ಶುಕ್ರವಾರ, ನವೆಂಬರ್ 22, 2019
26 °C

`ನಾಣಯ್ಯ ವಿರುದ್ಧ ಆಯೋಗಕ್ಕೆ ದೂರು'

Published:
Updated:

ಮಡಿಕೇರಿ: ವಿರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ವಿರುದ್ಧ ವೈಯಕ್ತಿಕ ತೇಜೋವಧೆಗೆ ಮುಂದಾಗಿರುವ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಮನು ಮುತ್ತಪ್ಪ ಹೇಳಿದರು.ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮಾ ಸಮಸ್ಯೆಯನ್ನು ಇತ್ಯರ್ಥಪಡಿಸುವಂತೆ ಒತ್ತಾಯಿಸಿ 2008ರಲ್ಲಿ ನವೆಂಬರ್ 1ರಂದು ಬೋಪಯ್ಯ ಸೇರಿದಂತೆ ಜಿಲ್ಲೆಯ ಹಲವು ನಾಯಕರು ಪ್ರತಿಭಟನೆ ನಡೆಸಿದ್ದರು. ಆ ಸಂದರ್ಭದಲ್ಲಿ ಬೋಪಯ್ಯ ಸೇರಿದಂತೆ 28 ಜನ ಮುಖಂಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದು ಜನಪರ ಹೋರಾಟವೆನ್ನುವುದನ್ನು ಅರ್ಥೈಸಿಕೊಂಡ ಸರ್ಕಾರ ನಂತರ ಈ ಪ್ರಕರಣಗಳನ್ನು ವಾಪಸ್ ಪಡೆಯಿತು ಎಂದು ಅವರು ವಿವರಿಸಿದರು.ಜನಪರ ಹೋರಾಟ ಮಾಡಿದ್ದನ್ನು ತಿರುಚಿ ಬೋಪಯ್ಯ ವಿರುದ್ಧ ಅಪಪ್ರಚಾರ ಮಾಡಲು ನಾಣಯ್ಯ ತೊಡಗಿದ್ದಾರೆ.  ಇವರನ್ನು ಗೂಂಡಾ ಪ್ರಕರಣಗಳಿಗೆ ಹೋಲಿಸಿ, ಕ್ರಿಮಿನಲ್‌ಗಳಂತೆ ಬಿಂಬಿಸಲಾಗುತ್ತಿದೆ. ಇವರ ವಿರುದ್ಧ ನೀತಿ ಸಂಹಿತೆಯಡಿ ಕ್ರಮ ಜರುಗಿಸಬೇಕೆಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದು ಹೇಳಿದರು.ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರ ಪ್ರಯತ್ನದ ಫಲವಾಗಿ 2009ರಲ್ಲಿ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೂ 25 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದರೆ, ಈಗ ನಾಣಯ್ಯ ಅವರು ತಮ್ಮ ಪ್ರಯತ್ನದಿಂದಲೇ ಈ ಪ್ಯಾಕೇಜ್ ಮಂಜೂರಾಗಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರು ದಾಖಲೆ ನೀಡಲಿ ಎಂದು ಮನು ಮುತ್ತಪ್ಪ ಸವಾಲೆಸೆದರು.ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ವಿರಾಜಪೇಟೆಯಲ್ಲಿ ಸ್ಪರ್ಧಿಸಿರುವ ಕೆ.ಜಿ.ಬೋಪಯ್ಯ ವಿರುದ್ಧ ಹಲವರು ಷಡ್ಯಂತ್ರ ರೂಪಿಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಬೋಪಯ್ಯ ವಿರುದ್ಧ ಎಸ್.ಎಂ.ಎಸ್ ಹಾಗೂ  ದೂರವಾಣಿ ಕರೆಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದರು.ಎಂ.ಸಿ. ನಾಣಯ್ಯ ಅವರು ಕಾನೂನು ಸಚಿವರಾಗಿದ್ದಾಗ ಏಕೆ ಜಮ್ಮಾ ಸಮಸ್ಯೆ ಬಗೆಹರಿಸಲಿಲ್ಲ? ಜಿಲ್ಲೆಯ ಯಾವುದೇ ಸಮಸ್ಯೆಗೆ ಅವರು ಸ್ಪಂದಿಸಲಿಲ್ಲ. ಪ್ರಸ್ತುತ ಕೆ.ಜಿ.ಬೋಪಯ್ಯ ಉತ್ತಮವಾಗಿ ಕೆಲಸ ನಿರ್ವಹಿಸಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ತಮಗಿದೆ ಎಂದು ಹೇಳಿದರು.

ಪಕ್ಷದ ಮುಖಂಡರಾದ ತಳೂರು ಕಿಶೋರ್‌ಕುಮಾರ್, ಸಜ್ಜಿಲ್ ಕೃಷ್ಣನ್, ಸುಭಾಷ್ ಸೋಮಯ್ಯ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)