ನಾನು ಚೈತನ್ಯ! ಡಿಫರೆಂಟ್ ಅಲ್ಲ...

7

ನಾನು ಚೈತನ್ಯ! ಡಿಫರೆಂಟ್ ಅಲ್ಲ...

Published:
Updated:
ನಾನು ಚೈತನ್ಯ! ಡಿಫರೆಂಟ್ ಅಲ್ಲ...

`ಆ ದಿನಗಳು~ ಖ್ಯಾತಿಯ ನಿರ್ದೇಶಕ ಕೆ.ಎಂ. ಚೈತನ್ಯ ಹೊಸತೊಂದು ಮದ್ದು ಅರೆದಿದ್ದಾರೆ. ಆದರೆ ಇದು ಆ ದಿನಗಳಂತೆ ಗಂಭೀರವಲ್ಲ, `ಸೂರ್ಯಕಾಂತಿ~ಯಂತೆ ಶುದ್ಧ ಪ್ರೇಮಪಾಕವೂ ಅಲ್ಲ. ಬದಲಿಗೆ ಪೂರ್ಣ ಪ್ರಮಾಣದ ನಗೆಯ ರಸಾಯನ.ಚಿತ್ರದ ಪ್ರಮುಖ ಭೂಮಿಕೆಯಲ್ಲಿರುವುದು ನಟ ಬುಲೆಟ್ ಪ್ರಕಾಶ್, ಶೃಂಗ ಹಾಗೂ ಶ್ರವಂತ್ ರಾವ್. ಶೃಂಗ ರಂಗಭೂಮಿಯ ಹಿನ್ನೆಲೆಯುಳ್ಳವರು. ಜಗತ್ತಿನ ಅನೇಕ ಕಡೆ ಸುದ್ದಿ ಮಾಡಿದ `ಬಾಯ್ ವಿತ್ ದ ಸೂಟ್‌ಕೇಸ್~ ನಾಟಕದ ಸೂತ್ರಧಾರರಲ್ಲೊಬ್ಬರು. ಇತ್ತೀಚೆಗೆ ಬಿಡುಗಡೆಯಾದ `ನಾವಿಕ~ ಚಿತ್ರದಲ್ಲಿ ಮಿಂಚಿದವರು ಶ್ರವಂತ್.ಈ ಮೂವರು ಹರಿಸುವ ಹಾಸ್ಯಸುಧೆಯೇ `ಪರಾರಿ~. ನಟಿ ಶುಭಾ ಪೂಂಜಾ ಹಾಸ್ಯ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಮತ್ತೊಬ್ಬ ನಟಿ ಜಾಹ್ನವಿ ಕಾಮತ್ ಕೂಡ ರಂಗಭೂಮಿಯ ಹಿನ್ನೆಲೆ ಉಳ್ಳವರು. ಚೈತನ್ಯರ `ಮುಗಿಲು~ ಧಾರಾವಾಹಿಯಲ್ಲಿ ನಟಿಸಿದ ಬಳಿಕ ತಮಿಳು ಚಿತ್ರಗಳಲ್ಲಿ ಅವಕಾಶ ಗಿಟ್ಟಿಸಿಕೊಂಡವರು. ಕತೆ ಚೈತನ್ಯ ಅವರದ್ದೇ. ನಿರ್ದೇಶಕ ಎಸ್. ಮೋಹನ್ ಚಿತ್ರಕತೆ, ಸಂಭಾಷಣೆ ಬರೆಯುತ್ತಿದ್ದಾರೆ. ಸಂಗೀತ ಸುಧೆ ಹರಿಸುತ್ತಿರುವುದು ಅನೂಪ್ ಸೀಳಿನ್. ಎಂದಿನಂತೆ ಚೈತನ್ಯರ ಕಾಯಂ ಛಾಯಾಗ್ರಹಕ ಎಚ್.ಸಿ. ವೇಣು ಇಲ್ಲಿಯೂ ದುಡಿಯಲಿದ್ದಾರೆ.`ಸೂರ್ಯಕಾಂತಿ~ ಚಿತ್ರದ ನಂತರ ಚೈತನ್ಯ ಗಾಂಧಿನಗರದಿಂದ ಕೊಂಚ ದೂರ ಉಳಿದಿದ್ದರು. `ಆ ದಿನಗಳು~ ರೀತಿಯ ಗಂಭೀರ ಚಿತ್ರವನ್ನು ಮಾಡಬಹುದು ಎಂದು ಗಾಂಧಿನಗರದ ಲೆಕ್ಕಾಚಾರವಾಗಿತ್ತು. ಆದರೆ ಈಗ ಅದೆಲ್ಲಾ ತಲೆಕೆಳಕಾಗಿದೆ. ಗಂಭೀರ ವಸ್ತುವಿನಿಂದ ಹಾಸ್ಯಕ್ಕೆ ಅವರು ಹೊರಳಿದ್ದಾರೆ.ಈ ಬದಲಾವಣೆಗೆ ಅವರ ಬಳಿ ವಿಶೇಷ ಕಾರಣಗಳೇನೂ ಇಲ್ಲ. ಹಾಗೆಯೇ ಇದು ಅನಿವಾರ್ಯವೂ ಆಗಿರಲಿಲ್ಲವಂತೆ. `ನಟ ಒಂದೇ ರೀತಿಯ ಪಾತ್ರಗಳನ್ನು ಮಾಡುತ್ತ ಹೋದರೆ ಹೇಗೆ ಜಡ್ಡುಗಟ್ಟುವನೋ ಹಾಗೆಯೇ ನಿರ್ದೇಶಕ ಕೂಡ~ ಎಂಬ ಎಚ್ಚರಿಕೆ ಅವರದು. ಅದನ್ನು ಇನ್ನಷ್ಟು ಬಿಡಿಸಿ ಹೇಳಲು ತಮ್ಮ ರಂಗಭೂಮಿಯ ದಿನಗಳತ್ತ ಹೊರಳಿದರು.

 

`ದಂಗೆಯ ಮುಂಚಿನ ದಿನಗಳು~, `ಸಂಕ್ರಾಂತಿ~ ಅವರು ಪ್ರಯೋಗಿಸಿದ ಗಂಭೀರ ನಾಟಕಗಳು. ಇದಕ್ಕೆ ತದ್ವಿರುದ್ಧವಾಗಿ `ಸಾಂಬ ಸದಾಶಿವ ಪ್ರಹಸನ~ದಲ್ಲಿ ನಗೆಯ ಬುಗ್ಗೆ. ಅಂದಹಾಗೆ ಅವರು ಈ ಹಿಂದೆ ತೆಲುಗು ಚಿತ್ರವೊಂದನ್ನು ನಿರ್ದೇಶಿಸುವ ಬಗ್ಗೆ ಸುದ್ದಿ ಹರಡಿತ್ತು. ಈಗ ಅದೇ ಕತೆ ಅವರೊಳಗೆ ಇನ್ನಷ್ಟು ಹರಳುಗಟ್ಟಿದೆ. ತೆಲುಗು ಸಿನಿಮಾಯಾನ ಮತ್ತೆ ಜೀವಂತಿಕೆ ಪಡೆಯುವಂತೆ ಮಾಡಿದೆ.ಮಾರ್ಚ್ ಹೊತ್ತಿಗೆ ಅವರ ಮನೋವೈಜ್ಞಾನಿಕ ಥ್ರಿಲ್ಲರ್ ಸೆಟ್ಟೇರಲಿದೆ. ನಿರ್ಮಾಪಕರು ಮತ್ತೊಂದು ಚಿತ್ರದಲ್ಲಿ ಮಗ್ನರಾಗಿರುವುದರಿಂದ ಈ ವಿಳಂಬ ಅಷ್ಟೇ ಎನ್ನುತ್ತಾರೆ ಅವರು. ಚಿತ್ರದ ನಾಯಕಿ ನಯನತಾರಾ ಆಗಬೇಕೆಂಬುದು ಅವರ ಲೆಕ್ಕಾಚಾರ. ನಾಯಕ ಯಾರು ಎಂಬುದು ಇನ್ನೂ ಖಾತ್ರಿಯಾಗಿಲ್ಲ.`ಪರಾರಿ~ಯನ್ನು ನಿರ್ಮಿಸುತ್ತಿರುವುದು ಶಕ್ತಿ ಮೂವೀಸ್ ವರ್ಲ್ಡ್ ವೈಡ್ ಎಂಬ ನಿರ್ಮಾಣ ಸಂಸ್ಥೆ. ಇಂತಹ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಕೆಲಸ ಮಾಡುವುದು ಸುಲಭ ಎನ್ನುವ ಅವರಿಗೆ  ವಾಣಿಜ್ಯ ಪತ್ರಕರ್ತರಾಗಿ ದುಡಿದ ಅನುಭವ ಸಾಕಷ್ಟು ಸಹಾಯ ಒದಗಿಸಿದೆಯಂತೆ. ಕಾರ್ಪೊರೇಟ್ ಸಂಸ್ಥೆಗಳು ವಿನಿಯೋಗಕ್ಕೆ ಹಿಂದುಮುಂದು ನೋಡುವುದಿಲ್ಲ, ಒಂದು ಚಿತ್ರ ಸೋತರೂ ಮತ್ತೊಂದು ಚಿತ್ರ ಸೃಜಿಸುವ `ಚೈತನ್ಯ~ ಅವರಲ್ಲಿರುತ್ತದೆ ಎಂಬ ನಂಬಿಕೆ ಅವರದು.`ಪರಾರಿ~ ಹೇಗೆ ಭಿನ್ನ ಎಂಬ ಪ್ರಶ್ನೆಗೆ ಮಾತ್ರ ಅವರದು ಕೊಂಚ ಖಡಕ್ ಉತ್ತರ. ಗಾಂಧಿನಗರದ ಮಂದಿಯಂತೆ ಸಿದ್ಧ ಹೇಳಿಕೆಗಳನ್ನು ನೀಡಲು ಅವರಿಗೆ ಬಿಲ್‌ಕುಲ್ ಇಷ್ಟವಿಲ್ಲ. `ನಾನು ಡಿಫರೆಂಟ್ ಅಲ್ಲ. ಸಿನಿಮಾ ಭಿನ್ನವಾಗಿದ್ದರೆ ಪ್ರೇಕ್ಷಕರು ಮೆಚ್ಚುತ್ತಾರೆ~ ಎನ್ನುತ್ತ ಮೊನಚಾಗುತ್ತಾರೆ. ಇದೇ ಹನ್ನೊಂದರಿಂದ `ಪರಾರಿ~ ಚಿತ್ರೀಕರಣ ಆರಂಭ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry