ನಾಡ ರಕ್ಷಣೆಗೆ ಹರಿದು ಬಂತು ಜನಸಾಗರ

7

ನಾಡ ರಕ್ಷಣೆಗೆ ಹರಿದು ಬಂತು ಜನಸಾಗರ

Published:
Updated:

ಮೈಸೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ತವರಿನಲ್ಲಿ ಏರ್ಪಡಿಸಿದ್ದ ನಾಡ ರಕ್ಷಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪಕ್ಷದ ನೂರಾರು ಮುಖಂಡರು, ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳು ಆಡಳಿತಾರೂಢ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ರಣಕಹಳೆಯನ್ನು  ಊದಿದರು.ಮೈಸೂರು ವಿಭಾಗದ 8 ಜಿಲ್ಲೆಗಳಿಂದ ಕಾರ್ಯಕರ್ತರು ಬಸ್ಸು, ಲಾರಿ, ಇನ್ನಿತರ ವಾಹನಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ನಗರದತ್ತ ಮುಖ ಮಾಡಿದ್ದರು. ಹೀಗಾಗಿ ನಗರದ ನಾಲ್ಕು ದಿಕ್ಕುಗಳಲ್ಲಿ ಕೈಯಲ್ಲಿ ಕಾಂಗ್ರೆಸ್ ಬಾವುಟ ಹಿಡಿದವರು, ಕಾಂಗ್ರೆಸ್ ಟೋಪಿ ಧರಿಸಿದವರು ಸಾಲುಗಟ್ಟಿ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ರು. ಹೆಂಗಸರೂ ಸಹ ತಾವೇನು ಕಡಿಮೆ ಇಲ್ಲ ಎನ್ನುವಂತೆ ಗಣನೀಯ ಸಂಖ್ಯೆಯಲ್ಲಿ ಹಾಜರಿದ್ದರು.ರ್ಯಾಲಿಗಾಗಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ 10 ದಿನಗಳಿಂದ ಭರ್ಜರಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಹಂತ ಹಂತವಾಗಿ ಪೂರ್ವಭಾವಿ ಸಭೆಗಳು, ಪ್ರಚಾರವನ್ನು ನಡೆಸಲಾಗಿತ್ತು. ಹೀಗಾಗಿ ನಗರದ ಪ್ರಮುಖ ವೃತ್ತಗಳು, ರಸ್ತೆಗಳು, ರ್ಯಾಲಿ ನಡೆದ ಸ್ಥಳದಲ್ಲಿ ಕಾಂಗ್ರೆಸ್ ಬಾವುಟ, ಬಂಟಿಂಗ್ಸ್, ಫ್ಲೆಕ್ಸ್‌ಗಳು, ಕಟೌಟ್‌ಗಳು ವಿಜೃಂಭಿಸಿದವು.ರ್ಯಾಲಿ ಅಂಗವಾಗಿ ಕರ್ನಾಟಕ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗವು ಸಿದ್ದರಾಮಯ್ಯನವರನ್ನು ಅರಮನೆ ಮುಂದೆ ಇರುವ ಆಂಜನೇಯಸ್ವಾಮಿ ದೇವಾಲಯದಿಂದ ಸಾರೋಟಿನಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಿತು. ಮೆರವಣಿಗೆಯಲ್ಲಿ ಜಾನಪದ ವಿವಿಧ ಕಲಾ ತಂಡಗಳು ಇದ್ದು ಮೆರಗು ಹೆಚ್ಚಿಸಿದವು. ಕಾಂಗ್ರೆಸ್ ಸೇವಾದಳದ ಸ್ವಯಂ ಸೇವಕರು ಶ್ವೇತವಸ್ತ್ರಧಾರಿಗಳಾಗಿ ಕಾಂಗ್ರೆಸ್ ಧ್ವಜವನ್ನು ಹಿಡಿದು ಸಾಗಿದರು.ನಾಯಕರ ದಂಡು

ರ್ಯಾಲಿಗಾಗಿ ಕಾಂಗ್ರೆಸ್ ಪಕ್ಷದ ನಾಯಕರ ದಂಡೇ ಆಗಮಿಸಿತ್ತು. ಹೀಗಾಗಿ ಬೃಹತ್ ವೇದಿಕೆಯಲ್ಲಿ ಕನಿಷ್ಠ 300 ಮಂದಿ ನಾಯಕರೇ ಇದ್ದರು. ಮುಂದಿನ ಸಾಲಿನಲ್ಲಿ ಕುಳಿತವರು ತಮಗಿಂತ ‘ದೊಡ್ಡ ನಾಯಕರು’ ಬಂದಾಗಿ ಕುರ್ಚಿ ಖಾಲಿ ಮಾಡಿ ಹಿಂದಕ್ಕೆ ತೆರಳುತ್ತಿದ್ದರು.ಎಷ್ಟೋ ನಾಯಕರು ಮಾತನಾಡಲು ಅವಕಾಶ ಸಿಗಲೇ ಇಲ್ಲ. ವೇದಿಕೆಯಲ್ಲಿ ಮಹಿಳಾ ಮಣಿಗಳು ಇದ್ದರೂ ಕೇಂದ್ರ ಮಾಜಿ ಸಚಿವ ಡಿ.ಕೆ.ತಾರಾದೇವಿ ಅವರಿಗೆ ಮಾತ್ರ ಮಾತನಾಡಲು ಅವಕಾಶ ಸಿಕ್ಕಿತು.ರ್ಯಾಲಿಯ ರೂವಾರಿ ಸಿದ್ದರಾಮಯ್ಯ ಎಲ್ಲ ನಾಯಕರನ್ನು ಖುದ್ದಾಗಿ ಮಾತನಾಡಿಸಿ ಕುರ್ಚಿಯಲ್ಲಿ ಕೂರಿಸುತ್ತಿದ್ದರು.ಕಾರ್ಯಕರ್ತರ ಗಲಾಟೆ ಹೆಚ್ಚಾದಾಗ ತಾವೇ ಅವರ ಬಳಿ ಹೋಗಿ ಸಮಾಧಾನ ಮಾಡಿದರು. ವೇದಿಕೆ ಮೇಲೆ ಅನಗತ್ಯವಾಗಿ ಓಡಾಡುತ್ತಿದ್ದವರನ್ನು ಓಡಿಸಿದರು. ಇಷ್ಟೇ ಅಲ್ಲದೇ ರ್ಯಾಲಿ ನಂತರ ಊಟದ ವ್ಯವಸ್ಥೆ ಇದೆ. ಊಟ ಮಾಡಿಕೊಂಡು ಹೋಗಿ ಎಂದು ಮುಖಂಡರ ಬಳಿ ಹೋಗಿ ತಿಳಿಸುತ್ತಿದ್ದರು.ಜಾಗ ಖಾಲಿ

ಕೇಂದ್ರ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಕೇಂದ್ರ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್, ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ.ಜನಾರ್ದನ ಪೂಜಾರಿ ತಮ್ಮ ಭಾಷಣ ಮುಗಿಸಿ ರ್ಯಾಲಿಯಿಂದ ನಿರ್ಗಮಿಸಿದರು. ಇದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಕೆರಳಿಸಿತು. ತಮ್ಮ ಭಾಷಣದಲ್ಲಿ ಇದನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದರು.ರ್ಯಾಲಿಯಲ್ಲಿ ಎಲ್ಲ ನಾಯಕರು ಗಡಿಯಾರಕ್ಕೆ ಸವಾಲು ಹಾಕುವಂತೆ ಮಾತನಾಡಿದರು. ಕೆಲವರು ಮಾತನಾಡುತ್ತಿದ್ದಾಗ ಕಾರ್ಯಕರ್ತರು ಸಾಕು ನಿಲ್ಲಿಸಿ ಎನ್ನುವಂತೆ ಚಪ್ಪಾಳೆ ತಟ್ಟಿದರು. ಆದರೆ ಭಾಷಣಕಾರರು ಚಪ್ಪಾಳೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಮತ್ತಷ್ಟು ಮಾತನಾಡಿದರು. ಆದರೆ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಬೈರೇಗೌಡ ಮಾತ್ರ ತಮಗೆ ಕೊಟ್ಟಿದ್ದ 5 ನಿಮಿಷಗಳಿಗೆ ಮುನ್ನವೇ ಮಾತು ಮುಗಿಸಿ ಮೆಚ್ಚುಗೆಗೆ ಪಾತ್ರರಾದರು.ಸ್ವಲ್ಪ ಉಲ್ಲಾಸ

ಏಕಪ್ರಕಾರವಾದ ಭಾಷಣ ಕೇಳಿ ಸುಸ್ತಾಗಿದ್ದ ಕಾರ್ಯಕರ್ತರು ಮತ್ತು ವೇದಿಕೆಯಲ್ಲಿದ್ದ ಇನ್ನಿತರರಿಗೆ ಬಿ.ಜನಾರ್ದನ ಪೂಜಾರಿ, ಡಾ.ಜಿ.ಪರಮೇಶ್ವರ್ ಅವರ ಹಾಸ್ಯಮಿಶ್ರಿತ ಭಾಷಣ ಕೊಂಚ ಉಲ್ಲಾಸವನ್ನು ಉಂಟು ಮಾಡಿತು. ಮಧ್ಯಾಹ್ನ 3.30 ಹೊತ್ತಿಗೆ ಕಾರ್ಯಕರ್ತರು ಹೊರಡುತ್ತಿದ್ದರು. ಆಗ ಸಿ.ಎಂ.ಇಬ್ರಾಹಿಂ ಮಾತಿಗೆ ನಿಂತರು. ಸುಮಾರು 30 ನಿಮಿಷ ತಮ್ಮ ಎಂದಿನ ಗೇಲಿ, ವ್ಯಂಗ್ಯ, ದ್ವಂದ್ವಾರ್ಥದಂತಹ ಮಾತುಗಳಿಂದ ನಗೆಯುಕ್ಕಿಸಿದರು. ಇಬ್ರಾಹಿಂ ಮಾತಿಗೆ ಪರಮೇಶ್ವರ್, ಪ್ರೊ.ಬಿ.ಕೆ.ಚಂದ್ರಶೇಖರ್, ಸಿದ್ದರಾಮಯ್ಯ ಸೇರಿದಂತೆ ಎಲ್ಲ ಮುಖಂಡ ನಕ್ಕಿ ಸುಸ್ತಾದರು.ವೇದಿಕೆ ಮುಂದೆ ಗಾಂಧಿ ವೇಷಧಾರಿ ಸತತವಾಗಿ 3 ಗಂಟೆಗಳ ಕಾಲ ಒಂದೇ ಭಂಗಿಯಲ್ಲಿ ನಿಲ್ಲುವ ಮೂಲಕ ಗಮನ ಸೆಳೆದರು. ಕೊನೆಯಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಇಷ್ಟರಲ್ಲಿ ಬಹುತೇಕ ಕಾರ್ಯಕರ್ತರು ರ್ಯಾಲಿ ಸ್ಥಳದಿಂದ ಖಾಲಿಯಾಗಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry