ನಾದದಲೆ ರಾಗಮಳೆ!

7

ನಾದದಲೆ ರಾಗಮಳೆ!

Published:
Updated:
ನಾದದಲೆ ರಾಗಮಳೆ!

ಸತತವಾಗಿ ವಾರವಿಡೀ ಸುರಿದ ಮಳೆ ಅದೆಷ್ಟು ಮನಗಳನ್ನು ಪುಳಕಿತಗೊಳಿಸಿತ್ತು. ಈಗ ಸಾವಧಾನವಾಗಿ ಅದರ ಅಬ್ಬರ ಕಡಿಮೆಯಾಗುತ್ತಾ ಬರುತ್ತಿದೆ. ಆದರೆ ಮಂಜು ಮುಸುಕುವ ಮುಂಜಾವುಗಳು, ಸಂಜೆಹೊತ್ತಿಗೆ ಕಪ್ಪಿಡುವ ಮೋಡಗಳು ಮನದಲ್ಲಿ ಮಳೆಯನ್ನು ಆಸ್ವಾದಿಸುವ ಕಾತರವನ್ನು ಬಿತ್ತುತ್ತಲೇ ಇವೆ.ಸಂಗೀತ ಲೋಕದಲ್ಲಿಯೂ ಹಾಗೆಯೇ. ವರ್ಷಋತು ಪ್ರಾರಂಭವಾದಾಗಿನಿಂದ ಅದು ಮುಗಿಯುವವರೆಗೂ ಆಯೋಜಿಸಲಾಗುವ `ಮಲ್ಹಾರ ಸಂಗೀತೋತ್ಸವ'ಗಳು ಶ್ರೋತೃಗಳಿಗೆ ಮಳೆಯ ಅನುಭವವನ್ನು ವಿಶೇಷವಾಗಿ ಕಟ್ಟಿಕೊಡುತ್ತವೆ. ಇದೇ ಸಾಲಿಗೆ `ಆಥಂಗ್ ಎಕ್ಸ್‌ಪ್ರೆಷನ್ಸ್' ಆಯೋಜಿಸಿದ್ದ `ಯಂಗ್ ಕಲರ್ಸ್‌ ಆಫ್ ಮಲ್ಹಾರ್' ಎಂಬ ಕಾರ್ಯಕ್ರಮ ಸೇರಿತು.ಭಾರತೀಯ ವಿದ್ಯಾಭವನದ ಖಿಂಚಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯೋಗೇಶ್ ಹನ್ಸವಾಡ್ಕರ್ (ಗಾಯನ), ರವೀಂದ್ರ ಕಾಟೋಟಿ (ಹಾರ್ಮೋನಿಯಂ ಸೋಲೊ) ಹಾಗೂ ಪೂರ್ಣಿಮಾ ಭಟ್ ಕುಲಕರ್ಣಿ (ಗಾಯನ) ಅವರ ಸಂಗೀತವನ್ನು ಆಸ್ವಾದಿಸಲು ವೇದಿಕೆ ಸಜ್ಜಾಗಿತ್ತು. ಮಲ್ಹಾರ್ ರಾಗದ ಥಾಟ್ ಕಾಫಿ. ಆದರೆ ಅದನ್ನಷ್ಟೇ ಹಾಡುವುದಕ್ಕಿಂತ ಅದನ್ನು ಬೇರೆ ಬೇರೆ ರಾಗಗಳೊಂದಿಗೆ ವಿಲೀನಗೊಳಿಸಿ, ಮಿಯಾ ಮಲ್ಹಾರ್, ದೇಸ್ ಮಲ್ಹಾರ್, ಗೌಡ ಮಲ್ಹಾರ್, ರಾಮದಾಸಿ ಮಲ್ಹಾರ್, ಕಾನಡಾ ಮಲ್ಹಾರ್, ಕನಕ ಮಲ್ಹಾರ್, ಮೇಘ ಮಲ್ಹಾರ್, ಜಯಂತ ಮಲ್ಹಾರ್, ಚಾರ್ಜು ಕಿ ಮಲ್ಹಾರ್, ಶುದ್ಧ ಮಲ್ಹಾರ್, ಮೀರಾ ಮಲ್ಹಾರ್ ಎಂದು ಹಾಡುವುದುಂಟು.