`ನಾನು ತಪ್ಪು ಮಾಡಿದ್ದರೆ ಕ್ಷಮಿಸಿಬಿಡಿ'

7

`ನಾನು ತಪ್ಪು ಮಾಡಿದ್ದರೆ ಕ್ಷಮಿಸಿಬಿಡಿ'

Published:
Updated:

ಅಹಮದಾಬಾದ್(ಪಿಟಿಐ): `ನಾನು ಏನಾದರೂ ತಪ್ಪು ಮಾಡಿದ್ದರೆ, ದಯವಿಟ್ಟು ಕ್ಷಮಿಸಿಬಿಡಿ..' ಚುನಾವಣೆಯಲ್ಲಿ ಜಗಳಿಸಿದ ನಂತರ ನರೇಂದ್ರ ಮೋದಿ ಅವರು, ಮೊದಲ ಬಾರಿಗೆ ಲಕ್ಷಾಂತರ ಮತದಾರರ ಎದುರು ನಿಂತಾಗ ಉದ್ಘರಿಸಿದ ಮಾತುಗಳಿವು !


ಮತ ಎಣಿಕೆ ನಂತರ ನಡೆದ ಬಹಿರಂಗ ಸಭೆಯಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, `ಎಲ್ಲೋ ತಪ್ಪುಗಳು ನಡೆದಿರುತ್ತವೆ. ನಾನು ಎಲ್ಲೋ ಒಂದು ಕಡೆ ತಪ್ಪು ಮಾಡಿರುವ ಸಾಧ್ಯತೆಯೂ ಇರುತ್ತದೆ. ಅದಕ್ಕಾಗಿ ಗುಜರಾತ್‌ನ ಆರು ಕೋಟಿ ಮತದಾರರಲ್ಲಿ ನಾನು ಕ್ಷಮೆ ಯಾಚಿಸುತ್ತೇನೆ' ಎಂದು ವಿನಂತಿಸಿದರು.

 

`ಈ ಗೆಲುವು ಕೇವಲ ನರೇಂದ್ರ ಮೋದಿಯವರ ಗೆಲುವಲ್ಲ. ಗುಜರಾತ್‌ನ ಆರು ಕೋಟಿ ಮತದಾರರ ಹಾಗೂ ದೇಶದ ಸಮೃದ್ಧಿ ಮತ್ತು ಅಭಿವೃದ್ಧಿ  ಬಯಸುವ ಎಲ್ಲ ಭಾರತೀಯರ ಗೆಲುವು' ಎಂದು ಮೋದಿ ಬಣ್ಣಿಸಿದರು.

`ನನಗೆ ನೀವು ಅಧಿಕಾರ ಕೊಟ್ಟಿದ್ದೀರಿ. ಹಾಗೆ ಮನಃಪೂರ್ತಿಯಾಗಿ ಹಾರೈಸಿ. ಹಾಗಾದಾಗ ಮುಂದೆ ನಾನು ತಪ್ಪು ಮಾಡುವುದಿಲ್ಲ ' ಎಂದು ಭರವಸೆ ನೀಡಿದರು.

 

`ನನಗೆ ಯಾರೂ ಪ್ರಮಾಣ ಪತ್ರ ನೀಡುವ ಅಗತ್ಯವಿಲ್ಲ. ಮತದಾರರು ಈಗಾಗಲೇ ಬಹುದೊಡ್ಡ ಪಾರಿತೋಷಕವನ್ನು ನೀಡಿದ್ದಾರೆ' ಎಂದು ಹೇಳುತ್ತಾ, ತನ್ನನ್ನು ಟೀಕಿಸುವ ಬಂಡಾಯಗಾರರಿಗೆ ತಿರುಗೇಟು ನೀಡಿದರು. ಭಾಷಣ ಆಲಿಸುತ್ತಾ `ಮೋದಿ.. ಪ್ರಧಾನಿ.. ಪ್ರಧಾನಿ...' ಎಂಬ ಘೋಷಣೆಗಳನ್ನು ಕೂಗುತ್ತಿದ್ದ ಅಭಿಮಾನಿಗಳಿಗೆ, `ನಮ್ಮ ಪಕ್ಷದ ಗೆಲುವನ್ನು ನಿಮಗೆ ಅರ್ಪಿಸುತ್ತಿದ್ದೇನೆ' ಎಂದರು. 

 

ಪಕ್ಷ ಹಾಗೂ ಮತದಾರರ ಸಾಂಘಿಕ ಪ್ರಯತ್ನದಿಂದಾಗಿ `ಗುಜರಾತ್ ರಾಜ್ಯವನ್ನು ಇಂಥ ಉತ್ತಮ ಸ್ಥಿತಿಗೆ  ಕೊಂಡೊಯ್ಯಲು ಸಾಧ್ಯವಾಗಿದೆ' ಎಂದು ಮೋದಿ ಅಭಿಪ್ರಾಯಪಟ್ಟರು.

 

ಇಡೀ ಗುಜರಾತ್ ಚುನಾವಣೆ ಅಭಿವೃದ್ಧಿಯ ಹೆಸರಲ್ಲಿ ನಡೆದಿದೆ. ಜನ ಕೂಡ `ಅಭಿವೃದ್ಧಿ ಮಂತ್ರ'ಕ್ಕೇ ಮನಸೋತು, ಮತ ಚಲಾಯಿಸಿದ್ದಾರೆ. ಇದು ಚುನಾವಣೆಗೇ ಒಂದು ಮಾದರಿ ಎಂದರು.

 

ಭಿನ್ನಮತೀಯನ ಪರಾಭವ: ಮೋದಿ ನಾಯಕತ್ವದ ವಿರುದ್ಧ ಸಿಡಿದೆದ್ದು `ಸದ್ಭಾವನಾ ಮಂಚ್'ನ ಬ್ಯಾನರ್ ಅಡಿ ಸ್ಪರ್ಧಿಸಿದ್ದ ಬಿಜೆಪಿ ಬಂಡುಕೋರ ಶಾಸಕ ಕನು ಕಲ್ಸಾರಿಯಾ ಭಾವನಗರ ಜಿಲ್ಲೆಯ ಗರಿಯಾಧರ್ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಎದುರು ಸೋತಿದ್ದಾರೆ.

 

ಕಲ್ಸಾರಿಯಾ 10,963 ಮತ ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಕೇಶುಭಾಯ್ ನಕರೈ 53,377 ಮತ ಪಡೆದಿದ್ದಾರೆ.

ಈ ಜಿಲ್ಲೆಯಲ್ಲಿ ನಿರ್ಮಾ ಸಿಮೆಂಟ್ ಘಟಕ ಸ್ಥಾಪನೆ ವಿರುದ್ಧ ಯಶಸ್ವಿಯಾಗಿ ಹೋರಾಡಿದ್ದ ಕಲ್ಸಾರಿಯಾ `ಸದ್ಭಾವನಾ ಮಂಚ್' ಸ್ಥಾಪಿಸಿ ಆರು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರು. ಈ ಎಲ್ಲರೂ ಸೋತಿದ್ದಾರೆ.

 

ಅಮಿತ್ ಷಾಗೆ ಜಯ: ಸೋಹ್ರಾಬುದ್ದೀನ್ ಶೇಕ್ ಮತ್ತು ತುಳಸಿ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿ, ಮಾಜಿ ಗೃಹ ಸಚಿವ ಅಮಿತ್ ಷಾ ಅಹಮ ದಾಬಾದ್‌ನ ನರನ್‌ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೀತುಭಾಯ್ ಪಟೇಲ್ ಎದುರು 30,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

 

ನರೇಂದ್ರ ಮೋದಿ ಅವರ ಆಪ್ತರಾದ ಅಮಿತ್ ಷಾ ಸುಪ್ರೀಂಕೋರ್ಟ್ ಅನುಮತಿ ನೀಡಿದ ಎರಡು ವರ್ಷಗಳ ಬಳಿಕ ಗುಜರಾತ್‌ಗೆ ಮರಳಿದ್ದಾರೆ.ಕೇಶುಭಾಯ್ ಆಶೀರ್ವಾದ ಪಡೆದ ಮೋದಿ


ಮೂರನೇ ಬಾರಿ ಸತತ ಗೆಲುವು ಸಾಧಿಸಿದ ನಂತರ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಏನು ಮಾಡಿದರು ಗೊತ್ತೆ?

 


ತಮ್ಮ ವಿರುದ್ಧ ಸೆಡ್ಡು ಹೊಡೆದು, ಬಿಜೆಪಿಯಿಂದ ಹೊರ ನಡೆದಿದ್ದ ಗುಜರಾತ್ ಪರಿವರ್ತನ ಪಕ್ಷದ (ಜಿಪಿಪಿ) ಅಧ್ಯಕ್ಷ 82 ವರ್ಷದ ಹಿರಿಯ ಕೇಶುಭಾಯ್ ಪಟೇಲ್ ಅವರ ಮನೆಗೆ ಹೋಗಿ ಆಶೀರ್ವಾದ ಪಡೆದರು. ಅವರ ಜಿಪಿಪಿ ಪಕ್ಷ 170 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರೂ ಪಕ್ಷದ ಅಧ್ಯಕ್ಷ ಕೇಶುಭಾಯ್ ಸೇರಿದಂತೆ ಇಬ್ಬರು ಮಾತ್ರ ಜಯ ಗಳಿಸಿದ್ದಾರೆ.

 


ಮೋದಿ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದರು. ಅವರಿಗೆ ಅಭಿನಂದನೆ ಸಲ್ಲಿಸಿದೆ ಎಂದು ಕೇಶುಭಾಯ್ ಹೇಳಿದರು. ಚುನಾವಣಾ ಪ್ರಚಾರದ ವೇಳೆ ಕೇಶುಭಾಯ್ ಮೋದಿ ಅವರನ್ನು ಹಿಟ್ಲರ್‌ಗೆ ಹೋಲಿಸಿದ್ದರು. ಅವರೊಬ್ಬ ರಾಕ್ಷಸ ಎಂದೂ ಟೀಕಿಸಿದ್ದರು.

 


ಮಣಿನಗರದಲ್ಲಿ ಮುಖ್ಯಮಂತ್ರಿಗೆ ಗೆಲುವು


ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮಣಿನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶ್ವೇತಾ ಭಟ್‌ಗಿಂತ  86,373 ಮತ ಜಾಸ್ತಿ ಗಳಿಸಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.

 


ಮೋದಿ ಅವರಿಗೆ 1,20,470 ಮತಗಳು ಬಿದ್ದರೆ, ಶ್ವೇತಾ ಅವರಿಗೆ 34,097 ಮತಗಳು ಬಿದ್ದಿವೆ. ಕಳೆದ ಚುನಾವಣೆಯಲ್ಲಿ ಅವರು 87,000 ಮತಗಳ ಅಂತರದಲ್ಲಿ ಜಯ ಗಳಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry