ನಾಡಿನ ಜನತೆಗೆ ಅಪಮಾನ

7

ನಾಡಿನ ಜನತೆಗೆ ಅಪಮಾನ

Published:
Updated:

ಕಲಾಪ ನಡೆದಿರುವಾಗ ಅಶ್ಲೀಲ ದೃಶ್ಯಾವಳಿಗಳನ್ನು ನೋಡುತ್ತಾ ವಿಧಾನಸಭೆಯನ್ನೂ ಆ ಮೂಲಕ ರಾಜ್ಯದ ಜನತೆಯನ್ನೂ ಅಪಮಾನಿಸಿದ ಬಿಜೆಪಿಯ ಮೂವರು ಸಚಿವರಿಗೆ ಮಂತ್ರಿ ಸ್ಥಾನ ತ್ಯಜಿಸಬೇಕಾಗಿ ಬಂದದ್ದು ತಕ್ಕ ಶಿಕ್ಷೆಯಲ್ಲ.ಸಂಸದೀಯ ಪ್ರಜಾಸತ್ತೆಯಲ್ಲಿ ಜನತೆಯ ಅತ್ಯುನ್ನತ ಸಾಂವಿಧಾನಿಕ ವೇದಿಕೆಯನ್ನು ಹೀಗೆ ಅಪವಿತ್ರಗೊಳಿಸಿದ ಈ ಮೂವರು ಜನಪ್ರತಿನಿಧಿಗಳು ಸಾರ್ವಜನಿಕ ಕ್ಷೇತ್ರಕ್ಕೆ ತಾವು ಅರ್ಹರಲ್ಲವೆಂದು ತೋರಿಸಿಕೊಂಡಿದ್ದಾರೆ.ವಿಧಾನಸಭೆಯಲ್ಲಿ ಕಲಾಪ ನಡೆದಿರುವಾಗ ಅದರಲ್ಲಿ ಸರ್ಕಾರದ ಪ್ರತಿನಿಧಿಗಳಾಗಿ ತೊಡಗಿಕೊಳ್ಳಬೇಕಾದ ಈ ವ್ಯಕ್ತಿಗಳು ವಿಧಾನಸಭೆಯ ಪಾವಿತ್ರ್ಯವನ್ನೂ ಲಕ್ಷಿಸದೆ ಅಲ್ಲಿ ಬಳಕೆಗೆ ನಿಷೇಧ ಇರುವ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯಾವಳಿಗಳನ್ನು ನೋಡುತ್ತಿರುವುದು ಕ್ಯಾಮೆರಾಗಳಲ್ಲಿ ದಾಖಲಾಗಿ ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದರಿಂದ ಇದರಲ್ಲಿ ತನಿಖೆ ಮಾಡುವುದಕ್ಕೆ ಏನು ಉಳಿದಿದೆ? ತನಿಖೆಯ ವಿಳಂಬ ತಂತ್ರ ಅನುಸರಿಸದೆ ವಿಧಾನಸಭೆಯ ಒಳಗೆ ಅಶ್ಲೀಲ ದೃಶ್ಯಾವಳಿ ವೀಕ್ಷಿಸಿದ ಹಾಗೂ ಅದನ್ನು ಒದಗಿಸಿದ ಕಾಯ್ದೆಬಾಹಿರ ಚಟುವಟಿಕೆಗಾಗಿ ಇವರನ್ನು ಕಾನೂನು ಕ್ರಮಕ್ಕೆ ಒಳಪಡಿಸಬೇಕು.ಶಾಸಕಾಂಗದ ಪವಿತ್ರ ಸ್ಥಳಕ್ಕೆ ತಮ್ಮ ವಿಕೃತಿಯಿಂದ ಅಪಚಾರ ಎಸಗಿದ ಇವರು ಶಾಸಕ ಸ್ಥಾನದಲ್ಲಿ ಮುಂದುವರಿಯುವ ಅರ್ಹತೆಯನ್ನೂ ಉಳಿಸಿಕೊಂಡಿಲ್ಲ. ವಿಧಾನಸಭೆಯ ಅಧ್ಯಕ್ಷರು ತಮ್ಮ ಅಧಿಕಾರ ಬಳಸಿ ಸಚಿವರಾಗಿ ತಮ್ಮ ಸ್ಥಾನಕ್ಕೆ ಅಪಚಾರವಾಗುವ ರೀತಿಯಲ್ಲಿ ವರ್ತಿಸಿದ ಈ ಮೂವರ ವಿರುದ್ಧ ಕ್ರಮ ಕೈಗೊಳ್ಳಬೇಕು.

 

ಆದರೆ, ಬಹುಮತ ಕಳೆದುಕೊಂಡಿದ್ದ ಬಿಜೆಪಿ ಸರ್ಕಾರವನ್ನು ಉಳಿಸುವ ರಾಜಕೀಯ ಉದ್ದೇಶದಿಂದ ತಮ್ಮ ಸ್ಥಾನಕ್ಕೆ ತಕ್ಕುದಲ್ಲದ ರೀತಿಯಲ್ಲಿ ಪಕ್ಷಪಾತ ಮಾಡಿ ಐವರು ಪಕ್ಷೇತರರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದರೆಂದು ಸುಪ್ರೀಂ ಕೋರ್ಟ್‌ನಿಂದ ಟೀಕೆಗೆ ಗುರಿಯಾಗಿದ್ದ ಸ್ಪೀಕರ್ ಅವರಿಂದ ಕಾನೂನು ಪ್ರಕಾರ ಕ್ರಮ ಸಾಧ್ಯವೇ ಎಂಬ ಪ್ರಶ್ನೆ ಜನರ ಎದುರು ಇದೆ.ರಾಜ್ಯದಲ್ಲಿ ಮೂರೂವರೆ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿಯಿಂದ ಭ್ರಷ್ಟಾಚಾರರಹಿತ, ಸ್ವಚ್ಛ ಆಡಳಿತ ಸಿಗಬಹುದೆಂದು ಜನ ತಾಳಿದ್ದ ನಿರೀಕ್ಷೆ ಆರಂಭದಿಂದಲೇ ಹುಸಿಯಾಗಿದೆ. ರಾಜ್ಯದಲ್ಲಿ ಹಿಂದೆ ಅಧಿಕಾರ ನಡೆಸಿದ ಯಾವ ರಾಜಕೀಯ ಪಕ್ಷಗಳ ಸರ್ಕಾರಗಳ ಕಾಲದಲ್ಲಿಯೂ ಆಗದಷ್ಟು ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಗರಣಗಳು ಬಯಲಿಗೆ ಬಂದು ಹಲವು ಸಚಿವರು ಸ್ಥಾನ ಕಳೆದುಕೊಂಡರು. ಅತ್ಯಾಚಾರ ಆರೋಪದಿಂದ ಒಬ್ಬ ಸಚಿವರು ಅಧಿಕಾರ ಕಳೆದುಕೊಂಡರೆ, ಅಧಿಕಾರ ದುರುಪಯೋಗ ಮತ್ತು ಅಕ್ರಮ ಆಸ್ತಿಗಳಿಕೆಯ ಆರೋಪದಲ್ಲಿ ಮೂವರು ಮಂತ್ರಿಗಳು ಜೈಲಿಗೆ ಹೋಗಬೇಕಾಯಿತು. ಭ್ರಷ್ಟಾಚಾರದ ಆರೋಪ ಹೊತ್ತು ಹಿಂದಿನ ಮುಖ್ಯಮಂತ್ರಿ ಅಧಿಕಾರ ತ್ಯಜಿಸಬೇಕಾಯಿತು.

 

ಈ ವರ್ಷಗಳಲ್ಲಿ ನೆರೆ ಹಾವಳಿ, ಬರಗಾಲ, ಅಪೌಷ್ಟಿಕತೆಯಂಥ ತೀವ್ರ ಸಂಕಷ್ಟಗಳನ್ನು ರಾಜ್ಯದ ಜನ ಎದುರಿಸುತ್ತಿದ್ದಾಗ ಅದನ್ನು ನಿರ್ಲಕ್ಷಿಸಿದ ಸರ್ಕಾರ, ಮಠ ಮಂದಿರಗಳಿಗೆ ಉದಾರ ದೇಣಿಗೆ ನೀಡಿ ಮಠಾಧೀಶರ ಮಾರ್ಗದರ್ಶನ ಕೋರಿತ್ತು.ಶಾಲಾಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ಉತ್ಸಾಹ ಪ್ರಕಟಿಸಿತ್ತು. ಮಠಾಧೀಶರ ಮಾರ್ಗದರ್ಶನ ಮತ್ತು ಭಗವದ್ಗೀತೆಯ ಬೋಧನೆಗೆ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರದ ಮೂವರು ಸಚಿವರು ಈಗ ಕಾಮವಿಕೃತಿಯನ್ನು ಪ್ರದರ್ಶಿಸಿದ್ದಾರೆ. ಇವರಿಗೆ ರಾಜ್ಯದ ಜನತೆಯೇ ಪಾಠ ಕಲಿಸಬೇಕಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry