ನಾದಲೋಕದ ರಸನಿಮಿಷಗಳು

7

ನಾದಲೋಕದ ರಸನಿಮಿಷಗಳು

Published:
Updated:

‘ಒಂದಕಾಲಕ್ಕ ಬೆಳಗಾವ್ಯಾಗ ಸಂಗೀತದ ಹೊಗಿ ಹಾಯತಿತ್ತು’ ಪಂ.ರಾಮಭಾವು ವಿಜಾಪುರೆ ಪದೇಪದೇ ಹೇಳುತ್ತಿದ್ದ ಮಾತುಗಳಿವು. ಈ ಮಾತು ಎಷ್ಟೊಂದು ಸತ್ಯ! ಸಂಗೀತ ಲೋಕದ ಘಟಾನುಘಟಿಗಳೇ ಬೆಳಗಾವಿಯಲ್ಲಿ ನೆಲೆ ನಿಂತಿದ್ದ ದಿನಗಳವು. ಪಂ.ರಾಮಕೃಷ್ಣಬುವಾ ವಝೆ, ಉಮಾಮಹೇಶ್ವರ ಬುವಾ, ಉತ್ತೂರಕರ ಬುವಾ, ಕಾಗಲಕರ ಬುವಾ, ಪಂ.ರಾಜವಾಡೆ, ವಿಠ್ಠಲರಾವ ಕೋರಗಾಂವಕರ, ಗಣಪತರಾವ ಗುರವ ಹೀಗೆ ಸಂಗೀತ ವಿದ್ವಾಂಸರ ದಂಡೇ ಆ ಕಾಲದಲ್ಲಿ ಬೆಳಗಾವಿಯಲ್ಲಿ ನೆಲೆಸಿತ್ತು. ಬೆಳಗಾವಿಯ ಸಂಗೀತ ದಿಗ್ಗಜರ ಮುಂದೆ ಹಾಡುವುದು ಆ ಕಾಲದಲ್ಲಿ ಗಾಯಕರಿಗೆ ಪ್ರತಿಷ್ಠೆಯ ವಿಷಯವಾಗಿತ್ತು. ಪಂ.ಭೀಮಸೇನ ಜೋಶಿಯವರನ್ನು ಗಾಯಕರನ್ನಾಗಿ ರೂಪಿಸುವಲ್ಲಿ ಬೆಳಗಾವಿಯ ಪಾತ್ರವೂ ಬಹು ಮುಖ್ಯವಾಗಿದೆ. ಅದೇ ತಾನೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಭೀಮಸೇನ ಜೋಶಿಯವರು ಆಗಾಗ ಬೆಳಗಾವಿಗೆ ಬಂದು ತಮ್ಮ ಗಾಯನವನ್ನು ಪ್ರಸ್ತುತ ಪಡಿಸುತ್ತಿದ್ದರು. ಇಂಥ ದಿನಗಳಲ್ಲಿ ನಡೆದ ಒಂದು ಮೋಜಿನ ಪ್ರಸಂಗವಿದು...ಆಗ ಬೆಳಗಾವಿಯಲ್ಲಿ ಬಳವಂತರಾವ ರುಕಡೀಕರ ಎಂಬ ತಬಲ ವಾದಕರು ಬಹು ಪ್ರಖ್ಯಾತರಾಗಿದ್ದರು. ಪಂ.ಭೀಮಸೇನ ಜೋಶಿಯವರ ಗುರು ಸವಾಯಿಗಂಧರ್ವರ ಗೆಳೆಯರಲ್ಲಿ ಇವರೂ ಒಬ್ಬರು. ರುಕಡೀಕರ ಶೋಕಿದಾರ ಮನುಷ್ಯ. ತಲೆಯ ಮೇಲೆ ರುಮಾಲು, ಉದ್ದನೆಯ ಕೋಟು, ತಿದ್ದಿದ ಮೀಸೆ, ಅಚ್ಚುಕಟ್ಟಾದ ವೇಷ ಭೂಷಣ ಅವರ ಹವ್ಯಾಸವಾಗಿತ್ತು.ಅಂದು ಬೆಳಗಾವಿಯ ಕಾರ್ಯಕ್ರಮದಲ್ಲಿ ಭೀಮಸೇನ ಜೋಶಿಯವರೊಂದಿಗೆ ರುಕಡೀಕರ ಅವರೇ ತಬಲಾ ಸಾಥ್ ಮಾಡುವುದೆಂದು ನಿರ್ಧರಿಸಲಾಗಿತ್ತು. ಹಾಡುವುದಕ್ಕೆ ತಯಾರಾಗುತ್ತಿರುವಂತೆ ರುಕಡೀಕರ, ಭೀಮಸೇನ ಜೋಶಿಯವರಿಗೆ ಹೇಳಿದರು:‘ನಾ ನಿಮ್ಮ ಗುರುಗೋಳ ಗೆಳ್ಯಾ ಇದ್ದೀನಿ. ನನಗೆ ನಮಸ್ಕಾರ ಮಾಡು.’

ಜೋಶಿ ಅವರಿಗೆ ನಮಸ್ಕಾರ ಮಾಡಿ ಹಾಡಲು ಕುಳಿತುಕೊಂಡರು. ಹಾಡುವ ಮುನ್ನ ರುಕಡೀಕರ ಅವರಿಗೆ ವಿನಂತಿಸಿಕೊಂಡರು- ‘ಸ್ವಲ್ಪ ಸಂಭಾಳಸರಿ.’ಈ ಮಾತು ಕೇಳಿ ರುಕಡೀಕರ ಮತ್ತಷ್ಟು ಗತ್ತಿನಿಂದ ಕುಳಿತುಕೊಂಡರು.ಸರಿ, ಹಾಡು ಪ್ರಾರಂಭವಾಯಿತು. ರಾತ್ರಿ ಹತ್ತು ಗಂಟೆ.  ಶುದ್ಧ ಕಲ್ಯಾಣ ರಾಗ. ಭೀಮಸೇನ ಜೋಶಿ ಅಪ್ರತಿಮವಾಗಿ ಹಾಡಿದರು. ರುಕಡೀಕರ ತಮ್ಮ ತಲೆಯಮೇಲಿನ ರುಮಾಲನ್ನು ತೆರೆದಿಟ್ಟರು. ಹಾಡು ಮತ್ತೆ ಮುಂದುವರಿಯಿತು.ಎರಡನೆಯ ಚೀಜ್ ಮುಗಿದ ಮೇಲೆ ಕೋಟನ್ನು ತೆರೆದಿಟ್ಟರು. ನಂತರ ‘ರಾಮ’. ‘ರಾಮ’ದ ನಂತರ ಮತ್ತೆ ಗಾಯನ. ರುಕಡೀಕರ ಈ ಹಂತದಲ್ಲಿ ತಮ್ಮ ಮೈಮೇಲಿನ ಶರ್ಟನ್ನೂ ತೆರೆದಿಟ್ಟರು.ಅವರು ತಮಗೆ ಹಾಡು ಪಸಂದ ಆದರೆ ಮಾತ್ರ ಮೈಮೇಲಿನ ವಸ್ತ್ರಗಳನ್ನು ಕಳಚುತ್ತ ಗಾಯನವನ್ನು ಆಸ್ವಾದಿಸುತ್ತ ಸಾಥಿ ಮಾಡುತ್ತಿದ್ದರು. ಅವರ ಮೆಚ್ಚುಗೆಯ ಮಾತುಗಳೆಂದರೆ ಬೈಗುಳಗಳೇ- ‘ಶುದ್ಧ ಕಲ್ಯಾಣ ಹರದ ಹಾಕಿ ಬಿಟ್ಟ ಸೂಳೆಮಗಾ’ ಹೀಗೆ!ಅಂದು ಜೋಶಿ ಆರು ಗಂಟೆ ಸೊಗಸಾಗಿ ಹಾಡಿದರು.ಕಾರ್ಯಕ್ರಮ ಮುಗಿಸುವ ಮುನ್ನ ರಂಗಗೀತೆಯನ್ನೋ, ದಾಸರ ಪದವನ್ನೋ, ಅಭಂಗವನ್ನೋ ಹಾಡುವುದು ಪದ್ಧತಿ. ಅದರಂತೆ ಅಂದು ಭೀಮಸೇನ ಜೋಶಿಯವರು ‘ಚಂದ್ರಿಕಾ ಹೀ ಜಣು’ ಮರಾಠಿ ನಾಟ್ಯಗೀತೆಯನ್ನು ಹಾಡಲು ಎತ್ತಿಕೊಂಡರು. ರುಕಡೀಕರರ ಮುಖ ಒಂದಿಷ್ಟು ಸೊಟ್ಟಗಾಯಿತು. ಅದಕ್ಕೆ ಕಾರಣವೂ ಇತ್ತು.ಈ ನಾಟ್ಯಗೀತೆಯನ್ನು ಕಿರಾಣಾ ಘರಾಣೆಯ ಆದ್ಯ ಪ್ರವರ್ತಕ ಉಸ್ತಾದ ಅಬ್ದುಲ್ ಕರೀಂಖಾನರು ಹಾಡುತ್ತಿದ್ದರು. ನಂತರ ಅವರ ಶಿಷ್ಯ ಸವಾಯಿ ಗಂಧರ್ವರೂ ಹಾಡುತ್ತಿದ್ದರು. ಹೀಗಾಗಿ ಅನೇಕ ವರ್ಷಗಳಿಂದ ಈ ಹಾಡು ಜನಪ್ರಿಯವಾಗಿತ್ತು.ಇವರಲ್ಲದೆ ಅನೇಕ ಗಾಯಕರು ಅದನ್ನು ಹಾಡಿ ಆನಂದಿಸಿದ್ದರು. ರುಕಡೀಕರ ತಬಲಾ ವಾದಕರಾದ್ದರಿಂದ ಅವರಿಗೆ ಆ ಹಾಡನ್ನು ಪದೇ ಪದೇ ಕೇಳುವ ಹಾಗೂ ಆ ಹಾಡಿಗೆ ಸಾಥಿ ಮಾಡುವ ಅವಕಾಶಗಳೂ ಒದಗಿದ್ದುವು. ‘ಮಾನಾಪಮಾನ’ ನಾಟಕದ ಈ ಹಾಡನ್ನು ರುಕಡೀಕರ ಅವರು 1911ರಿಂದಾರಂಭಿಸಿ ಕೇಳಿ ಕೇಳಿ ಬೇಸತ್ತಿದ್ದರು. ಯಾರಾದರೂ ಆ ರಂಗಗೀತೆ ಹಾಡಲು ಪ್ರಾರಂಭಿಸಿದರೆ ಅವರೆನ್ನುತ್ತಿದ್ದರು-‘ಚಂದ್ರಿಕಾ ಮುದಕಿ ಆದರೂ ಇನ್ನೂ ಆ ಹಾಡು ಬಿಡವಲ್ಲರು’ಆ ದಿನ ಪಂ.ಭೀಮಸೇನ ಜೋಶಿಯವರೂ ಅದೇ ಹಾಡನ್ನು ಹಾಡಲು ಪ್ರಾರಂಭಿಸಿದ್ದರಿಂದ ರುಕಡೀಕರ ತಮ್ಮ ಮುಖವನ್ನು ಕೊಂಚ ಸೊಟ್ಟಗೆ ಮಾಡಿದ್ದರಲ್ಲಿ ಯಾವ ಅಚ್ಚರಿಯೂ ಇರಲಿಲ್ಲ. ಆದರೆ ಭೀಮಸೇನ ಜೋಶಿಯವರ ಹಾಡು ಮುಂದುವರಿದಂತೆಲ್ಲ ರುಕಡೀಕರರಿಗೆ ಹುರುಪು ಬರತೊಡಗಿತು. ಅತ್ಯಂತ ಆನಂದದಿಂದಲೇ ಅವರು ಪಂ.ಭೀಮಸೇನ ಜೋಶಿಯವರ ಹಾಡಿಗೆ ಸಾಥ್ ಮಾಡಿದರು. ಹಾಡು ಮುಗಿದ ತಕ್ಷಣ ಅವರು ಹೇಳಿದರು-‘ಚಂದ್ರಿಕಾ ಮುದುಕಿ ಆಗ್ಯಾಳಂತ ಮಾಡಿದ್ದೆ. ನೀವು ಆಕಿನ್ನ ಮತ್ತ ಹರೇದಾಕಿನ್ನ ಮಾಡಿದ್ರಿ.’ಪಂ.ಭೀಮಸೇನ ಜೋಶಿಯವರ ಹಾಡು ಅದೆಷ್ಟು ಸೊಗಸಾಗಿತ್ತು ಎಂಬುದಕ್ಕೆ ಇದೊಂದೇ ಮಾತು ಸಾಕಲ್ಲವೆ? ಸಾಧನೆಯ ದಾರಿಯಲ್ಲಿ ಒಬ್ಬ ಕಲಾವಿದ ಎಂತೆಂಥ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಈ ಮೋಜಿನ ಪ್ರಸಂಗ ಒಂದು ಉದಾಹರಣೆ ಮಾತ್ರ.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry