ಮಂಗಳವಾರ, ನವೆಂಬರ್ 12, 2019
28 °C

ನಾದಲೋಕದ `ಪಥಿಕರು'

Published:
Updated:

`ಸಂಗೀತ ಲೋಕದ ಪಯಣವೆನ್ನುವುದು ಬಹುದೂರದ ಹಾದಿ. ನಾವಿನ್ನೂ ಸಾಗಬೇಕಾದ್ದು ಸಾಕಷ್ಟಿದೆ. ನಮ್ಮ ಮುಂದೆ ಅಸಂಖ್ಯಾತ ಸಂಗೀತ ಸಾಧಕರು ಸಾಗುತ್ತಿದ್ದರೆ, ನಮ್ಮ ಹಿಂದೆಯೂ ಒಂದಷ್ಟು ಮಂದಿ ನಡೆದುಬರುತ್ತಿದ್ದಾರೆ. ಎಲ್ಲರ ಗುರಿಯೂ ಒಂದೇ... ಸಾಧನೆ. ಹೀಗಾಗಿ ನಾದದ ಬೆನ್ನೇರಿದ ಪಾದಚಾರಿಗಳು ನಾವು' ಎಂದು ನಕ್ಕರು ಶೋಂಪ್ರಕಾಶ್.`ಪೆಡೆಸ್ಟ್ರಿಯನ್ಸ್' ಎಂಬ ಸಂಗೀತ ತಂಡದ ಸದಸ್ಯರಾಗಿರುವ ಶೋಂಪ್ರಕಾಶ್, `ನಿಮ್ಮ ಬ್ಯಾಂಡ್‌ನ ಹೆಸರು ವಿಚಿತ್ರವಾಗಿದೆಯಲ್ಲ' ಎಂದಾಗ ಅದನ್ನು ವಿಶ್ಲೇಷಿಸಿದ ರೀತಿಯಿದು.ಏಳು ಮಂದಿಯ ಬ್ಯಾಂಡ್ ಇದು. ಒಬ್ಬೊಬ್ಬ ಸದಸ್ಯರದೂ ಒಂದೊಂದು ಕ್ಷೇತ್ರ. `ಕ್ರೋಮೋಸೋಮ್ ಉದ್ಯೋಗಿಯಾದ ಕೋಲ್ಕತ್ತಾದ ಅಮಿತ್ ದಾಸ್ ರಿದಂ ಗಿಟಾರಿಸ್ಟ್ ಹಾಗೂ ತಂಡದ ನಾಯಕ. ಛತ್ತೀಸ್‌ಗಡ ಬಿಲಾಯ್‌ನ ಶೋಂಪ್ರಕಾಶ್ ಸಿನ್ಹಾ ರಾಯ್ ಬ್ಯಾಂಡ್‌ನಲ್ಲಿ ಪ್ರಮುಖ ಗಾಯಕ, ನಗರದ `ಡೆಲ್' ಕಂಪೆನಿಯಲ್ಲಿ ಸೀನಿಯರ್ ಟೆಕ್ನಿಕಲ್ ಕನ್ಸಲ್ಟೆಂಟ್. ಇವರು ಬರಹಗಾರರೂ ಹೌದು. ಕೋಲ್ಕತ್ತಾದ ಪಾರ್ಥಿವ್ ಲಕ್ಷ್ಮಣ್ (ಡ್ರಮರ್), ಬೆಂಗಳೂರಿನವರಾದ ಸುನೀಲ್ ಕೋಡೂರು (ಬಾಸ್ ಗಿಟಾರ್) ಮತ್ತು ರೂಪಾ ಕುದ್ವಾಲಿ (ಗಾಯಕಿ) ವಿದ್ಯಾರ್ಥಿಗಳು. ಸೃಜನ್ ಮುಖರ್ಜಿ (ಲೀಡ್ ಗಿಟಾರಿಸ್ಟ್), ಆ್ಯಡ್ರಿಯಾನೆ (ಸ್ಯಾಕ್ಸೋಫೋನ್), ಫ್ರೆಡ್ರಿಕ್ ನಿಶೆಲ್ ಕುಮಾರ್ (ಕೀಬೋರ್ಡ್) ಇವರಿಗೆ ಸಂಗೀತವೇ ಉಸಿರು. ಅದರಲ್ಲೇ ಹೆಸರು ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಅವರದು.ಈ ಪೈಕಿ ರಷ್ಯಾ ಮೂಲದ, ಡಾಕ್ಟರೇಟ್ ಸ್ಕಾಲರ್ ಆಗಿರುವ ಆ್ಯಡ್ರಿಯಾನೆ ಕಳೆದೊಂದು ವರ್ಷದಿಂದ ಬೆಂಗಳೂರಿನಲ್ಲಿ ಸಂಶೋಧನಾ ಕೆಲಸ ಮಾಡುತ್ತಲೇ ಬ್ಯಾಂಡ್ ಮೋಡಿಗೊಳಗಾದವರು. ಸುನಿಲ್, ರೂಪಾ ಮತ್ತು ಪಾರ್ಥಿವ್ ಅವರಿನ್ನೂ ವಿದ್ಯಾರ್ಥಿಗಳು. ಶೋಂಪ್ರಕಾಶ್ ಹೇಳುವಂತೆ, ಪ್ರತಿಯೊಬ್ಬರಿಗೂ `ನಾದಮಯ... ಲೋಕವೆಲ್ಲ...' ಎಂಬಂತೆ ಸಪ್ತಸ್ವರದ ಸಾಂಗತ್ಯವೆಂದರೆ ತಪಸ್ಸು, ತನ್ಮಯತೆ, ತಾದಾತ್ಮ್ಯ.ಹಾಗಿದ್ದರೆ ನಿಮ್ಮ ಪಯಣ ಆರಂಭವಾಗಿದ್ದು ಹೇಗೆ, ಸಾಗಿದ ಹಾದಿಯ ಹಿನ್ನೋಟದ ಬಗ್ಗೆ ಹೇಳಿ ಎಂದು ಈ `ಪಾದಚಾರಿ'ಗಳನ್ನು ಕೇಳಿದರೆ ಉತ್ತರಿಸಿದ್ದು ಹೀಗೆ...ಗೆಲುವಿನ ಸೋಪಾನವೇರಿ...

`ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 2009 ಅಕ್ಟೋಬರ್ 30ರಂದು ಏರ್ಪಡಿಸಿದ್ದ ಅಂತರಕಾಲೇಜು ಮಟ್ಟದ ಸಂಗೀತ ಉತ್ಸವ `ಕಲಾಂಜಲಿ'ಯಲ್ಲಿ ಮೊದಲ ಬಾರಿಗೆ ನಾವೆಲ್ಲರೂ ಒಟ್ಟಾಗಿ ಕಾರ್ಯಕ್ರಮ ನೀಡಿದೆವು. ವಿದ್ಯಾರ್ಥಿಗಳಾಗಿದ್ದರಿಂದ ಆಗ ಅಷ್ಟೊಂದು ಗಂಭೀರವಾಗಿರಲಿಲ್ಲ ನಾವು. ಆದರೆ ಸಂಗೀತದೆಡೆಗಿನ ತುಡಿತ ಜೋರಾಗೇ ಇತ್ತು. ಮೊದಲ ಪ್ರಯತ್ನದಲ್ಲೇ ನಾವು ಗೆದ್ದೆವು. ಹೀಗೆ ನಮ್ಮ ಬ್ಯಾಂಡ್ ಅಮೂರ್ತ ವೇದಿಕೆಯಲ್ಲಿ ಹುಟ್ಟಿಕೊಂಡಿತು' ಎಂದು ಒಮ್ಮೆ ನಿಟ್ಟುಸಿರು ಬಿಡುತ್ತಾರೆ ಶೋಂಪ್ರಕಾಶ್.`ಆ ಗೆಲುವು ನಮ್ಮಲ್ಲಿ ಹೊಸ ಹುರುಪನ್ನು ತುಂಬಿತು. ಮಾತ್ರವಲ್ಲ, ಪ್ರತಿ ಬಾರಿಯೂ ವೇದಿಕೆಯಲ್ಲಿ ನಮ್ಮ ಸಂಗೀತ ಅಬ್ಬರಿಸುವಾಗ, ನಮ್ಮ ಗಾಯನ ವಾದನವನ್ನು ನಾವೇ ಧ್ಯಾನಸ್ಥ ಸ್ಥಿತಿಯಲ್ಲಿ ಆಸ್ವಾದಿಸುವಾಗ, ಏರುಧ್ವನಿಯ ಬೆನ್ನಲ್ಲೇ ಮಂದ್ರಸ್ಥಾಯಿಯಲ್ಲಿ ಗುನುಗುವಾಗ ಶ್ರೋತೃಗಳೂ ನಮ್ಮನ್ನು ಅನುಸರಿಸುತ್ತಾರೆ. ಸಂಗೀತ ಚಪ್ಪರಿಸುತ್ತಾರೆ. ಅವರ ಈ ಪ್ರೋತ್ಸಾಹ ಮತ್ತಷ್ಟು ಉತ್ತಮ ರೀತಿಯ ಪ್ರಸ್ತುತಿಗೆ ಪ್ರೇರಣೆ ನೀಡುತ್ತದೆ. ಹಾಗಾಗಿ ಪ್ರತಿ ವೇದಿಕೆಯನ್ನೂ ಹೊಸ ಅವಕಾಶ ಎಂದು ಪರಿಗಣಿಸುತ್ತೇವೆ' ಎಂದು ಅವರು ವಿವರಿಸುತ್ತಾರೆ.ಬ್ಯಾಂಡ್ ಆರಂಭಿಸುವ ಉತ್ಸಾಹ ಎಲ್ಲರಲ್ಲೂ ಇದ್ದರೂ ಸಾಹಸಕ್ಕೆ ಮೊದಲ ಹೆಜ್ಜೆಯಿಟ್ಟವರು ಅಮಿತ್‌ದಾಸ್.`ಬ್ಯಾಂಡ್ `ಪೆಡೆಸ್ಟ್ರಿಯನ್ಸ್' ಹೆಸರಿನಂತೆ ನಮ್ಮ ಕೆಲವು ನಿಲುವುಗಳಿಂದಲೂ ನಾವು ಬೇರೆ ಬ್ಯಾಂಡ್‌ಗಿಂತ ಭಿನ್ನವಾಗುತ್ತೇವೆ. ನಾವು ಬೇರೆಯವರಿಗಾಗಿ ಸಂಗೀತವನ್ನು ಸೃಷ್ಟಿಸುವುದಿಲ್ಲ. ನಮಗಾಗಿ, ನಮ್ಮ ಪ್ರತಿ ಅನುಭವದ ದಾಖಲಾತಿ ಎಂಬಂತೆ ಸಂಗೀತ/ರಾಗ/ಸಾಹಿತ್ಯವನ್ನು ಸೃಷ್ಟಿಸುತ್ತೇವೆ. ಸಂಗೀತಕ್ಕೆ ಸಮಸ್ಯೆಗಳನ್ನು ಉಪಶಮನ ಮಾಡುವ ಶಕ್ತಿಯಿದೆ. ಕಠಿಣ ಸಂದರ್ಭದಲ್ಲಿ, ಪ್ರೀತಿ ಒಡೆದ/ಮೂಡಿದ ಹೊತ್ತಿನಲ್ಲಿ, ದ್ವೇಷಕ್ಕೆ ತುತ್ತಾದ ಕ್ಷಣದಲ್ಲಿ ಸಂಗೀತದಷ್ಟು ಪರಿಣಾಮಕಾರಿಯಾಗಿ ಇನ್ಯಾವುದೂ ನಮಗೆ ಆಪ್ತವೆನಿಸುವುದಿಲ್ಲ. ನಮ್ಮ ಬ್ಯಾಂಡ್ ಕಿವಿಗಳನ್ನು ತಲುಪುವುದಕ್ಕಿಂತ ಮುಖ್ಯವಾಗಿ ಹೃದಯಗಳನ್ನು ಮುಟ್ಟುತ್ತದೆ. ಅದು ನಮ್ಮ ವೈಶಿಷ್ಟ್ಯ' ಎಂಬುದು ಅಮಿತ್ ನೀಡುವ ವಿವರಣೆ.ಇವರು ಯಾವುದಾದರೂ ಆಲ್ಬಮ್ ಮಾಡಿದ್ದಾರಾ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ ಅಲ್ವೇ? `ಆಲ್ಬಮ್‌ಗೆ ಬೇಕಾದ ಹಾಡುಗಳು ನಮ್ಮಲ್ಲಿವೆ. ಆದರೆ ಒಳ್ಳೆಯ `ಲೇಬಲ್' ಮೂಲಕ ಆಲ್ಬಮ್ ಸಿದ್ಧಪಡಿಸಬೇಕು ಎಂಬುದು ನಮ್ಮಾಸೆ. ಆ ದಿನಕ್ಕಾಗಿ ಕಾಯುತ್ತಿದ್ದೇವೆ' ಎನ್ನುತ್ತದೆ ತಂಡ.ಹೇಳಿಕೇಳಿ ನಾದದ ಪಥದಲ್ಲಿ ಸಾಗಿರುವ ಹುಡುಗರು ಇವರು. ಸಂಗೀತವನ್ನು ವಿಶ್ಲೇಷಿಸುವ ರೀತಿ ನೋಡಿ...

`ನನಗೆ ಸಂಗೀತವೆಂದರೆ ನನ್ನ ಬದುಕಿನ ಇನ್ನೊಂದು ಹೆಸರು' ಎಂದು ಅಮಿತ್ ಹೇಳಿದರೆ, `ಈ ಅದ್ಭುತವಾದ ಜಗತ್ತಿನಲ್ಲಿ ಅನುಭವಿಸುವ, ಕಾಣುವ ಚರಾಚರವೆಲ್ಲವೂ ಸಂಗೀತವೇ' ಎಂಬುದು ಶೋಂಪ್ರಕಾಶ್ ಟಿಪ್ಪಣಿ. ಇತರ ಸದಸ್ಯರ ಪ್ರಕಾರ, `ಸಂಗೀತವೆಂದರೆ ನಾದಲೋಕದ ಪಾದಚಾರಿಗಳ ಮುಖಾಮುಖಿ'!ಜನಪದ ಬ್ಯಾಂಡ್!

ಬ್ಯಾಂಡ್ ಎಂದರೆ ಸಾಮಾನ್ಯವಾಗಿ ರಾಕ್, ಜಾಸ್‌ನ ಅಬ್ಬರವಿರುತ್ತದೆ. ಆದರೆ ಈ ಹುಡುಗರು ರಾಜಸ್ತಾನದ ಜನಪದ, ಬುಡಕಟ್ಟು ಹಾಡು/ಸಾಹಿತ್ಯವನ್ನು ಸಮಕಾಲೀನ ಸಂಗೀತಕ್ಕೆ ಒಗ್ಗಿಸಿ ಒಲಿಸಿಕೊಂಡಿದ್ದಾರೆ. ಅದು ಇಂಡಿ ರಾಕ್. ಜತೆಗೆ ಅಮಿತ್ ತ್ರಿವೇದಿ ಅವರ ಪದ್ಯ `ಚೌಧರಿ' ಇಡೀ ತಂಡದ ಅಚ್ಚುಮೆಚ್ಚಿನ ಆಯ್ಕೆಯಂತೆ.ತಾಳವಾದ್ಯ (ಪರ್ಕಷನ್) ಪ್ರವೀಣನಾದ ಪಾರ್ಥಿವ್ ಲಕ್ಷ್ಮಣ್ ಅವರಿಗೆ ತಾಳವಾದ್ಯಗಳನ್ನು ಬಗೆಬಗೆಯಾಗಿ ಬಾರಿಸುವುದನ್ನು ಕಲಿಯುವುದೆಂದರೆ ಇಷ್ಟವಂತೆ. ಹೀಗೆ ತರಬೇತಿ ಪಡೆದ ಕಾರಣ ಭಾರೀ ಮೆಟಲ್ ಬ್ಯಾಂಡ್‌ಗಳನ್ನು ಸಲೀಸಾಗಿ ನುಡಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಅವರು. ಹತ್ತೂರಿನಿಂದ ಬಂದವರಿಗೆ ವೃತ್ತಿ ಮತ್ತು ಪ್ರವೃತ್ತಿಗೆ ವೇದಿಕೆ ಕೊಟ್ಟ ಬೆಂಗಳೂರಿನ ಬಗ್ಗೆ ಏನನ್ನಿಸುತ್ತದೆ ಎಂದು ಕೇಳಿದರೆ ಶೋಂಪ್ರಕಾಶ್ ಮತ್ತು ಅಮಿತ್- ಬೆಂಗಳೂರು ನಮ್ಮ ಮನೆ- ಎಂದು ಅಭಿಮಾನದಿಂದ ನಗುತ್ತಾರೆ.ಆದರೆ ಶೋಂಪ್ರಕಾಶ್, `ಯಾವುದೇ ಹೊಸತನಗಳಿಗೆ, ಹೊಸ ಪ್ರಯತ್ನಗಳಿಗೆ ಹೇಳಿಮಾಡಿಸಿದಂತಹ ನಗರ ಈ ಬೆಂಗಳೂರು. ನಾವು ಹಿಂದೆಂದೂ ಯಾರೂ ಮಾಡದಂತಹ ಪ್ರಯೋಗಗಳನ್ನು ನಮ್ಮ ಬ್ಯಾಂಡ್‌ನಲ್ಲಿ ಇಲ್ಲಿ ಮಾಡಿದ್ದೇವೆ. ಅದನ್ನು ಇಲ್ಲಿನ ಸಂಗೀತಪ್ರೇಮಿಗಳು ಸ್ವೀಕರಿಸಿದ ರೀತಿ ಅನನ್ಯ. ನಮ್ಮಂತಹ ಉದಯೋನ್ಮುಖ ಬ್ಯಾಂಡ್‌ಗೆ `ಭಾರತದ ರಾಕ್ ಸಂಗೀತದ ರಾಜಧಾನಿ'ಯಾದ ಬೆಂಗಳೂರಿನಲ್ಲಿ ಶಾಸ್ತ್ರೀಯವಾದ ರಾಕ್ ಸಂಗೀತವನ್ನು ಉಣಬಡಿಸುವ ಪ್ರಯತ್ನ ಮಾಡುತ್ತಿದ್ದೇವೆ' ಎಂದು ಮಹತ್ವಾಕಾಂಕ್ಷೆಯನ್ನು ಮುಂದಿಡುತ್ತಾರೆ.`ಪಾದಚಾರಿ'ಗಳ ಸಂಪರ್ಕಕ್ಕೆ http://facebook.com/walkwithrock

ವೆಬ್‌ಸೈಟ್: http://www.walkwithrock.com

ಶೋಂಪ್ರಕಾಶ್ ರಾಯ್- 84530 49100.

 

ಪ್ರತಿಕ್ರಿಯಿಸಿ (+)