ನಾನಳಿಯುವೆನು ನನ್ನ ಗೀತೆಯುಳಿಯುವುದೊಂದೆ.........

7

ನಾನಳಿಯುವೆನು ನನ್ನ ಗೀತೆಯುಳಿಯುವುದೊಂದೆ.........

Published:
Updated:

ನನ್ನ ತಂದೆ ಕೆ.ಎಸ್. ನರಸಿಂಹಸ್ವಾಮಿ (ಕೆ.ಎಸ್.ನ.) ಕನ್ನಡ ಸಾರಸ್ವತ ಲೋಕದಲ್ಲಿ ಚಿರಂತನ ಹೆಸರು. ಅವರು ತಮ್ಮ ಜೀವನದುದ್ದಕ್ಕೂ ಅನುಭವಿಸಿದ್ದು ಹೆಚ್ಚು ನೋವನ್ನು. ಸುಖವೆಂದರೇನೋ ಅವರ ಅನುಭವಕ್ಕೆ ಬಾರದ ವಿಷಯ. ನನ್ನ ಸ್ಮೃತಿಪಟಲದಿಂದ ಆಯ್ದ ಕೆಲವು ಪ್ರಸಂಗಗಳನ್ನು ಇಲ್ಲಿ ನಿರೂಪಿಸಿದ್ದೇನೆ.ಕೆ.ಎಸ್.ನ. ತಂದೆ ಸುಬ್ಬರಾವ್ ಚಿನ್ನ-ಬೆಳ್ಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಅಪಸ್ಮಾರಕ್ಕೆ ತುತ್ತಾಗಿ ಅಕಾಲ ಮರಣ ಹೊಂದಿದರು. ಹೀಗಾಗಿ ವಿದ್ಯಾರ್ಥಿಯಾಗಿದ್ದಾಗಲೇ ಪೂರ್ಣ ಸಂಸಾರದ ಹೊಣೆ ಹೆಗಲಿಗೆ ಬಿತ್ತು. ಓದು ಅಪೂರ್ಣ. ತಂದೆ ಕೆಲಸ ಮಾಡುತ್ತಿದ್ದ ಶೆಟ್ಟರ ಅಂಗಡಿಯಲ್ಲೇ ಕೆಲಸ. ಬರುವ ಅಲ್ಪ ಆದಾಯದಲ್ಲಿ ಸಂಸಾರ ನಿರ್ವಹಣೆ. ಆಗಿನ ಕಾಲಕ್ಕೆ ಸಂಸಾರಕ್ಕೆ ಸರಿದೂಗದ ಆದಾಯ. ಕಷ್ಟಗಳ ಸರಮಾಲೆ ಎದುರಿಸಬೇಕಾಯಿತು. `ಕಿಕ್ಕೇರಿ' ಅವರ ಹೆಸರಿಗೆ ಅಂಟಿದ ಊರಾದರೂ ಆಸ್ತಿ ಏನೂ ಇರಲಿಲ್ಲ. ನನ್ನ ಅಜ್ಜಿ ನಾಗಮ್ಮ (ತಂದೆಯ ತಾಯಿ) ಕಷ್ಟಜೀವಿ. ಬಡತನದ ಮನೆಯಿಂದ ಬಂದವರು. ನನ್ನ ತಂದೆಯನ್ನು ಕಂಡರೆ ಅವರಿಗೆ ಭಯ. `ಅಚ್ಚಣ್ಣ (ನನ್ನ ತಂದೆಗಿದ್ದ ಅಡ್ಡ ಹೆಸರು) ಬಯ್ತಾನೆ' ಎನ್ನುತ್ತಿದ್ದರು.ನನ್ನ ತಂದೆಗೆ ಮೈಸೂರಿನ ಮುನಿಸಿಪಲ್ ಕಚೇರಿಯಲ್ಲಿ ಗುಮಾಸ್ತೆ ಕೆಲಸ ದೊರಕಿತು. ತಿಂಗಳ ಸಂಬಳ 20 ರೂಪಾಯಿ. ಆಗ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದವರು ಎನ್.ಎಸ್. ಹಿರಣ್ಣಯ್ಯನವರು. ನನ್ನ ತಂದೆಯ ಬರವಣಿಗೆ ದುಂಡಗಿತ್ತು. ಕೆಲಸದಲ್ಲಿ ಶಿಸ್ತು, ಅಚ್ಚುಕಟ್ಟು ಇವೆಲ್ಲದರಿಂದಾಗಿ ನಂಜನಗೂಡಿನ ಮುನಿಸಿಪಲ್ ಕಚೇರಿಗೆ ವರ್ಗಾವಣೆಯಾಯಿತು.ದಿನವೂ ಮೈಸೂರಿನಿಂದ ನಂಜನಗೂಡಿಗೆ ಆಗಿನ ಕಾಲಕ್ಕೆ `ಟೂತ್‌ಪೌಡರ್ ಎಕ್ಸ್‌ಪ್ರೆಸ್' ಎಂದೇ ಖ್ಯಾತಿ ಪಡೆದಿದ್ದ ರೈಲಿನಲ್ಲಿ ಓಡಾಡುತ್ತಿದ್ದರು. ನನ್ನ ತಂದೆಯ ಮಾವ (ತಾಯಿ ವೆಂಕಮ್ಮನವರ ತಂದೆ) ಆಗಿನ ಕಾಲದ ಶಿರಸ್ತೇದಾರ್ ಆಗಿದ್ದರು. ವಿಶ್ವಾಮಿತ್ರ ಗೋತ್ರದವರು, ಕೋಪಿಷ್ಠರು. ನನ್ನ ಅಜ್ಜಿ ಸೀತಮ್ಮ ಉಪ್ಪಿನಕಾಯಿ, ಹಪ್ಪಳ ತಯಾರಿಯಲ್ಲಿ ಸಿದ್ಧಹಸ್ತರು. ನನ್ನ ತಾತ ದಾವಣಗೆರೆ, ಹೊಸದುರ್ಗ, ಹರಿಹರ, ದಾವಣಗೆರೆ ಮುಂತಾದ ಊರೆಲ್ಲ ಸುತ್ತಿ ನಿವೃತ್ತಿಯಾದ ನಂತರ ಮೈಸೂರಿಗೆ ಬಂದು ಸರಸ್ವತೀಪುರಂನಲ್ಲಿ ನೆಲಸಿದ್ದರು. ಮಾವ-ಅಳಿಯನಿಗೆ ಹೇಳಿಕೊಳ್ಳುವ ಮಧುರ ಬಾಂಧವ್ಯವಿರಲಿಲ್ಲ.ನನ್ನ ತಂದೆ ಮೈಸೂರಿನಲ್ಲಿ ಮೊದಲು ಜಯನಗರದ ಪ್ರೊ. ಡಿ.ವಿ. ವೆಂಕಟಸುಬ್ಬಯ್ಯನವರ ಮನೆಯಲ್ಲಿ, ನಂತರ ರೈಲ್ವೆ ವರ್ಕ್‌ಷಾಪಿನ ಹತ್ತಿರ ಶಾರದಾ ವಿಲಾಸ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಕೆ.ವಿ. ನಾರಾಯಣ್ ಅವರ ಪಕ್ಕದ ಮನೆಯ ಔಟ್‌ಹೌಸ್‌ನಲ್ಲಿ, ಮುಂದೆ ಚಾಮರಾಜಪುರಂ ರೈಲ್ವೆ ಸ್ಟೇಶನ್ನಿನ ಎದುರು ಸಂಕೇತಿಗಳಾದ ಆರ್.ಎಂ. ಕೃಷ್ಣಪ್ಪನವರ ಮನೆಯ ಔಟ್‌ಹೌಸಿನಲ್ಲಿ ಬಾಡಿಗೆಗೆ ವಾಸವಾಗಿದ್ದರು.ಮೈಸೂರಿನಲ್ಲಿದ್ದಾಗ ಅದು ಪಡಿತರ ಕಾಲ. ಒಂದು ರೂಪಾಯಿಗೆ ಎರಡು ಕೆ.ಜಿ. ಅಕ್ಕಿ. ಆ ಪಡಿತರವನ್ನು ಲಕ್ಷ್ಮೀಪುರಂನ ರೇಷನ್ ಅಂಗಡಿಯಿಂದ ಹೆಗಲ ಮೇಲೆ ಹೊತ್ತುಕೊಂಡು ಬರುತ್ತಿದ್ದರು. ಆ ಕಷ್ಟ ಯಾರಿಗೂ ಬೇಡ. ಕಚೇರಿಯ ಕೆಲಸ, ಅದರೊಡನೆ 5 ಜನರ ಸಂಸಾರ, ನಮ್ಮ ಮೂರೂ ಜನಕ್ಕೆ ಶಾಲೆಗಳ ಫೀಸು, ಬಟ್ಟೆ, ಪುಸ್ತಕ ಎಲ್ಲವನ್ನೂ ಬರುವ ಅಲ್ಪ ಆದಾಯದಲ್ಲೇ ಸರಿದೂಗಿಸಬೇಕಾಗುತ್ತಿತ್ತು. ಚಾಮರಾಜಪುರಂನಿಂದ ಜಿಲ್ಲಾ ಕಚೇರಿಗೆ ನಡೆದೇ ಹೋಗುತ್ತಿದ್ದರು.ಚಾಮರಾಜಪುರಂನಲ್ಲಿ ನೆರೆಹೊರೆ ತುಂಬಾ ಚೆನ್ನಾಗಿತ್ತು. ನನ್ನ ತಂದೆ ಯಾವ ತಾಪತ್ರಯಗಳನ್ನು ತಲೆಗೆ ಹಚ್ಚಿಕೊಳ್ಳದೆ, ಅವರು ಪ್ರತಿದಿನ ಸಂಜೆ ಆಫೀಸಿನಿಂದ ಬಂದ ನಂತರ ಪಗಡೆಯಾಟವಾಡುತ್ತಿದ್ದರು. ಅದರಲ್ಲಿ ಎಲ್ಲಿಲ್ಲದ ಉತ್ಸಾಹ. ನನ್ನ ನೆನಪಿನ ಪ್ರಕಾರ ಆಗಲೇ ಅವರಿಗೆ ನಶ್ಯದ ಗೀಳು ಪ್ರಾರಂಭವಾಗಿದ್ದು. ಅಂಬಾಳ್ ಹಾಗೂ ಸ್ಕಂದವಿಲಾಸ್ ನಶ್ಯ ಅವರಿಗೆ ಪ್ರಿಯವಾದುವು.1954ರಲ್ಲಿ ಅವರಿಗೆ ಬೆಂಗಳೂರಿನ ಸ್ಥಳೀಯ ಸಂಸ್ಥೆ ಕಚೇರಿಗೆ ವರ್ಗವಾಯಿತು. ಬೇರೆ ಯಾವ ಸಂಬಂಧಿಕರೂ ಅಲ್ಲಿ ಇಲ್ಲದ್ದರಿಂದ, ನರಸಿಂಹರಾಜಾ ಕಾಲೋನಿಯಲ್ಲಿ ಅವರ ಚಿಕ್ಕಪ್ಪ `ಕಕ್ಕಯ್ಯ'ನ ಮನೆ (ಕಿಕ್ಕೇರಿ ನರಸಿಂಹಯ್ಯ)ಯಲ್ಲಿ ನೆಲಸಿದರು. 1955ರ ಏಪ್ರಿಲ್‌ನಲ್ಲಿ ನಾವೆಲ್ಲ ಬೆಂಗಳೂರಿಗೆ ಬಂದೆವು. ಸನ್ನಿಧಿ ರಸ್ತೆಯಲ್ಲಿ (40ನೇ ನಂಬರ್ ಮನೆ) ಸೋಮಯ್ಯ ಎಂಬ ಮುಲಕನಾಡು ಬ್ರಾಹ್ಮಣರ ಮನೆಯ ಚಿಕ್ಕ ಮನೆ. 20 ರೂ. ಬಾಡಿಗೆ. ಕಚೇರಿಗೆ ದಿವಸವೂ ನಡೆದೇ ಹೋಗುತ್ತಿದ್ದರು.ಬೆಳಿಗ್ಗೆ ಊಟ ಮಾಡಿ ಹೊರಟರೆ, ರಾತ್ರಿ ಮನೆಗೆ ಬಂದ ಮೇಲೆಯೇ ಊಟ. ಚಿಂತೆಗಳು ಕಾಡುತ್ತಿದ್ದರೂ ಹೊಟ್ಟೆತುಂಬಾ ಊಟ ಕಣ್ತುಂಬ ನಿದ್ರೆ ಅವರು ಕೇಳಿಕೊಂಡ ಬಂದ ವರ. ಒಮ್ಮೆ ಆ ಚಿಕ್ಕ ಮನೆಗೆ ಆಗ ಹೈಕೋರ್ಟ್ ನ್ಯಾಯಾಧೀಶರಾಗಿದ್ದ ನಿಟ್ಟೂರು ಶ್ರೀನಿವಾಸರಾಯರು ಬಂದಿದ್ದರು. ಇಂಥ ದೊಡ್ಡ ಮನುಷ್ಯ ತಮ್ಮ ಮನೆಗೆ ಬಂದರಲ್ಲ ಎಂದು ಅಪ್ಪನಿಗೆ ತುಂಬಾ ಸಂತೋಷವಾಗಿತ್ತು.ಮುಂದೆ ಸಂಸಾರ ದೊಡ್ಡದಾಯಿತು. ಬರುವ ಸಂಬಳದಲ್ಲಿ ಏನೇನೂ ಬದಲಾವಣೆಯಾಗಲಿಲ್ಲ. ಮಧ್ಯೆ ಮಧ್ಯೆ ಆಕಾಶವಾಣಿ, ದಿನಪತ್ರಿಕೆಗಳಿಗೆ ಗೇಯನಾಟಕ ಮತ್ತು ಕವನಗಳನ್ನು ಬರೆದು ಕಳಿಸುತ್ತಿದ್ದರು. ಅದರಿಂದ ಗೌರವಧನ ಬರುತ್ತಿತ್ತು. ನೂರು ರೂಪಾಯಿ ಬಂದರೆ ಅದೇ ಹೆಚ್ಚಿಗೆ ಎನ್ನುವಂತಿತ್ತು. ಆಕಾಶವಾಣಿಗೆ ಬರೆದುಕೊಟ್ಟ `ಜೀವನ ಸಂತೋಷ' ಗೇಯ ನಾಟಕ ಜನಮನ್ನಣೆ ಗಳಿಸಿತು. ಆಫೀಸಿನಲ್ಲಿ ಇವರು ನಿರ್ವಹಿಸುತ್ತಿದ್ದ ಕಾರ‌್ಯದಕ್ಷತೆ ಇವರನ್ನು ಆಗ ತಾನೇ ಪ್ರಾರಂಭವಾಗಿದ್ದ ಗೃಹನಿರ್ಮಾಣ ಮಂಡಲಿಗೆ ತಂದಿತು. ಮೊದಲ ದರ್ಜೆ ಗುಮಾಸ್ತರಾಗಿದ್ದವರು, ನಂತರ ಕಚೇರಿ ಅಧೀಕ್ಷಕರಾಗಿ ಬಡ್ತಿ ಪಡೆದರು. ಸೋಜಿಗವೆಂದರೆ ಅದೇ ಹುದ್ದೆಯಲ್ಲೇ ನಿವೃತ್ತರಾದುದು (1970). ಆಗ ಬರುತ್ತಿದ್ದ ಸಂಬಳ 1000 ರೂ.1958ರಲ್ಲಿ ಎಂದು ತೋರುತ್ತದೆ. ಗೃಹ ನಿರ್ಮಾಣ ಮಂಡಲಿ ಜಯನಗರದ ಒಂದನೇ ಬ್ಲಾಕಿನಲ್ಲಿ (ಈಗಿನ ಮಾಧವನ್ ಪಾರ್ಕ್ ಸಮೀಪ) ಒಂದೇ ಒಂದು ರೂಮು ಇದ್ದ 8 ಚದರ ಮನೆಯನ್ನು ನನ್ನ ತಂದೆಗೆ ಅಲಾಟ್ ಮಾಡಿತು. ಮನೆ ನಂ. 397. ಆಗ ಅವರಿಗೆ ಇಷ್ಟು ಕಷ್ಟ ಪಟ್ಟಿದ್ದರೂ ಒಂದು ಸ್ವಂತ ಮನೆಯಾಯಿತಲ್ಲ ಎಂಬ ನೆಮ್ಮದಿ ಇತ್ತು. ನನಗೆ ತೋರಿದ ಹಾಗೆ ಅವರಿಗೆ ಚಿಕ್ಕದಾದ ಮನೆಯಲ್ಲೇ ನೆಮ್ಮದಿ ಇರುತ್ತಿತ್ತು. ದೊಡ್ಡ ಮನೆಯನ್ನು ಎಂದೂ ಇಷ್ಟ ಪಡುತ್ತಿರಲಿಲ್ಲ. ಆಗ ಆ ಮನೆಗೆ ನಿವೇಶನದ ಬೆಲೆಯೂ ಸೇರಿ ಆದ ವೆಚ್ಚ 8 ಸಾವಿರ ಮಾತ್ರ. ಗೃಹಪ್ರವೇಶವನ್ನು ಸರಳವಾಗಿ ಮಾಡಲಾಯಿತು.ಹೆಚ್ಚು ಖರ್ಚು ಮಾಡಲು ಹಣವೆಲ್ಲಿತ್ತು? ನಾವು ಶಾಲಾ - ಕಾಲೇಜುಗಳಲ್ಲಿ ಓದುತ್ತಿದ್ದೆವು. ಅಕ್ಕನ ಮದುವೆಗೆ ಸಿದ್ಧತೆ ನಡೆದಿತ್ತು. 1961ರ ಮಾರ್ಚ್‌ನಲ್ಲಿ ವಿವಾಹ ನಿಶ್ಚಯವಾಗಿತ್ತು. ಎಲ್ಲೆಲ್ಲಿಂದಲೋ ಹಣ ಹೊಂದಿಸಲಾಯಿತಾದರೂ ಅದು ಏನೇನೂ ಸಾಲದಾಯಿತು. ಸಿಂಡಿಕೇಟ್ ಬ್ಯಾಂಕ್‌ನಿಂದಲೂ ಕು.ಶಿ. ಹರಿದಾಸಭಟ್ಟರ ಸಹಾಯದಿಂದ ಸಾಲ ಪಡೆದರೂ ಅಡಿಗೆ ಮಾಡುವವರಿಗೆ ಕೊಡಬೇಕಾದ ಹಣ ಹೊಂದಿಸಲಾಗಲಿಲ್ಲ.ಕೊನೆಗೆ ಅಡಿಗೆ ರಾಮಚಂದ್ರರಾಯರೇ ಆಮೇಲೆ ಕೊಡುವಿರೆಂದು ಹೇಳಿದ್ದು ನಿರಾತಂಕವಾಗಿ ಮುಹೂರ್ತ ಸಾಧಿಸಲು ಸಾಧ್ಯವಾಯಿತು. ಮದುವೆಗೆ ಜಿ.ಪಿ. ರಾಜರತ್ನಂ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಪು.ತಿ.ನ. ಹಾಗೂ ವಿ.ಸೀ. ಅವರುಗಳು ಆಗಮಿಸಿದ್ದುದು ನನ್ನ ತಂದೆಗೆ ನೈತಿಕ ಸ್ಥೈರ್ಯ ಬಂದಂತಾಯಿತು. ಮದುವೆ ನಂತರ ಅಡಿಗೆ ರಾಮಚಂದ್ರರಾಯರ ಸಾಲ ತೀರಿಸಬೇಕಲ್ಲ.ಎಲ್ಲೆಲ್ಲಿ ಪ್ರಯತ್ನಪಟ್ಟರೂ 1000 ರೂ. ಒದಗಲಿಲ್ಲ. ಕೊನೆಗೆ ಇದ್ದ ಮನೆಯನ್ನು ಮಾರುವುದೇ ಸೂಕ್ತವೆಂದು ನಿರ್ಧರಿಸಿ, ಮನೆಯನ್ನೂ ಆಗಿನ ಕಾಲದ ರೂ. 16,000ಕ್ಕೆ ಮಾರಿ, ಋಣಮುಕ್ತರಾದರು. ಕೊನೆಗೆ ಅದೇ ಮನೆಯಲ್ಲಿ ಸದ್ಯಕ್ಕೆ 60 ರೂ. ಬಾಡಿಗೆ ಕೊಟ್ಟು ಇರುವುದೆಂದು ನಿರ್ಧರಿಸಿದರು.ನನ್ನ ಅಜ್ಜಿಗೆ ಸುಮಾರು 80 ವರ್ಷವಾಗಿತ್ತು. ಅವರ ದೇಹಸ್ಥಿತಿ ಗಂಭೀರವಾಗಿ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಔಷಧೋಪಚಾರ ನಡೆದಿದ್ದರೂ ಆರೋಗ್ಯ ಸುಧಾರಿಸಲೇ ಇಲ್ಲ. ದಿವಸವೂ, ಆಫೀಸಿಗೆ ಹೋಗುವಾಗ ಊಟ ಕೊಟ್ಟು ಡಾಕ್ಟರ ಹತ್ತಿರ ಮಾತನಾಡಿಕೊಂಡು, ಮತ್ತೆ ಸಂಜೆ ಆಫೀಸಿನಿಂದ ಬರುವಾಗ ಆಸ್ಪತ್ರೆಗೆ ಹೋಗಿ ಬರುತ್ತಿದ್ದರು. ಒಂದು ದಿನ ಬೆಳಿಗ್ಗೆ ಇನ್ನೇನು ಊಟಕ್ಕೆ ಕೂರಬೇಕು ಆಗ ಆಸ್ಪತ್ರೆಯ ಜವಾನ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ, ತಿಂಗಳ ಕೊನೆ. ವಿ. ಸೀ. ಅವರಿಗೆ ವಿಷಯ ತಿಳಿಸಿದರು. ಅವರು ಧೈರ್ಯಗೆಡಬಾರದೆಂದು ಅಂತ್ಯಕ್ರಿಯೆಯ ವ್ಯವಸ್ಥೆಗೆ ನೆರವಾದರು. ಸಾಲ ಸೋಲ ಮಾಡಿ ಉತ್ತರಕ್ರಿಯಾದಿಗಳನ್ನು ನೆರವೇರಿಸಿದರು. ತಾಯಿಯನ್ನು ಕಂಡರೆ ಅಪರಿಮಿತ ಪ್ರೀತಿ. ತಾಯಿಯ ಅಗಲಿಕೆ ಅವರನ್ನು ಅಧೀರರನ್ನಾಗಿ ಮಾಡಿತ್ತು. ಇದ್ದ ಒಬ್ಬ ತಮ್ಮ ಸುದ್ದಿ ಮುಟ್ಟಿಸಿದರೂ ಉತ್ತರ ಕ್ರಿಯೆಗೆ ಬರಲೇ ಇಲ್ಲ. ಈ ಸಂದರ್ಭದಲ್ಲಿ ವಿ. ಸೀ. ಅವರು ನೀಡಿದ ಸಾಂತ್ವನ ಹಾಗೂ ನೆರವುಗಳನ್ನು ಅವರು ಎಂದೂ ಮರೆಯುತ್ತಿರಲಿಲ್ಲ.ಅವರಿಗೆ ಮಕ್ಕಳ ಮೇಲೆ ಎಲ್ಲಿಲ್ಲದ ಪ್ರೀತಿ, ಮಮತೆ. ಮೊಮ್ಮಕ್ಕಳನ್ನಂತೂ ತುಂಬಾ ಅಕ್ಕರೆಯಿಂದ ನೋಡಿಕೊಂಡರು. ಮಕ್ಕಳ ಮೇಲೂ ಕವನಗಳನ್ನು ರಚಿಸಿದರು. `ತುಂಗಭದ್ರೆ', `ರಾಮಬಂಟ', `ಆನಂದ', `ತೊಟ್ಟಿಲ ಹಾಡು', `ರೈಲ್ವೆ ನಿಲ್ದಾಣದಲ್ಲಿ'- ಇವು ಅವರ ಮಮತೆಗೆ ಸಾಕ್ಷಿ.ಅವರು ಎಂದೂ ಇಂಥದೇ ಬಟ್ಟೆ ತೊಡಬೇಕು ಎನ್ನುವ ಪ್ರವೃತ್ತಿಗೆ ಅಂಟಿಕೊಂಡವರಲ್ಲ. ಒಂದು ಜೊತೆ ಫಿನ್ಲೆಪಂಚೆ, ಒಂದು ಜೊತೆ ಜುಬ್ಬಾ ಇದ್ದರಾಯಿತು. ಒಂದು ಸೀಕೋ ಕೈಗಡಿಯಾರವನ್ನು ಸಿಂಗಪುರದ ಅಭಿಮಾನಿಯೊಬ್ಬರು ಬಳುವಳಿಯಾಗಿ ನೀಡಿದ್ದರು. ಬಹಳ ದಿವಸ ಅದನ್ನು ಜೋಪಾನವಾಗಿ ಕೈಗೆ ಕಟ್ಟಿಕೊಳ್ಳುತ್ತಿದ್ದರು. ನಂತರ ಆ ಕೈಗಡಿಯಾರ ಎಲ್ಲೋ ಗೈರುವಿಲೆಯಾಯಿತು. ಮುಂದೆ ನಾಗಮಂಗಲದ ಸಾಹಿತ್ಯ ಸಂಘದವರು ಕೈಗಡಿಯಾರ ನೀಡಿದರು. ಅದು ಅವರು ನಿಧನರಾಗುವವರೆಗೂ ಇತ್ತು.ಸಮಾರಂಭಗಳಲ್ಲಿ ಒಂದೈದು ನಿಮಿಷ ಮಾತು, ಒಂದೆರಡು ಕವನ ವಾಚನ ಇಷ್ಟೆ, ಎಂದೂ ಭಾಷಣದ ಭೈರಿಗೆ ಕೊರೆದವರಲ್ಲ. ಮನೆಯಲ್ಲೂ ಮಿತಭಾಷಿ, 1958ರಲ್ಲಿ ಎಂದು ತೋರುತ್ತದೆ. ಗಣರಾಜ್ಯೋತ್ಸವದ ಪ್ರಯುಕ್ತ ದೆಹಲಿಯಲ್ಲಿ ನಡೆದ `ಅಖಿಲ ಭಾರತ ಸರ್ವ ಭಾಷಾ ಕವಿ ಸಮ್ಮೇಳನ'ದಲ್ಲಿ ಭಾಗವಹಿಸಿ, `ಇಡದಿರು ನನ್ನ ನಿನ್ನ ಸಿಂಹಾಸನದ ಮೇಲೆ' ಕವನ ಓದಿದರು. ದೆಹಲಿಯಿಂದ ನಮಗೆಲ್ಲಾ ಬಟ್ಟೆ, ಸಿಹಿ ತಿಂಡಿ ತಂದುಕೊಟ್ಟಿದ್ದರು.ಪ್ರಶಸ್ತಿಗಳು ಬಂದಾಗ ಯಾವುದೇ ಅಹಂ ಇಲ್ಲದೆ ಪ್ರತಿಕ್ರಿಯಿಸುತ್ತಿದ್ದರು. 60ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಯಾದಾಗ ಮೃದುವಾಗಿ ಪ್ರತಿಕ್ರಿಯಿಸಿದ್ದರು. ಆ ಸಮ್ಮೇಳನದ ಅಸ್ತವ್ಯಸ್ತ ಮೆರವಣಿಗೆ, 14ನೇ ಭಾಷಣಕಾರರಾಗಿದ್ದುದು, ಅವರ ಮನಸ್ಸಿಗೆ ನೋವು ತಂದಿತ್ತು. ಮಂಡ್ಯದಲ್ಲಿ ಆಗಿನ ಜಿಲ್ಲಾಧಿಕಾರಿಯಾಗಿದ್ದ ಸಾಹಿತ್ಯ ಪ್ರೇಮಿ ಎಲ್. ಕೆ. ಅತೀಕ್ (ಈಗ ವಿಶ್ವಬ್ಯಾಂಕ್‌ನ ಸೇವೆಗೆ ನಿಯೋಜಿತರಾಗಿದ್ದಾರೆ) ಅವರು ಇವರಿಗೂ, ಪ್ರೊ. ವಿ. ಎನ್. ಮೂರ್ತಿರಾಯರಿಗೂ ಸನ್ಮಾನ ಏರ್ಪಡಿಸಿದ್ದರು. ಅಲ್ಲಿ ಸಾಹಿತ್ಯ ಸಂವಾದವೂ ನಡೆಯಿತು.ನೋವು ಬಂದಾಗ ತಗ್ಗದೆ, ಕುಗ್ಗದೆ, ಸ್ವಲ್ಪವೇ ನಲಿವು ಬಂದಾಗ ಹಿಗ್ಗದೆ, ಬೀಗದೆ ಇದ್ದುದೇ ಕೆ.ಎಸ್.ನ. ಧ್ಯೇಯ. ಎಂಥದೇ ಒತ್ತಡ ಬಂದರೂ ಅದಕ್ಕೆ ಅಂಜುತ್ತಿರಲಿಲ್ಲ. ಎಂಟು ಜನ ಮಕ್ಕಳಿಗೂ ಯೋಗ್ಯ ವಿದ್ಯಾಭ್ಯಾಸ ಕೊಡಿಸಿ ಅವರವರ ದಾರಿಯಲ್ಲಿ ಅವರಿಗೆ ಯಶಸ್ಸು ಸಿದ್ಧಿಸುವಂತೆ ಮಾಡಿದರು. ಕೀರ್ತಿಶನಿಯನ್ನು ಎಂದೂ ಬೆನ್ನಟ್ಟಿದವರಲ್ಲ. ತಮ್ಮ ಜೀವನ ಸಂಧ್ಯಾಕಾಲದಲ್ಲಿ ಆರೋಗ್ಯ ಕೈಕೊಟ್ಟರೂ ಅವರ ಕಾವ್ಯದ ನೆಲೆ ಎಂದೂ ಬತ್ತಲಿಲ್ಲ. ಇದು ಅವರ ಜೀವನಯೋಗ, ಧ್ಯೇಯ.ಅವರು ನಿಧನರಾಗುವ ಮುನ್ನ `ಮೈಸೂರ ಮಲ್ಲಿಗೆ' ಹಕ್ಕು ವಾಪಸ್ ಬಂದಿತು. ಅವರೇ ಹೇಳಿದಂತೆ `ತೌರು ಮನೆಗೆ ಮಗಳು ಬಂದಂತೆ' ಆಗ ತುಂಬ ಸಂತೋಷ ತಂದಿತ್ತು. ಈಗ `ಮೈಸೂರ ಮಲ್ಲಿಗೆ' 36ನೇ ಮುದ್ರಣ ಕಂಡಿದೆ. ಸಮಗ್ರ ಕವಿತೆಗಳ `ಮಲ್ಲಿಗೆಯ ಮಾಲೆ' (3ನೇ ಮುದ್ರಣ) ಕೆಲವು ತಿಂಗಳುಗಳ ಹಿಂದೆ ಬಿಡುಗಡೆ ಆಗಿದೆ.

ಕೆ.ಎಸ್.ನ. ನಿಧನರಾಗಿ ಡಿಸೆಂಬರ್ 28ಕ್ಕೆ ಒಂಬತ್ತು ವರ್ಷ. ಅವರ ನೆನಪು ಮಾತ್ರ ಅಜರಾಮರ. ಅವರು `ನನ್ನ ಕವಿತೆ'ಯಲ್ಲಿ ಹೇಳಿದಂತೆ- `...ನಾನಳಿಯುವೆನು ನನ್ನ ಗೀತೆಯುಳಿಯುವುದೊಂದೆ'.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry