ಸೋಮವಾರ, ಮೇ 17, 2021
21 °C

ನಾಡಿಗೆ ಜ್ಞಾನ ಜ್ಯೋತಿ ಬೆಳಗಿಸಿದ ಬಸವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಅವರ ನುಡಿಗಳಲ್ಲಿ ಬಾರದ ಸಮಾಜಗಳಿಲ್ಲ. ಚಿಂತಿಸದ ವಿಚಾರಗಳಿಲ್ಲ. ಕುಲ, 108 ಜಾತಿ, ಧರ್ಮದ ಜನರ ಹಿತಕ್ಕಾಗಿ ಅವಿರತ ಶ್ರಮಿಸಿ, ತಮ್ಮ `ವಚನಾಮೃತ~ದ ಮೂಲಕ ಜಗತ್ತಿಗೆ `ಜ್ಞಾನ ಜೋತಿ~ಯನ್ನು ನೀಡಿದಾತ. ವಿಶ್ವಗುರು, ಜಗಜ್ಯೋತಿ ಬಸವಣ್ಣ.ವಚನ ಚಳವಳಿಗೆ ಮುನ್ನುಡಿ ಬರೆದು `ಅಹಿಂಸಾತ್ಮಕ ಕ್ರಾಂತಿ~ ಮಾಡಿದ ಬಸವಣ್ಣ ಅವರು ದೇಹತ್ಯಾಗ ಮಾಡಿ 8 ಶತಮಾನ ಕಳೆದಿವೆ. 12ನೇ ಶತಮಾನದಲ್ಲಿ ಬಸವಣ್ಣ ಅವರು ಜನರಲ್ಲಿದ್ದ ಮೌಢ್ಯ, ಕಂದಾಚಾರ ತೊಡೆದು, ಸಾಮಾಜಿಕ, ವೈಚಾರಿಕ ಚಿಂತನೆಯನ್ನು ತಮ್ಮ ವಚನದ ಪ್ರತಿ ಸಾಲು, ಪದದ ಮೂಲಕ ಹುಟ್ಟುಹಾಕಿದರು. ಅವು ಅಂದು, ಇಂದಿಗೂ ವಿಶ್ವಕ್ಕೆ ಮಾದರಿಯಾಗಿವೆ.ತಮ್ಮ ನೇರ ನುಡಿಗಳ ಮೂಲಕ ವಿಶ್ವಗುರು ಎನಿಸಿಕೊಂಡ ಬಸವಣ್ಣ ಅವರ ಜಯಂತಿಯನ್ನು 100 ವರ್ಷಗಳ ಹಿಂದೆ ಆಚರಿಸಿದ ಕೀರ್ತಿ ದಾವಣಗೆರೆಗೆ ಸಲ್ಲುತ್ತದೆ. ಈ ಕಾರ್ಯಕ್ಕೆ ಮುನ್ನುಡಿ ಬರೆದದ್ದು, ನಗರದ ವಿರಕ್ತಮಠ. ಪ್ರಸ್ತುತ ವಿರಕ್ತಮಠ ವೀರಶೈವ ತರುಣ ಸಂಘದ ಸಹಯೋಗದಲ್ಲಿ ಬಸವ ಜಯಂತಿ ಶತಮಾನೋತ್ಸವ ವರ್ಷಾಚರಣೆಗೆ ಸಿದ್ಧವಾಗಿದೆ. ಇದಕ್ಕಾಗಿ ಎಲ್ಲ ಸಿದ್ಧತೆಗಳೂ ನಡೆದಿವೆ.ಈ ವರ್ಷಾಚರಣೆಗೆ ಏ. 24ರಂದು ಬೆಳಿಗ್ಗೆ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಬಸವಣ್ಣ ಅವರ ಪಲ್ಲಕ್ಕಿ ಉತ್ಸವ ಆರಂಭಿಸುವುದರೊಂದಿಗೆ ಚಾಲನೆ ನೀಡಲಿದ್ದಾರೆ.1913ರಲ್ಲಿ ದಾವಣಗೆರೆಯ ವಿರಕ್ತಮಠದಲ್ಲಿ ಮಠದ ಪೀಠಾಧ್ಯಕ್ಷರಾಗಿದ್ದ ಮೃತ್ಯುಂಜಯ ಅಪ್ಪ ಅವರಿಗೆ ತಮ್ಮ ಮನದಲ್ಲಿದ್ದ ಅಭಿಪ್ರಾಯವನ್ನು ನಿವೇದನೆ ಮಾಡಿಕೊಳ್ಳುವ ಮೂಲಕ ಕ್ರಾಂತಿಕಾರಿ ಬಸವಣ್ಣ ಅವರ ಜಯಂತಿಗೆ ಮುನ್ನುಡಿ ಬರೆದ ಕೀರ್ತಿ ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಅವರಿಗೆ ಸಲ್ಲುತ್ತದೆ.1906ರಲ್ಲಿ ಪೀಠಕ್ಕೆ ಬಂದ ಮೃತ್ಯುಂಜಯ ಅಪ್ಪ ಅವರು 1917ರವರೆಗೆ ಇಲ್ಲಿದ್ದು, ನಂತರ ಧಾರಾವಾಡದ ಮುರುಘ ಮಠದ ಶಾಖಾಮಠಕ್ಕೆ ಪೀಠಾಧ್ಯಕ್ಷರಾಗುತ್ತಾರೆ. ಈ ಮಧ್ಯೆ ಹರ್ಡೇಕರ್ ಮಂಜಪ್ಪ ಅವರು ದಾವಣಗೆರೆಗೆ ಶಿಕ್ಷಕರಾಗಿ ಆಗಮಿಸುತ್ತಾರೆ. ಈ ವೇಳೆ ಇಲ್ಲಿನ ಸ್ವಾಂತಂತ್ರ್ಯ ಚಳವಳಿಯ ಜಾಗೃತಿಯ ಉದ್ದೇಶವೂ ಅವರದಾಗಿತ್ತು. ಮಠದ ಸಂಪರ್ಕದಲ್ಲಿದ್ದ ಕಂಚಿಕೆರೆ ಮಹಾಲಿಂಗಪ್ಪ ಅವರ ಒಡನಾಡಿಯಾದರು.ಹರ್ಡೇಕರ ಮಂಜಪ್ಪ ಅವರು ಮಹಾಲಿಂಗಪ್ಪ ಅವರ ಮೂಲಕ ಕ್ರಾಂತಿ ಪುರುಷ ಬಸವಣ್ಣ ಅವರ ವಿಚಾರಕ್ಕೆ ಮನಸೋತರು. ಅವರ ತತ್ವಗಳ ಅಧ್ಯಯನ ನಡೆಸಿದರು. ಈ ಮಧ್ಯೆ ದಾವಣಗೆರೆಯ ಜಿನ್ನಿಗ್ ಮಿಲ್ ಒಂದರ ಮಾಲೀಕರ ಸಲಹೆಯಂತೆ ಮುಂಬೈಗೆ ಯಂತ್ರಗಳನ್ನು ಖರೀದಿಸಲು ತೆರಳಿದ ವೇಳೆ, ಅಲ್ಲಿನ `ಆರ್ಯ ಸಮಾಜ~ಕ್ಕೆ ಭೇಟಿ ನೀಡುತ್ತಾರೆ.ಅಲ್ಲಿ ನಿತ್ಯ ನಡೆಯುವ ಭಜನೆ, ಕೀರ್ತನೆಯಂತೆ ಇಲ್ಲಿಯೂ ಯಾಕೆ ಆರಂಭಿಸಬಾರದು, ಜತೆಗೆ ಸಮಾಜಕ್ಕೆ ಶ್ರಮಿಸಿದ ಬಸವಣ್ಣ ಅವರ ಜಯಂತಿಯನ್ನು ನಡೆಸಬಹುದಲ್ಲವೇ? ಎಂದು ಮಹಾಲಿಂಗಪ್ಪ ಅವರ ಮೂಲಕ ಮೃತ್ಯುಂಜಯ ಅಪ್ಪ ಅವರಿಗೆ ವಿಷಯ ಮುಟ್ಟಿಸುತ್ತಾರೆ.ಇದಕ್ಕೆ  ಒಪ್ಪಿದ ಅಪ್ಪ ಅವರು 1913ರಲ್ಲಿ ಬಸವ ಜಯಂತಿಗೆ ಚಾಲನೆ ನೀಡಿದ್ದಾರೆ.ನಂತರ ಜಯಂತಿಯನ್ನು ಯಾವ ದಿನ ಆಚರಿಸಬೇಕು ಎಂಬ ಪ್ರಶ್ನೆ ಬಂದಾಗ ಕೆಲವರು ಮಣ್ಣೆತ್ತಿನ ಅಮಾವಾಸ್ಯೆ ಎಂದು ಸಲಹೆ ನೀಡುತ್ತಾರೆ. ಇದಕ್ಕೆ ಸಮ್ಮತಿಸದ ಹರ್ಡೇಕರ್ ಅವರು ಅಪ್ಪ ಅವರ ಮೂಲಕ ಮೈಸೂರಿನ ಎನ್.ಆರ್. ಕರಿಬಸವ ಶಾಸ್ತ್ರಿ ಅವರಿಗೆ ಪತ್ರ ಬರೆದು ಅಧ್ಯಯನ ನಡೆಸಲು ತಿಳಿಸುತ್ತಾರೆ. ಆಗ, ಅವರು ನೀಡಿದ ಸಲಹೆಯಂತೆ 1914ರಿಂದ `ಅಕ್ಷಯ ತೃತೀಯ, ರೋಹಿಣಿ ನಕ್ಷತ್ರ~ದಂದು ಬಸವ ಜಯಂತಿಯನ್ನು ಆಚರಿಸುತ್ತಾ ಬರಲಾಗುತ್ತಿದೆ.ಇದಕ್ಕೆ ಮುರುಘ ಮಠದ ಹಿರಿಯ ಚೇತನ ಜಯದೇವ ಜಗದ್ಗುರುಗಳು ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. 

ಭಜನಾ ಸಂಘಹರ್ಡೇಕರ್ ಮಂಜಪ್ಪ ಅವರ ಚಿಂತನೆಯಂತೆ ಅಪ್ಪ ಅವರು 1911ರ ಜೂನ್ 26ರಂದು ವಿರಕ್ತಮಠದಲ್ಲಿ ಭಜನಾ ಸಂಘ ಸ್ಥಾಪಿಸಿ, ಅದರ ಮೂಲಕ ನಿಜಗುಣ ಶಿವಯೋಗಿ, ಸರ್ಪಭೂಷಣ ಶಿವಯೋಗಿ ಅವರ ಪದ್ಯದ ಭಜನೆ ಆರಂಭಿಸುತ್ತಾರೆ. ಮುಂದೆ ಬಸವಣ್ಣ ಅವರ ವಚನಗಳ ವ್ಯಾಖ್ಯಾನ ಸಹ ಆರಂಭಿಸಿ ಮುನ್ನಡೆಸುತ್ತಾ ಬಂದಿದ್ದಾರೆ.ಉಪನ್ಯಾಸಮಾಲೆ


ಹರ್ಡೇಕರ್ ಮಂಜಪ್ಪ ಅವರ ಸಲಹೆಯೊಂದಿಗೆ ಮೃತ್ಯುಂಜಯ ಅಪ್ಪ ಅವರು 1911ರಲ್ಲಿ ಶ್ರಾವಣ ಮಾಸೋಪನ್ಯಾಸಮಾಲೆ ಕಾರ್ಯಕ್ರಮ ಆರಂಭಿಸಿದರು. ಅಂದಿನಿಂದ ಇಂದಿನವರೆಗೆ ಈ ಕಾರ್ಯಕ್ರಮ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಈ ಮೂಲಕ ಬಸವಣ್ಣ ಅವರ ತತ್ವ, ಆದರ್ಶಗಳನ್ನು ಜನರಿಗೆ ಉಣಬಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ.ಪ್ರಸ್ತುತ ಇರುವ ವಿರಕ್ತ ಮಠನ್ನು ನವೀಕರಣಗೊಳಿಸಿ, ಬಸವ ಜಯಂತಿ ಶತಮಾನೋತ್ಸವ ಸ್ಮಾರಕ ಭವನವನ್ನು ಅನುಭವ ಮಂಟಪ ಮಾದರಿಯಲ್ಲಿ ನಿರ್ಮಿಸುವ ಉದ್ದೇಶವನ್ನು ಶ್ರೀಮಠ ಹೊಂದಿದೆ. ಅದರಲ್ಲಿ ಎಲ್ಲ ಶರಣರ ಭಾವಚಿತ್ರ, ವಚನಗಳು, ಗ್ರಂಥಗಳು ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗುವುದು. ಜತೆಗೆ, ಬಸವ ಅಧ್ಯಯನ ಪೀಠ ಆರಂಭಿಸುವ ಚಿಂತನೆಯನ್ನು ಶ್ರೀಗಳು ನಡೆಸಿದ್ದಾರೆ.ಈ ಎಲ್ಲ ಕಾರ್ಯಕ್ಕೆ ಆಗಮಿಸುವ `ಪ್ರಾಣ ಜೀವಾಳ~ವಾಗಿರುವ `ಶರಣ~ರಿಗೆ ಮಠದಲ್ಲಿ ಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿದೆ.100 ಹಳ್ಳಿ, 100 ಶಾಲೆ...

100ವರ್ಷದ ಹಿಂದೆ  ಆರಂಭವಾದ ಬಸವ ಜಯಂತಿಗೆ ಜಯದೇವ ಜಗದ್ಗುರುಗಳು ಪ್ರೇರೇಪಣೆ ನೀಡಿದ್ದಾರೆ. ಪ್ರಸ್ತುತ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ಎಲ್ಲ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜಯಂತಿ ವರ್ಷಚರಣೆ ಒಂದು ವರ್ಷ ನಡೆಯಲಿದ್ದು, ಈ ಸಂದರ್ಭದಲ್ಲಿ 100 ಹಳ್ಳಿಗಳಿಗೆ ತೆರಳಿ ಬಸವಣ್ಣನ ತತ್ವ, ಆದರ್ಶ ಬದುಕಿನ ಬಗ್ಗೆ ಜಾಗೃತಿ ಕೈಗೊಳ್ಳಲಾಗುವುದು. 100 ಅರಿವಿನ ಅಂಗಳ ಕಾರ್ಯಕ್ರಮ, 100 ಶಾಲೆಗಳಿಗೆ ತೆರಳಿ ಮಕ್ಕಳಿಗೆ ಬಸವಣ್ಣ ಮತ್ತು ಶರಣರ ವಚನಗಳಲ್ಲಿನ ನೈತಿಕ ಶಿಕ್ಷಣ ನೀಡುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ವಿರಕ್ತಮಠದ ಚರಮೂರ್ತಿ ಬಸವ ಪ್ರಭು ಸ್ವಾಮೀಜಿ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.ಇಂದು ಜನಿಸಿದ ಮಗುವಿಗೆ `ಬಸವಣ್ಣ~ ನಾಮಕರಣ

ಮಂಗಳವಾರ ಬೆಳಿಗ್ಗೆ ಬಸವಣ್ಣನ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಅಂದು ಜನಿಸಿದ ಮಗುವಿಗೆ ಬಸವಣ್ಣ ಎಂದು ನಾಮಕರಣ ಮಾಡುವ ಉದ್ದೇಶವಿದೆ. ಇದಕ್ಕಾಗಿ ಸಾರ್ವಜನಿಕ ಆಸ್ಪತ್ರೆಯ ಹೆರಿಗೆ ಆಸ್ಪತ್ರೆಗೆ ತೆರಳಿ ಗಂಡು ಮಗುವಿಗೆ ಬಸವಣ್ಣ ಎಂದು, ಹೆಣ್ಣು ಮಗುವಿಗೆ ಅಕ್ಕಮಹಾದೇವಿ ಅಥವಾ ಶರಣೆಯರ ಹೆಸರನ್ನು ನಾಮಕರಣ ಮಾಡಿ, ಹಣ್ಣು, ಹಾಲು ವಿತರಿಸಲಾಗುವುದು.ಬೆಳಿಗ್ಗೆ 10ಕ್ಕೆ ವಿರಕ್ತಮಠದಲ್ಲಿ ಬಸವಣ್ಣ ಅವರ ತೊಟ್ಟಿಲು ಕಾರ್ಯಕ್ರಮ ಜರುಗಲಿದ್ದು, ಅಂದು ಜನಿಸಿದ ಮಕ್ಕಳನ್ನು ತೊಟ್ಟಿಲಲ್ಲಿ ಹಾಕಿ ತೂಗುವ ಮೂಲಕ ಅವರಿಗೆ ಬಸವಣ್ಣ, ಅಕ್ಕಮಹಾದೇವಿ ಅಥವಾ ಶರಣರ, ಶರಣೆಯರ ಹೆಸರುಗಳನ್ನು ನಾಮಕರಣ ಮಾಡಲಾಗುವುದು. ಈ ಎರಡೂ ಕಾರ್ಯಕ್ರಮ ಜಾತಿ, ಮತದ ಭೇದ ಇಲ್ಲದೆ ಜರುಗಲಿದೆ. ಇದಕ್ಕೆ ಎಲ್ಲ ಧರ್ಮದವರಿಗೂ ಅವಕಾಶವಿದೆ. ಇಂದು ಜನಿಸಿದ ಮಗುವಿನೊಂದಿಗೆ ಯಾರು ಬೇಕಾದರೂ ಆಗಮಿಸಬಹುದು ಎಂದು ಬಸವ ಪ್ರಭು ಸ್ವಾಮೀಜಿ ಮುಕ್ತ ಆಹ್ವಾನ ನೀಡಿದರು.

ಶತಮಾನೋತ್ಸವದಲ್ಲಿ ಇಂದು

ದಾವಣಗೆರೆ: ವಿರಕ್ತಮಠ ಮತ್ತು ತರುಣ ಸಂಘದ ಸಹಯೋಗದಲ್ಲಿ ಏ. 24ರ ಬೆಳಿಗ್ಗೆ 7.30ಕ್ಕೆ ಗುರು ಬಸವಣ್ಣ ಅವರ ಪಲ್ಲಕ್ಕಿ ಉತ್ಸವ ಜರುಗಲಿದ್ದು, ಚಿತ್ರದುರ್ಗದ ಮುರುಘಮಠದ ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಲಿದ್ದಾರೆ.ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಜರುಗುವ ಉತ್ಸವ ವಿರಕ್ತಮಠದಿಂದ ಬಕ್ಕೇಶ್ವರ ದೇವಸ್ಥಾನ, ಹಾಸಬಾವಿ ವೃತ್ತ, ಬಸವರಾಜಪೇಟೆ, ಅನೆಕೊಂಡಪೇಟೆ, ಹಳೇಪೇಟೆಯಲ್ಲಿ ಸಾಗಿ ಮಠದ ಆವರಣಕ್ಕೆ ವಾಪಸ್ ಆಗಲಿದೆ.ಬೆಳಿಗ್ಗೆ 10ಕ್ಕೆ ಮಠದ ಆವರಣದಲ್ಲಿ ಗುರು ಬಸವಣ್ಣ ಅವರ ತೊಟ್ಟಿಲು ಕಾರ್ಯಕ್ರಮ ಜರುಗಲಿದೆ. 11ಕ್ಕೆ ಬಸವ ಜಯಂತಿ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ವಿವಿಧ ಕಲಾ ತಂಡಗಳಿಂದ 101 ಬಸವಣ್ಣ ಅವರ ವಚನಗಳ ಸಂಗೀತ ಸೇವೆ ನಡೆಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.