ಮೊದಲಿಗೆ ಯೋಗೇಶ್ ಹನ್ಸವಾಡ್ಕರ್ ಅವರಿಂದ ಮಲ್ಹಾರ ರಾಗಗಳ ಗಾಯನ ಆರಂಭವಾಯಿತು. ಯೋಗೇಶ್ ಮೇವಾಟಿ ಘರಾಣೆಯ ಪ್ರಕಾರಕ್ಕೆ ಸೇರಿದವರು. ಅಷ್ಟೇನೂ ಜನಪ್ರಿಯವಲ್ಲದ ಈ ಮೇವಾಟಿ ಘರಾಣೆಗೆ ಪಂ. ಜಸ್‌ರಾಜ್ ಅವರು ಪ್ರಚಲಿತ ಉದಾಹರಣೆ. ಮಳೆಯಿಂದ ಉಂಟಾಗುವ ಟ್ರಾಫಿಕ್ ಆತಂಕದ ನಡುವೆಯೂ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೋತೃಗಳಿಗೆ ಯೋಗೇಶ್ ಮಿಯಾ ಮಲ್ಹಾರ್ ರಾಗವನ್ನು ಆರಿಸಿಕೊಂಡ್ದ್ದಿದರು.ಆರು ನಿಮಿಷಗಳ ಆಲಾಪ್ ನಂತರ, ವಿಲಂಬಿತ್ ಏಕ ತಾಳದಲ್ಲಿ ಆರಂಭವಾದ `ಬಬತೋ ಬರಸ...' ಎಂಬ ಬಂದಿಶನ್ನು ಕೆಲಹೊತ್ತು ಹಾಡಿದರು. ಮಂದ್ರ ಸ್ಥಾಯಿಯಿಂದಲೇ ರಾಗದ ರೂಪು ರೇಷೆಗಳನ್ನು ಹೆಣೆಯಲಾರಂಭಿಸಿದ್ದ ಯೋಗೇಶ್, ಮಂದ್ರ- ಮಧ್ಯ- ತಾರ ಸಪ್ತಕದಂತೆ ಹಂತ ಹಂತವಾಗಿ ರಾಗವನ್ನು ಮೇಲ್ಮಟ್ಟಕ್ಕೆ ಒಯ್ದ ರೀತಿ ಶ್ರೋತೃಗಳಿಗೆ ಅಭೂತಪೂರ್ವವಾದ ಅನುಭವ ನೀಡಿತು. ಮಂದ್ರ, ಮಧ್ಯ ಸಪ್ತಕಗಳಲ್ಲಿ ವಿಹರಿಸತೊಡಗಿದ್ದ ರಾಗ, ಆಲಾಪ್ ಹಾಗೂ `ಸರ್‌ಗಮ್'ಗಳ ಗಾಯನದ ಸಮಯದಲ್ಲಿ, ನಭದಿಂದ ಚಿಮ್ಮಬೇಕಿದ್ದ ಗುಡುಗುಗಳು ಸಭಾಂಗಣಕ್ಕೆ ಲಗ್ಗೆಯಿಟ್ಟವೇನೋ ಎನ್ನುವಂತಿತ್ತು. ನಂತರ ಕೆಲ ಹೊತ್ತು ಮೇಘ ರಾಗವನ್ನೂ (ಕಾಫಿ ಥಾಟ್) ಪ್ರಸ್ತುತಪಡಿಸಿದರು.ಇಲ್ಲಿ ಆಲಾಪ್ ಗಾಯನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿತ್ತು. ಅವರ ಸಶಕ್ತ ಶಾರೀರದಲ್ಲಿ ಹೊಮ್ಮಿದ ಸ್ವರಗಳು ಝೇಂಕಾರವನ್ನು ಗುನುಗುನಿಸಿದವು. ಅವರ ಗಾಯನಕ್ಕೆ ತಬಲಾದಲ್ಲಿ ಉದಯ್‌ರಾಜ್ ಕರ್ಪೂರ್ ಹಾಗೂ ಹಾರ್ಮೋನಿಯಂನಲ್ಲಿ ಅಶ್ವಿನ್ ವಾಲಾವಲ್ಕರ್ ಅವರು ನೀಡಿದ ಸಾಥ್ ಉತ್ತಮವಾಗಿತ್ತು.ಯೋಗೇಶ್ ಗಾಯನದ ನಂತರ ರವೀಂದ್ರ ಕಾಟೋಟಿ ಅವರ ಸೋಲೋ ಹಾರ್ಮೋನಿಯಂ ವಾದನ ಆರಂಭವಾಯಿತು. `ಸೂರ್ ಮಲ್ಹಾರ್' ಅವರ ಆಯ್ಕೆಯ ಮೊದಲ ರಾಗವಾಗಿತ್ತು. ಮಧ್ಯಲಯ ತೀನ್ ತಾಳದಲ್ಲಿ ಆರಂಭಗೊಂಡ ಬಂದೀಶ್‌ನ ವಾದನ ಕೇಳುಗರಲ್ಲಿ ಲವಲವಿಕೆಯ ಅಲೆಯನ್ನು ಎಬ್ಬಿಸಿತು. ಜೊತೆಗೆ ಇಪ್ಪತ್ನಾಲ್ಕು ನಿಮಿಷಗಳ ಪ್ರಸ್ತುತಿಯಲ್ಲಿ ಹಾರ್ಮೋನಿಯಂ ನಾದದ ಸೊಬಗಿನಲ್ಲಿ ರಾಗದ ಸೌಂದರ್ಯ ಕಂಗೊಳಿಸಿತು. ನಂತರ ತೀನ್ ತಾಳದಲ್ಲಿ ಪಟ್ ಮಲ್ಹಾರ್ ರಾಗವನ್ನು ನುಡಿಸಿದರು. ಇದು ಪಟದೀಪ್ ಹಾಗೂ ಮಲ್ಹಾರ್ ರಾಗಗಳ ಹದವರಿತ ಮಿಶ್ರಣ. ತೀನ್ ತಾಳದಲ್ಲಿ ನುಡಿಸಲಾದ ಪ್ರಸ್ತುತಿಯಲ್ಲಿ ಹೊಮ್ಮಿದ ಸಂಯೋಜನೆಯ ಭಾವ, ಕೇಳುಗರಲ್ಲಿ ಭಾವಸಂಚಾರ ಮೂಡಿಸಿತೆನ್ನಬೇಕು. ಕಾಟೋಟಿ ಅವರ ಶಿಷ್ಯ ಚಿರಾಗ್ ಸಹ ಹಾರ್ಮೋನಿಯಂ ವಾದನದಲ್ಲಿ ನೆರವಾದರು.ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲಿದ್ದ ಯೋಗೇಶ್ ಅವರಿಗೆ ಹೆಚ್ಚು ಹಾಡಲಾಗದ ಕಾರಣ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಅವರನ್ನು ಹಾಡಲು ವಿನಂತಿಸಿಕೊಳ್ಳಲಾಗಿತ್ತು. ಪೂರ್ಣಿಮಾ ಅವರು ಉಷಾ ದಾತಾರ್ ಹಾಗೂ ಬಸವರಾಜ್ ರಾಜಗುರು ಅವರಲ್ಲಿ ಸಂಗೀತಾಭ್ಯಾಸ ಮಾಡಿದವರು.ದಕ್ಷಿಣ ಭಾರತದಲ್ಲಿ ಶಾಸ್ತ್ರೀಯ ಸಂಗೀತ ಹಾಡುವವರಲ್ಲಿ ಮಹಿಳಾ ಕಲಾವಿದರ ಸಂಖ್ಯೆ ಬೆರಳೆಣಿಯಷ್ಟೇ ಇದೆ. ಅವರಲ್ಲಿ ಪೂರ್ಣಿಮಾ ಭಟ್ ಕೂಡ ಒಬ್ಬರು. ಮೇಘ ಮಲ್ಹಾರ ರಾಗದಿಂದ ಗಾಯನವನ್ನು ಆರಂಭಿಸಿದ ಅವರು `ಘನ ಗರಜೆ ಘಟಾ' ಹಾಗೂ `ಬಾದರ ಕಾಹೆ' ಎಂಬ ಎರಡು ಬಂದೀಶ್‌ಗಳನ್ನು ಪ್ರಸ್ತುತಪಡಿಸಿದರು. ಧೃತ್ ತೀನ್ ತಾಳದಲ್ಲಿ ಮೂಡತೊಡಗಿದ್ದ `ಬಾದರ ಕಾಹೆ' ಬಂದೀಶ್‌ನ ಗಾಯನ ಶ್ರೋತೃಗಳನ್ನು ಬಹುವಾಗಿ ರಂಜಿಸಿತು. ಹಲವಾರು ಬಾರಿ ತಾರ ಸಪ್ತಕಗಳನ್ನು ಮುಟ್ಟಿ ಮಧ್ಯ ಸಪ್ತಕಕ್ಕೆ ಬಂದರೂ ಅದೇ ಪ್ರಸನ್ನತೆಯನ್ನು ಉಳಿಸಿಕೊಂಡಿದ್ದ ಮುಖಭಾವ, ಕಾರ್ಯಕ್ರಮಕ್ಕೂ ಅದೇ ಪ್ರಸನ್ನತೆಯ ಸಿಂಚನ ಮಾಡಿತ್ತು.ಶಾಸ್ತ್ರೀಯ ಗಾಯನವಷ್ಟೇ ಅಲ್ಲದೆ ಲಘು ಶಾಸ್ತ್ರೀಯ ಪ್ರಕಾರದ ಗಾಯನದಲ್ಲೂ ಪರಿಣತಿ ಪಡೆದಿರುವ ಪೂರ್ಣಿಮಾ ಕೊನೆಗೆ ಅವುಗಳ ಸವಿಯನ್ನೂ ಉಣ್ಣಿಸಿದರು. `ಗರಜ ಗರಜ ಬದರಾ' ಎಂಬ ಪ್ರಸ್ತುತಿಯ ನಂತರ ಹಾಡಿದ `ಝೂಮ ಝೂಮ' ಎಂಬ ಗೀತೆ ಕಾರ್ಯಕ್ರಮಕ್ಕೆ ವಿಶೇಷ ರಂಗು ತಂದಿತು. ಕೊನೆಯಲ್ಲಿ `ಕಾರಿ ಕಾರಿ ಬದರಿಯಾ ಚಾಯೆ ಬನವಾರಿ ಹೋ' ಎಂಬ ಜೂಲಾ ಹಾಡಿದರು. ಯಾವುದೇ ಗಿಮಿಕ್ಕುಗಳಿಲ್ಲದೆ, ಕ್ರಿಯಾತ್ಮಕವಾಗಿದ್ದ ಉದಯ್‌ರಾಜ್ ಕರ್ಪೂರ್ ಅವರ ತಬಲಾ ವಾದನ ಮೂರು ಕಲಾವಿದರ ಸಂಗೀತಕ್ಕೆ ಒಳ್ಳೆಯ ಸಾಥ್ ನೀಡಿತು. ಅಶ್ವಿನ್ ವಾಲಾವಲ್ಕರ್ ಅವರ ಸಾಥಿ ಜೊತೆಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry