೂ ಕಲಿಯುವುದು ಸಾಕಷ್ಟಿದೆ. ಸಿನಿಮಾಕ್ಕೆ ಬಹುವಿಧ ಕೌಶಲ ಅಗತ್ಯ. ನನ್ನ ಶೈಲಿಯಲ್ಲೇ ಸಿನಿಮಾ ಹಾಡುಗಳಿಗೂ ನೃತ್ಯ ಸಂಯೋಜಿಸುವುದಾದರೆ ನಾನು ಯೋಚಿಸಬಹುದು. ಆದರೆ ಒಂದು ಐಟಂ ಹಾಡು ಮಾಡಬೇಕೆಂದರೆ ನನಗಾಗುವುದಿಲ್ಲ. ಈವರೆಗೆ ಮಾಡಿರುವ ಸಿನಿಮಾಗಳಿಗೆ ನನ್ನ ಶೈಲಿಯಲ್ಲೇ ನೃತ್ಯ ಸಂಯೋಜಿಸಿದ್ದೇನೆ. ಅದು ನನ್ನ ಮಿತಿಯಿರಬಹುದು. ಸದ್ಯ ಹಿಂದಿ ಸಿನಿಮಾವೊಂದಕ್ಕೆ ನೃತ್ಯ ಸಂಯೋಜಿಸಿದ್ದೇನೆ. ಇಷ್ಟರಲ್ಲೇ ನೀವು ಅದರ ಬಗೆಗಿನ ಸುದ್ದಿ ಕೇಳುತ್ತೀರಿ.‘ನೃತ್ಯರುತ್ಯ’ದ ಬಗ್ಗೆ?

ಇಲ್ಲಿ ಭಾರತೀಯ ಸಮಕಾಲೀನ ನೃತ್ಯಗಳ ಅಭ್ಯಾಸ ಮಾಡುತ್ತೇವೆ. ನೃತ್ಯದ ಬಗೆಗಿನ ಜ್ಞಾನದ ಜೊತೆಗೆ ಒಬ್ಬ ಡಾನ್ಸರ್ ತನ್ನನ್ನು ಹೇಗೆ ವೇದಿಕೆಗೆ ಸಮರ್ಪಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತೇವೆ. ಆಸಕ್ತರನ್ನು ಅವರ ಅನುಭವ, ಸಾಮರ್ಥ್ಯದ ಆಧಾರದಲ್ಲಿ ಎ ಗ್ರೇಡ್, ಬಿ ಗ್ರೇಡ್ ಎಂದು ವಿಂಗಡಿಸುತ್ತೇವೆ. ಸಾಕಷ್ಟು ಪರೀಕ್ಷೆಗಳನ್ನು ಎದುರಿಸಿ ಆಯ್ಕೆಯಾದವರು ನಮ್ಮ ಪ್ರದರ್ಶನಗಳಲ್ಲಿ ಉಳಿದುಕೊಳ್ಳುತ್ತಾರೆ. ನಾನು ಈವರೆಗೆ ನೀಡಿದ ಎಲ್ಲಾ ಪ್ರಮುಖ ಪ್ರದರ್ಶನಗಳೂ ‘ನೃತ್ಯರುತ್ಯ’ದ ಮೂಲಕವೇ.

ನಿಮ್ಮ ತಂಡದ ಪ್ರಮುಖ ಪ್ರದರ್ಶನಗಳು ಯಾವುವು?

ಅಮಿತಾಭ್ ಬಚ್ಚನ್ ಅವರ ಎಪ್ಪತ್ತನೇ ಹುಟ್ಟುಹಬ್ಬಕ್ಕೆ ಅವರ ತಂದೆಯವರ ‘ಮಧುಶಾಲಾ’ ಕವಿತೆಗೆ ನೃತ್ಯ ಪ್ರದರ್ಶಿಸಿದ್ದೆವು. ಅದನ್ನು ಮೆಚ್ಚಿದ ಅಮಿತಾಭ್, ‘ನನ್ನ ತಂದೆಯನ್ನು ನೆನಪಿಸಿದೆ’ ಎಂದು ಸಂತಸ ಪಟ್ಟರು. ರಾಣಿ ಮುಖರ್ಜಿ ಅವರಿಗೆ ‘ಶಾಕುಂತಲ’ ಎಂಬ ನೃತ್ಯ ಸಂಯೋಜಿಸಿದ್ದೆವು. ‘ಮೇಕ್ ಇನ್ ಇಂಡಿಯಾ’ ಥೀಮ್ ಅಡಿಯಲ್ಲಿ ಕಳೆದ ತಿಂಗಳು ಜರ್ಮನಿಯಲ್ಲಿ ಒಂದು ಪ್ರದರ್ಶನ ನೀಡಿದ್ದೇವೆ. ‘ಸೋಲ್ ಇಂಟರ್‌ನ್ಯಾಷನಲ್ ಕೊರಿಯಾಗ್ರಫಿ ಸ್ಪರ್ಧೆ’ಯಲ್ಲಿ ಭಾರತವನ್ನು ಪ್ರತಿನಿಧಿಸಿ ಗೆದ್ದಿದ್ದೇವೆ. ರಾಣಿ ಎಲಿಜಬೆತ್ ಎದುರು ಒಮ್ಮೆ ಪ್ರದರ್ಶನ ನೀಡಿದ್ದೇವೆ.

ಪಾರಂಪರಿಕ ನೃತ್ಯ ಕಲಿತ ನೀವು ಸಮಕಾಲೀನ ನೃತ್ಯಕ್ಕೆ ‘ಅಪ್ಡೇಟ್’ ಆಗುವ ಬಗೆ ಹೇಗೆ?

ಭಾರತಲ್ಲಿನ ಸಮಕಾಲೀನ ನೃತ್ಯಗಳು ಯಾವುದು ಎಂಬುದು ನನ್ನ ಕುತೂಹಲ. ಹೊಸ ಹಾಡಿಗೆ ಅಂಟಿಕೊಳ್ಳುವುದಕ್ಕಿಂತ ಹೊಸ ನೃತ್ಯವನ್ನು ಗಮನಿಸಿ ಅದರಲ್ಲಿ ಪ್ರಯೋಗ ಮಾಡುತ್ತೇವೆ. ಪಾರಂಪರಿಕ ಶೈಲಿಯಲ್ಲಿ ನೃತ್ಯ ಕಲಿತರೆ ಎಲ್ಲಾ ನೃತ್ಯಕ್ಕೂ ಒಗ್ಗಿಕೊಳ್ಳುತ್ತೇವೆ. ಹಾಗಾಗಿ ಸಮಕಾಲೀನ ನೃತ್ಯದ ಜೊತೆ ಪಾರಂಪರಿಕ ಶೈಲಿಯೂ ಬೇಕು.ಇಂದಿನ ಪೀಳಿಗೆ ನೃತ್ಯವನ್ನು ಎಷ್ಟು ಗಂಭೀರವಾಗಿ ಪರಿಗಣಿಸಿದೆ?

ಬಹುತೇಕರಿಗೆ ನೃತ್ಯದ ಮೇಲೆ ಪ್ರೀತಿ ಇದೆ. ಆದರೆ ಇಂದಿನ ವ್ಯಾಪಾರಿ ಮನೋಭಾವ ಅವರನ್ನು ಆವರಿಸಿದಂತಿದೆ. ಈ ವೃತ್ತಿಯಲ್ಲಿ ಶಿಸ್ತು, ಶ್ರಮ, ತಾಳ್ಮೆ ಬೇಕು. ಇವು ಅವರಲ್ಲಿ ಸ್ವಲ್ಪ ಕಡಿಮೆ ಇದೆ ಅನಿಸುತ್ತದೆ. ನೃತ್ಯ ಬೇಗ ಬಂದುಬಿಡಬೇಕು, ಅಷ್ಟೇ ಬೇಗ ಹೆಸರು ಹಣವನ್ನೂ ಗಳಿಸುವ ಹಂಬಲ. ಸಿನಿಮಾದಲ್ಲಿ ಸಿಗುವ ಜನಪ್ರಿಯತೆ ಅವರ ತಲೆಯಲ್ಲಿದೆ. ಒಟ್ಟಿನಲ್ಲಿ ಅವಸರದಲ್ಲಿ ಪ್ರತಿಫಲ ಸಿಗಬೇಕು ಎಂಬುದು ಅವರ ನಿರೀಕ್ಷೆ.

‘ಡಾನ್ಸಿಂಗ್ ಸ್ಟಾರ್’ ಬಗ್ಗೆ?

ಕಿರುತೆರೆಯ ರಿಯಾಲಿಟಿ ಷೋನಲ್ಲಿ ನಾನು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಅಲ್ಲಿ ನಾನು ಕಲಿಯುವುದು ತುಂಬಾ ಇದೆ. ರಿಯಾಲಿಟಿ ಷೋಗಳ ಸಂಸ್ಕೃತಿ ಏನು, ಸೆಲೆಬ್ರಿಟಿ ಹಾಗೂ ತರಬೇತಿ ಪಡೆದ ಡಾನ್ಸರ್‌ಗಳು ಒಂದಾಗಿ ಪ್ರದರ್ಶನ ನೀಡುವುದು ಎಲ್ಲ ಕುತೂಹಲಕಾರಿ. ಪ್ರತಿ ಸ್ಪರ್ಧಿಯದೂ ಭಿನ್ನ ಶೈಲಿ. ನಾನು ಲೈಟಿಂಗ್, ಕ್ಯಾಮೆರಾ ಎದುರಿಸುವ ತಾಂತ್ರಿಕ ಅಂಶಗಳನ್ನು ಕಲಿತೆ. ಒಟ್ಟು ಅನುಭವ ತುಂಬ ಖುಷಿ ನೀಡಿದೆ.

ನಿಮ್ಮ ಪತಿ ರಘು ದೀಕ್ಷಿತ್ ಜೊತೆ ಕೆಲಸ ಮಾಡುವಾಗ ‘ಕೆಮೆಸ್ಟ್ರಿ’ ಹೇಗಿರುತ್ತದೆ?

ಬೇರೆ ಸಂಗೀತಗಾರರ ಜೊತೆ ಕೆಲಸ ಮಾಡುವುದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಇಲ್ಲಿ ಇರುತ್ತದೆ. ರಘು ಅವರಿಗೆ ನನ್ನ ಯೋಚನೆಗಳನ್ನು ಶಬ್ದಗಳ ಮೂಲಕ ವಿವರಿಸುವ ಅಗತ್ಯವೇ ಇಲ್ಲ. ನೃತ್ಯವನ್ನು ದೃಶ್ಯ ರೂಪಕ್ಕೆ ತರುವಲ್ಲಿ ಸಂಪೂರ್ಣ ಬೆಂಬಲವಿರುವ ಸಂಗೀತ ಸಿಗುತ್ತದೆ. ನನ್ನ ನೃತ್ಯವನ್ನೂ ವಿಮರ್ಶಿಸುತ್ತಾರೆ. ಅದರಲ್ಲಿ ಯಾವ ಔಪಚಾರಿಕತೆಯೂ ಇರುವುದಿಲ್ಲ.‘ಸ್ಕೈಪ್’ ಮೂಲಕವೂ ಕಲಿಸುತ್ತಿದ್ದೀರಿ. ಅದೆಷ್ಟು ಯಶಸ್ವಿ?

ಈ ಪ್ರಯತ್ನ ಖಂಡಿತ ನೂರಕ್ಕೆ ನೂರರಷ್ಟು ಯಶಸ್ವಿ ಅಲ್ಲ. ಆದರೆ ಸಾಮಾಜಿಕ ಜಾಲತಾಣಗಳ ಈ ಪರಿಯ ಉಪಯೋಗವೂ ಸಾಧ್ಯ. ತಂತ್ರಜ್ಞಾನವು ನಮ್ಮ ನಡುವಿನ ಗಡಿಯನ್ನು ತೊಡೆಯುವುದಾದರೆ ಯಾಕಾಗಬಾರದು. ವಿದೇಶದಲ್ಲಿ ಇರುವವರು ‘ಸ್ಕೈಪ್’ ಮೂಲಕ ಕಲಿಯಲು ಉತ್ಸುಕರಾಗಿದ್ದಾಗ ನಾನ್ಯಾಕೆ ಮಿತಿ ಹಾಕಿಕೊಂಡಿರಲಿ. ನಾವು ಅದನ್ನು ಬಳಸಿಕೊಳ್ಳಬೇಕು. ಲಂಡನ್‌ನಿಂದ ಇದರ ಬಗ್ಗೆ ಹೆಚ್ಚಿನ ಆಸಕ್ತಿ ವ್ಯಕ್ತವಾಗುತ್ತಿದೆ. ವಿಶೇಷ ಪ್ರದರ್ಶನಗಳಿದ್ದಾಗ ಈ ಪ್ರಯತ್ನ ಸಹಕಾರಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry