ಮಂಗಳವಾರ, ಜುಲೈ 27, 2021
25 °C

ನಾಡಗೀತೆಗೆ ಕತ್ತರಿ; ಎಷ್ಟು ಸರಿ?

–ರೋಹಿಣಿ ಮುಂಡಾಜೆ Updated:

ಅಕ್ಷರ ಗಾತ್ರ : | |

‘ಜಯ ಭಾರತ ಜನನಿಯ ತನುಜಾತೆ/

ಜಯಹೇ ಕರ್ನಾಟಕ ಮಾತೆ/

ಜಯ ಸುಂದರ ನದಿವನಗಳ ನಾಡ/

ಜಯಹೇ ರಸಋಷಿಗಳ ಬೀಡೇ...’

ಹಾಡು ನಾಡಗೀತೆಯಾಗಿ ಮಾನ್ಯವಾಗಿ ದಶಕಗಳೇ ಸಂದಿವೆ. ಆದರೆ ಸದಾ ವಿವಾದಗಳಿಂದಾಗಿ ಸುದ್ದಿಯಾಗುತ್ತಿದ್ದ ನಾಡಗೀತೆ ಈಗ ಮತ್ತೆ ಕಾಲಮಿತಿಯ ಕಾರಣಕ್ಕೇ ಸದ್ದು ಮಾಡುತ್ತಿದೆ. ಈ ಬಾರಿ ನಿಗದಿಮಾಡಬೇಕೆಂದುಕೊಂಡಿರುವ ಕಾಲಾವಧಿ ಒಂದು ನಿಮಿಷ!

ಗೀತೆಯ ಪೂರ್ಣಪಾಠವನ್ನು ಹಾಡಲು ಬೇಕಾಗುವ ಕಾಲಮಿತಿ ಏಳು ನಿಮಿಷ. ಈ ಬಗ್ಗೆ ಹಲವು ಬಾರಿ ಆಕ್ಷೇಪ ಕೇಳಿಬಂದಿತ್ತು. ಏಳು ನಿಮಿಷಗಳಷ್ಟು ಅವಧಿ ನಿಲ್ಲಬೇಕೆನ್ನುವುದು ಕೆಲವರಿಗೆ ಸಮಸ್ಯೆಯಾದರೆ, ‘ಕೇವಲ ಒಂದು ಗೀತೆಗಾಗಿ’ ಅಷ್ಟು ವೇಳೆಯನ್ನು ‘ವ್ಯರ್ಥ’ ಮಾಡುವುದು ಎಷ್ಟು ಸರಿ ಎಂಬುದು ಇನ್ನು ಕೆಲವರ ತಗಾದೆ.ಈ ಸಂಬಂಧ ಸೂಕ್ತ ಪರಿಹಾರ ಸೂಚಿಸಿ ಸರ್ಕಾರಕ್ಕೆ ವರದಿ ನೀಡುವಂತೆ ಜಿ.ಎಸ್.ಶಿವರುದ್ರಪ್ಪ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಜಿಎಸ್ಸೆಸ್ ಅವರ ಮರಣಾನಂತರ ಹಿರಿಯ ಸಾಹಿತಿ ಚೆನ್ನವೀರ ಕಣವಿ ಸಮಿತಿಯ ನೇತೃತ್ವ ವಹಿಸಿಕೊಂಡರು. ಆ ಸಮಿತಿ ನೀಡಿರುವ ವರದಿಯ ಆಧಾರದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹೊಸ ಕಾಲಮಿತಿಯ ಚೌಕಟ್ಟು ವಿಧಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ.ಬಹುತೇಕ ಕನ್ನಡ ಮಾಧ್ಯಮ ಶಾಲೆಗಳಲ್ಲಿ ನಾಡಗೀತೆಯ ಮಾನ್ಯ ಮಾಡಲಾದ ಚರಣಗಳನ್ನು ಯಥಾವತ್‌ ಹಾಡಿದರೆ, ಆಂಗ್ಲ ಮಾಧ್ಯಮ ಶಾಲೆಗಳು ಹಾಗೂ ಅನುದಾನಿತ ಶಾಲೆಗಳಲ್ಲಿ ರಾಷ್ಟ್ರಗೀತೆ ಮತ್ತು ನಾಡಗೀತೆಯ ರೆಕಾರ್ಡ್‌ ಪ್ಲೇ ಮಾಡಿಬಿಡುತ್ತಾರೆ. ಸಮಾರಂಭಗಳಲ್ಲಿ ಹಿರಿಯ ಕಿರಿಯ ಗಾಯಕರ ದೊಡ್ಡ ದಂಡೇ ನಾಡಗೀತೆಯನ್ನು ಹಾಡುವುದೂ ಸಾಮಾನ್ಯ. ಆಗ ಹಾಡಿಗಿಂತಲೂ ಸಂಗೀತ ವಿಜೃಂಭಿಸುತ್ತದೆ. ಇದು ಹಾಡಿನ ಒಟ್ಟಾರೆ ಸಮಯವನ್ನು ಇನ್ನಷ್ಟು ವಿಳಂಬಗೊಳಿಸುತ್ತದೆ.ವಿವಾದಗಳ ಕಂತೆ

ನಾಡಗೀತೆ ಮತ್ತು ವಿವಾದ ಯಾಕೋ ಗಳಸ್ಯಕಂಠಸ್ಯ. ‘ಜಯ ಭಾರತ ಜನನಿಯ..’ ನಾಡಗೀತೆಯಾಗಿ ಮಾನ್ಯವಾಗುವ ಹೊತ್ತಿನಲ್ಲಿ ಮೈಸೂರು ಅನಂತಸ್ವಾಮಿ ಅವರ ಸಂಗೀತ ನಿರ್ದೇಶನವಿತ್ತು. ಸಾಹಿತ್ಯ, ಚರಣ ಮತ್ತು ಪದಬಳಕೆಯ ಬಗ್ಗೆ ಆಕ್ಷೇಪ ಶುರುವಾದ ಬಳಿಕ ಸಂಗೀತ ನಿರ್ದೇಶನದ ಬಗ್ಗೆಯೂ ತಗಾದೆಗಳು ಕೇಳಿಬಂದಿದ್ದವು. ಕೊನೆಗೆ ಸಿ. ಅಶ್ವತ್ಥ್‌ ನಿರ್ದೇಶಿಸಿದ ಸಂಗೀತದೊಂದಿಗೆ (ಪ್ರಸ್ತುತ ಇರುವ) ನಾಡಗೀತೆ ಪ್ರಚಲಿತವಾಯಿತು. ಆದರೆ ಅದರ ಕಾಲಮಿತಿ, ಏಳು ನಿಮಿಷ ಅತಿಯಾಯಿತು ಎನ್ನುವ ಅಭಿಪ್ರಾಯ ಆಗಿಂದಾಗ್ಗೆ ವ್ಯಕ್ತವಾಗುತ್ತಲೇ ಇತ್ತು.ಪಾಪು ಅಪಸ್ವರ

ದಾಂಡೇಲಿಯಲ್ಲಿ 2011ರಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿದ್ದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟ ಅವರು ನಾಡಗೀತೆಯಲ್ಲಿ ಕೆಲವು ಲೋಪಗಳಿರುವುದಾಗಿ ಆಕ್ಷೇಪಿಸಿದ್ದರು. ‘ತೈಲಪ ಹೊಯ್ಸಳರಾಳಿದ ನಾಡೆ’ ಎಂದು ಹೇಳಲಾಗಿದೆ. ಆದರೆ, ತೈಲಪ ಹೊಯ್ಸಳರು ಸಾಮಾನ್ಯ ದೊರೆಗಳು. ವಿಜಯನಗರದ ದೊರೆ, ರಾಷ್ಟ್ರಕೂಟರು, ಚಾಲುಕ್ಯರಂತಹ ದೊರೆಗಳ ಹೆಸರು ಎಲ್ಲಿದೆ? ನದಿ, ವನಗಳ ನಾಡೆ ಎಂದು ಬರೆದಿದ್ದಾರೆ. ನದಿ, ವನಗಳು ಕೇವಲ ಕರ್ನಾಟಕದಲ್ಲಷ್ಟೇ ಇಲ್ಲ. ಬೇರೆ ರಾಜ್ಯಗಳಲ್ಲೂ ಇವೆ.‘ಜನಕನ ಹೋಲುವ ದೊರೆಗಳ ಧಾಮ’ ಎಂದೂ ಪದ್ಯದಲ್ಲಿ ಬಣ್ಣಿಸಲಾಗಿದೆ. ಜನಕನನ್ನು ಹೋಲುವ ದೊರೆಗಳು ಯಾರಿದ್ದಾರೆ? ಅಷ್ಟಕ್ಕೂ ಕುವೆಂಪು ಈ ಪದ್ಯವನ್ನು ಬರೆಯುವ ವೇಳೆ 24 ವರ್ಷದವರಾಗಿದ್ದರು. ಅವರು ಈ ವಯಸ್ಸಿನಲ್ಲಿ ಬರೆದ ಪದ್ಯದಲ್ಲಿ ಎಲ್ಲೂ ಗಾಂಧೀಜಿ ಹೆಸರಿಲ್ಲ. ಮಹಾತ್ಮ ಗಾಂಧಿಯವರ ಹೆಸರಿಲ್ಲದ ನಾಡಗೀತೆಯನ್ನು ತಾವು ಒಪ್ಪುವುದಿಲ್ಲ. 7 ನಿಮಿಷದ ಈ ಹಾಡನ್ನು ಸಂಗೀತ ನುಡಿಸಿ, ಅನವಶ್ಯಕವಾಗಿ ಎಳೆಯಲಾಗುತ್ತದೆ’ ಎಂದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.ಎರಡು ನಿಮಿಷಕ್ಕಿಳಿಸಿ: ಕಮಲಾ ಹಂಪನಾ

ಚಾಮರಾಜನಗರ ಜಿಲ್ಲಾ ನಾಲ್ಕನೇ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಸಂದರ್ಭ (ಮಾರ್ಚ್, 2013) ಸಾಹಿತಿ ಕಮಲಾ ಹಂಪನಾ ಅವರೂ ನಾಡಗೀತೆಗೆ ಹೊಸ ಕಾಲಮಿತಿ ರೂಪಿಸಬೇಕಿದೆ ಎಂದು ಸಲಹೆ ನೀಡಿದ್ದರು.ಪಲ್ಲವಿ ಮತ್ತು ಎರಡು ಚರಣಗಳನ್ನಷ್ಟೇ ಹಾಡೋಣ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ತಜ್ಞರ ಸಮಿತಿಯೊಂದು ನೀಡಿದ ವರದಿಯಲ್ಲಿ ಸಲಹೆ ನೀಡಲಾಗಿತ್ತು.

ಆದರೆ ಅದು ಜಾರಿಯಾಗಿರಲಿಲ್ಲ. ಒಂದು ವೇಳೆ ಸರ್ಕಾರ ಇದಕ್ಕೆ ಒಪ್ಪದೇ ಇದ್ದರೆ ಶಾಲೆಗಳಲ್ಲಿ ಎರಡೇ ನಿಮಿಷ ಹಾಡುವುದನ್ನು ರೂಢಿ ಮಾಡಿಕೊಳ್ಳುವುದು ಒಳ್ಳೆಯದು’ ಎಂದು ಕಮಲಾ ಹಂಪನಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದು ಸೂಕ್ಷ್ಮ ವಿಚಾರ

ಏಳು ನಿಮಿಷಗಳ ಕಾಲ ನಿಲ್ಲಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ನಾಡಗೀತೆಯನ್ನು ಅದೂ ಒಂದು ನಿಮಿಷಕ್ಕೆ ಇಳಿಸಿರುವುದು ಸರಿಯಲ್ಲ. ಯಾಕೆಂದರೆ, ಯಾರೂ ಪ್ರತಿದಿನ ಸರ್ಕಾರಿ ಸಮಾರಂಭಕ್ಕೆ ಹೋಗುವುದಿಲ್ಲ. ಒಂದು ವೇಳೆ ನಿಲ್ಲಲಾಗದವರು ನಿಶ್ಶಬ್ದವಾಗಿ ಕುಳಿತುಕೊಳ್ಳಲು ಅವಕಾಶ ನೀಡಬಹುದು; ಸಂಗೀತ ಕಛೇರಿಗಳಲ್ಲಿ, ಆರ್ಕೆಸ್ಟ್ರಾಗಳಲ್ಲಿ ಕೂರುವ ಹಾಗೆ. ಉದ್ದುದ್ದ ಭಾಷಣಗಳನ್ನು ಸಹಿಸಿಕೊಳ್ಳುವ ನಾವು ಒಂದು ನಾಡಗೀತೆಯನ್ನು ಸಹಿಸಿಕೊಳ್ಳಲಾರೆವೇ? ಒಬ್ಬ ಗಾಯಕಿಯಾಗಿ ಹೇಳಬೇಕೆಂದರೆ ಒಂದು ನಿಮಿಷವಾದರೂ, ಏಳು ನಿಮಿಷವಾದರೂ ಹಾಡಲು ಆಕ್ಷೇಪವಿಲ್ಲ. ಆದರೆ ಮೊಟಕುಗೊಳಿಸಿದ್ದೇ ಆದಲ್ಲಿ ನಾಡಗೀತೆಯಲ್ಲಿ ಸಾಹಿತ್ಯದ ವೈಭವವನ್ನು ಖಂಡಿತ ಮಿಸ್‌ ಮಾಡ್ಕೋತೀವಿ.

–ಬಿ.ಆರ್. ಛಾಯಾ, ಹಿರಿಯ ಗಾಯಕಿ

ಎರಡು ನಿಮಿಷವಾದರೂ ಇರಲಿ

ನಾಡಗೀತೆಯ ಪ್ರತಿ ಸಾಲಿನಲ್ಲೂ ಇರುವ ಸೊಬಗು, ಲಾಲಿತ್ಯವನ್ನು ಎಂಜಾಯ್ ಮಾಡ್ಕೊಂಡು ಹಾಡ್ತೀವಿ. ಏಳು ನಿಮಿಷ ಜಾಸ್ತಿಯಾಯ್ತು ಎಂದು ಹೇಳುವುದಾದರೆ ಎರಡು ನಿಮಿಷವಾದರೂ ಕೊಡಬೇಕು. ನಾವು ಹಾಡೋದು ರ್‍್ಯಾಪ್‌ ಹಾಡಲ್ಲ, ನಾಡಗೀತೆ. ರಾಷ್ಟ್ರಗೀತೆಗೆ ಎಷ್ಟು ಮೌಲ್ಯವಿದೆಯೋ ಇದಕ್ಕೂ ಅಷ್ಟೇ ಇದೆ. ಹಾಗಾಗಿ ಅದನ್ನು ಸಮಯದ ಮಿತಿಯೊಳಗಿಟ್ಟು ಅಪಮೌಲ್ಯ ಮಾಡುವುದು ಸರಿಯಲ್ಲ.–ಎಸ್. ಗೀತಾ, ಮುಖ್ಯೋಪಾಧ್ಯಾಯಿನಿ, ವಿಜಯಾ ಪ್ರೌಢಶಾಲೆ, ಜಯನಗರ

ಮರುಪರಿಶೀಲಿಸಲಿ

‘ಜಯ ಭಾರತ ಜನನಿಯ...’ ಬಹಳ ಸುಂದರವಾದ, ಅರ್ಥವತ್ತಾದ ಹಾಡು. ಅರೆಬರೆ ಹಾಡುವ ಹಾಡು ಅಲ್ಲವೇ ಅಲ್ಲ. ಒಂದು ನಿಮಿಷ ಎರಡು ನಿಮಿಷ ಅಂತ ಕಾಲಾವಧಿಯ ಚೌಕಟ್ಟಿನಲ್ಲೇ ಯೋಚಿಸಿದರೆ ಸಾಹಿತ್ಯದ ಸೌಂದರ್ಯ? ಒಂದು ನಿಮಿಷದಲ್ಲಿ ಹಾಡಬೇಕೆನ್ನುವುದು ಅವೈಜ್ಞಾನಿಕ. ಖಂಡಡಿತಾ ಇದನ್ನು ಮರುಪರಿಶೀಲಿಸಲಿ.

–ರೋಸ್ಲಿನ್‌ ಪಿಂಟೊ, ಮುಖ್ಯೋಪಾಧ್ಯಾಯಿನಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗೇರುಪಾಳ್ಯ  ಕುಂಬಳಗೋಡು

ನಾಡಗೀತೆಯ ಕಾಲಮಿತಿಗೆ ಸಂಬಂಧಿಸಿ ಹೊಸ ಸೂತ್ರವನ್ನು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರ. ಕಾಲಮಿತಿಯನ್ನು ಮೊಟಕುಗೊಳಿಸುವ ತುರ್ತು ಈಗ ಏನಿತ್ತು ಎಂದು ಕೇಳಿದರೆ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರು ಹೇಳುವುದು ಹೀಗೆ:ಪ್ರಾಧಿಕಾರದ ಪ್ರಕಾರ...

ನಾಡಗೀತೆ ಸುದೀರ್ಘವಾಗಿದೆ. ಕವಿಯ ಆಶಯಕ್ಕೆ ಧಕ್ಕೆ ಬಾರದಿರುವ ಹಾಗೆ ಮೊಟಕುಗೊಳಿಸಬೇಕು ಎನ್ನುವುದು ನಮ್ಮ ಶಿಫಾರಸಿನ ಮುಖ್ಯಾಂಶ. ವಯಸ್ಸಾದವರು ಮತ್ತು ಮಕ್ಕಳಿಗೆ ಅಷ್ಟು ಹೊತ್ತು ನಿಲ್ಲಲಾಗುತ್ತಿಲ್ಲ. ನಾಡಗೀತೆ ಎಂದಮೇಲೆ ಅದರ ಬಗ್ಗೆ ರಾಷ್ಟ್ರಗೀತೆಗೆ ಇರುವಷ್ಟೇ ಗೌರವ, ಅಭಿಮಾನ ನಮ್ಮಲ್ಲಿದೆ. ಹಾಡಿನ ಚರಣಗಳಲ್ಲಿ ಯಾವುದು ಮುಖ್ಯ, ಮುಖ್ಯವಲ್ಲ ಎನ್ನುವುದಕ್ಕಿಂತ ಎಷ್ಟನ್ನು ಹಾಡಬಹುದು, ಹಾಡಿದರೆ ಕವಿಯ ಮೂಲ ಆಶಯಕ್ಕೆ ಚ್ಯುತಿ ಬಾರದಂತೆ ನಿಭಾಯಿಸಬಹುದು ಎನ್ನುವುದಷ್ಟೇ ಈಗ ಪ್ರಸ್ತುತ. ದಿವಂಗತ ಜಿ.ಎಸ್. ಶಿವರುದ್ರಪ್ಪ ಅವರ ನೇತೃತ್ವದ ಸಮಿತಿಯೂ ಇದೇ ಅಭಿಪ್ರಾಯಕ್ಕೆ ಬಂದಿತ್ತು.

ಅವರ ನಿಧನಾನಂತರ ಚನ್ನವೀರ ಕಣವಿ ಅವರಿಗೆ ಸಮಿತಿಯ ನೇತೃತ್ವ ವಹಿಸಲಾಗಿತ್ತು. ಅದು ನೀಡಿದ ವರದಿಯ ಆಧಾರದಲ್ಲಿ ರಾಷ್ಟ್ರಗೀತೆಯನ್ನು ಈಗ ಎಷ್ಟು ಕಾಲಮಿತಿಯಲ್ಲಿ ಹಾಡಲಾಗುತ್ತಿದೆಯೋ ಅಷ್ಟೇ ವೇಳೆಯಲ್ಲಿ ಹಾಡಲು ಅನುಕೂಲವಾಗುವಂತೆ ಚರಣಗಳನ್ನು ಹೊಂದಿಸಿಕೊಂಡು ಹಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದೇವೆ. ಲೋಕಸಭಾ ಚುನಾವಣೆ ಬಂದುದರಿಂದ ಇದು ವಿಳಂಬವಾಗಿತ್ತು. ಆದರೆ ನಮ್ಮ ಶಿಫಾರಸನ್ನು ಸರ್ಕಾರವೂ ಗಂಭೀರವಾಗಿ ಪರಿಗಣಿಸಿದೆ. ಇನ್ನೊಂದು ತಿಂಗಳಲ್ಲಿ ಆದೇಶ ಜಾರಿಯಾಗಲಿದೆ.ನಾಡಗೀತೆಯಲ್ಲಿರುವ ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಅದ್ಭುತವಾದ ಸಾಲನ್ನು ಬಳಸಿದ ಮೇಲೆ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿರುವುದಿಲ್ಲ’ ಎನ್ನುವುದು ಚಂದ್ರು ಅವರ ಸಮರ್ಥನೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.