ಭಾನುವಾರ, ಜೂನ್ 13, 2021
21 °C

ನಾದದ ಬೆನ್ನೇರಿ...ಕರೆದರೂ ಕೇಳದೇ...

ಅವನೀಶ್ Updated:

ಅಕ್ಷರ ಗಾತ್ರ : | |

ಕರೆದರೂ ಕೇಳದೇ... ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಬಿಲಾವಲ್ ಥಾಟ್‌ನಲ್ಲಿ ಬರುವ `ಬಿಹಾಗ್~ ರಾಗದ ಈ ಸುಮಧುರ ಗೀತೆಯನ್ನು ಕೇಳದವರಿಲ್ಲ. ಗಾನ ಕೋಗಿಲೆ ಎಸ್. ಜಾನಕಿ ಅವರ ಕಂಠದಿಂದ ಸುಶ್ರಾವ್ಯವಾಗಿ ಹೊಮ್ಮಿದ ಈ ಗೀತೆಯ ಜತೆಗೆ ಶೆಹನಾಯ್ ಎಂಬ ಸುಷಿರ ವಾದ್ಯದ ಮಾಧುರ್ಯ ಹಾಡಿನ ಸೊಬಗನ್ನು ನೂರ್ಮಡಿಸುತ್ತದೆ.ಹೌದು, ಅದು ಡಾ. ರಾಜ್‌ಕುಮಾರ್ ಅಭಿನಯದ `ಸನಾದಿ ಅಪ್ಪಣ್ಣ~ ಸಿನಿಮಾ ಗೀತೆ. ಶೆಹನಾಯ್ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನರು ನುಡಿಸಿದ ಶೆಹನಾಯ್ ವಾದನ ಈ ಚಿತ್ರ ದಾಖಲೆ ನಿರ್ಮಿಸಲು ಸಹಕಾರಿಯಾಯಿತು.ಹಳ್ಳಿಯ ಶೆಹನಾಯ್ ಕಲಾವಿದನೊಬ್ಬನ ಜೀವನ ವೃತ್ತಾಂತದ ಸುತ್ತ ಹೆಣೆದಿರುವ ಕಥಾಹಂದರವಿದು. ಈ ಸಿನಿಮಾ ಶತದಿನ ಕಂಡ ಹಿನ್ನೆಲೆಯಲ್ಲಿ ಶತದಿನೋತ್ಸವ ಆಚರಣೆಗೆ ಬೆಂಗಳೂರಿನಲ್ಲಿ ಒಂದು ಸಮಾರಂಭ ಏರ್ಪಡಿಸಿದ್ದರು.

 

ಊರ್ವಶಿ ಚಿತ್ರಮಂದಿರಲ್ಲಿ ನಡೆದ ಸಮಾರಂಭದಲ್ಲಿ ಬಿಸ್ಮಿಲ್ಲಾ ಖಾನ್ ಮತ್ತು ಡಾ. ರಾಜ್‌ಕುಮಾರ್ ಇಬ್ಬರೂ ಒಟ್ಟಿಗೆ ಕುಳಿತು ಈ ಸಿನಿಮಾವನ್ನು ಮತ್ತೆ ವೀಕ್ಷಿಸಿದರು. ಇದು ನಡೆದದ್ದು 1977ರ ನವೆಂಬರ್‌ನಲ್ಲಿ.ಶೆಹನಾಯ್ ಬಹಳ ಅಪರೂಪದ ಸುಷಿರ ವಾದ್ಯ. ಇದಕ್ಕೆ ಕನ್ನಡದಲ್ಲಿ `ಸನಾದಿ~ ಎಂದು ಹೆಸರು. ಇದನ್ನು ನುಡಿಸುವವರು, ಕಲಿಸುವವರು ವಿರಳಾತಿ ವಿರಳ. ದಕ್ಷಿಣ ಭಾರತದಲ್ಲಿ ಮಂಗಳ ವಾದ್ಯವಾಗಿ ನಾಗಸ್ವರ ಇದ್ದ ಹಾಗೆ ಉತ್ತರ ಭಾರತದಲ್ಲಿ ಶೆಹನಾಯ್. ಈ ಎರಡೂ ಸುಷಿರ ವಾದ್ಯಗಳನ್ನು ಸಾಂಪ್ರದಾಯಿಕವಾಗಿ ಮಂಗಳ ಕಾರ್ಯಗಳಲ್ಲಿ ಬಳಸುವುದಿದೆ.ಶೆಹನಾಯ್ ಉದ್ದ ಕೊಳವೆಯಂತಿರುವ ವಾದ್ಯ. ಮೇಲ್ಭಾಗ ಸಣ್ಣದಾಗಿದ್ದು, ಕೆಳಭಾಗ ಸ್ವಲ್ಪ ದೊಡ್ಡದಾಗಿರುತ್ತದೆ. ಕೆಳಭಾಗಕ್ಕೆ ಹಿತ್ತಾಳೆಯ ಬಟ್ಟಲನ್ನು ಕೂರಿಸಿರುತ್ತಾರೆ. 12 ಇಂಚು ಉದ್ದವಿರುವ ಶೆಹನಾಯಿಯ ಊದುವ ಭಾಗಕ್ಕೆ `ಜೀವಾಳ~ವನ್ನು ಸಿಕ್ಕಿಸಿ ಊದಿದಾಗ ನಾದೋತ್ಪನ್ನವಾಗುತ್ತದೆ.

 

ಸ್ವರಗಳು ವಿವಿಧ ರಾಗವಾಗಿ ಅರಳುತ್ತವೆ. ಇದನ್ನು ಸ್ವತಂತ್ರ ವಾದ್ಯವಾಗಿ ಬಳಸುತ್ತಾರೆ. ಈ ವಾದನಕ್ಕೆ ಲಯವಾದ್ಯವಾಗಿ ತಬಲಾ ಸಾಥಿ ಬಳಸುವುದಿದೆ. ಜಮಖಂಡಿಯ ಮಾರುತಿ ನಾವಲಗಿ ಭಜಂತ್ರಿ, ಕುಂದಗೋಳದ ಬಸವರಾಜ ಪಿ. ಭಜಂತ್ರಿ ಶೆಹನಾಯ್‌ಯಲ್ಲಿ ಸಾಕಷ್ಟು ಹೆಸರು ಮಾಡಿದ ಕರ್ನಾಟಕದ ಕಲಾವಿದರು.

ಅಂದಹಾಗೆ ಶೆಹನಾಯ್ ಪರ್ಷಿಯಾದಿಂದ ಬಂದ ವಾದ್ಯ.ಸುಸ್ವರ ನಾಗಸ್ವರ

ಉತ್ತರಾದಿಯಲ್ಲಿ ಶೆಹನಾಯ್ ಹೇಗೋ ದಕ್ಷಿಣಾದಿಯಲ್ಲಿ ನಾಗಸ್ವರ ಅಥವಾ ನಾದಸ್ವರ ಹಾಗೆ. ಈ ಸುಷಿರ ವಾದ್ಯವನ್ನು ಸಾಂಪ್ರದಾಯಿಕವಾಗಿ ದೇವಸ್ಥಾನಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಮಂಗಳ ವಾದ್ಯವಾಗಿ ಬಳಸಲಾಗುತ್ತದೆ.ಯಾವ ಶುಭ ಸಮಾರಂಭವೂ ನಾಗಸ್ವರದ ನಾದ ಇಲ್ಲದೆ ಆರಂಭವಾಗುವುದಿಲ್ಲ ಎಂಬಷ್ಟು ಖ್ಯಾತಿ ಈ ವಾದ್ಯಕ್ಕಿದೆ. ಹಳೆಯ ಸಂಗೀತ ವಿದ್ವಾಂಸರ ಮೇಲೆ ಬಹಳಷ್ಟು ಪ್ರಭಾವ ಬೀರಿದ ಈ ವಾದ್ಯದ ಸುನಾದ ಮೈಕ್ ಇಲ್ಲದೆ ಮೈಲಿ ದೂರ ತಲುಪುತ್ತದೆ.ಹೀಗಾಗಿ ಇದೊಂದು `ಓಪನ್ ಇನ್‌ಸ್ಟ್ರುಮೆಂಟ್~ ಎಂದೂ ಹೇಳಬಹುದು. ಸಭಾ ಕಾರ್ಯಕ್ಕೂ, ಗಾನಕ್ಕೂ, ಧಾರ್ಮಿಕ ಕಾರ್ಯಕ್ಕೂ ಸೈ ಎನಿಸುತ್ತದೆ ಈ ನಾಗಸ್ವರ.

ವಾದ್ಯ ರಚನೆಯಲ್ಲಿ ಶೆಹನಾಯಿಯನ್ನೇ ಹೆಚ್ಚು ಕಡಿಮೆ ಹೋಲುವ ಈ ಕೊಳವೆಯಾಕಾರದ ವಾದ್ಯದಲ್ಲಿ ಮುಖ್ಯವಾಗಿ ಏಳು ರಂಧ್ರಗಳಿವೆ.ಕೆಳಭಾಗದಲ್ಲಿ ಐದು ಸಣ್ಣ ಸಣ್ಣ ರಂಧ್ರಗಳಿವೆ. ಮೇಲಿನ ರಂಧ್ರದಲ್ಲಿ ಪ್ರಧಾನ ಸ್ವರಗಳು ಹೊಮ್ಮಿದರೆ ಕೆಳಗಿನವು ಸ್ವರಗಳಿಗೆ ಬೆಂಬಲವಾಗಿ ಇರುತ್ತವೆ. ಮೇಲ್ನೋಟಕ್ಕೆ ಪುಂಗಿಯಂತಿದ್ದು, ಅದಕ್ಕಿಂತ ಸ್ವಲ್ಪ ಉದ್ದವಿರುವ ಈ ವಾದ್ಯದ ನಾದ ಬಹಳ ಇಂಪು.

 

ನುಡಿಸಲು ಕೊಂಚ ಕಷ್ಟಕರವಾದ ವಾದ್ಯವಿದು.

ತಮಿಳುನಾಡಿನಲ್ಲಿ ದೇವಸ್ಥಾನ, ಮದುವೆ ಸಮಾರಂಭಗಳಲ್ಲಿ ಈ ವಾದ್ಯವನ್ನು ಕಡ್ಡಾಯವಾಗಿ ಬಳಸುವರು. ವಿದ್ವಾನ್ ರಾಜರತ್ನಂ ಪಿಳೈ, ತಿರುವೆಂಗಡು ಸುಬ್ರಹ್ಮಣ್ಯ ಪಿಳೈ, ಶೇಖ್ ಚಿನ್ನಾ ಮೌಲಾನ ನಾಗಸ್ವರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.ಭಾಗ್ಯಲಕ್ಷ್ಮಿ, ಪಳನಿವೇಲು, ಮುರಳಿ, ರಾಜಗೋಪಾಲ್, ರಾಮದಾಸ್ ಕರ್ನಾಟಕದ ಉತ್ತಮ ನಾಗಸ್ವರ ಕಲಾವಿದರು. ಈ ವಾದ್ಯಕ್ಕೆ ಡೋಲನ್ನು ಪಕ್ಕವಾದ್ಯವಾಗಿ ಬಳಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.