ಸೋಮವಾರ, ಆಗಸ್ಟ್ 19, 2019
28 °C

`ನಾಡಿನ ಇತಿಹಾಸ ವಿಶ್ವಕೋಶ ಅಗತ್ಯ'

Published:
Updated:

ಬೆಂಗಳೂರು: `ಕನ್ನಡ ನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ ವಿಶ್ವಕೋಶವನ್ನು ರಚಿಸಿ ಅದನ್ನು ಎಲ್ಲ ಭಾಷೆಗಳಿಗೂ ಭಾಷಾಂತರಿಸಲು ಕ್ರಮ ಕೈಗೊಳ್ಳಬೇಕು' ಎಂದು ಸಮಾಜ ಸೇವಕ ಬಿ.ಎಲ್.ಎಸ್.ಮೂರ್ತಿ ಹೇಳಿದರು.ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತು ನಗರದ ಮಕ್ಕಳ ಕೂಟದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.`ವಿಶ್ವದ ಎಲ್ಲ ಭಾಷೆಗೆ ಹೋಲಿಸಿದರೆ ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಮೊಟ್ಟಮೊದಲು ದೊರೆತ ಹಲ್ಮಿಡಿ ಶಾಸನದಿಂದ ಶಾಸ್ತ್ರೀಯ ಸ್ಥಾನಮಾನ ಸಿಗುವವರೆಗೆ ಕನ್ನಡ ಭಾಷೆ ಅಪಾರ ಬೆಳವಣಿಗೆ ಕಂಡಿದೆ. ಇದಕ್ಕೆ ಕನ್ನಡಕ್ಕೆ ಸಿಕ್ಕ ಎಂಟು ಜ್ಞಾನಪೀಠ ಪ್ರಶಸ್ತಿಗಳೇ ಸಾಕ್ಷಿ' ಎಂದರು.`ವಿಕಿಪೀಡಿಯಾದಲ್ಲಿ ಯಾರು ಬೇಕಾದರೂ ಮಾಹಿತಿಗಳನ್ನು ನಮೂದಿಸಬಹುದಾದ ಕಾರಣ ನಿಖರ ಮಾಹಿತಿಗಳು ದೊರೆಯುವುದಿಲ್ಲ. ಆದ್ದರಿಂದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸ್ಪಷ್ಟ ಮಾಹಿತಿಗಳು ಸೇರ್ಪಡೆಯಾಗುವಂತೆ ಮಾಡಬೇಕು' ಎಂದು ಸಲಹೆ ನೀಡಿದರು.`ಐಟಿ ಕಂಪೆನಿಗಳ ಹಾವಳಿಯಿಂದಾಗಿ ನಗರದಲ್ಲಿ ಇತರ ಭಾಷೆಯ ಜನರು ಹೆಚ್ಚು ನೆಲೆಸುತ್ತಿದ್ದಾರೆ. ಅನ್ಯ ಭಾಷಿಕರು ಸುಲಭವಾಗಿ ಕನ್ನಡ ಕಲಿಯುವಂತೆ ಮಾಡಲು ಕನ್ನಡ ತಂತ್ರಾಂಶಗಳನ್ನು ರೂಪಿಸಬೇಕು. ವೈದ್ಯಕೀಯ, ತಾಂತ್ರಿಕ ಪದಗಳ ಅರ್ಥವು ಕನ್ನಡ ಭಾಷೆಯಲ್ಲಿ ಲಭ್ಯವಾಗುವಂತೆ ಮಾಡಬೇಕು' ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತಿನ  ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಟಿ.ತಿಮ್ಮೇಶ್ ಮಾತನಾಡಿ, `ಚಾಮರಾಜಪೇಟೆ ವ್ಯಾಪ್ತಿಯಲ್ಲಿ ಎರಡು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಆದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಾಹಿತ್ಯ ಸಮ್ಮೇಳನ ಆಯೋಜಿಸುತ್ತಿರುವುದು ಇದೇ ಮೊದಲು. ಮುಂದೆ ಪ್ರತಿ ವರ್ಷ ಸಮ್ಮೇಳನಗಳನ್ನು ನಡೆಸಲಾಗುವುದು' ಎಂದರು.ಸಂಸದ ಪಿ.ಸಿ.ಮೋಹನ್ ಮಾತನಾಡಿ, `ಜಾಗತೀಕರಣದ ಹಾವಳಿಯಿಂದಾಗಿ ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಕನ್ನಡ ಉಳಿಸುವ ಕಾರ್ಯದಲ್ಲಿ ಯುವಕರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ' ಎಂದು ಹೇಳಿದರು. ಸಮ್ಮೇಳನದಲ್ಲಿ `ಕನ್ನಡಿಗರ ಕೋಟೆ-ಚಾಮರಾಜಪೇಟೆ' ಎಂಬ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.ಸಮ್ಮೇಳನದ ಸ್ವಾಗತ ಸಮಿತಿ ಸದಸ್ಯ ಬಿ.ವಿ.ಗಣೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಎಸ್.ಪಿನಾಕಪಾಣಿ, ಪಾಲಿಕೆ ಸದಸ್ಯೆ ನಾಜೀನಾ ಬೇಗಂ, ಸ್ವಾಗತ ಸಮಿತಿಯ ಅಧ್ಯಕ್ಷ ಬೈಸಾನಿ ಅಶೋಕ್ ಕುಮಾರ್ ಉಪಸ್ಥಿತರಿದ್ದರು.

Post Comments (+)