ನಾನು, ನನ್ನ ಕನಸು...

7

ನಾನು, ನನ್ನ ಕನಸು...

Published:
Updated:

ಮಕ್ಕಳ ಭಾವಪ್ರಪಂಚವೇ ಹಾಗೆ... ಸದಾ ಹೊಸತನದತ್ತ ಸೆಳೆತ. ಕಣ್ಣಿಗೆ ಕಂಡದ್ದೆಲ್ಲಾ ಬೇಕೆನ್ನುವ ಮುಗ್ಧತೆ. ಅವರ ಪ್ರತಿಭೆ ಅದೆಷ್ಟೋ ಬಾರಿ ಹುಬ್ಬೇರುವಂತೆ ಮಾಡುವುದಂತೂ ಸುಳ್ಳಲ್ಲ. ಅಂಥದ್ದೇ ಮತ್ತೊಂದು ಸಾಧನೆ ಇಲ್ಲಿದೆ. ಸುತ್ತಮುತ್ತಲ ಪರಿಸರದಲ್ಲಿ ಕಂಡ ಭಾವವನ್ನು ಕುಂಚ ಹಿಡಿದು ಪುನರ್ ಸೃಷ್ಟಿಸುವುದು ಕಲಾವಿದರ ಒಂದು ಬಗೆಯಾದರೆ ತಮ್ಮನ್ನೇ ತಾವು ಕನ್ನಡಿಗೆ ಒಡ್ಡಿಕೊಂಡು ತಮ್ಮ ಕಾಣದ ಮುಖವನ್ನು ಚಿತ್ರದಲ್ಲಿ ಬಿಂಬಿಸುವುದು ಇನ್ನೊಂದು ಬಗೆ.

 

ಮೇರು ಕಲಾವಿದರೆಲ್ಲಾ ಮೊದಲ ಪ್ರಕಾರಕ್ಕೇ ಒಗ್ಗಿಹೋಗಿ, ತಾವು ಕಂಡದ್ದನ್ನೇ ಮತ್ತಷ್ಟು ಮನೋಜ್ಞವಾಗಿ ತೋರುವ ಹಾದಿ ಹಿಡಿದಿದ್ದರೆ, ಇಲ್ಲೊಂದಿಷ್ಟು ಮಕ್ಕಳು ತಮ್ಮದೇ ಭಾವಚಿತ್ರವನ್ನು ಕುಂಚದಲ್ಲಿ ಬಿಡಿಸಿ ವಿಶಿಷ್ಟತೆ ಮೆರೆದಿದ್ದಾರೆ.ಈ ಮಕ್ಕಳೆಲ್ಲಾ 7ರಿಂದ 14 ವರ್ಷದೊಳಗಿನವರು. ಇಲ್ಲಿ ಮಕ್ಕಳು ತಮಗೇ ಅರಿವಿಲ್ಲದಂತೆ ವ್ಯಕ್ತಿತ್ವದ ಆಳಕ್ಕಿಳಿದು, ಭಾವಚಿತ್ರದ ಮೂಲಕ ಅಂತರಾಳ ಬಿಚ್ಚಿಟ್ಟಿದ್ದಾರೆ. ತಮ್ಮ ವಯಸ್ಸು ಹಾಗೂ ಮನಸ್ಸಿಗೆ ಹತ್ತಿರವಾದ ಪುಟ್ಟ ಜಗತ್ತೇ ಇವರ ಚಿತ್ರಗಳಲ್ಲಿ ಅನಾವರಣಗೊಂಡಿವೆ. ಇವರು ತಮ್ಮನ್ನು ತಾವೇ ಕನ್ನಡಿಯಲ್ಲಿ ನೋಡಿಕೊಂಡು ಚಿತ್ರಿಸಿಕೊಳ್ಳುವ ಕಲಾಪ್ರಕಾರ `ಸೆಲ್ಫ್ ಪೋರ್ಟ್ರೇಟ್~ ಅಥವಾ `ಸ್ವಭಾವಚಿತ್ರ~. ಹೀಗೆ ಮೂಡಿರುವ ಕಲಾಕೃತಿಗಳು ಇದೇ 13ರಿಂದ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಳ್ಳಲಿವೆ.ಅದಕ್ಕೂ ಮುನ್ನ 12 ದಿನ ನಡೆದ ಕಾರ್ಯಾಗಾರದಲ್ಲಿ 12 ಪುಟಾಣಿಗಳು ಪಾಲ್ಗೊಂಡಿದ್ದರು. ಒಂದು ಚಿತ್ರದ ಚೌಕಟ್ಟಿನೊಳಗೆ ಇರಿಸಿದ ದೊಡ್ಡ ಕನ್ನಡಿಯನ್ನು ಗೋಡೆಗೆ ತೂಗು ಹಾಕಲಾಗಿತ್ತು. ಅದರಲ್ಲಿ ಕಾಣುವ ಪ್ರತಿಬಿಂಬ ನೋಡಿಕೊಂಡು ಅದನ್ನೇ ಬಣ್ಣಗಳಲ್ಲಿ ಪಡಿಮೂಡಿಸುವ ಸವಾಲನ್ನು ಪುಟಾಣಿಗಳಿಗೆ ಒಡ್ಡಲಾಗಿತ್ತು.`ಮೊದಲಿಗೆ ನಮ್ಮದೇ ಚಿತ್ರ ಬರೆಯುವುದು ಕಷ್ಟ ಎನಿಸಿತು. ಬಳಿಕ ಅಧ್ಯಾಪಕರ ನಿರ್ದೇಶನದಂತೆ ಕನ್ನಡಿ ನೋಡಿಕೊಂಡು ಬರೆದೆ. ಹಿನ್ನೆಲೆಯಲ್ಲಿ ನಮಗಿಷ್ಟದ ದೃಶ್ಯ ಬಿಡಿಸಲು ಅವಕಾಶ ನೀಡಿದ್ದರು. ಕನ್ನಡಿಯಲ್ಲಿ ಈ ಹಿಂದೆ ನಮ್ಮನ್ನು ನಾವು ನೋಡಿಕೊಂಡಿದ್ದಕ್ಕಿಂತ ಕ್ಲೀನ್ ಆಗಿ ನೋಡಲು ಅಲ್ಲಿ ಅವಕಾಶ ಸಿಕ್ಕಿತ್ತು.ಕಾರ್ಯಾಗಾರದ ಹನ್ನೆರಡು ದಿನಗಳ ಅನುಭವ ಅದ್ಭುತವಾಗಿತ್ತು~ ಎನ್ನುತ್ತಾಳೆ ವಿದ್ಯಾರ್ಥಿ ಮಾನಸ.ಆಕೆ ಚಿತ್ರಕ್ಕೆ ಹಿನ್ನೆಲೆಯಾಗಿ ಮೂಡಿಸಿದ್ದು ನಗರದ ವಿಹಂಗಮ ನೋಟ, ಮನೆ, ಮಹಡಿ, ವಾಹನ ಸಂಚಾರ. ಇವೇ ಈ ಯುವ ಕಲಾವಿದೆಯ ಕೌಶಲ್ಯಕ್ಕೆ ಸಾಕ್ಷಿ. `ಅನಿವಾರ್ಯದ ನಗರ ಜೀವನ ಹಿತವೇನಲ್ಲ~ ಎನ್ನುವ ಶೀತಲ್ ತನ್ನ ಚಿತ್ರಕ್ಕೆ ನೀಡಿರುವ ಶೀರ್ಷಿಕೆ `ಈವ್‌ನಿಂಗ್~.

 

ನೀಲಿ ಆಕಾಶ ಹಾಗೂ ಎರಡು ಉದ್ದವಾಗಿರುವ ಕಟ್ಟಡಗಳ ನಡುವೆ ತನ್ನ ಚಹರೆಯ ಚಿತ್ರ ಬರೆದುಕೊಂಡಿರುವ ಆಕೆಯ ಮೊಗದಲ್ಲಿ ಸಾರ್ಥಕ್ಯದ ಮಿಂಚು. `ನಾನೊಬ್ಬ ಕಲಾವಿದ~ ಎಂಬ ಶೀರ್ಷಿಕೆ ನೀಡಿರುವ ಅಜಿತ್, ತನ್ನ ಕಲಾಕೃತಿಯಲ್ಲೊಂದು ಪುಸ್ತಕ ಬಿಡಿಸಿದ್ದಾನೆ. ಏಳರ ಹರೆಯದ ತಾನ್ವಿ ತನ್ನ ಚಿತ್ರದ ಜೊತೆಗೆ ಸ್ನೇಹಿತರನ್ನೂ ಬರೆಯುವ ಮೂಲಕ ಚೌಕಟ್ಟಿನಾಚೆಗಿನ ಚಿಂತನೆ ಮಾಡಿದ್ದಾಳೆ.ಅವಳು ಚಿತ್ರಕ್ಕೆ ಇಟ್ಟಿರುವ ಶೀರ್ಷಿಕೆ `ಮೈ ಫ್ರೆಂಡ್~. ಮಿಠಾಯಿ ಬಣ್ಣಗಳನ್ನು ಬಳಸಿರುವುದು ಅವಳ ಕ್ರಿಯಾಶೀಲತೆಗೆ ಸಾಕ್ಷಿ. ಈ ಎಲ್ಲಾ ಪುಟ್ಟ ಕಲಾವಿದರು ಬಳಸಿರುವುದು ನುರಿತ ಕಲಾವಿದರಿಗೂ ಸವಾಲೊಡ್ಡುವ ತೈಲವರ್ಣ ಮಾಧ್ಯಮ.ಇದೇ ಥೀಮ್ ಅನ್ನು ಛಾಯಾಚಿತ್ರ ವಿಭಾಗದಲ್ಲೂ ಮುಂದುವರೆಸಿ, ಮಕ್ಕಳು ಸ್ವ-ಭಾವಚಿತ್ರ ತೆರೆಯಲೂ ಇಲ್ಲಿ ತರಬೇತಿ ನೀಡಲಾಗಿದೆ. “ಪುಟಾಣಿಗಳು `ಟೈಮರ್~ ಬಳಸುವ ಮುಖಾಂತರ ತಮ್ಮ ಹಾಗೂ ಗೆಳೆಯರೊಂದಿಗಿನ ಚಿತ್ರ ತೆಗೆಯಲು ಅವಕಾಶ ನೀಡಲಾಗಿತ್ತು.

 

ಬಹುತೇಕ ಪುಟಾಣಿಯರು ತಮ್ಮನ್ನು ಚಿತ್ರದ ನಾಯಕಿಯ ಪೋಸ್‌ನಲ್ಲೋ ಮಾಡೆಲ್ ರೀತಿಯಲ್ಲೋ ನಿಲ್ಲುತ್ತಿದ್ದರು. ಮಕ್ಕಳ ಮೇಲೆ ಮಾಧ್ಯಮದ ಪ್ರಭಾವ ಎಷ್ಟಿದೆ ಎಂಬುದರ ಅರಿವು ಇದರಿಂದ ನಮಗಾಯಿತು. ಹಾಗೆಂದು ಇದು ತಪ್ಪೇನಲ್ಲ. ಸತ್ಯವನ್ನು ಮರೆಮಾಚದೆ ಮುಗ್ಧತೆ ಬಿಂಬಿಸುವ ಮಕ್ಕಳ ಮನೋಭಾವ ವ್ಯಕ್ತವಾಗುತ್ತದೆ ಅಷ್ಟೇ~ ಎನ್ನುತ್ತಾರೆ ಕಾರ್ಯಾಗಾರದ ನಿರ್ದೇಶಕ ರಾಜಾ.`ಇದು ನಮ್ಮ 13ನೇ ಕಾರ್ಯಾಗಾರ. ಶಾಲಾ ಪಠ್ಯದಲ್ಲಿ ಹೇಳಿಕೊಡುವ ಚಿತ್ರಕಲೆಗಿಂತ ಬೇರೆಯದನ್ನು ಹೇಳಿಕೊಡಬೇಕೆಂಬುದು ನಮ್ಮ ಉದ್ದೇಶ. ಅದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದ ಸ್ವ-ಭಾವಚಿತ್ರ ಹಾಗೂ ಛಾಯಾಚಿತ್ರವನ್ನು ಆಯ್ದುಕೊಂಡೆವು.ನೋವನ್ನು ಮುಚ್ಚಿಕೊಳ್ಳುವ ಬಗೆ ಮಕ್ಕಳಿಗೆ ಗೊತ್ತಿಲ್ಲವಾದ್ದರಿಂದ ಅವರು ಬರೆದ ಎಲ್ಲಾ ಚಿತ್ರಗಳಲ್ಲೂ ಹೇರಳ ಬಣ್ಣಗಳಿರುತ್ತವೆ ಹಾಗೂ ಖುಷಿಯ ಭಾವ ಮನೆಮಾಡಿರುತ್ತದೆ~ ಎನ್ನುತ್ತಾರವರು.ಈ ಕಾರ್ಯಾಗಾರದಲ್ಲಿ ಮಕ್ಕಳು ಬರೆದ ಕಲಾಕೃತಿಗಳು ಹಾಗೂ ಭಾವಚಿತ್ರಗಳು ಇದೇ 13ರಿಂದ (ಭಾನುವಾರ) ಪ್ರದರ್ಶಿತಗೊಳ್ಳಲಿವೆ.

ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರ್‌ಬಾ ರಸ್ತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry