ಶುಕ್ರವಾರ, ನವೆಂಬರ್ 15, 2019
21 °C

ನಾದಲೋಕದ ಭರವಸೆಯ ಪ್ರತಿಭೆಗಳು

Published:
Updated:

ಶಾಸ್ತ್ರೀಯ ಸಂಗೀತದ ನಾಳೆಗಳು ಹೇಗಿರಬಹುದು ಎಂಬ ಪ್ರಶ್ನೆಗೆ ಉತ್ತರ ಕೊಡುವಂತೆ ಯುವ ಸಂಗೀತೋತ್ಸವ ಅರ್ಥಪೂರ್ಣವಾಗಿ ನಡೆಯಿತು.ಹಿರಿಯ ಸಂಸ್ಥೆ ಬೆಂಗಳೂರು ಗಾಯನ ಸಮಾಜ ಯುವ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಒಂದು ವಿಶೇಷ ವೇದಿಕೆ ನಿರ್ಮಿಸಿ, ತನ್ನ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.ಎರಡು ವಾದ್ಯ ಸಂಗೀತ, ಎರಡು ಯುಗಳ ಗಾಯನಗಳು ಸೇರಿ, ಎಂಟು ಕಛೇರಿಗಳಲ್ಲಿ 32 ಕಲಾವಿದರು ಪಾಲ್ಗೊಂಡು, ಸಂಗೀತೋತ್ಸವವನ್ನು ಯಶಸ್ವಿಗೊಳಿಸಿದರು. ಬಹು ಮಂದಿ ನಿರೀಕ್ಷೆಗೂ ಮೀರಿದ ಮೇಲ್ಮಟ್ಟದಲ್ಲಿ ಹಾಡಿ, ನುಡಿಸಿ  ಶಾಸ್ತ್ರೀಯ ಸಂಗೀತದ ನಾಳೆಗಳು ಸುಭದ್ರವಾಗಿವೆ ಎಂದು ಶ್ರುತಪಡಿಸಿದರು.ಕೊನೆಯ ದಿನ ಹಾಡಿದ ಆರ್. ರಾಘವೇಂದ್ರ ಸಂಗೀತ ಕುಟುಂಬದಿಂದಲೇ ಬಂದವರು. ಪ್ರಖ್ಯಾತ ಮೃದಂಗ ವಾದಕ ಶ್ರಿಮುಷ್ಣಂ ರಾಜಾರಾವ್ ಹಾಗೂ ಹಿರಿಯ ಕಲಾವಿದೆ ಪದ್ಮಾ ಶಾಂಡಿಲ್ಯನ್ ಅವರ ಮಗ. ಈಚೆಗೆ ಸಂಜಯ್ ಸುಬ್ರಹ್ಮಣ್ಯಂ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಎಂಬಿಎ ಪದವೀಧರರಾಗಿದ್ದು, ಶಿಷ್ಯವೇತನ ಸಹ ಗಳಿಸಿದ್ದಾರೆ. ತಮ್ಮ 7ನೇ ವಯಸ್ಸಿನಿಂದಲೇ ಕಾರ್ಯಕ್ರಮ ನೀಡುತ್ತಿದ್ದು ಅನೇಕ ಬಹುಮಾನಗಳನ್ನೂ ಪಡೆದಿದ್ದಾರೆ.ತಮ್ಮ ಕಛೇರಿಯ ಪ್ರಧಾನ ಅಂಗವಾಗಿ ಸ್ವಾತಿ ತಿರುನಾಳರ ಒಂದು ಕೀರ್ತನೆಯನ್ನು ಆಯ್ದರು. ಘನವಾದ ಕಲ್ಯಾಣಿ ರಾಗವನ್ನು ಚೊಕ್ಕವಾಗಿ ಅರಳಿಸಿ `ಅದ್ರಿಸುತವರ~ ಕೃತಿಯನ್ನು ವಿಸ್ತರಿಸಿದರು. ಮಿತವಾಗಿ ನೆರವಲ್ ಮಾಡಿ, ಚುರುಕಾದ ಸ್ವರ ಪ್ರಸ್ತಾರ ಮಾಡಿ ತನಿ ಬಿಟ್ಟರು.ತಿಲ್ಲಾನ (ಶ್ರಿಮುಷ್ಣಂ ರಾಜಾರಾವ್‌ರ ರಚನೆ)ಗಳಲ್ಲದೇ ರಾಘವೇಂದ್ರ ಸ್ವಾಮಿಗಳ ಮೇಲಿನ ಒಂದು ರಚನೆಯನ್ನೂ ಸೇರಿಸಿದರು.ಆದರೆ ಕನ್ನಡ ದೇವರನಾಮದ (ರಾಗೀ ತಂದೀರಾ) ರಾಗ ವರ್ಣಮಟ್ಟು ಬದಲಾಯಿಸುವ ಅವಶ್ಯಕತೆ ಏನಿತ್ತು ಎಂಬುದು ಅರ್ಥವಾಗಲಿಲ್ಲ. ತುಂಬ ಮಾಧುರ್ಯದ ಕಂಠವಲ್ಲದಿದ್ದರೂ ನಿರೂಪಣೆಯಲ್ಲಿ ಗತ್ತು, ಗಮ್ಮತ್ತಿತ್ತು! ಅಲ್ಲದೆ ಮೊದಲಿನಿಂದ ಕೊನೆಯವರೆಗೂ ದ್ರುತಗತಿಯಲ್ಲಿಯೇ ಸಾಗಬೇಕಿತ್ತೇ ಎನಿಸಿತು. ವಿಳಂಬ ಕಾಲದ ಮಹತ್ವ, ಗಾಢತೆಯನ್ನು ಕಡೆಗಣಿಸಬಾರದು.ಆದರೂ ಸಂಗೀತದಲ್ಲಿ ಲೀನವಾಗಿ, ಅನುಭವಿಸಿ ಹಾಡಿದ್ದು ರಂಜಕವಾಗಿತ್ತು. ಮೊದಲಿನಿಂದಲೂ ಗಾಯನಕ್ಕೆ ಸಂವಾದಿಯಾಗಿ ಪಿಟೀಲು ನುಡಿಸುತ್ತಾ ಬಿ.ಕೆ. ರಘು, ಸಭೆಯ ಪ್ರಶಂಸೆಗೆ ಒಳಗಾದರು. ಮೃದಂಗದಲ್ಲಿ ಎಸ್. ಅಶೋಕ್ ಹಾಗೂ ಘಟದಲ್ಲಿ ಕಾರ್ತಿಕ್ ಮಣಿ ಕಾವು ತುಂಬಿದರು.ತಿದ್ದುಪಡಿ

ಕಳೆದ ಗುರುವಾರದ ನಾದನೃತ್ಯದ ಗಮ್ಮತ್ತಿನ ಗೇಯನಾಟಕದಲ್ಲಿ ಆಯ್ದ ದೇವರನಾಮಗಳನ್ನು ಹಾಡಿದವರು ಧೀರೇಂದ್ರ ಎಂದು ಕಣ್ತಪ್ಪಿನಿಂದ ಪ್ರಕಟವಾಗಿತ್ತು. ಅದನ್ನು ಹಾಡಿದವರು ದಿಲೀಪ್ ಸಿಂಹ. ತಪ್ಪಿಗಾಗಿ ವಿಷಾದ.

ಪ್ರತಿಕ್ರಿಯಿಸಿ (+)