ಬುಧವಾರ, ಮೇ 25, 2022
23 °C

ನಾದ ಮಂಥನ

ಮೈ.ವಿ.ಸು. Updated:

ಅಕ್ಷರ ಗಾತ್ರ : | |

ನಾದ ಮಂಥನ

ವಾಗ್ಗೇಯಕಾರರೊಬ್ಬರ ಸಮಗ್ರ ಕೃತಿಗಳನ್ನು ಗಣ್ಯಸಂಗೀತಜ್ಞರು ವಿಶ್ಲೇಷಿಸುವ, ವಿಶಿಷ್ಟ ಹಾಗೂ ವಿಭಿನ್ನ ಮಾದರಿಯ ವಿಚಾರ ಸಂಕಿರಣ ನಗರದಲ್ಲಿ ಭಾನುವಾರ ನಡೆಯಲಿದೆ.ಮೇರು ವೈಣಿಕ, ದಕ್ಷ ಬೋಧಕ ಹಾಗೂ ತ್ಯಾಗರಾಜರ ನಂತರದ ಪ್ರಮುಖ ವಾಗ್ಗೇಯಕಾರರಲ್ಲಿ ಒಬ್ಬರಾದ ವೈಣಿಕ ಶಿಖಾಮಣಿ ಶೇಷಣ್ಣ (1852-1926) ಅವರೇ ಈ ಗೌರವಕ್ಕೆ ಪಾತ್ರರಾಗಿರುವವರು.ಶೇಷಣ್ಣ ಅವರ ಕೀರ್ತನೆಗಳು ಸರಳ ಹಾಗೂ ಸುಲಭಗ್ರಾಹ್ಯ. ಆನಂದಭೈರವಿ, ಕಾಂಬೋಧಿ, ಧರ್ಮವತಿಗಳಲ್ಲದೆ ಗೌರಿ, ಗಮನಶ್ರಮ, ಋಷಭಪ್ರಿಯ, ನಾಟಕಪ್ರಿಯಗಳಲ್ಲೂ ಕೀರ್ತನೆಗಳನ್ನು ಮಾಡಿದ್ದಾರೆ. ಶೇಷಣ್ಣನವರ ತಿಲ್ಲಾನಗಳು ಹೆಚ್ಚು ಜನಪ್ರಿಯ. ತೋಡಿ, ಕಲ್ಯಾಣಿ, ಕಮಾಚ್‌ಗಳಲ್ಲದೆ ಹಿಂದುಸ್ತಾನಿ ಪ್ರಭಾವಿತ ರಾಗಗಳಲ್ಲೂ (ಹಿಂದುಸ್ತಾನಿ ಕಾಪಿ, ದರ್ಬಾರಿ ಕಾನಡ, ಫರ್ಜ್, ಬೇಹಾಗ್) ಇರುವ ತಿಲ್ಲಾನಗಳು ಪೋಷಕ ಮುದ್ರೆ (ಚಾಮರಾಜ ಒಡೆಯರು ಅಥವ ಕಷ್ಣರಾಜ ಒಡೆಯರು) ಹೊಂದಿವೆ. ಅವರು ರಚಿಸಿರುವ ಐದು ಕನ್ನಡ ದೇವರನಾಮಗಳು ಶ್ರೀನಿವಾಸ, ಲಕ್ಷ್ಮೀ, ಸರಸ್ವತಿ, ಚಾಮುಂಡೇಶ್ವರಿಗಳ ಮೇಲೆ ಇವೆ. 11 ಸ್ವರಜತಿಗಳು ಚಾಲ್ತಿಯಲ್ಲಿರುವ ರಾಗಗಳಲ್ಲದೆ ವನಸ್ಪತಿ, ಮಾನವತಿ ರಾಗಗಳಲ್ಲೂ ಇವೆ. ಖಂಡ ಅಟ್ಟತಾಳದಲ್ಲಿರುವ ಕರ್ನಾಟಕ ಕಾಪಿ ರಾಗದ ಸ್ವರಜತಿ ಬಹು ಕ್ಲಿಷ್ಟವಾದ ಸಂಗತಿಗಳಿಂದ ಕೂಡಿದೆ. ಅಪರೂಪವಾದ ಸಂಕೀರ್ಣ ತ್ರಿಪುಟದಲ್ಲಿರುವ ರಚನೆ ಶಂಕರಾಭರಣ ರಾಗದಲ್ಲಿ ಹೆಣೆಯಲಾಗಿದ್ದು ಕಛೇರಿಯ ಪಲ್ಲವಿಯ ಸ್ಥಾನದಲ್ಲೂ ಹಾಡಲು ಅರ್ಹವಾಗಿದೆ.ಪುರುಷ ಸರಸ್ವತಿಯ ವರ್ಣಗಳು ಸಾಧಕರಿಗೆ ಕಬ್ಬಿಣದ ಕಡಲೆ! ಒಂಬತ್ತು ವರ್ಣಗಳಲ್ಲಿ ತೋಡಿ, ಸಾವೇರಿಯಂಥ ಘನ ರಾಗಗಳಲ್ಲದೆ ಲವರಾಳಿ, ದೇವಗಾಂಧಾರಿಗಳಲ್ಲೂ ಇವೆ. ಎರಡು ರಾಗಮಾಲಿಕಾ ವರ್ಣಗಳು ಕರ್ಣರಂಜಕವಾಗಿವೆ. ಆದರೆ ತಾಳದ ದೃಷ್ಟಿಯಿಂದ ಬಹು ಕ್ಲಿಷ್ಟವಾದವು. ಖಂಡಧ್ರುವ, ಮಿಶ್ರ ಝಂಪೆ, ಖಂಡ ಮಠ್ಯ, ಸಂಕೀರ್ಣಮಠ್ಯ, ಮಿಶ್ರ ತ್ರಿಪುಟ ತಾಳಗಳಲ್ಲಿದ್ದು ಗಾಯಕರಿಂದ ಖಚಿತ ತಾಳಜ್ಞಾನವನ್ನು ನಿರೀಕ್ಷಿಸುತ್ತದೆ.

ಒಟ್ಟಿನಲ್ಲಿ ಶೇಷಣ್ಣನವರ ರಚನೆಗಳು ಸಾಧಕರಿಗೆ ಸವಾಲಾದರೆ ಶ್ರೋತಗಳಿಗೆ ಸವಿ!ವಿಚಾರ ಸಂಕಿರಣ

ಸ್ವರಮೂರ್ತಿ ವಿ.ಎನ್. ರಾವ್ ಟ್ರಸ್ಟ್ ಮತ್ತು ಶ್ರೀರಾಮ ಲಲಿತಕಲಾ ಮಂದಿರದ ಸಹಭಾಗಿತ್ವದಲ್ಲಿ ನಡೆಯಲಿರುವ ವಿಚಾರ ಸಂಕಿರಣದಲ್ಲಿ ಮೂವರು ಗಣ್ಯಕಲಾವಿದರು ಭಾಗವಹಿಸಲಿದ್ದಾರೆ.ಶೇಷಣ್ಣನವರ ಸ್ವರಜತಿಗಳನ್ನು ವೀಣೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಿರುವ ಡಾ. ಶೋಭನಾ ಸ್ವಾಮಿನಾಥನ್ ಮದ್ರಾಸ್ ಯೂನಿವರ್ಸಿಟಿಯಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ. ವೀಣೆ ಶೇಷಣ್ಣನವರ ಕೃತಿಗಳ ಮೇಲೆ ಸಂಶೋಧನೆ ಮಾಡಿ ಡಾಕ್ಟರೇಟ್ ಪಡೆದಿದ್ದಾರೆ. ಅಲ್ಲದೆ ಸಭೆ, ಸಮ್ಮೇಳನಗಳಲ್ಲಿ ಉಪನ್ಯಾಸಗಳನ್ನು ಮಾಡಿರುವ ಅನುಭವ ಇದೆ.ಡಾ. ಸುಕನ್ಯಾ ಪ್ರಭಾಕರ್ ಅವರು ಜನಪ್ರಿಯ ಗಾಯಕಿ, ಬೋಧಕಿ ಹಾಗೂ ಲೇಖಕಿ. ಮಹಾರಾಜ ಜಯಚಾಮರಾಜೇಂದ್ರ ಒಡೆಯರ ಕೃತಿಗಳ ಮೇಲೆ ಡಾಕ್ಟೊರೇಟ್ ಗಳಿಸಿದ್ದಾರೆ. ಅನೇಕ ಕನ್ನಡ ಕೃತಿಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಗಾನಕಲಾ ಪರಿಷತ್ತಿನಿಂದ  ಗಾನಕಲಾಶ್ರೀ ಬಿರುದು ಗಳಿಸಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಶೇಷಣ್ಣನವರ ಕೀರ್ತನೆ, ದೇವರನಾಮಗಳನ್ನು ಕುರಿತು ಸೋದಾಹರಣ ಉಪನ್ಯಾಸ ನೀಡಲಿದ್ದಾರೆ.ವೀಣೆ, ಹಾಡುಗಾರಿಕೆ ಎರಡರಲ್ಲೂ ಸಾಧನೆ ಮಾಡಿರುವ ಎಂ.ಕೆ. ಸರಸ್ವತಿ ಅವರು ಬಾನುಲಿಯ `ಎ ಗ್ರೇಡ್~  ಕಲಾವಿದರು. ಗಾಯಕಿ, ವೀಣಾವಾದಕಿ, ಬೋಧಕಿ, ರಾಗ ಸಂಯೋಜಕಿಯಾಗಿ ಸೇವೆ ಸಲ್ಲಿಸಿರುವ ಸರಸ್ವತಿ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಶಸ್ತಿಯೂ ಸಂದಿದೆ.ಮೈಸೂರು ಬಾನಿಯ ಹಿರಿಯ ವೈಣಿಕ ಡಿ. ಬಾಲಕಷ್ಣ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದರೆ ಜನಪ್ರಿಯ ವೈಣಿಕಿ ಡಾ. ಸುಮಾ ಸುಧೀಂದ್ರ ಬೆಳಿಗ್ಗೆ 10ಕ್ಕೆ ಉದ್ಘಾಟಿಸಲಿದ್ದಾರೆ.

ಸ್ಥಳ: ಸಭಾಂಗಣ: ಶ್ರೀರಾಮ ಲಲಿತಕಲಾ ಮಂದಿರ, 9ನೇ ಮೇನ್, ಬನಶಂಕರಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.