ಶುಕ್ರವಾರ, ನವೆಂಬರ್ 15, 2019
21 °C

ನಾನೀಗ ಬ್ರಾಹ್ಮಣ ವಿರೋಧಿ ಅಲ್ಲ

Published:
Updated:

ಬೆಂಗಳೂರು: `ಬ್ರಾಹ್ಮಣರಿಂದಲೂ ಬಹಳಷ್ಟು ಕಲಿ ಯುವುದು ಇರುವುದರಿಂದ ಮತ್ತು ಬ್ರಾಹ್ಮಣರು, ಬ್ರಾಹ್ಮಣೇತರರನ್ನು ಬಿಟ್ಟು ಸಮಾಜ ಬದಲಾವಣೆ ಸಾಧ್ಯವಿಲ್ಲದಿರುವುದರಿಂದ ನಾನೀಗ ಬ್ರಾಹ್ಮಣ ವಿರೋಧಿ ಅಲ್ಲ~ ಎಂದು ಕವಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ ಸ್ಪಷ್ಟಪಡಿಸಿದರು.ಕೇಂದ್ರ ಸಾಹಿತ್ಯ ಅಕಾಡೆಮಿ ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಲೇಖಕರೊಂದಿಗೆ ಮುಖಾಮುಖಿ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ದಲಿತ ಚಳವಳಿಯಲ್ಲಿ ಗುರುತಿಸಿಕೊಂಡಾಗ ಹಾಗೂ ದಲಿತ ಸಮಸ್ಯೆಗಳನ್ನು ನೋಡಿದಾಗ `ಇಕ್ಕರ‌್ಲಾ, ಒದೀರ‌್ಲಾ, ಈ ನನ್ ಮಕ್ಕಳ್ ಚರ್ಮ ಎಬ್ರಲಾ~ ಎಂಬ ಪ್ರತಿಭಟನೆ ಯನ್ನು ಕಾವ್ಯವನ್ನು ಬರೆದೆ. ಅದು ತಮಿಳುನಾಡಿನ ದಲಿತರ ಸಮಸ್ಯೆಯನ್ನು ನೋಡಿ ಬರೆದದ್ದು, ಆದರೆ ಆ ಉಗ್ರತೆ ಈಗ ನನ್ನಲ್ಲಿ ಉಳಿದಿಲ್ಲ. ಆದರೆ ಬಡವರ, ತುಳಿತಕ್ಕೊಳಗಾದವರ ಪರವಾದ ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮುಖಾಮುಖಿಯಲ್ಲಿ ಅವರು ಮನಬಿಚ್ಚಿ ಹೇಳಿಕೊಂಡು ಕೆಲ ಸಂಗತಿಗಳನ್ನು ಅವರ ಮಾತುಗಳಲ್ಲೇ ಓದಿ.  `ಊರು ಮಾಗಡಿ. ಅಲ್ಲಿ ಪ್ರಾಥಮಿಕ ಶಿಕ್ಷಣವನ್ನು ಓದುತ್ತಿರುವಾಗ ನಾಗಪ್ಪಚಾರ್ಯ ಎಂಬುವವರು ಆತ್ಮೀಯವಾಗಿ ನೋಡಿಕೊಂಡಿದ್ದರು. ನಂತರ ತಾಯಿಯ ತವರು ಮಂಚನಬೆಲೆಗೆ ಹೋದಾಗ ಕಣಿವೆಯ ಕೆಳಗೆ, ವೃಷಭಾವತಿ ನದಿಯ ಹಿನ್ನೆಲೆಯಲ್ಲಿದ್ದು, ಬರಹಗಳಿಗೆ ಪ್ರೇರಣೆ ನೀಡಿತು. ಅಜ್ಜನ ಮನೆಯಲ್ಲಿ ಸಿಗುತ್ತಿದ್ದ ಚಹಾದಂಥ ಚಹಾವನ್ನು ಇಂದಿಗೂ ಕುಡಿದಿಲ್ಲ. ಅಲ್ಲಿಂದಲೇ ನನ್ನ ಟೀ ಕುಡಿಯುವ ರೂಢಿಯೂ ಬೆಳೆಯಿತು.ಕವಿಗೆ ಬರೆಯಬೇಕೆಂದರೆ ಚಹಾ ಬೇಕೇ ಬೇಕು. ಸಾಹಿತಿ ಸಿ.ಜಿ.ಕೃಷ್ಣಸ್ವಾಮಿ ಅವರು ಒಂದು ಕವಿತೆ ಬರೆದುಕೊಡ ಬೇಕೆಂದು ಹೇಳಿ, ಅದಕ್ಕೆ ಪ್ರತಿಯಾಗಿ ಏನು ಬೇಕು ಎಂದು ಕೇಳಿದರು. ಚಹಾ ಎಂದೆ. ಕಾಕಾನ ಅಂಗಡಿಗೆ ಕರೆದೊಯ್ದು ಮೂರು ಕಪ್ ಚಹಾ ಕೊಡಿಸಿದರು. ಪ್ರತಿಯಾಗಿ ಮೂರು ಕವಿತೆಗಳನ್ನು ಬರೆದುಕೊಟ್ಟೆ. ಇನ್ನೊಂದು ಸಂದರ್ಭದಲ್ಲಿ ನನ್ನ ಕೆಲಸ ಮಾಡಿಕೊಡಲು ಕಾಲೇಜಿನ ಗುಮಾಸ್ತ ಲಂಚ ಕೇಳಿದ. ಸಿಗುವುದಿಲ್ಲ ಎಂದು ತಿಳಿದಾಗ, ಲಂಚವಾಗಿ ಕವಿತೆ ಬರೆದುಕೊಡು ಎಂದು ಕೇಳಿದ. ಬರೆದುಕೊಟ್ಟೆ, ನನ್ನ ಕೆಲಸವು ಆಯ್ತು.~`ಎಂಟನೇ ತರಗತಿಯಲ್ಲಿ ಇದ್ದಾಗ ನಡೆದ ಘಟನೆ. ಶೇಷಾದ್ರಿಪುರದ ಗುಡಿಸಲಿನಂತ ಮನೆಯೊಂದರಲ್ಲಿ ವಾಸವಾಗಿದ್ದೆವು. ಒಂದು ದಿನ ಗ್ರಂಥಾಲಯದಲ್ಲಿ ಬಸವರಾಜ ಕಟ್ಟೀಮನಿ ಅವರ `ಸ್ವಾತಂತ್ರ್ಯ ನಡಿಗೆ~ ಕೃತಿಯನ್ನು ಓದುವ ಮೂಲಕ ಆರಂಭವಾದ ನನ್ನ ಓದಿನ ಹವ್ಯಾಸ ಇಂದಿಗೂ ನಿಂತಿಲ್ಲ.~

`ಯಾರಿಗೆ ಬಂತು, ಎಲ್ಲಿಗೆ ಬಂತು ಸ್ವಾತಂತ್ರ್ಯ...~ ಕವಿತೆಯು ಹೋಟೆಲ್ ಕಾರ್ಮಿಕರನ್ನು ಕುರಿತ ನಾಟಕವೊಂದಕ್ಕೆ ಬರೆದದ್ದು, ಆದರೆ ಈ ನೆಲದಲ್ಲಿ ಎಲ್ಲಿಯವರೆಗೂ ಶೋಷಣೆ, ದಬ್ಬಾಳಿಕೆ ಇರುತ್ತದೆಯೇ ಅಲ್ಲಿಯವರೆಗೂ ಅದು ಪ್ರಸ್ತುತ.~`ನಾನು ಬರೆದ ಕವಿತೆಯೊಂದರಲ್ಲಿ `ಹಣೆಗಳನ್ನು ಕೊರೆಯುತಿಹ ವಿಭೂತಿ, ನಾಮಗಳನ್ನು ಉಜ್ಜುಜ್ಜಿ ಬನ್ನಿ~ ಎಂಬ ಪ್ಯಾರಾ ದೊಡ್ಡ ಬಡಿದಾಟಕ್ಕೆ ಕಾರಣವಾಗಿತ್ತು.ಸುಮಾರು 800 ಮಂದಿ ಅಕ್ಷರಶಃ ಒಂದು ಗಂಟೆತನಕ ಈ ಸಾಲುಗಳನ್ನಿ ಪರ-ವಿರೋಧಿಸಿ ಜಗಳ ಆಡಿದ್ದರು.

ಅದಾದ ನಂತರ ಇಂಥ ಕವಿತೆಗಳನ್ನು ಪ್ರಕಟಿಸದಿರುವಂತೆ ಕೆಲವರು ಭಯ ಹುಟ್ಟಿಸಿದರು. ಆದರೆ ಸಾಹಿತಿಗಳಾದ ಕಿ.ರಂ.ನಾಗರಾಜ್, ಡಿ.ಆರ್.ನಾಗರಾಜ್, ಕಾಳೇಗೌಡ ನಾಗವಾರ ಅವರ ಪ್ರೋತ್ಸಾಹದಿಂದ ಪ್ರಕಟಿಸಿದೆ.ನಾಡಿನ ಜನಗಳೂ ಸಹ, ಇದು ದಲಿತನೊಬ್ಬ ತನಗಾದ ಅನ್ಯಾಯವನ್ನು ಪ್ರಕಟಿಸಿದ್ದಾನೆ ಎಂದು ಸಹಾನುಭೂತಿಯಿಂದ ನೋಡಿದರು. ಬೇರೆ ರಾಜ್ಯಗಳಲ್ಲಾಗಿದ್ದರೆ ಪರಿಸ್ಥಿತಿಯೇ ಬೇರೆಯಾಗುತ್ತಿತ್ತು.

`ನನ್ನಲ್ಲಿ ಬದಲಾವಣೆ ಆಗಿದೆ. ಇಕ್ಕರ‌್ಲಾ, ಒದೀರ‌್ಲಾ ಎಂಬಂಥ ಕವಿತೆಗಳನ್ನು ನಾನೀಗ ಬರೆಯಲಾರೆ~!

ಪ್ರತಿಕ್ರಿಯಿಸಿ (+)