ನಾನೀಗ ಬದಲಾಗಿದ್ದೇನೆ: ಧವನ್

7
ಕ್ರಿಕೆಟ್: `ಅಪ್ಪ ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ ಎಂದಳು ಮಗಳು'

ನಾನೀಗ ಬದಲಾಗಿದ್ದೇನೆ: ಧವನ್

Published:
Updated:
ನಾನೀಗ ಬದಲಾಗಿದ್ದೇನೆ: ಧವನ್

ಚೆನ್ನೈ: `ಅಪ್ಪ ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ಈ ಬಾರಿಯ ಅವಕಾಶವನ್ನು ಕಳೆದುಕೊಳ್ಳಬೇಡಿ. ಚೆನ್ನಾಗಿ ಆಡಿ ಗೆದ್ದು ಬನ್ನಿ'

-ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಲಭಿಸಿದಾಗ ಶಿಖರ್ ಧವನ್‌ಗೆ ಈ ರೀತಿ ಹೇಳಿದ್ದು ಅವರ 11 ವರ್ಷ ವಯಸ್ಸಿನ ಮಗಳು. ಭಾರತ ತಂಡದಲ್ಲಿ ಸ್ಥಾನ ಸಿಕ್ಕಿದ ಖುಷಿಯನ್ನು `ಪ್ರಜಾವಾಣಿ' ಸಂದರ್ಶನದಲ್ಲಿ ಹಂಚಿಕೊಳ್ಳುವಾಗ ಈ ವಿಷಯ ಹೇಳಲು ಶಿಖರ್ ಮರೆಯಲಿಲ್ಲ.`ಪತ್ನಿ ಆಯೇಷಾ ಹಾಗೂ ಮಕ್ಕಳೇ ನನಗೆ ಸ್ಫೂರ್ತಿ. ಜೀವನದಲ್ಲಿ ಯಶಸ್ಸಿಗಿಂತ ವೈಫಲ್ಯಗಳು ಹೆಚ್ಚಿನ ಪಾಠ ಕಲಿಸುತ್ತವೆ ಎಂಬುದನ್ನು ಹೇಳಿಕೊಟ್ಟವರು ಅವರು. ಅದು ನನ್ನ ಪಾಲಿಗೆ ನಿಜ ಎನಿಸಿದೆ. ನಾನೀಗ ಬದಲಾಗಿದ್ದೇನೆ. ತಂಡದಲ್ಲಿ ಸ್ಥಾನ ಸಿಕ್ಕಿರುವ ಅವಕಾಶವನ್ನು ಈ ಬಾರಿ ಚೆನ್ನಾಗಿ ಬಳಸಿಕೊಳ್ಳುತ್ತೇನೆ' ಎಂದು 27 ವರ್ಷ ವಯಸ್ಸಿನ ಶಿಖರ್ ಹೇಳಿದ್ದಾರೆ.ಶುಕ್ರವಾರ ಚೆಪಾಕ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ ಅವರು ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ದೆಹಲಿಯ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಈಗಾಗಲೇ ಐದು ಏಕದಿನ ಪಂದ್ಯದ್ಲ್ಲಲಿ ಆಡಿದ್ದಾರೆ. ಆದರೆ ಎರಡು ವರ್ಷಗಳ ಹಿಂದೆ ಲಭಿಸಿದ್ದ ಅವಕಾಶವನ್ನು ಅವರು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಆದರೆ ಈ ಬಾರಿಯ ದೇಶಿ ಕ್ರಿಕೆಟ್ ಋತುವಿನಲ್ಲಿ ತೋರಿದ ಅದ್ಭುತ ಪ್ರದರ್ಶನ ಅವರ ನೆರವಿಗೆ ಬಂದಿದೆ.ರಣಜಿ, ದುಲೀಪ್ ಟ್ರೋಫಿ, ಇರಾನಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. 2011ರ ಇರಾನಿ ಕಪ್‌ನಲ್ಲಿ ಎರಡೂ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು. ಹೋದ ಋತುವಿನಲ್ಲಿ ನಾಲ್ಕು ಶತಕ ಸೇರಿದಂತೆ 833 ರನ್ ಗಳಿಸಿದ್ದಾರೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಗಳಿಸಿದ ಶತಕ ಅವರ ಕ್ರಿಕೆಟ್ ಜೀವನಕ್ಕೆ ಮಹತ್ವದ ತಿರುವು ನೀಡಿದೆ.

ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿದ ಖುಷಿ ಸೇರಿದಂತೆ ಹಲವು ವಿಷಯಗಳನ್ನು ಅವರು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.*ಈ ಹಿಂದೆ ಏಕದಿನ ತಂಡದಲ್ಲಿ ಆಡಿದ್ದೀರಿ. ಈಗ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸಿದೆ. ಈ ಬಗ್ಗೆ?

ಈ ಹಿಂದೆ ಲಭಿಸಿದ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವಲ್ಲಿ ನಾನು ವಿಫಲನಾಗಿದ್ದೆ. ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ತಂಡದಿಂದ ಹೊರಬೀಳಬೇಕಾಯಿತು. ಈಗ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದೇನೆ. ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳಲು ಎದುರು ನೋಡುತ್ತಿದ್ದೇನೆ. ಎರಡು ವರ್ಷಗಳ ಹಿಂದಿನ ಧವನ್ ನಾನಲ್ಲ. ನಾನೀಗ ಬದಲಾಗಿದ್ದೇನೆ.*ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸಬಹುದು ಎಂಬ ನಿರೀಕ್ಷೆ ಇತ್ತೇ?

ನಿರೀಕ್ಷೆ ಇರಲಿಲ್ಲ ಎಂದು ನಾನು ಸುಳ್ಳು ಹೇಳುವುದಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ಪ್ರತಿಯೊಬ್ಬರಿಗೂ ಈ ರೀತಿಯ ಆಸೆ ಇದ್ದೇ ಇರುತ್ತದೆ. ಟೆಸ್ಟ್ ತಂಡದಲ್ಲಿ ಆಡುವುದು ಪ್ರತಿಯೊಬ್ಬರ ಕನಸು.

*ಆರಂಭಿಕ ಆಟಗಾರನ ಸ್ಥಾನಕ್ಕೆ ತಂಡದಲ್ಲಿ ಸ್ಪರ್ಧೆ ಇದೆ. ಈ ಬಗ್ಗೆ?

ಹಾಗೇನಿಲ್ಲ. ಮುರಳಿ ವಿಜಯ್ ಹಾಗೂ ಅಜಿಂಕ್ಯ ರಹಾನೆ ಈಗ ತಂಡದಲ್ಲಿ ಸ್ಥಾನ ಪಡೆದಾಗಿದೆ. ಸ್ಪರ್ಧೆ ಇ್ದ್ದದರೂ ಅದು ಒಳ್ಳೆಯದು. ಏಕೆಂದರೆ ಮತ್ತಷ್ಟು ಪ್ರಯತ್ನ ಹಾಕಿ ಅಭ್ಯಾಸ ನಡೆಸಲು ಅದು ಸ್ಫೂರ್ತಿಯಾಗುತ್ತದೆ.*ನಮ್ಮ ಜೊತೆ ಕ್ರಿಕೆಟ್ ಆಡಲು ಶುರು ಮಾಡಿದವರು ಭಾರತ ತಂಡದಲ್ಲಿ ಸ್ಥಾನ ಪಡೆದು ಹೆಸರು ಮಾಡಿದ್ದಾರೆ. ಆದರೆ ನೀವು ತುಂಬಾ ಕಾಯಬೇಕಾಯಿತು. ಇದಕ್ಕೆ ಕಾರಣ?

ಹೌದು, ಹೆಚ್ಚು ದಿನ ಕಾಯಬೇಕಾಯಿತು. ಆದರೆ 4-5 ಋತುಗಳಿಂದ ನಾನು ಕಠಿಣ ಪ್ರಯತ್ನ ಹಾಕುತ್ತಿದ್ದೇನೆ. ಸ್ಥಿರ ಪ್ರದರ್ಶನ ತೋರಲು ಮಹತ್ವ ನೀಡುತ್ತಿದ್ದೇನೆ. ಮಾನಸಿಕವಾಗಿ ಈಗ ಹೆಚ್ಚು ಶಕ್ತಿಯುತನಾಗಿದ್ದೇನೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಷ್ಟೆ.*ಇಂಗ್ಲೆಂಡ್ ವಿರುದ್ಧ  ಶತಕ ಗಳಿಸಿದ್ದು ನಿಮ್ಮ ಕ್ರಿಕೆಟ್ ಜೀವನದ ಮಹತ್ವದ ತಿರುವು ಎಂದು ಭಾವಿಸುತ್ತೀರಾ?

ನಾನು ಎಂಟು ವರ್ಷಗಳಿಂದ ರಣಜಿಯಲ್ಲಿ ಆಡುತ್ತಿದ್ದೇನೆ. ಹಿಂದಿನ 2-3 ಋತುಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. ಇಂಗ್ಲೆಂಡ್ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಗಳಿಸಿದ ಶತಕ ನನ್ನಲ್ಲಿ ವಿಶ್ವಾಸ ತುಂಬಿದೆ. ಸ್ಟೀವನ್ ಫಿನ್, ಜೇಡ್ ಡರ್ನ್‌ಬ್ಯಾಕ್, ಸ್ಟುವರ್ಟ್ ಮೀಕರ್ ಅವರಂಥ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದೆ.*ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಗ್ಗೆ ಹೇಳಿ?

ಆಸ್ಟ್ರೇಲಿಯಾ ಖಂಡಿತ ಸವಾಲಿನ ತಂಡ. ಆದರೆ ಈ ತಂಡದಲ್ಲೆಗ ಅನನುಭವಿಗಳು ಹಾಗೂ ಯುವ ಆಟಗಾರರಿದ್ದಾರೆ. ಹಾಗಾಗಿ ಸೋಲಿಸಲು ಕಷ್ಟವೇನಲ್ಲ. *ಭಾರತ ತಂಡ ಎರಡು ವರ್ಷಗಳಿಂದ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ. ಈ ಸರಣಿ ಕೂಡ ಭಾರತಕ್ಕೆ ಕಠಿಣ ಸವಾಲು ಆಗಬಹುದೇ?

ತಂಡದ ಹಿಂದಿನ ಪ್ರದರ್ಶನದ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಈ ಸರಣಿಗೆ ಭಾರತ ಸಂಪೂರ್ಣ ಸಿದ್ಧವಾಗಿದೆ. ಕಾಂಗರೂ ಬಳಗದ ಸವಾಲನ್ನು ನಾವು ಎದುರು ನೋಡುತ್ತ್ದ್ದಿದೇವೆ.ಶಿಖರ್-ಆಯೇಷಾ `ಪ್ರೇಮ ವಿವಾಹ' ಕಥೆ

ಶಿಖರ್ ನಾಲ್ಕು ತಿಂಗಳ ಹಿಂದೆಯಷ್ಟೇ ಆಯೇಷಾ ಮುಖರ್ಜಿ ಅವರನ್ನು ವಿವಾಹವಾಗಿದ್ದಾರೆ. ಇವರದ್ದು ಪ್ರೇಮ ವಿವಾಹ. ಪತ್ನಿ ಆಯೇಷಾ ಅವರ ತಂದೆ ಬಂಗಾಳದವರು ಹಾಗೂ ತಾಯಿ ಇಂಗ್ಲೆಂಡ್ ಮೂಲದವರು. ನೆಲೆಸಿರುವುದು ಮೆಲ್ಬರ್ನ್‌ನಲ್ಲಿ.ಆಯೇಷಾಗೆ ಇದು ಎರಡನೇ ಮದುವೆ. ಅವರಿಗೆ ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳಿಗೆ 11 ವರ್ಷ ವಯಸ್ಸು. ಶಿಖರ್‌ಗಿಂತ ಪತ್ನಿ ಹೆಚ್ಚು ವಯಸ್ಸಿನವರು. ಈ ಪ್ರೀತಿ ಶುರುವಾಗಿದ್ದು ಫೇಸ್‌ಬುಕ್ ಮೂಲಕ. ಫೇಸ್‌ಬುಕ್‌ನಲ್ಲಿ ಆಯೇಷಾ ಅವರ ಫೋಟೊ ನೋಡಿ ಮೊದಲು ಸ್ನೇಹದ ಮನವಿ ಸಲ್ಲಿಸಿದ್ದು ಶಿಖರ್. ಅದಕ್ಕೆ ಆಯೇಷಾ ಹಸಿರು ನಿಶಾನೆ ತೋರಿಸಿದರು. ದೀರ್ಘ ಕಾಲದ ಪ್ರೀತಿಯ ಬಳಿಕ ಅದು ವಿವಾಹದಲ್ಲಿ ಕೊನೆಗೊಂಡಿತು. ಶಿಖರ್ ಮೈತುಂಬಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಹಿರಿಯ ಮಗಳ ಇಷ್ಟದ ಮೇರೆಗೆ ಈ ರೀತಿ ಮಾಡಿಕೊಂಡಿದ್ದಾರೆ. ಬೆನ್ನಿನ ತನಕ ಇಳಿ ಬಿದ್ದಿರುವ ಬಾಲದಾಕಾರದ ಸಣ್ಣಗಾತ್ರದ ಜಡೆ ಇದೆ. ಇದನ್ನು ಪತ್ನಿ ತುಂಬಾ ಇಷ್ಟಪಡುತ್ತಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry