ನಾದದ ಬೆನ್ನೇರಿ...: ಸುಸ್ವರಲಯ: ಸಂಗೀತದ ಸುಗಂಧ ಬೀರುತ್ತಾ...

7

ನಾದದ ಬೆನ್ನೇರಿ...: ಸುಸ್ವರಲಯ: ಸಂಗೀತದ ಸುಗಂಧ ಬೀರುತ್ತಾ...

Published:
Updated:

ಸುಸ್ವರಲಯ ಸಂಗೀತ ಶಾಲೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಹಲವು ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ. ಗಾಯನ, ಮೃದಂಗ, ಘಟ, ಕೊಳಲು, ಪಿಟೀಲು, ವೀಣೆ ತರಗತಿಗಳಲ್ಲದೆ ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ಸಂಗೀತ ಕಾರ್ಯಾಗಾರ, ಗೋಷ್ಠಿ ಗಾಯನ, ಹಿರಿಯ ವಿದ್ವಾಂಸರಿಗೆ ಬಿರುದು ಪ್ರದಾನ, ಸಂಗೀತ ಕಛೇರಿಗಳು, ಸಂಗೀತ ಕುರಿತ ಪುಸ್ತಕ ಪ್ರಕಟಣೆ, ಸೀಡಿ ಬಿಡುಗಡೆಗಳನ್ನು ಸಂಸ್ಥೆ ಪ್ರತಿ ವರ್ಷ ಮಾಡುತ್ತದೆ.ಅಲ್ಲಿ ಮಾಧುರ್ಯವಿದೆ, ಸಪ್ತಸ್ವರಗಳ ನಿನಾದವಿದೆ, ಸ್ವರಗಳ ಜತೆಗೆ ಅಲೆ ಅಲೆಯಾಗಿ ತೇಲಿ ಬರುವ ಸುಮಧುರ ಲಯವಿದೆ. ಎಲ್ಲವೂ ಶ್ರುತಿಯೊಂದಿಗೆ ಸೇರಿ `ಸುಸ್ವರಲಯ'ವಾಗಿದೆ. ಅದೇ ಹತ್ತು ಹಲವು ಸಂಗೀತ ಚಟುವಟಿಕೆಗಳಿಂದ ಸದಾ ಕ್ರಿಯಾಶೀಲವಾಗಿರುವ ವಿಭಿನ್ನ ಸಂಗೀತ ಶಾಲೆ ಸುಸ್ವರಲಯ ಸಂಗೀತ ಕಲಾ ಶಾಲೆ. ಜಯನಗರದ ನಾಲ್ಕನೇ ಬ್ಲಾಕ್‌ನಲ್ಲಿರುವ ಈ ಶಾಲೆ ಮಕ್ಕಳಿಗೆ ಸಂಗೀತದ ಎಲ್ಲ ಆಯಾಮಗಳನ್ನೂ ಹಂತ ಹಂತವಾಗಿ ಕಲಿಸಿ ಮಕ್ಕಳಲ್ಲಿ ಸಂಗೀತದ ಸದಭಿರುಚಿ ಮೂಡಿಸುವಲ್ಲಿ ಯಶಸ್ವಿ ಹೆಜ್ಜೆ ಇಡುತ್ತಿದೆ.`ಸಂಗೀತ ಸಮುದ್ರ ಇದ್ದ ಹಾಗೆ. ಅದನ್ನು ಕಲಿಯುವುದರ ಜತೆಗೆ ಅದರ ವಿವಿಧ ಆಯಾಮಗಳನ್ನೂ ತಿಳಿದುಕೊಂಡರೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆ ಸಾಧ್ಯ. ಗಾಯನ- ವಾದನ ಕಲಿಸುವುದರ ಜತೆ ಜತೆಗೆ ಸಂಗೀತ ಕುರಿತ ಕಾರ್ಯಾಗಾರ, ಗೋಷ್ಠಿ ಗಾಯನ, ವಿಚಾರ ಸಂಕಿರಣ ಪ್ರಾತ್ಯಕ್ಷಿಕೆ, ತ್ಯಾಗರಾಜರ, ಪುರಂದರ ದಾಸರ ಆರಾಧನೋತ್ಸವ ಮೊದಲಾದ ಚಟುವಟಿಕೆಗಳು ಸಂಗೀತ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿಸುತ್ತವೆ' ಎನ್ನುತ್ತಾರೆ ಈ ಸಂಗೀತ ಶಾಲೆಯ ಮುಖ್ಯಸ್ಥ, ಖ್ಯಾತ ಮೃದಂಗ ವಾದಕ ವಿದ್ವಾನ್ ಎಚ್.ಎಸ್. ಸುಧೀಂದ್ರ. ದಾಸರ ಕೃತಿಗಳಿಗೆ ಒತ್ತು

ಸುಧೀಂದ್ರ ಅವರದು ಸಂಗೀತದ ಮನೆತನ. ತಾಯಿ- ತಂದೆ ಎಸ್. ಇಂದಿರಾ ಮತ್ತು ಎಚ್. ಶ್ರೀನಿವಾಸ ರಾವ್ ಇಬ್ಬರೂ ಉತ್ತಮ ಕಲಾವಿದರು. ಹತ್ತನೇ ವಯಸ್ಸಿನಲ್ಲೇ ಗಾಯನ ಕಲಿತು ನಂತರ ಮೃದಂಗದ ಕಡೆಗೆ ಮನಸ್ಸು ವಾಲಿತು. ಅದಾಗಿ ವಿದ್ವಾನ್ ನಾಗೇಂದ್ರ ಅವರ ಬಳಿ ಸಂಗೀತ ಕಲಿತರು. ವಿದ್ವಾನ್ ಎಂ. ವಾಸುದೇವ ರಾವ್ ಅವರಲ್ಲಿ ಮತ್ತು ಶ್ರೀಮುಷ್ಣ ವಿ. ರಾಜಾರಾವ್ ಅವರಿಂದ ಮೃದಂಗ ಅಭ್ಯಾಸ ಮಾಡಿದರು. ಮುಂದೆ ಮೃದಂಗವನ್ನೇ ವೃತ್ತಿಯಾಗಿಸುವ ನಿರ್ಧಾರ ಮಾಡಿದರು. 1978ರಿಂದ ಮೃದಂಗ, ಗಾಯನ ಎರಡರಲ್ಲೂ ಸಾಧನೆ ಮಾಡಿಕೊಂಡು ಬಂದ ಸುಧೀಂದ್ರ ಅವರದು ಕಳೆದ 25 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಅನುಪಮ ಸೇವೆ.1987ರಲ್ಲಿ ಸಂಗೀತ ಪಾಠ ಹೇಳಿಕೊಡಲು ಆರಂಭಿಸಿದ ವಿದ್ವಾನ್ ಸುಧೀಂದ್ರ ಅವರು ವಿಜಯಾ ಕಾಲೇಜ್ ಆಫ್ ಮ್ಯೂಸಿಕ್‌ನಲ್ಲಿ ಅನೇಕ ವರ್ಷ ಸಂಗೀತ ಪಾಠ ಮಾಡಿದ್ದಾರೆ. ಆ ಬಳಿಕ ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿ ಸುಸ್ವರಲಯ ಸಂಗೀತ ಕಲಾ ಶಾಲೆ ಆರಂಭಿಸಿ ಮೃದಂಗ, ಗಾಯನ ಪಾಠ ಶುರು ಮಾಡಿದರು. ಇದೀಗ ಸುಮಾರು ಐವತ್ತು ಮಕ್ಕಳು ಸುಧೀಂದ್ರ ಅವರ ಬಳಿ ಕಲಿಯುತ್ತಿದ್ದಾರೆ.`ಸುಸ್ವರ ಕಾಲೇಜ್ ಆಫ್ ಚಾರಿಟೆಬಲ್ ಮ್ಯೂಸಿಕ್ ಟ್ರಸ್ಟ್' ಸ್ಥಾಪಿಸಿದ ಅವರು ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಅಪರೂಪದ ಕೃತಿ ಬಿಡುಗಡೆ, ಸಂಗೀತ ಕಲಾವಿದರ ಮಾಹಿತಿ ಕೋಶ, ಗಾಯನದ ವಿವರ ಸಹಿತ ಸೀಡಿ ಬಿಡುಗಡೆ ಅಲ್ಲದೆ ಸಂಗೀತ ವಿದ್ಯಾರ್ಥಿಗಳಿಗೆ ಆಗಾಗ ವೇದಿಕೆ ಒದಗಿಸುತ್ತಾ ಒಂದು ಪರಿಪೂರ್ಣ ಸಂಗೀತ ಸಂಸ್ಥೆಯಾಗಿ ಇದು ರೂಪುಗೊಂಡಿದೆ. ಹರಿದಾಸ ಸಾಹಿತ್ಯದ ಒಂದು ವಿಶಿಷ್ಟ ಪುಸ್ತಕ ಹೊರತಂದಿದೆ. ಇಲ್ಲಿ ಹರಿದಾಸರ ಕೃತಿಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ.

ಇದರಿಂದ ಮಕ್ಕಳಿಗೆ ದಾಸ ಸಾಹಿತ್ಯ, ಉಗಾಭೋಗ, ಸುಳಾದಿ, ಮುಂಡಿಗೆಗಳು, ನವರತ್ನ ಕೃತಿಗಳನ್ನೂ ಕಲಿಯುವ ಉತ್ತಮ ಅವಕಾಶ ಸಿಗುತ್ತದೆ. ಇವೆಲ್ಲವೂ ಸೀಡಿ, ಪುಸ್ತಕ ರೂಪದಲ್ಲಿ ಹೊರಬಂದಿದ್ದು, ಸಂಗ್ರಹಯೋಗ್ಯವಾಗಿವೆ. ತತ್ವಾಮೃತಂ, ಸುಳಾದಿ ಇವೆರಡೂ ಕೂಡ ಆಡಿಯೊ ಸೀಡಿಯಲ್ಲಿ ತರಲಾಗಿದೆ. `ಕಲಾಶ್ರಿತ ಕಲ್ಪಕ' ಎಂಬ ವಿಶಿಷ್ಟ ಯೋಜನೆಯೊಂದನ್ನು ರೂಪಿಸಿದ್ದು, ಟ್ರಸ್ಟ್ ಮೂಲಕ ಸಂಗೀತ ಕಲಾವಿದರಿಗೆ ವೈದ್ಯಕೀಯ ಸಹಾಯ ಮಾಡುವ ಯೋಜನೆಯೂ ಇದರಲ್ಲಿದೆ.ಈ ಸಂಸ್ಥೆ ಸಂಗೀತದ ಹೆಚ್ಚಿನ ಜ್ಞಾನಕ್ಕಾಗಿ ಆಗಾಗ ಶೈಕ್ಷಣಿಕ ಕಾರ್ಯಕ್ರಮವನ್ನೂ ಹಾಕಿಕೊಳ್ಳುತ್ತಿದೆ. ಮಕ್ಕಳಿಗೆ ಗುಣಮಟ್ಟದ ಸಂಗೀತ ಶಿಕ್ಷಣ ಇಲ್ಲಿ ಸಿಗುತ್ತದೆ. ಹೀಗಾಗಿ ಸಂಗೀತದ ತಾಂತ್ರಿಕ ಅಂಶಗಳಾದ ರಾಗ ಆಲಾಪ, ನೆರವಲ್, ಸ್ವರ ಪ್ರಸ್ತಾರ ಇವುಗಳನ್ನು ಮಕ್ಕಳು ನಿಖರವಾಗಿ ಕಲಿತು ಕಛೇರಿಗಳಲ್ಲಿ ಹಾಡಲು ಅವಕಾಶವಾಗುತ್ತದೆ.ಸಾಹಿತ್ಯ ಮತ್ತು ಲಯಜ್ಞಾನ ತಿಳಿಯಲೂ ಇಲ್ಲಿ ಸೂಕ್ತ ವೇದಿಕೆ ಇದೆ. ಸೀಡಿ ಬಿಡುಗಡೆ, ಸೆಮಿನಾರ್, ಪ್ರಾತ್ಯಕ್ಷಿಕೆ, ಚರ್ಚೆ ಮುಂತಾದ ಸಂಗೀತಕ್ಕೆ ಸಂಬಂಧಿಸಿದ ಶೈಕ್ಷಣಿಕ ಕಾರ್ಯಾಗಾರಗಳನ್ನೂ ಸಂಸ್ಥೆ ನಡೆಸುತ್ತಾ ಬಂದಿದೆ. ಸಂಗೀತ ಪುಸ್ತಕ, ಸೀಡಿಗಳನ್ನು ಒಳಗೊಂಡ ಉತ್ತಮ ಗ್ರಂಥಾಲಯವೂ ಈ ಶಾಲೆಯಲ್ಲಿದೆ.ಗಾಯನ, ಮೃದಂಗ, ಘಟಂ, ವೀಣೆ, ಪಿಟೀಲು ಮತ್ತು ಕೊಳಲು ಪಾಠಗಳು ಇಲ್ಲಿ ನಡೆಯುತ್ತವೆ. ಗಾಯಕರು ಪಕ್ಕವಾದ್ಯದ ಜತೆಗೆ ಹೇಗೆ ಹೊಂದಾಣಿಕೆ ಮಾಡಿಕೊಂಡು ಹಾಡಬೇಕು ಎಂಬ ಪ್ರಾಯೋಗಿಕ ತರಬೇತಿ ಇಲ್ಲಿ ತುಂಬ ಚೆನ್ನಾಗಿ ಸಿಗುತ್ತದೆ. ಹೀಗಾಗಿ ಇಲ್ಲಿನ ಮಕ್ಕಳಿಗೆ ಕೀರ್ತನೆ, ವರ್ಣ, ದೇವರನಾಮದ ಜತೆಗೆ ಕಷ್ಟವಾದ ರಾಗಗಳು, ರಾಗಂ ತಾನಂ ಪಲ್ಲವಿ ಮುಂತಾದ ಪ್ರಕಾರಗಳೂ ಸಲೀಸಾಗಿರುತ್ತದೆ. ಈ ಸಂಗೀತ ಶಾಲೆಯ ಮತ್ತೊಂದು ವೈಶಿಷ್ಟ್ಯವೆಂದರೆ ಇಲ್ಲಿ ಮಕ್ಕಳ ಜತೆಗೆ ಅವರ ಪೋಷಕರೂ ಕುಳಿತು ಗಾಯನ, ವಾದನ ಕಲಿಯುತ್ತಾರೆ.`ಇಲ್ಲಿನ ಮಕ್ಕಳ ಸಂಗೀತ ಜ್ಞಾನ ವೃದ್ಧಿಗಾಗಿ ಹಿರಿಯ ಸಂಗೀತ ವಿದ್ವಾಂಸರಿಂದ ಪ್ರಾತ್ಯಕ್ಷಿಕೆ, ಉಪನ್ಯಾಸ, ಏರ್ಪಡಿಸಲಾಗುತ್ತದೆ. `ಯುವ ಚೇತನ' ಹೆಸರಿನಲ್ಲಿ ಮೂರು ದಿನಗಳ ಸಂಗೀತ ಸಮ್ಮೇಳನ (ಇಸ್ಕಾನ್ ಸಹಯೋಗದಲ್ಲಿ) ನಡೆಸಲಾಗುತ್ತದೆ. ರಾಗಂ ತಾನಂ ಪಲ್ಲವಿ ಮತ್ತು ಹರಿದಾಸ ಕೃತಿಗಳ ಕುರಿತು ವಿಶೇಷ ಕಾರ್ಯಕ್ರಮ, ಪುರಂದರ ದಾಸ, ತ್ಯಾಗರಾಜ, ಮತ್ತುಸ್ವಾಮಿ ದೀಕ್ಷಿತರು ಮತ್ತು ಶ್ಯಾಮಾ ಶಾಸ್ತ್ರಿಗಳ ದಿನಾಚರಣೆಗಳನ್ನು ಪ್ರತಿವರ್ಷ ಆಚರಿಸಲಾಗುತ್ತದೆ.

ಅಂದು ಗೋಷ್ಠಿ ಗಾಯನವಿದ್ದು ಈ ಎಲ್ಲ ವಾಗ್ಗೇಯಕಾರರ ಕೃತಿಗಳನ್ನು ಮಕ್ಕಳು ಹಾಡುತ್ತಾರೆ. ಇದರಿಂದ ಮಕ್ಕಳಲ್ಲಿ ಹಾಡುಗಾರಿಕೆ ಎಂಬ ಪರಿಕಲ್ಪನೆ ಎಳೆಯ ವಯಸ್ಸಿನಲ್ಲೇ ಅಭ್ಯಾಸವಾಗಿ ಮುಂದೆ ಉತ್ತಮ ಕಲಾವಿದರಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ' ಎನ್ನುತ್ತಾರೆ ಸಂಸ್ಥೆಯ ರೂವಾರಿ ವಿದ್ವಾನ್ ಎಚ್.ಎಸ್. ಸುಧೀಂದ್ರ.ಸಂಸ್ಥೆ ವತಿಯಿಂದ ವಾರ್ಷಿಕ ಸಂಗೀತ ಸಮ್ಮೇಳನ ನಡೆಯುತ್ತದೆ. ಇಲ್ಲಿ ಜೀವಮಾನದ ಸಾಧನೆಗಾಗಿ ಹಿರಿಯ ಸಂಗೀತ ಕಲಾವಿದರಿಗೆ `ಸುಸ್ವರಲಯ ಶೃಂಗ' ಬಿರುದು ನೀಡಿ ಸನ್ಮಾನಿಸಲಾಗುತ್ತದೆ.ವಿಳಾಸ: ಸುಸ್ವರಲಯ ಸಂಗೀತ ಕಲಾಪ್ರೌಢ ಶಾಲೆ, ನಂ. 12, 28ನೇ ಕ್ರಾಸ್, ಗೀತಾ ಕಾಲೊನಿ, ನಾಲ್ಕನೇ ಬ್ಲಾಕ್, ಜಯನಗರ, ಬೆಂಗಳೂರು 560011. ಫೋನ್: 080-26633623, 26545655; 94480 59595.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry