ನಾನು ಒಕ್ಕಲಿಗ ಜಾತಿಗೆ ಸೇರಬಹುದೇ?

7

ನಾನು ಒಕ್ಕಲಿಗ ಜಾತಿಗೆ ಸೇರಬಹುದೇ?

Published:
Updated:

ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಜಂಗಮ ಜಾತಿಯವನಾಗಿರುವ ನನಗೆ ಈ ಜಾತಿಯಲ್ಲಿ ಹುಟ್ಟಿದ್ದೇ ತಪ್ಪು ಎನಿಸುತ್ತಿದೆ. ನನ್ನ ಎರಡು ಮಕ್ಕಳೂ ಕೂಡ (9ನೇ ತರಗತಿ ಹಾಗೂ 12ನೇ ತರಗತಿ) ನಮ್ಮ ಜನಾಂಗವೇ ಇಲ್ಲವಲ್ಲಾ ನಾವು ಬೇರೆ ಜಾತಿ ಜಾತ್ಯಂತರ ಹೊಂದೋಣವೆಂದು ನೂರಾರು ಬಾರಿ ನನ್ನೊಡನೆ ಹೇಳುತ್ತಾರೆ. ನನಗೆ ಗೌಡ(ಒಕ್ಕಲಿಗ) ಜನಾಂಗದ ಬಗ್ಗೆ ಅಪಾರ ಒಲವು ಇದೆ. ಒಕ್ಕಲಿಗ ಜನಾಂಗದವರು ಒಪ್ಪುವುದಾದಲ್ಲಿ  ನಾನು ಕುಟುಂಬ ಸಮೇತ ಜಾತಿ ಬದಲಾಯಿಸುತ್ತೇನೆ.ಕಡಿಮೆ ಜನಸಂಖ್ಯೆ ಉಳ್ಳವರು ಉದ್ದಾರವಾಗಲ್ಲವೆಂಬುದು ನನ್ನ ನಂಬಿಕೆ. ಹೆಚ್ಚು ಜನಸಂಖ್ಯೆಯುಳ್ಳ ಜಾತಿಗೆ ಜಾತ್ಯಂತರಗೊಳ್ಳುವುದೇ ಇದಕ್ಕೆ ಪರಿಹಾರ. ನನ್ನ ಜಾತಿ ಕೀಳು ಅಥವಾ ಮೇಲೆಂದು ನಾನು ಭಾವಿಸುವುದಿಲ್ಲ. ಡಾ. ಬಿ.ಆರ್.ಅಂಬೇಡ್ಕರ್ ಅವರ ಸಿದ್ದಾಂತ ನನಗೆ ತುಂಬಾ ಇಷ್ಟ. ಆದರೂ ಒಕ್ಕಲಿಗ (ಮಾಂಸಹಾರಿ) ಜನಾಂಗಕ್ಕೆ ಸೇರಿಕೊಳ್ಳಲು ಸಿದ್ಧನಿದ್ದೇನೆ. ಇಂದು ರಾಜಕೀಯ ವ್ಯವಸ್ಥೆಯಲ್ಲಿ ಜಾತಿ ಪ್ರಾಬಲ್ಯ ಮೆರೆಯುತ್ತಿದೆ, ಕುರುಬರಿಗೆ ಸಿದ್ದರಾಮಯ್ಯ, ಒಕ್ಕಲಿಗರಿಗೆ ಕುಮಾರಸ್ವಾಮಿ, ಲಿಂಗಾಯತರಿಗೆ ಯಡಿಯೂರಪ್ಪ ನಾಯಕರಾಗುತ್ತಿದ್ದಾರೆ. ನಮ್ಮ ಜನಾಂಗವಾದ ಜಂಗಮರಿಗೆ ಯಾರು ನಾಯಕರಿಲ್ಲ. ಹಾಗಾಗಿ ನಮ್ಮ ಗೋಳು ಕೇಳುವವರೂ ಇಲ್ಲ. ನನ್ನ ಜಾತಿ ಬಿಟ್ಟು ಒಕ್ಕಲಿಗ ಜಾತಿಗೆ ಸೇರಬೇಕೆಂಬ ನನ್ನ ಆಸೆಗೆ  ಆದಿಚುಂಚನಗಿರಿ ಶ್ರೀಗಳು ಸ್ಪಂದಿಸುವರೇ? ಎಂಬುದು ನನ್ನ ಪ್ರಶ್ನೆ.

- ವೀರಭದ್ರಯ್ಯ, ಚಿಕ್ಕಮಲ್ಲನಹೊಳೆ, ಕೆ.ಆರ್.ಪೇಟೆಬ್ರಾಹ್ಮಣಳಾಗಿ ಹುಟ್ಟಬಾರದಿತ್ತುಇತ್ತೀಚೆಗೆ ಮಡಿಕೇರಿಯ ನನ್ನ ಆತ್ಮೀಯರೊಬ್ಬರು ಏನೋ ಕೆಲಸದ ಬಗ್ಗೆ ಮಾತನಾಡಲು ಅವರ ಮನೆಗೆ ಕರೆದಿದ್ದಕ್ಕೆ ಹೋಗಿದ್ದೆ. ಅದು  ಮಧ್ಯಾಹ್ನದ ಹೊತ್ತು. ನನ್ನನ್ನು ಊಟ ಆಗಿದೆಯೇ ಎಂದು ವಿಚಾರಿಸಿದರು. `ಇಲ್ಲ' ಎಂದೆ. ಅದಕ್ಕವರು `ನಮ್ಮ ಮನೆಯಲ್ಲಿಯೇ ಊಟ ಮಾಡಬಹುದಿತ್ತು. ಇವತ್ತು ವೆಜ್ ಮಾಡಿದ್ದೇವೆ. ಆದರೂ ನಿಮಗೆ ಊಟ ಕೊಡುವುದಿಲ್ಲ. ನೀವು ಬ್ರಾಹ್ಮಣರು. ನಮ್ಮ ಮನೆಯಲ್ಲಿ ಊಟ ಮಾಡಬಾರದು' ಎಂದರು. ನಾನು `ನನಗೆ ಆಗುತ್ತದೆ. ಜಾತಿ ನೋಡುವುದಿಲ್ಲ' ಎಂದು ಹೇಳಿದರೂ ಕೇಳದೆ ಹೋಟೆಲಿಗೆ ಕರೆದುಕೊಂಡು ಹೋಗಿ ಊಟ ಕೊಡಿಸಿದರು. ಇದು ಪೇಟೆಗೆ ಸಂಬಂಧಿಸಿದ ವಿಷಯವಾಯ್ತು.ಇನ್ನು ಹೋಟೆಲ್ ಇಲ್ಲದ ನಮ್ಮ ಹಳ್ಳಿಗೆ ಬಂದರೆ ನಾನು ಎಷ್ಟೇ ಹಸಿದಿದ್ದರೂ ಯಾರ ಮನೆಯಲ್ಲೂ ನನಗೆ ಊಟ, ತಿಂಡಿ ಸಿಗುವುದಿಲ್ಲ.(ನಮ್ಮದೊಂದೇ ಬ್ರಾಹ್ಮಣರ ಮನೆ) ಎಳನೀರು, ಹಾಲು ಅಥವಾ ನೀರು ಕುಡಿಯಲು ಕೊಡುತ್ತಾರೆ ಅಷ್ಟೆ. ಇದಕ್ಕೂ ಕಾರಣ ಅದೇ. ನಾನು ಬ್ರಾಹ್ಮಣಳಾಗಿರುವುದು. ಹಾಗಾಗಿ ನಾನು ಹೊರಗೆ ಹೋದಾಗ ಯಾರಾದರೂ ನನ್ನ ಜಾತಿ ಬಗ್ಗೆ ಕೇಳಿದರೆ ನಾನು ತಪ್ಪಿಯೂ ಬ್ರಾಹ್ಮಣಳೆಂದು ಹೇಳುವುದಿಲ್ಲ. ಇನ್ನೊಂದು ವಿಷಯ ಹೇಳಲೇಬೇಕು. ನಮ್ಮ ತೋಟದ ಕೆಲಸಕ್ಕೆ ದಲಿತರು ಬರುತ್ತಾರೆ. ಅವರನ್ನು ನಾನು ಮನೆಯ ಒಳಗೆ ಕರೆದರೆ ಒಬ್ಬರೂ ಬರುವುದಿಲ್ಲ. ಕಾರಣ ಕೇಳಿದರೆ `ಬ್ರಾಹ್ಮಣರ ಮನೆ ಹೊಕ್ಕರೆ ಬ್ರಹ್ಮಶಾಪ ತಟ್ಟುತ್ತದೆ' ಎಂದು ಉತ್ತರಿಸುತ್ತಾರೆ. ನಾನು ಅವರ ಮನೆಗೆ ಹೋದರೆ ನನ್ನ ತಲೆ ಕಂಡಾಕ್ಷಣ ಅಂಗಳಕ್ಕೇ ಕುರ್ಚಿ ತಂದು ಇಟ್ಟು ಕುಳಿತುಕೊಳ್ಳಲು ಹೇಳುತ್ತಾರೆ. ಮನೆ ಒಳಗೆ ಕರೆಯುವುದಿಲ್ಲ. ಈಗ ನೀವೇ ಹೇಳಿ ಈ ಬ್ರಾಹ್ಮಣ ಜನ್ಮ ಬೇಕಾ?

-ಸಹನಾ ಕಾಂತಬೈಲು, ಬಾಲಂಬಿ, ಮಡಿಕೇರಿಶೂದ್ರರಿಗೆ ಜಾತಿಯಿಂದ ಲಾಭ ಇಲ್ಲ`ಜಾತಿ ಸಂವಾದ'ದಲ್ಲಿ ಮುಂದಿಟ್ಟಿರುವ ಪ್ರಶ್ನೆಗೆ ಉತ್ತರಿಸಬೇಕಾದರೆ, ಮೂಲಭೂತವಾಗಿ ಯಾವ ಜಾತಿಯವರಿಗೆ ಜಾತಿ ಅನಿವಾರ್ಯ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಏಕೆಂದರೆ, ಹಿಂದೂಗಳಲ್ಲಿ ಹಲವಾರು ಜಾತಿ, ಉಪಜಾತಿಗಳಿದ್ದು, ಅವುಗಳನ್ನು ಮುಖ್ಯವಾಗಿ ಸವರ್ಣೀಯರು ಹಾಗೂ ಅವರ್ಣೀಯರು, ಅಥವಾ ಸ್ಪೃಶ್ಯರು ಅಥವಾ ಅಸ್ಪೃಶ್ಯರು ಎಂದು ವಿಂಗಡಿಸಲಾಗಿದೆ. ಸವರ್ಣೀಯರು ಅದರಲ್ಲೂ ತಮ್ಮನ್ನು ತಾವು ಮೇಲುಜಾತಿ ಎಂದು ಗುರುತಿಸಿಕೊಂಡಿರುವ ಪುರೋಹಿತಶಾಹಿ ವರ್ಗಗಳಿಗೆ ಖಂಡಿತವಾಗಿಯು ಜಾತಿ ಅನಿವಾರ್ಯ. ಆದರೆ, ಶೂದ್ರರು ಹಾಗೂ ಕೀಳುಜಾತಿ ಎಂದು ಅನಾದಿ ಕಾಲದಿಂದಲೂ ಗುರುತಿಸಲಾಗಿರುವ ಜಾತಿಗಳಿಗೆ ಹರಿಜನರು ಹಾಗೂ ಇತರೆ ಹಿಂದುಳಿದ ಜನಾಂಗಗಳಿಗೆ ಜಾತಿ ಅನಿವಾರ್ಯವಲ್ಲ.

- ಮೂರ್ತಿ ಬಿ.ಎಲ್.ಕೆ.,  ನಂಜನಗೂಡು.ಮಠಗಳಿಂದಾಗಿ ಜಾತಿ

ಜಾತಿ ಖಂಡಿತಾ ಅನಿವಾರ್ಯ ಅಲ್ಲ. ಅದು ನಾವು ನಿರ್ಮಿಸಿಕೊಂಡ ವ್ಯವಸ್ಥೆ ಅಷ್ಟೆ. ರಾಜಕೀಯ ಪಕ್ಷಗಳು ತಮ್ಮ ತಮ್ಮ ಓಟ್ ಬ್ಯಾಂಕ್ ಸೃಷ್ಟಿಗೋಸ್ಕರ ಜಾತಿ - ಜಾತಿಗಳನ್ನು ಎತ್ತಿ ಕಟ್ಟಿ ಅವರವರ ಸಂಘಟನೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಮಠಾಧೀಶರು ತಮ್ಮ ಉಳಿವಿಗಾಗಿ ಆಯಾಯ ಜಾತಿಗಳಿಗೊಂದು ಮಠಗಳನ್ನು ಸೃಷ್ಟಿಸಿ ಜಾತಿಗಳ ಪೋಷಕರಾಗಿದ್ದಾರೆ. ಜಾತಿಗಳಿಗೆ ಮಣೆ ಹಾಕದೆ ಆರ್ಥಿಕವಾಗಿ ಹಿಂದುಳಿದವರಿಗೆ ವಿದ್ಯಾಭ್ಯಾಸಕ್ಕೆ, ಉದ್ಯೋಗಕ್ಕೆ ಅಗತ್ಯವಿರುವ ಸವಲತ್ತು ನೀಡುವ ಯೋಜನೆಗಳನ್ನು ನಮ್ಮನ್ನಾಳುವ ಸರ್ಕಾರಗಳು ದೃಢ ಸಂಕಲ್ಪ ಮಾಡಿ ಜಾರಿಗೊಳಿಸಿದರೆ ಜಾತಿ ಅನಿವಾರ್ಯ ಅಲ್ಲ.

- ಬಿ. ಕೃಷ್ಣಯ್ಯ, ಅರಬಿಳವೆ, ಭದ್ರಾವತಿಜಾತಿ ನಾಶವಾಗಿ ನೀತಿ ಉಳಿಯಲಿ

ಹಿಂದೆ, ಜಾತಿ ಎಂದರೆ ವೃತ್ತಿ ಸೂಚಕವಾಗಿತ್ತು. ದೇಶದಲ್ಲಿನ ಬೇರೆ ಬೇರೆ ಕಸುಬುದಾರರು ನೈಪುಣ್ಯ ಸಾಧಿಸಿದ್ದು ಜಾತಿ ಸಮುದಾಯದ ಒಳಗೇ ಅಲ್ಲವೆ? ಕುಂಬಾರ, ಕಂಬಾರ, ಬಡಗಿ, ಕಂಚುಗಾರ, ಗಾಣಿಗ, ಮೀನುಗಾರ, ಹೂಗಾರ ಇತ್ಯಾದಿ  ಜಾತಿಗೆ ಸೇರಿದವರು ಯಾವ ಶಾಲೆಯಲ್ಲೂ ಓದದೆ, ಯಾವ ತರಬೇತಿಯನ್ನೂ ಪಡೆಯದೆ, ಯಾವ ಶುಲ್ಕವನ್ನು ಕಟ್ಟದೆ ತಮ್ಮ ಎಳೆ ವಯಸ್ಸಿನಲ್ಲಿಯೇ ಮನೆಯ ಹಿರಿಯರಿಂದಲೇ ತಮ್ಮ ಕುಲಕಸುಬುಗಳಲ್ಲಿ ಪ್ರಾವೀಣ್ಯ ಪಡೆಯುತ್ತಿದ್ದು ಗ್ರಾಮೀಣ ಜನರ ಬೇಡಿಕೆಯನ್ನು ಪೂರೈಸುತ್ತಿದ್ದರು.

ಗ್ರಾಮೀಣ ಸಮಾಜದಲ್ಲಿ ಈ ರೀತಿಯ ಕಸುಬುದಾರರ ಪರಸ್ಪರ ಅವಲಂಬನೆಯಿಂದ ಸಮಾಜದ ಸ್ನೇಹ ಸೌಹಾರ್ದದ ಹೆಣಿಗೆ ಸುಮಧುರವಾಗಿತ್ತು. ದ್ವೇಷ- ಅಸೂಯೆಗಳಿಗೆ ಅವಕಾಶವಿರುತ್ತಿರಲಿಲ್ಲ. ಜಾತಿ ಕಲಹಗಳು ತುಂಬ ಕಡಿಮೆ ಇರುತ್ತಿದ್ದವು.  ಇಂದಿನ ಸಂದರ್ಭ ಇದಕ್ಕೆ  ವ್ಯತಿರಿಕ್ತವಾಗಿದೆ. ಆಧುನಿಕ ಯುಗದ ಹೊಸ ಸವಲತ್ತುಗಳನ್ನು ಪಡೆದ ಜನಸಮೂಹ ಒಬ್ಬರನ್ನೊಬ್ಬರು ವಂಚಿಸಲು ಹವಣಿಸುತ್ತಿದೆ. 

ಹೀಗೆ ಒಬ್ಬನನ್ನು ಮತ್ತೊಬ್ಬ ಹಿಮ್ಮೆಟ್ಟಿಸುವಾಗ ಬಳಸುವ ತಂತ್ರಗಾರಿಕೆಯಲ್ಲಿ ಸುಲಭದಲ್ಲಿ ಜಾತಿ ಬಳಕೆ ಆಗಿಬಿಡುತ್ತದೆ. ಕುತಂತ್ರಿಗಳ ಕೈಯಲ್ಲಿ ಜಾತಿ ಒಂದು ಹರಿತವಾದ ಆಯುಧವಾಗಿದೆ. ನಾವೆಷ್ಟೇ ಜಾತಿಯನ್ನು ನಿರಾಕರಿಸಿದರೂ ಹೃದಯದ ಒಂದು ಮೂಲೆಯಲ್ಲಿ ಜಾತಿ ಗೌಪ್ಯವಾಗಿ ಅಡಗಿಕೊಂಡಿರುತ್ತದೆ. ಅದು ನಮ್ಮ ಸ್ವಾರ್ಥಕ್ಕೆ ಇಲ್ಲವೇ ಮತ್ತೊಬ್ಬರ ಸ್ವಾರ್ಥಕ್ಕೆ ಬಳಕೆಯಾಗುತ್ತಿರುತ್ತದೆ. ಮುಗ್ಧ ಜನರ ಜಾತಿ ಭಾವನೆ ಸ್ವಾರ್ಥಿ ಜನರ ಹೊಟ್ಟೆ ತುಂಬಿಸಲು ಬಳಕೆಯಾಗುತ್ತಿರುವುದೇ ಹೆಚ್ಚು.

- ಜೋಗನಹಳ್ಳಿ ಗುರುಮೂರ್ತಿ, ಪಿರಿಯಾಪಟ್ಟಣ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry