ನಾನಿನ್ನು ರೀಮೇಕ್ ಮಾಡಲಾರೆ...

7

ನಾನಿನ್ನು ರೀಮೇಕ್ ಮಾಡಲಾರೆ...

Published:
Updated:

ಕನ್ನಡದ ಪ್ರಮುಖ ನಾಯಕ ನಟರು ಹಾಗೂ ನಿರ್ದೇಶಕರು ರೀಮೇಕ್‌ಗಳ ಬೆನ್ನುಬಿದ್ದಿರುವ ಸಂದರ್ಭದಲ್ಲಿ ತಮಿಳು ನಿರ್ದೇಶಕ ಶಂಕರ್, `ನಾನಿನ್ನು ರೀಮೇಕ್ ಮಾಡೊಲ್ಲ~ ಎಂದು ಹೇಳಿರುವುದು ಕುತೂಹಲಕರವಾಗಿದೆ.ತಮಿಳು ಚಿತ್ರರಂಗದಲ್ಲಿ `ಸೋಲರಿಯದ ಸರದಾರ~ ಎಂದೇ ಶಂಕರ್ ಹೆಸರಾದವರು. ಅವರ ಇತ್ತೀಚಿನ ಚಿತ್ರ `ನನ್‌ಬನ್~ ಕೂಡ ನಿರ್ಮಾಪಕರ ಬಂಡವಾಳಕ್ಕೆ ಮೋಸ ಮಾಡಿಲ್ಲ. ಶಂಕರ್ ವೃತ್ತಿ ಜೀವನದ ಎಲ್ಲ ಹನ್ನೊಂದು ಚಿತ್ರಗಳೂ ಸೂಪರ್‌ಹಿಟ್ ಆಗಿವೆ ಎನ್ನುವುದು, ಅವರ ಚಿತ್ರಗಳು 100 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ವಹಿವಾಟು ನಡೆಸುತ್ತವೆ ಎನ್ನುವುದೂ ಪ್ರತೀತಿ.ಇದೇ ಶಂಕರ್, ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ `ಎಂದಿರನ್~ (ರೊಬೊ) ಚಿತ್ರವನ್ನು ನಿರ್ದೇಶಿಸಿದ್ದರು. ಇಂತಿಪ್ಪ ಶಂಕರ್, `ರೀಮೇಕ್ ಮಾಡಲೊಲ್ಲೆ~ ಎಂದು ಹೇಳಿದ್ದಾರೆ.ರೀಮೇಕ್ ಬಗ್ಗೆ ಶಂಕರ್ ಮಾತನಾಡಲಿಕ್ಕೆ ಕಾರಣಗಳಿವೆ. ಬಾಲಿವುಡ್‌ನ `ಥ್ರೀ ಈಡಿಯಟ್ಸ್~ ಚಿತ್ರವನ್ನು `ನನ್‌ಬನ್~ ಹೆಸರಿನಲ್ಲಿ ಅವರು ತಮಿಳಿಗೆ ರೀಮೇಕ್ ಮಾಡಿದ್ದರು. ವಿಜಯ್ ನಾಯಕರಾಗಿ ನಟಿಸಿದ್ದ `ನನ್‌ಬನ್~ ನಿರ್ಮಾಪಕರ ನಂಬಿಕೆಯನ್ನು ಹುಸಿ ಮಾಡಿಲ್ಲ.ಆದರೆ, ಈ ಚಿತ್ರದ ಕಾರಣಕ್ಕಾಗಿ, `ಭಯಂಕರ ಸಕ್ಸಸ್‌ನ ಸಿನಿಮಾಗಳನ್ನು ಕೊಟ್ಟ ನಿರ್ದೇಶಕನಿಗೆ ರೀಮೇಕ್ ಮಾಡುವಂಥ ಕರ್ಮ ಯಾಕೆ ಬೇಕಿತ್ತು~ ಎನ್ನುವ ಟೀಕೆಗಳನ್ನು ಅವರು ಎದುರಿಸಬೇಕಾಗಿದೆ. ಈ ಟೀಕೆಗಳಿಗೆ ಉತ್ತರ ಎನ್ನುವಂತೆ, `ನಾನಿನ್ನು ಯಾವತ್ತೂ ರೀಮೇಕ್ ಮಾಡೊಲ್ಲ.ಬೇರೆ ಚಿತ್ರಗಳನ್ನು ಇರಲಿ, ನನ್ನ ಚಿತ್ರಗಳನ್ನು ನಾನೇ ರೀಮೇಕ್ ಮಾಡೊಲ್ಲ~ ಎಂದು ಶಂಕರ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಅವರ ಮಾತಿನ ಸಾರವನ್ನು ಪಟ್ಟಿ ಮಾಡುವುದಾರೆ-* ಪುಣೆಯ ಹೆದ್ದಾರಿಯಲ್ಲಿ `ಎಂದಿರನ್~ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಸಮಯ. ಯಾವುದೋ ಅನುಮತಿ ಪತ್ರಕ್ಕಾಗಿ ಕಾಯಬೇಕಾದ್ದರಿಂದ ಶೂಟಿಂಗ್‌ಗೆ ಬ್ರೇಕ್ ಬಿತ್ತು. ಆ ಬಿಡುವಿನಲ್ಲಿ `ಥ್ರೀ ಈಡಿಯಟ್ಸ್~ ಚಿತ್ರ ನೋಡಿದೆ. ಸಿನಿಮಾ ನೋಡುತ್ತಾ ನೋಡುತ್ತಾ ನನ್ನೆಲ್ಲ ಒತ್ತಡ ತಿಳಿಯಾಗಿತ್ತು. ಇಂಥದೊಂದು ಚಿತ್ರವನ್ನು ತಮಿಳಿನಲ್ಲಿ ರೂಪಿಸಬೇಕು ಅನ್ನಿಸಿತು. ಈ ಚಿತ್ರವನ್ನು ಓರ್ವ ಪ್ರೇಕ್ಷಕನಂತೆ ರೂಪಿಸಿದ್ದೇನೆ, ನಿರ್ದೇಶಕನಂತೆ ಅನುಭವಿಸಿದ್ದೇನೆ.

* ಥ್ರೀ ಈಡಿಯಟ್ಸ್‌ನ ಆಶಯವನ್ನು, ಭಾವನೆಗಳನ್ನು, ಚಿತ್ರದ ಆತ್ಮವನ್ನು ತಮಿಳು ರೂಪದಲ್ಲೂ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿತ್ತು. ಆ ಸವಾಲನ್ನು ನಿರ್ವಹಿಸುವಲ್ಲಿ ಹಾಗೂ ರೀಮೇಕ್ ಚಿತ್ರದಲ್ಲೂ ಸ್ವಂತಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವೆ. `ನನ್‌ಬನ್~ ನೋಡಿದ ರಾಜ್‌ಕುಮಾರ್ ಹಿರಾನಿ (ಥ್ರೀ ಈಡಿಯಟ್ಸ್‌ನ ನಿರ್ದೇಶಕ), `ಇದೊಂದು ಅದ್ಭುತ ರೀಮೇಕ್~ ಎಂದು ಉದ್ಗರಿಸಿದರು.* ರೀಮೇಕ್ ಮಾಡಿದ್ದೊಂದು ಹೊಸ ಅನುಭವ. ಅದು ಅನಿರೀಕ್ಷಿತವಾಗಿತ್ತು, ಅಷ್ಟೇ. ಮತ್ತೆ ರೀಮೇಕ್ ಮಾತು ಇಲ್ಲ.* ನನ್ನ `ಪ್ರೊಡಕ್ಷನ್ ಹೌಸ್~ ಇನ್ನೂ ಜೀವಂತವಾಗಿದೆ. ನಿರ್ಮಿಸಿದ ಸಿನಿಮಾಗಳ ಕಾರಣದಿಂದಾಗಿ ಮೈಯೆಲ್ಲ ಗಾಯ ಮಾಡಿಕೊಂಡಿರುವೆ. ಆ ಗಾಯಗಳಿನ್ನೂ ಮಾಯದಿದ್ದರೂ, ಹೊಸ ಸಿನಿಮಾಗಳ ನಿರ್ಮಾಣದ ಕನಸು ಇದ್ದೇ ಇದೆ.* ದೇಶದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಿರ್ದೇಶಕ ಎನ್ನುವ ಮಾತುಗಳ ಬಗ್ಗೆ ನಾನು ಏನನ್ನೂ ಹೇಳಲಾರೆ. ಅದು ದೊಡ್ಡಸ್ತಿಕೆಯ ವಿಚಾರವೇನಲ್ಲ. ಆದರೆ, ಅತ್ಯಂತ ನಂಬಲರ್ಹ ನಿರ್ದೇಶಕ ಎನ್ನುವ ಮಾತು ಖುಷಿ ಕೊಡುತ್ತದೆ. ಪ್ರೇಕ್ಷಕರನ್ನು ಖುಷಿ ಪಡಿಸುವ ನಿರ್ದೇಶಕನಾಗಿ ಇರಲು ಪ್ರಯತ್ನಿಸುತ್ತೇನೆ.* ಸದ್ಯಕ್ಕೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಅನೇಕ ಕನಸುಗಳಿವೆ. ಮಾರ್ಚ್ ವೇಳೆಗೆ ಹೊಸ ಸಿನಿಮಾದ ರೂಪುರೇಷೆ ಸಿದ್ಧವಾಗಬಹುದು.* * *

ಶಂಕರ್ ಅವರ ರೀಮೇಕ್ ಸಿದ್ಧಾಂತದ ಹಿಂದೆ ಇರುವುದು, `ರೀಮೇಕ್ ಮಾಡಿದರೆ ತಪ್ಪೇನಿಲ್ಲ. ಆದರದು ಚಟ ಆಗಬಾರದು~ ಎನ್ನುವ ನಿಲುವು. ರೀಮೇಕ್ ಮಾಡುವುದೇ ಉದ್ಯೋಗವಾದರೆ ಏನಾಗುತ್ತದೆ ಎನ್ನುವುದಕ್ಕೆ ಅನೇಕ ಉದಾಹರಣೆಗಳು ಗಾಂಧಿನಗರದಲ್ಲಿ ಸಿಗುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry