ನಾಡು ಮರೆತ `ನಾಡೋಜ'

7

ನಾಡು ಮರೆತ `ನಾಡೋಜ'

Published:
Updated:

ಅಂದು...

ಕೊಟ್ಟಿಗೆ ತುಂಬಾ ದನಕರುಗಳು, ಮನೆತುಂಬಾ ಮಕ್ಕಳು- ಮೊಮ್ಮಕ್ಕಳು, ಹತ್ತಾರು ಮನೆಯಾಳುಗಳು ಇವುಗಳ ಮಧ್ಯೆ ವಿಶಾಲವಾದ ಸಭಾಂಗಣದಲ್ಲಿ ಸುಖಾಸೀನ ಕುರ್ಚಿಯಲ್ಲಿ ಮಲ್ಲಿನ ಬನಿಯನ್ ಪಂಚೆ ಧರಿಸಿ ಟವಲ್ ಅನ್ನು ಹೆಗಲಿಗೆ ಹಾಕಿಕೊಂಡು ಯಾವುದೋ ಹಿಂದುಸ್ತಾನಿ ರಾಗಕ್ಕೆ ತಲೆಯಾಡಿಸುತ್ತಾ ಕುಳಿತಿರುತ್ತಿದ್ದ 80ರ ಆಸುಪಾಸಿನ ಅಜ್ಜ... ಆಹಾ ಎಂಥ ನೋಟ!ಇಂದು...

ಆ ಮನೆಯ ಒಳಗಡೆ ಎಲ್ಲೆಂದರಲ್ಲಿ ಬಿದ್ದಿರುವ ಧಾನ್ಯದ ಚೀಲಗಳು, ನೆಲದ ಮೇಲೆ ಹರಡಿರುವ ಖಾತೆ ಕಿರ್ದಿಪುಸ್ತಕಗಳು, ದೂಳು ಹಿಡಿದು ಕುಳಿತ ಸಾವಿರಾರು ಹೊತ್ತಿಗೆಗಳು, ಷೋಕೇಸ್‌ನಲ್ಲಿ ಅನಾಥವಾಗಿರುವ ವಿವಿಧ ಪುರಸ್ಕಾರಗಳ ಸ್ಮರಣಿಕೆಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಕೇತವಿರುವ `ನಾಡೋಜ' ಪುರಸ್ಕಾರದ ಸುಂದರ ಸ್ಮರಣಿಕೆ ವೀಣಾಪಾಣಿನಿ ಮೂರ್ತಿ... ಅಯ್ಯೋ, ಈ ಸ್ಥಿತಿ!- ಇದು ನಾಡು ಮರೆತ `ನಾಡೋಜ', ಜನಪದ ತಜ್ಞ ಚಿಗಟೇರಿ ಮುದೇನೂರು ಸಂಗಣ್ಣನವರ ಮನೆಯ ಪರಿಸರ. ಕಳೆದ ಅಕ್ಟೋಬರ್ 25ರಂದು ಇವರು ಮರೆಯಾಗಿ ನಾಲ್ಕು ವರ್ಷ. ಇವರು ಅಗಲಿದರೂ ಇವರ ದೇಹ ಮಾತ್ರ ದಾವಣಗೆರೆಯಲ್ಲಿನ `ಬಾಪೂಜಿ ವೈದ್ಯಕೀಯ ಕಾಲೇಜು ಆಸ್ಪತ್ರೆ'ಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಧ್ಯಯನದ ವಸ್ತುವಾಗಿ ಇಂದಿಗೂ `ಜೀವಂತ'ವಾಗಿದೆ.ಅವರ ಕಣ್ಣು ದಾವಣಗೆರೆ ಶಾಮನೂರು ಶಿವಶಂಕಪ್ಪ ಹೈಟೆಕ್ ಆಸ್ಪತ್ರೆಯಲ್ಲಿ ಇನ್ನೊಂದು ಜೀವಕ್ಕೆ ಬೆಳಕಾಗ ಹೊರಟಿದೆ.ವಿಷಾದವೆಂದರೆ ಅವರ ನೂರಾರು ಅಪ್ರಕಟಿತ ಪುಸ್ತಕಗಳಷ್ಟೇ ಅಲ್ಲದೇ ಅವರು ಸಂಗ್ರಹಿಸಿರುವ ಇನ್ನೂ ಲಿಪೀಕರಣಗೊಳ್ಳದ  ಜನಪದ  ಸಾಹಿತ್ಯದ ಕ್ಯಾಸೆಟ್‌ಗಳು ಅನಾಥವಾಗಿ ಮನೆಯಲ್ಲಿ ಬಿದ್ದಿವೆ. ಪುಸ್ತಕಗಳನ್ನು ತೆಗೆದುಕೊಂಡು ಹೋಗುವುದಾಗಿ ಹೇಳಿದ್ದ  ಕನ್ನಡ ವಿಶ್ವವಿದ್ಯಾಲಯದವರೂ ಇಂದಿೂ ಅತ್ತ ಸುಳಿದಿಲ್ಲ!ಕುಲದಿಂದ ಹೊರಕ್ಕೆ

ಬಾಲ್ಯದಲ್ಲಿ ಮದುವೆಯ ಸಮಾರಂಭವೊಂದರಲ್ಲಿ ಭಜಂತ್ರಿಯವರೂ ನುಡಿಸಿದ  ಶಹನಾಯಿಯನ್ನು  ಬಾಲ್ಯದ ಸಹಜ ಕುತೂಹಲ ತಡೆಯದೇ ಸಂಗಣ್ಣನವರು ನುಡಿಸಿದ ಒಂದೇ ಕಾರಣಕ್ಕೆ ಸುಮಾರು ಏಳುವರ್ಷ ಕುಲದಿಂದ ಹೊರಹಾಕಿದ್ದ  ಘಟನೆ ಇವರ ಎಳೆಮನಸ್ಸನ್ನು ಘಾಸಿಗಳಿಸಿತ್ತೋ ಏನೋ, ಆಗಿನಿಂದ  ಜಾತಿಮತ ಪಂಥಗಳಿಂದ ದೂರವೇ ಉಳಿದಿದ್ದರು.ಎಂ.ಪಿ. ಪ್ರಕಾಶರು ಸಚಿವರಾಗಿದ್ದ ಸಂದರ್ಭದಲ್ಲಿ ಅಕಾಡೆಮಿಯೊಂದಕ್ಕೆ ಅಧ್ಯಕ್ಷರಾಗುವ ಅವಕಾಶ ಬಂದಿದ್ದರೂ ಅದನ್ನು ತಿರಸ್ಕರಿಸಿದರು. ಬೆಂಗಳೂರಿನಲ್ಲಿ ನಿವೇಶನವನ್ನು ಕೊಡಲು ಸರ್ಕಾರ ಮುಂದೆ ಬಂದರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು ಸಂಗಣ್ಣ. ಯಾವುದೇ ಪ್ರಶಸ್ತಿ, ಸಮ್ಮಾನ, ಪುರಸ್ಕಾರಗಳ ಬೆನ್ನುಹತ್ತದೇ ಇದ್ದರೂ ಹಲವಾರು ಪ್ರಶಸ್ತಿಗಳು ಸಂಗಣ್ಣನವರ ಮುಡಿಗೇರಿದವು.ಮಗ ಅಶೋಕ್, ಹರಪನಹಳ್ಳಿಯಲ್ಲಿ ಇದ್ದರೂ ಜನ್ಮಸ್ಥಾನ ಚಿಗಟೇರಿ ಬಿಟ್ಟು ಕದಲಿರಲಿಲ್ಲ ಸಂಗಣ್ಣಜ್ಜ. ಆದರೆ ಒಂಟಿತನ ಅವರನ್ನು ಕಾಡುತ್ತಿತ್ತೋ ಏನೋ. ಪತ್ನಿ ಅಗಲಿಕೆ ನಂತರ ಬಾಚಿಗೊಂಡನಹಳ್ಳಿಯ ಹುರಕಡ್ಲಿ ಶಿವಕುಮಾರವರಿಗೆ... `ನನ್ನಲ್ಲಿರುವ ಈ ಅಜ್ಜನ ಏಕಾಂತಕ್ಕೆ ಮೊಮ್ಮಕ್ಕಳ ಸಾಮೀಪ್ಯವಿಲ್ಲ. ಸಮವಯಸ್ಕ  ಮಿತ್ರರೂ ಇಲ್ಲ, ದಿನನೂಕುವುದು ಸಸಾರವೇನು ಅಲ್ಲ' ಎಂದು  ಪತ್ರ ಬರೆದಿದ್ದರಂತೆ.ಆಗಾಗ ಯಾವುದೋ ಕಾರ್ಯದ ನೆಪವೊಡ್ಡಿ ಮನೆಗೆ ರಂಗಾಸಕ್ತರನ್ನು, ಕಲಾವಿದರನ್ನು, ಸಾಹಿತಿಗಳನ್ನು ತಮ್ಮ ಮನೆಗೆ ಕರೆಸಿಕೊಳ್ಳುತ್ತಿದ್ದ  ಅವರು, ಮುಂಜಾನೆಯಿಂದ ಸಂಜೆಯವರೆಗೂ ಹಾಡು, ಜನಪದ ಸಾಹಿತ್ಯದ  ಬಗ್ಗೆ ಚರ್ಚಿಸುತ್ತಾ  ಕಾಲಕಳೆದು ಬಂದ ಅಥಿತಿಗಳಿಗೆ ಇಡೀ ದಿನ ಊಟೋಪಚಾರ ಮಾಡಿಸುತ್ತಿದ್ದರು. ಡಾ. ಶಿವರಾಮ ಕಾರಂತರೂ ಇಲ್ಲಿಗೆ ಸಾಕಷ್ಟು ಸಲ ಬಂದುಹೋಗಿರುವುದಾಗಿ ಅವರ ಮಗ ನೆನಪಿಸಿಕೊಳ್ಳುತ್ತಾರೆ.ಅವರ ಶೀಲಾವತಿ ಕಥೆಯು ರಂಗಪ್ರಯೋಗಕ್ಕೆ ಒಡ್ಡಿಕೊಂಡು ಮರಿಯಮ್ಮನಹಳ್ಳಿಯ ಲಲಿತ ಕಲಾ ರಂಗದ ಮೂಲಕ ನೂರಾರು ಪ್ರಯೋಗ ಕಂಡಿವೆ. `ಅವರ ನಾಟಕದಲ್ಲಿನ  ಶೀಲಾವತಿಯ ನನ್ನ ಪಾತ್ರಕ್ಕೆ  ರಂಗಭೂಮಿಯ ಅನುಭವವನ್ನೆಲ್ಲ ಧಾರೆ ಎರೆದೆ. ಇಡೀ ವೃತ್ತಿ ರಂಗಭೂಮಿಯಲ್ಲಿನ ಪಾತ್ರಗಳದೇ ಒಂದು ತೂಕವಾದರೆ ಶೀಲಾವತಿ ಪಾತ್ರದ್ದೇ ಒಂದುತೂಕ, ನನಗೆ ತವರು ಮನೆಯಂತಿದ್ದ ಚಿಗಟೇರಿ ಅವರಿಲ್ಲದ್ದಕ್ಕೆ ಇಂದು ಕನಸಾಗಿದೆ' ಎನ್ನುತ್ತಾ ಕಣ್ಣೀರಾಗುತ್ತಾರೆ ರಂಗಭೂಮಿಯ ಅಭಿನೇತ್ರಿ ಕೆ.ನಾಗರತ್ನಮ್ಮನವರು.ಅಪಾರ ಪುಸ್ತಕ ಪ್ರೇಮಿ

`ಅಪಾರ ಪುಸ್ತಕ ಪ್ರೇಮಿಯಾಗಿದ್ದ ಅಪ್ಪನ ಸಂಗ್ರಹದಲ್ಲಿ ಎರಡು ಸಾವಿರಕ್ಕೂ ಅಧಿಕ ಪುಸ್ತಕಗಳಿವೆ. ಎಷ್ಟೋ ಜನರು ಪುಸ್ತಕಗಳನ್ನು ಇನ್ನೂ ವಾಪಸು ಮಾಡಿಲ್ಲ. ಹಲವು ಪುಸ್ತಕಗಳು ದೂಳು ತಿನ್ನುತ್ತ, ಗೆದ್ದಲು ಹಿಡಿದು ಹಾಳಾಗುತ್ತಿವೆ.  ಪುಸ್ತಕಗಳನ್ನು ತೆಗೆದುಕೊಂಡು ಹೋಗುವುದಾಗಿ ಹೇಳಿದ್ದ  ಕನ್ನಡ ವಿಶ್ವವಿದ್ಯಾಲಯದವರು ಇಂದಿಗೂ ಇತ್ತ ಸುಳಿದಿಲ್ಲ' ಎನ್ನುತ್ತಾರೆ ಅಶೋಕ.ಚಿಗಟೇರಿಯಲ್ಲಿ ತಮ್ಮ ತಂದೆಯವರು ಬಾಳಿ ಬದುಕಿದ ಮನೆಯನ್ನು ಸ್ಮಾರಕವಾಗಿಸುವುದು ಬೇಡವಾದಲ್ಲಿ ಅವರ ಪ್ರೀತಿಯ ವಸ್ತುಗಳು, ಪುಸ್ತಕಗಳ ದೂಳನ್ನು ಕೊಡವಿ ಅವುಗಳಿಗೊಂದು ರೂಪ ನೀಡಬೇಕಾಗಿದೆ ಎನ್ನುತ್ತಾರೆ ಅಶೋಕ. ಆ ಮೂಲಕ ಅವರನ್ನರಸಿ ಬರುವ ಜನಪದ  ಸಾಹಿತ್ಯಾಸಕ್ತರ ಮನದಲ್ಲಿಯಾದರೂ ಸಂಗಣ್ಣಜ್ಜ ಉಳಿಯಬಹುದು ಎನ್ನುವುದು ಅವರ ಅಭಿಮತ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry