ನಾಡಕುಸ್ತಿಗೆ ‘ಗ್ಲಾಮರ್’ ತುಂಬಿದ ಸುದರ್ಶನ್

7
ದಸರಾ ಕ್ರೀಡೆ

ನಾಡಕುಸ್ತಿಗೆ ‘ಗ್ಲಾಮರ್’ ತುಂಬಿದ ಸುದರ್ಶನ್

Published:
Updated:

‘ಒಬ್ಬ ಬಲಾಢ್ಯ ಪುರುಷನ ದೇಹದ ಅವಯವ­ ಗಳು ಯಾವ ರೀತಿ ಇರಬೇಕು ಎನ್ನುವುದನ್ನು ಈ ಜಗಜಟ್ಟಿಯ ಅಂಗಸೌಷ್ಠವದಿಂದ ನೀವು ಅರಿಯಬಹುದು’–ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ (ಎಂಎಂಸಿ) ದೇಹರಚನಾಶಾಸ್ತ್ರ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರು ತಮ್ಮ ವಿದ್ಯಾರ್ಥಿಗಳ ಮುಂದೆ  ನಿಲ್ಲಿಸಿದ್ದು ಜೆ. ಸುದರ್ಶನ್ ಅವರನ್ನು. 5.9 ಅಡಿ ಎತ್ತರದ ಕಟ್ಟುಮಸ್ತಾದ ದೇಹದಾರ್ಢ್ಯ ಪಟು ಮತ್ತು ಕುಸ್ತಿಪಟುವಾಗಿದ್ದ ಸುದರ್ಶನ್ ಬದುಕಿದ್ದಾಗ ಮತ್ತು ನಂತರವೂ ದಂತಕಥೆಯಾಗಿಯೇ ಉಳಿದವರು.ಎಂಎಂಸಿಯಲ್ಲಿ  ಓದುತ್ತಿದ್ದ ಅವರ ಸಹೋದರ ಸಂಬಂಧಿ ಡಾ. ಎಂ.ಸಿ. ಕೃಷ್ಣ ಅವರನ್ನು ನೋಡಲು ಕಾಲೇಜಿಗೆ ತೆರಳಿದ್ದ ಸುದರ್ಶನ್ ಅಲ್ಲಿಯ ಹಿರಿಯ ಪ್ರಾಧ್ಯಾಪಕ ಡಾ. ಅಪ್ಪಾಜಿಯವರ ಕಣ್ಣಿಗೆ ಬಿದ್ದರು. ಕೂಡಲೇ ಅವರು ಸುದರ್ಶನ್ ಮನವೊಲಿಸಿ ತಮ್ಮ ತರಗತಿಗೆ ಕರೆದೊಯ್ದರು. ‘ಅನಾಟಮಿ ಪಾಠ’ ಹೇಳಿಕೊಟ್ಟರು.ಅವರನ್ನು ಬಹಳ ಹತ್ತಿರದಿಂದ ನೋಡುತ್ತಲೇ ಬೆಳೆದ ರಾಷ್ಟ್ರೀಯ ಮಾಜಿ ಅಥ್ಲೀಟ್ ಸಿ. ಮಹೇಶ್ವರನ್ (ಸುದರ್ಶನ್ ಅವರ ಚಿಕ್ಕಮ್ಮನ ಮಗ) ಅವರ ಸ್ಮೃತಿಪಟಲದಲ್ಲಿ ಸುದರ್ಶನ್ ಕುರಿತ ಇಂತಹ ಹತ್ತು ಹಲವು ಕಥೆಗಳಿವೆ. ತಾವು ಅಥ್ಲೀಟ್ ಆಗಲು ಪ್ರೇರಣೆಯಾದವರೇ ಸುದರ್ಶನ್ ಎಂಬ ಮಾತಿನೊಂದಿಗೆ ಕಥೆ ಆರಂಭಿಸುತ್ತಾರೆ.ಮೈಸೂರು ಮಟ್ಟಿ ಕುಸ್ತಿಗೆ 1950–70ರ ಅವಧಿಯಲ್ಲಿ ಗ್ಲಾಮರ್ ರಂಗು ತುಂಬಿದ ಸುದರ್ಶನ್ ಮೂಲತಃ ಜಟ್ಟಿ ವಂಶಸ್ಥರು. ಪ್ರೇಮಲೀಲಾ ಅಗರಬತ್ತಿ ಮತ್ತು ಸುಗಂಧ ದ್ರವ್ಯ ಸಂಸ್ಥೆಯ ಮಾಲೀಕರಾಗಿದ್ದ ಎಂ.ಆರ್. ಜಟ್ಟೆಪ್ಪನವರ ಮಗ ಸುದರ್ಶನ್ ಅವರಿಗೆ ಬಾಲ್ಯದಿಂದಲೂ ಕುಸ್ತಿಯ ಸೆಳೆತ.  ನೋಡಲು ಸ್ಥುರದ್ರೂಪಿಯಾಗಿದ್ದ ಅವರು, ಗೋಪಾಸ್ವಾಮಣ್ಣವರ ಗರಡಿ, ಭೂತಪ್ಪನವರ ಗರಡಿಗಳಲ್ಲಿ ಕಠಿಣ ತಾಲೀಮು ಪಡೆದರು. ಕಟ್ಟುಮಸ್ತು ದೇಹ ಹೊಂದಿದ್ದ ಅವರು, 1952ರಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ‘ಮಿಸ್ಟರ್ ಮೈಸೂರು’ ಆಗಿ ಮಿಂಚಿದರು.ಆದರೆ ಅವರಿಗೆ ಸಾವಿರಾರು ಅಭಿಮಾನಿಗಳ ಬಳಗ ಇದ್ದದ್ದು ಮಾತ್ರ ಕುಸ್ತಿಯಲ್ಲಿಯೇ. ವಿಶೇಷ ಕುಸ್ತಿ ಪಂದ್ಯಗಳನ್ನು ಹೊರತುಪಡಿಸಿದರೆ ಸಾಧಾರಣ ಮಟ್ಟಿ ಕುಸ್ತಿಗಳಲ್ಲಿ ಭಾಗವಹಿಸುತ್ತಿದ್ದ ಜಟ್ಟಿಗಳು ಕಡಿಮೆ. ಆದರೆ ಆ ಪರಂಪರೆಯನ್ನು ಮೊದಲು ಮುರಿದವರು ಸುದರ್ಶನ್. ಜೊತೆ ಕುಸ್ತಿಗಳಲ್ಲಿ ತೊಡೆ ತಟ್ಟಿದರು. ಆದರೆ ಇದರಿಂದ ಅವರು ಬಹಳಷ್ಟು ಟೀಕೆಗಳಿಗೆ ಒಳಗಾದರು. ಜಟ್ಟಿಗಳಿಗೆ ಸಮರ ಕಲೆಗಳು, ಸೂಕ್ಷ್ಮ ಕೌಶಲ್ಯಗಳು ಗೊತ್ತಿರುತ್ತವೆ. ಆದ್ದರಿಂದ ಅವರು ಇನ್ನಿತರ ಕುಸ್ತಿಪಟುಗಳೊಂದಿಗೆ ಸೆಣಸಬಾರದು ಎಂಬ ಅಲಿಖಿತ ನಿಯಮವನ್ನು ಕುಸ್ತಿ ಮೇಲಿನ ಪ್ರೀತಿಗಾಗಿ ಮುರಿದರು. ಅವರು ಯಾವಾಗಲೂ ತಮ್ಮ ಹೃದಯದ ಮಾತನ್ನೇ ಕೇಳಿದವರು. ಜಾತಿಯತೆಯಂತಹ ಯಾವುದೇ ಕಟ್ಟುಪಾಡುಗಳಿಗೆ ಅವರು ತಲೆಬಾಗಿರಲಿಲ್ಲ.ಅವರು ತಮ್ಮ  ಕುಸ್ತಿಯಲ್ಲಿ  ತೋರಿಸುತ್ತಿದ್ದ ಕೌಶಲ್ಯಗಳು, ಪಟ್ಟುಗಳು, ಭಂಗಿಗಳು ಅತ್ಯಂತ ಆಕರ್ಷಕವಾಗಿದ್ದವು. ಸುದರ್ಶನ್‌ ಕುಸ್ತಿಯೆಂದರೆ ಸಾವಿರ ಜನರು ಸೇರುತ್ತಿದ್ದರು. ಅವರು ಮೈಸೂರಿನಿಂದ ಬೆಂಗಳೂರಿನಲ್ಲಿ ಕುಸ್ತಿ ಆಡಲು ಹೊರಟರೆ ಜನ ರೈಲುಗಳಲ್ಲಿ ಹೋಗುತ್ತಿದ್ದರು. ಅವರ ದೊಡ್ಡ ಅಭಿಮಾನಿಗಳ ಬಳಗವೇ ಇದ್ದ ಮೈಸೂರಿನ ದೇವರಾಜ ಮಾರುಕಟ್ಟೆಯ ವ್ಯಾಪಾರಿಗಳು ಬೋಗಿ ತುಂಬ ಹೂವಿನ ಹಾರಗಳನ್ನು ತುಂಬಿ ಕಳಿಸುತ್ತಿದ್ದರು. ಬೆಂಗಳೂರಿನಲ್ಲಿಯೂ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿತ್ತು.  ಕೆ.ಆರ್. ಮಾರುಕಟ್ಟೆ, ತಿಗಳರ ಪೇಟೆ, ಮಾವಳ್ಳಿ ಪ್ರದೇಶಗಳ  ಹಲವು ಅಂಗಡಿಗಳಲ್ಲಿ ಅವರ ಭಾವಚಿತ್ರಗಳು ಇದ್ದವು.ಆದರೆ ಅಂತಹ ತಾರಾಮೌಲ್ಯವಿದ್ದ ಕುಸ್ತಿಪಟುವಿಗೂ ಸೋಲು ತನ್ನ ರುಚಿ ತೋರಿಸಿಯೇಬಿಟ್ಟಿತು. ಅದು ಅವರ ಜೀವನಕ್ಕೆ ಬೇರೊಂದು ತಿರುವು ನೀಡಿತು. ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಜಮಖಂಡಿ ಪೈಲ್ವಾನ್‌ ಇವರನ್ನು ಮಣಿಸಿದರು. ಇದು ಸೋಲರಿಯದ ಸುದರ್ಶನ್ ಮನಸ್ಸನ್ನು ತೀವ್ರವಾಗಿ ನಾಟಿತು. ತಮ್ಮ ಅಭಿಮಾನಿಗಳನ್ನು ನಿರಾಸೆಗೊಳಿಸಿದೆ ಎಂಬ ಚಿಂತೆ ಕಾಡಿ, ‘ಇನ್ನು ಮುಂದೆ ಕುಸ್ತಿ ಮಾಡುವುದಿಲ್ಲ’  ಎಂದು ನಿರ್ಧರಿಸಿಬಿಟ್ಟರು. ಅಂಗಸಾಧನೆಗೆ ಮಾತ್ರ ಸೀಮಿತವಾದರು.ಕುಸ್ತಿಪಟುಗಳ ಕಣ್ಮಣಿ: ಗರಡಿಮನೆಗೆ ಕುಸ್ತಿ ಕಲಿಯಲು ಹೊಸದಾಗಿ ಸೇರಿಕೊಳ್ಳುವ ಹುಡುಗರಿಗೆ ‘ಕಚ್ಚೆ’ ಕಟ್ಟುವಾಗ  ಒಂಬತ್ತು ಜನ ಪ್ರಸಿದ್ಧ ಮತ್ತು ಹಿರಿಯ ಉಸ್ತಾದರ ಹೆಸರುಗಳನ್ನು ಜೋರಾಗಿ ಕೂಗುವ ಮೂಲಕ ಸ್ಮರಿಸುವ ಸಂಪ್ರದಾಯವಿದೆ. ಆಗ ಯಾವುದೇ ಧರ್ಮ ಅಥವಾ ಗುಂಪಿಗೆ ಸೇರಿದ್ದ ಗರಡಿಯಲ್ಲಿಯೂ ಕುಸ್ತಿ ದೀಕ್ಷೆ ಕೊಡುವಾಗ ಸುದರ್ಶನ್ ಹೆಸರನ್ನು ಎಲ್ಲರೂ ನೆನೆಯುತ್ತಿದ್ದದ್ದು ವಿಶೇಷ. 

60ರ ದಶಕದಲ್ಲಿ ಒಂದು ಬಾರಿ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ‘ಮೈಸೂರು ಒಲಿಂಪಿಕ್ಸ್’ನ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಮೊದಲ ಮೈಸೂರಿಗರಾದರು. ಆಗ ಅವರಿಗೆ ‘ಒಲಿಂಪಿಕ್ ಚಾಂಪಿಯನ್‌’ ಎಂದು ಅಭಿಮಾನಿಗಳು ಕರೆದರು.ಸರ್ಕಸ್ ಸವಾಲು: ಆಗ ಕಮಲಾ ತ್ರೀರಿಂಗ್ ಸರ್ಕಸ್ ಪ್ರದರ್ಶನಗೊಳ್ಳುತ್ತಿತ್ತು. ಅದರಲ್ಲಿ ಇದ್ದ ಒಬ್ಬ ವೇಟ್ ಲಿಫ್ಟರ್ ಸ್ಯಾಂಡೋ 350 ಪೌಂಡ್ ಭಾರ ಎತ್ತಿದ. ‘ಮೈಸೂರಿನಲ್ಲಿ ಯಾರಾದರೂ ನನ್ನ ಸಾಧನೆ ಮುರಿಯುವವರು ಇದ್ದಾರೆಯೇ’ ಎಂದು ಸವಾಲು ಎಸೆದ. ಇದನ್ನು ಸ್ವೀಕರಿಸಿದ ಸುದರ್ಶನ್ ತಮ್ಮ ಶಿಷ್ಯ, ಪವರ್ ಲಿಫ್ಟರ್ ರಘು ಕೈಯಿಂದ 400 ಪೌಂಡ್ ಭಾರ ಎತ್ತಿಸಿದರು.‘ನೀವು ಸರ್ಕಸ್ ಮಾಡಲು ಬಂದಿರುವುದು ಮನೋರಂಜನೆ ಮತ್ತು ನಿಮ್ಮ ಉಪಜೀವನಕ್ಕಾಗಿ. ಸುಖಾಸುಮ್ಮನೆ ಮೈಸೂರು ಪರಂಪರೆ, ಶಕ್ತಿ, ಸಾಮರ್ಥ್ಯಗಳಿಗೆ ಸವಾಲು ಹಾಕುವ ದುಸ್ಸಾಹಸ ಮಾಡಿ ಜನರ ಅಗೌರವಕ್ಕೆ ಪಾತ್ರರಾಗಬೇಡಿ’ ಎಂದು ಖಾರವಾಗಿ ಎಚ್ಚರಿಕೆ ನೀಡಿ ವೇದಿಕೆ ಇಳಿದು ಬಂದಿದ್ದರು.ಚಿತ್ರರಂಗದ ನಂಟು: ಲೋಯರ್ ಸೆಕೆಂಡರಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಅವರು, ಇಂಗ್ಲಿಷ್‌, ಕನ್ನಡ, ತೆಲುಗು, ತಮಿಳು ಭಾಷೆಗಳನ್ನು ಚೆನ್ನಾಗಿ ಮಾತನಾಡಬಲ್ಲವರಾಗಿದ್ದರು. ಜೊತೆಗೆ ಸಂವಹನ ಶೈಲಿಯೂ ಚೆನ್ನಾಗಿತ್ತು. ಆಕರ್ಷಕ ದೇಹಸೌಷ್ಠವ ಅವರ ಪ್ರಮುಖ ಸಂಪತ್ತಾಗಿತ್ತು. ಇದರಿಂದ ಚಿತ್ರರಂಗ ಅವರನ್ನು ಬರಸೆಳೆದು ಅಪ್ಪಿಕೊಂಡಿತು. ನಾಯಕರೊಂದಿಗೆ ಸಹನಟರಾಗಿ ಮತ್ತು ಖಳನಟರಾಗಿಯೂ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ಬಹುತೇಕ ಚಿತ್ರಗಳಲ್ಲಿ ಅವರ ದೇಹವನ್ನು ಪ್ರದರ್ಶನಕ್ಕೆ ಇಡುವ ಮತ್ತು ಸಾಮರ್ಥ್ಯ ಪ್ರದರ್ಶನಕ್ಕೆ ಹೆಚ್ಚಿನ ಆದ್ಯತೆ ಇತ್ತು. ‘ಎಲ್ಲೆಲ್ಲೂ ನೀನೇ’ ಕನ್ನಡ ಚಲನಚಿತ್ರದಲ್ಲಿ ನಟಿಸಿದ್ದರು. ಎಂಜಿಆರ್ ಜೊತೆಗೆ ತಮಿಳು ಚಿತ್ರಗಳಲ್ಲಿಯೂ ಅವರು ನಟಿಸಿದರು. ಹೈದರಾಬಾದಿನ ರಾಮೋಜಿರಾವ್ ಅವರ ’ಟಾರ್ಜನ್’ ಚಿತ್ರಕ್ಕೂ ಇವರೇ ನಾಯಕರಾದರು. ಆದರೆ ಅಲ್ಲಿ ಜನಪ್ರಿಯತೆ ಹೆಚ್ಚಾದಂತೆ, ಚಿತ್ರರಂಗದ ‘ರಂಗು–ಗುಂಗು’ಗಳು ಜೊತೆ ನೀಡತೊಡಗಿದವು. ವೃತ್ತಿ ಮತ್ಸರದ ಕಣ್ಣುಗಳಿಗೂ ಅವರು ತುತ್ತಾದರು.ಚೆನ್ನೈ ನಂಟು ಬಿಟ್ಟು ಮೈಸೂರಿಗೆ ಬಂದು ಹಲವು ಸಂಘ, ಸಂಸ್ಥೆಗಳೊಂದಿಗೆ ಗುರುತಿಸಿಕೊಂಡ ಅವರು 14 ವರ್ಷಗಳ ಹಿಂದೆ ನಿಧನರಾದರು. ಆದರೆ ತಮ್ಮ ‘ಗ್ಲಾಮರ್’ ನೆನಪನ್ನು ಮಾತ್ರ ಹಾಗೆಯೇ ಉಳಿಸಿಹೋಗಿದ್ದಾರೆ.ಟೈಗರ್ ಬಾಲಾಜಿ

ತಮ್ಮ ಸಾಧನೆ, ಕೌಶಲ್ಯ ಮತ್ತು ಸಿನೆಮಾ ಲೋಕದ ಜನಪ್ರಿಯತೆಯಿಂದ ಮೈಸೂರು, ಬೆಂಗಳೂರಿನ ಹಲವು ಕುಸ್ತಿಪಟುಗಳಿಗೆ ಸ್ಫೂರ್ತಿಯಾಗಿದ್ದ ಸುದರ್ಶನ್,  ಬಹಳಷ್ಟು ಜನರಿಗೆ ನೇರ ಗುರು ಆಗಿರಲೇ ಇಲ್ಲ. ಆದರೆ ತಮ್ಮ ಐವರು ಪುತ್ರರಲ್ಲಿ ಒಬ್ಬನಾದ ಬಾಲಾಜಿಯನ್ನು ಮಾತ್ರ ‘ಟೈಗರ್’ ಆಗಿ ಬೆಳೆಸಿದರು.‘ಬೆಳಗಿನ ಜಾವ 3.30ಕ್ಕೆ ನಿದ್ದೆಯಿಂದ ಎಬ್ಬಿಸುತ್ತಿದ್ದರು. ಬೆಳಿಗ್ಗೆ 7.30ರವರೆಗೂ ಅತ್ಯಂತ ಕಠಿಣವಾದ ವ್ಯಾಯಾಮ,  ಅಂಗಸಾಧನೆಗಳನ್ನು ಮಾಡಿಸುತ್ತಿದ್ದರು.  ನೂರಾರು ದಂಡ, ಬಸ್ಕಿಗಳನ್ನು ಮಾಡಿಸುತ್ತಿದ್ದರು. ಹುಲಿಹೆಜ್ಜೆ ಹಾಕಿಸುತ್ತಿದ್ದರು. ನಂತರ ಊಟದಲ್ಲಿಯೂ ಪೌಷ್ಟಿಕತೆಗೆ ಆದ್ಯತೆ. ವಿಶ್ರಾಂತಿ ನಂತರ ಮತ್ತೆ ಮಟ್ಟಿಯಲ್ಲಿ ಸಾಧನೆ, ಲಡ್ಡತ್‌ಗಳನ್ನು ಮುಸ್ಸಂಜೆಯವರೆಗೂ ಮಾಡಿಸುತ್ತಿದ್ದರು. ಅತ್ಯಂತ ನೇರ ನಡೆನುಡಿಯ ವ್ಯಕ್ತಿ ಅವರಾಗಿದ್ದರು. ಅವರ ಮಗನಾಗಿ ಹುಟ್ಟಿದ್ದೇ ದೊಡ್ಡ ಸುದೈವ’ ಎಂದು ಟೈಗರ್ ಬಾಲಾಜಿ ಗದ್ಗದಿತರಾಗುತ್ತಾರೆ.ಸುಮಾರು 5.4 ಅಡಿ ಎತ್ತರದ ಬಾಲಾಜಿ ತಮ್ಮ ತಂದೆಯಷ್ಟು ಎತ್ತರಕ್ಕೆ ಬೆಳೆಯಲಿಲ್ಲ. ಆದರೆ ಮೈಸೂರು ಕುಸ್ತಿ ಲೋಕದಲ್ಲಿ ‘ಟೈಗರ್’ ಎಂದು ಕರೆಸಿಕೊಳ್ಳುವ ಮಟ್ಟಕ್ಕೆ ಏರಿದರು. ಅಪ್ಪನ ಮಾರ್ಗದರ್ಶನದಲ್ಲಿ ಹಲವು ಕೌಶಲ್ಯ ಕಲಿತಿದ್ದ ಅವರು ಬೆಂಗಳೂರು, ಧಾರವಾಡ, ಬೆಳಗಾವಿ, ಮೈಸೂರ, ಕೊಲ್ಲಾಪುರ, ಪುಣೆಯ ಹಲವು ಮಲ್ಲರ ಎದುರು ಸೆಣಸಿ ಗೆದ್ದರು. ಸದ್ಯ ಸುಣ್ಣದಕೇರಿಯಲ್ಲಿರುವ ಅವರು ಭೂತಪ್ಪನವರ ಗರಡಿ, ಈಶ್ವರರಾಯರ ಗರಡಿಯಲ್ಲಿ ಹಲವರಿಗೆ ಕುಸ್ತಿ ಕಲಿಸುತ್ತಿದ್ದಾರೆ. ತಮ್ಮ ಇಬ್ಬರೂ ಮಕ್ಕಳಿಗೂ ಮಟ್ಟಿಯ ಪಾಠ ಹೇಳಿಕೊಡುತ್ತಿದ್ದಾರೆ. ವಿಜಯದಶಮಿಯಂದು ಅರಮನೆ ಅಂಗಳದಲ್ಲಿ ನಡೆಯುವ ವಜ್ರಮುಷ್ಟಿ ಕಾಳಗದ ರೆಫರಿಯಾಗಿಯೂ ಹಲವು ಬಾರಿ ಕಾರ್ಯನಿರ್ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry