ನಾನು, ನನ್ನ ಕನ್ನಡ

7

ನಾನು, ನನ್ನ ಕನ್ನಡ

Published:
Updated:
ನಾನು, ನನ್ನ ಕನ್ನಡ

ಭಾರತೀಯ ರಂಗಭೂಮಿಯ ಪ್ರಸಿದ್ಧ ನಾಟಕಕಾರ, ನಟ, ಚಿತ್ರನಿರ್ದೇಶಕ ಗಿರೀಶ ಕಾರ್ನಾಡರು ತಾವು ಕನ್ನಡ ಲೇಖಕರಾದ ಬಗೆಯನ್ನು ಇಲ್ಲಿ ಕಥಿಸಿದ್ದಾರೆ.ಮೊದಲ ನಾಟಕ ಹುಟ್ಟಿದ ಗಳಿಗೆಯಿಂದ ಆರಂಭಿಸಿ, ಅವರಲ್ಲಿ ಕನ್ನಡದ ನಂಟು

ಯಾವ ಬಗೆಯಿಂದ ಬೆಳೆಯಿತು ಎಂಬುದನ್ನು ಸ್ವಾರಸ್ಯಕರವಾಗಿ ಹೇಳುತ್ತ,

ಒಬ್ಬ ಲೇಖಕನೊಳಗೆ ಸೃಜನಾತ್ಮಕ ಭಾಷೆ ರೂಪುಗೊಳ್ಳುವ ಪರಿಯನ್ನೂ ಇಲ್ಲಿ ಕಾಣಿಸಿದ್ದಾರೆ.ನನ್ನ ಮಾತೃಭಾಷೆ ಕೊಂಕಣಿ. ನಾನು ಹುಟ್ಟಿದ್ದು ಮಹಾರಾಷ್ಟ್ರದಲ್ಲಿ, ಮಾಥೇರಾನ್ ಎಂಬ ತಪ್ಪಲು ಗ್ರಾಮದಲ್ಲಿ. ಬಿನ್‌ಯತ್ತೆಯಲ್ಲಿ ಕಾಲಿಟ್ಟದ್ದು ಮುಂಬಯಿಯಲ್ಲಿ, ಶಿಶುಗೀತೆಗಳನ್ನು ಕಲಿತದ್ದು ಪುಣೆಯ ಸುಪ್ರಸಿದ್ಧ ಮಾಡರ್ನ್ ಸ್ಕೂಲಿನಲ್ಲಿ. ನಾನು ಸುಮಾರು ನಾಲ್ಕು ವರುಷದವನಿರುವಾಗ ನನ್ನ ತಂದೆಗೆ ಶಿರಸಿಗೆ ಬದಲಿಯಾಯಿತು. ಅಲ್ಲಿ `ಮುನಿಸಿಪಾಲಿಟಿ ಸಾಲೆ ನಂ. 1~ ಸೇರಿಕೊಂಡು ಕನ್ನಡ ಅಭ್ಯಾಸ ಆರಂಭಿಸಿದೆ.ಆದರೆ ಅಷ್ಟರಲ್ಲಿ ನನ್ನ ಅಣ್ಣ-ಅಕ್ಕ ಮರಾಠಿಯಲ್ಲೇ ಪ್ರಾಥಮಿಕ ಶಿಕ್ಷಣ ಮುಗಿಸಿದ್ದರಿಂದ, ಮನೆಯಲ್ಲಿ ವಾಚನ ಸಾಮಗ್ರಿಯೆಲ್ಲ ಮರಾಠಿಯಲ್ಲೇ ಇರುತ್ತಿತ್ತು. `ಸಕಾಳ~ ದಿನಪತ್ರಿಕೆ, `ಸ್ತ್ರೀ~, `ಕಿರ್ಲೋಸ್ಕರ~ ಮಾಸಿಕಗಳು. ನನ್ನ ತಾಯಿಗಂತೂ ಮರಾಠಿ ಎಂದರೆ ಒಂದು ಭಾಷೆಯಲ್ಲ; ನಾಗರಿಕತೆಯ ಅತ್ಯುತ್ತಮ ಆಯಾಮಗಳನ್ನು ಮೈಗೂಡಿಸಿಕೊಂಡ ಸಂಸ್ಕೃತಿ. `ನಿಮ್ಮನ್ನು ಕರ್ನಾಟಕಕ್ಕೆ ತಂದು ನಿಮ್ಮ ತಂದೆ ನಿಮ್ಮನ್ನು ನಿಜವಾದ ಸಂಸ್ಕೃತಿಯಿಂದ ವಂಚಿತಗೊಳಿಸಿದರು~, ಎಂದು ಯಾವಾಗಲೂ ಕೊರಗುತ್ತಿರುತ್ತಿದ್ದಳು.

ಹೀಗಾಗಿ ಹರಿನಾರಾಯಣ ಆಪಟೆ, ವಿ.ಸ. ಖಾಂಡೇಕರ್, ನಾ.ಸಿ. ಫಡಕ, ನಾ.ಧೋ. ತಾಮ್ಹಣಕರ್, ಸಾನೇ ಗುರುಜಿ ಇವರೇ ನನ್ನ ಬಾಲ್ಯವನ್ನು ಭಾವನಾತ್ಮಕವಾಗಿ ರೂಪಿಸಿದರು. ಸುದೈವದಿಂದ ಶಿರಸಿಯಲ್ಲಿ ಹವ್ಯಕ ಮಿತ್ರರ ಸಹವಾಸದಿಂದಾಗಿ ಲಕ್ಷ್ಮೀಶ, ಕುಮಾರವ್ಯಾಸರಿಂದ ಬೇಂದ್ರೆ- ಕುವೆಂಪುಗಳವರೆಗೆ, ಭಿ.ಪ. ಕಾಳೆ, ಗಳಗನಾಥರಿಂದ ಶಿವರಾಮ ಕಾರಂತರವರೆಗೆ  ಎಲ್ಲರನ್ನೂ  ಓದಿ  ಅರಗಿಸಿಕೊಂಡೆ.ಅಲ್ಲಿಂದ ಹದಿನಾಲ್ಕನೆಯ ವಯಸ್ಸಿಗೆ ಧಾರವಾಡಕ್ಕೆ ಬಂದೆ. ಹದಿನಾರನೆಯ ವಯಸ್ಸಿಗೆ ಕರ್ನಾಟಕ ಕಾಲೇಜು ಸೇರಿದಾಗ, ಅಲ್ಲಿ ನನಗೆ ಇಂಗ್ಲೀಷಿನ ಗೀಳು ಹಿಡಿಯಿತು. ಪ್ರಾಂಶುಪಾಲರಾದ ವಿ.ಕೃ. ಗೋಕಾಕರು ಕನ್ನಡ ಕವಿಗಳೇ ಆಗಿದ್ದರೂ ಆಕ್ಸ್‌ಫರ್ಡ್‌ಗೆ ಹೋಗಿ ಇಂಗ್ಲೀಷ್ ಅಭ್ಯಾಸದಲ್ಲಿ ಪ್ರಥಮ ವರ್ಗ ಪಡೆದು ಬಂದವರು ಎಂಬ ಪ್ರಭಾವಳಿ ಅವರ ಸುತ್ತ ಬೆಳಗುತ್ತಿರುತ್ತಿತ್ತು. ನನ್ನ ಒಡನಾಡಿಗಳಂತೆ ನಾನೂ ಕನ್ನಡದಲ್ಲೇ ಕವಿತೆ ಬರೆದು, ಬೇಂದ್ರೆ-ಆನಂದಕಂದರ ದರ್ಶನ ಆಗಾಗ್ಗೆ ಪಡೆಯುವ ಪರಿಪಾಠವನ್ನು ಬೆಳೆಸಿಕೊಂಡರೂ ಕೊನೆಕೊನೆಗೆ ಇಂಗ್ಲೀಷ್ ನಾಟಕಗಳಿಗೆ, ಕಾವ್ಯಕ್ಕೆ ಮರುಳಾದೆ.ಧಾರವಾಡದಲ್ಲಿ ಕಳೆದ ಆರು ವರ್ಷಗಳಲ್ಲಿ, ಹಾಗೂ ಮುಂದೆ ಎಂ.ಎ. ಮಾಡುತ್ತ ಮುಂಬಯಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ, ನನಗೆ `ಇಂಗ್ಲೀಷ್ ಬರಹಗಾರನಾಗಬೇಕು, ಅಂತರರಾಷ್ಟ್ರೀಯ ಖ್ಯಾತಿಯ ಕವಿಯಾಗಬೇಕು, ಬ್ರಿಟನ್ನಿಗೆ (ಆಕ್ಸ್‌ಫರ್ಡಿಗೆ!) ಹೋಗಿ ಅಲ್ಲಿ Eliot, Auden ಜೊತೆಗೆ ಮೆರೆದಾಡಬೇಕು~ ಎಂಬ ಧ್ಯಾಸ ಹತ್ತಿತ್ತು.ಈ ಹೊತ್ತಿಗೆ ನಾನು ಕನಸುಮನಸಿನಲ್ಲೂ ಅಪೇಕ್ಷಿಸಿರದ ಒಂದು ಅನುಭವ ನನ್ನನ್ನು ಅವಾಕ್‌ಗೊಳಿಸಿತು. ನಾನು ಮುಂಬಯಿಯಲ್ಲಿ ಎಂ.ಎ.ಗಾಗಿ ಸಂಖ್ಯಾಶಾಸ್ತ್ರವನ್ನು ಅಭ್ಯಾಸ ಮಾಡಿ, ಅದರಲ್ಲಿ ಎಳ್ಳಷ್ಟೂ ಆಸಕ್ತಿಯಿಲ್ಲದೆ, ಪರೀಕ್ಷೆ ಅರ್ಧದಲ್ಲೇ ಬಿಟ್ಟು ಧಾರವಾಡಕ್ಕೆ ಬಂದಿದ್ದೆ. ಸುದೈವದಿಂದ ಅಷ್ಟರಲ್ಲಿ ನನಗೆ ರ‌್ಹೋಡ್ಸ್ ವಿದ್ಯಾರ್ಥಿ ವೇತನ ದೊರೆತದ್ದರಿಂದ ಭವಿತವ್ಯದ ಬಗ್ಗೆ ಏನೂ ಚಿಂತೆಗೆ ಕಾರಣವಿರಲಿಲ್ಲ ನಿಜ. ಆದರೆ ಸಾಲೆಯಲ್ಲಿ ಮೊದಲನೆಯ ವರ್ಗದಿಂದ ಬಿ.ಎ. ತನಕ ಪ್ರತಿಯೊಂದು ಪರೀಕ್ಷೆಯಲ್ಲಿ ಮೊದಲನೇ ತರಗತಿಯಲ್ಲಿ ತಪ್ಪದೆ ಉತ್ತೀರ್ಣನಾಗಿರುವ ನನಗೆ ಎಂ.ಎ.ದಲ್ಲಿ ಹೀಗೆ ಶಸ್ತ್ರತ್ಯಾಗ ಮಾಡಿದ್ದರ ಪರಿಣಾಮವಾಗಿ ಒಂದು ರೀತಿಯ ಗ್ಲಾನಿ ಮುತ್ತಿಕೊಂಡಿತು.ಮೇ ತಿಂಗಳಲ್ಲಿ ವಾರಾಣಸಿಯಲ್ಲಿ ರೈಲು ಅಧಿಕಾರಿಯಾಗಿದ್ದ ನನ್ನ ಅಣ್ಣ ಭಾಲಚಂದ್ರನ ಮನೆಗೆ ಕಾಲಹರಣಕ್ಕಾಗಿ ಹೋದೆ. ಅಲ್ಲಿ ಒಂದು ದಿನ ಒಮ್ಮಿದೊಮ್ಮೆಲೆ, ಹೇಳದೆ ಕೇಳದೆ, `ಯಯಾತಿ~ ನಾಟಕ ಹೊರಹೊಮ್ಮಿ ಬಂತು.ನಾನು ಆ ಮೊದಲು ಎಂದೂ ಅಂಥ ಉತ್ಕಟ ಸ್ಫೂರ್ತಿಯನ್ನೇ ಅನುಭವಿಸಿರಲಿಲ್ಲ. ನಾಟಕ ತನ್ನಷ್ಟಕ್ಕೆ ತಾನೇ ನನ್ನ ಕಣ್ಣೆದುರಿಗೆ ನಡೆದು, ಅದರ ಪಾತ್ರಗಳೆಲ್ಲ ಜೀವಂತ ವ್ಯಕ್ತಿಗಳಂತೆ ಸಂಭಾಷಣೆಗಳನ್ನಾಡಹತ್ತಿದವು. ನಾನು ಒಬ್ಬ Steno typist (ಶೀಘ್ರಲಿಪಿಕಾರ)ನಂತೆ ಆ ಸಂವಾದವನ್ನೆಲ್ಲ ಭರದಿಂದ ಬರೆದುಕೊಂಡೆ. ಮೂರು ವಾರಗಳ ಕಾಲ ನನ್ನಲ್ಲಿ ಭೂತ ಸಂಚಾರವಾದಂತಿತ್ತು.ಈ ಅಕಸ್ಮಾತ್ ಸಾಕ್ಷಾತ್ಕಾರ ನನ್ನನ್ನು ಹಲವು ರೀತಿಗಳಲ್ಲಿ ದಿಗಿಲುಗೊಳಿಸಿತು. ಮೊದಲನೆಯದಾಗಿ, ಅದು ಮೂಡಿಬಂದ ರೀತಿಯೇ ಅನಪೇಕ್ಷಿತವಾಗಿತ್ತು.ಎರಡನೆಯದಾಗಿ ಶಿರಸಿಯಲ್ಲಿ ನಾನು ಪೌರಾಣಿಕ ನಾಟಕ-ಸಿನೇಮಾ- ಯಕ್ಷಗಾನ-ಹರಿಕಥೆಗಳ ನಡುವೆಯೇ ಬೆಳೆದಿದ್ದರೂ, ಪಾಶ್ಚಾತ್ಯ ಸಾಹಿತ್ಯದ ಪರಿಣಾಮವಾಗಿ ಆ ಸಾಮಗ್ರಿಯಿಂದ ನನ್ನ ಪರ್ಲು ಹರಿದುಕೊಂಡಿದ್ದೇನೆ ಎಂದು ನಂಬಿದ್ದೆ. ಅವೆಲ್ಲ ಇನ್ನೂ ಹೀಗೆ ನನ್ನ ಕಲ್ಪನಾಸೃಷ್ಟಿಯಲ್ಲಿ ಜೀವಂತವಾಗಿ ತೊಯ್ದಾಡುತ್ತಿರುತ್ತವೆ ಎಂದು ಎಣಿಸಿರಲಿಲ್ಲ.

 

ನನಗೆ ಕವಿಯಾಗಬೇಕಾಗಿತ್ತು. ನಾಟಕದಲ್ಲಿ ಪಾತ್ರ ಧರಿಸುವದರಲ್ಲಿ ಆಸಕ್ತಿಯಿದ್ದರೂ, ನಾಟಕಕಾರನಾಗುವ ಯೋಚನೆಯೇ ಎಂದೂ ತಟ್ಟಿದ್ದಿಲ್ಲ! ಮೆಲ್ಲಮೆಲ್ಲನೆ ನಾನು ಎಂದೂ ಪ್ರಥಮ ದರ್ಜೆಯ ಕವಿಯಾಗಲಾರೆ ಎಂಬ ಅಂಶ ಮನದಟ್ಟಾದಂತೆ ನನಗೆ ತುಂಬ ನಿರಾಸೆಯಾಯಿತು. ಆ ನಿರಾಸೆಗೆ, ವಿಷಾದಕ್ಕೆ ನಾಟಕ-ಲೇಖನದ ಹುಮ್ಮಸ್ಸು ಎಂದೂ ಪೂರ್ಣ ಪರಿಹಾರ ನೀಡಲೇ ಇಲ್ಲ. ನಾನೇಕೆ ಕವಿಯಾಗಲಿಲ್ಲ ಎಂಬ ಕೊರಗು ನನಗೆ ಇನ್ನೂ ಇದೆ.ಎಲ್ಲದಕ್ಕೂ ಮುಖ್ಯವಾಗಿ ನನ್ನನ್ನು ದಂಗುಗೊಳಿಸಿದ ಅಂಶವೆಂದರೆ ನಾಟಕ ಕನ್ನಡದಲ್ಲಿ ಮೂಡಿಬಂದಿತ್ತು. ಹೀಗೆ ಕನ್ನಡ ನನ್ನ ಅಭಿವ್ಯಕ್ತಿಯನ್ನು ಹೇಳದೆ ಕೇಳದೆ ದೋಚಿಕೊಂಡದ್ದಕ್ಕೆ ನಾನು ಸ್ತಂಭೀಭೂತನಾದೆ.ಆ ಕ್ಷಣದಿಂದ ನಾನು ಕನ್ನಡದ ಲೇಖಕ ಎಂಬ ಬಗ್ಗೆ ನನ್ನಲ್ಲಿ ಯಾವ ಸಂದೇಹವೂ ಉಳಿಯಲಿಲ್ಲ. ಆ ಗಳಿಗೆ ಕನ್ನಡದೊಡನೆ ನನ್ನ ಕರುಳುಬಳ್ಳಿಯನ್ನು ನಿಷ್ಕೃಷ್ಟವಾಗಿ ದೃಢಪಡಿಸಿತು.ಈ ಪ್ರಜ್ಞೆ ಇನ್ನೂ ಸ್ಫುಟವಾಗಲಿಕ್ಕೆ ಕಾರಣ ನಾನು ಇಂಗ್ಲಂಡಿನಲ್ಲಿದ್ದಾಗ ಧಾರವಾಡದ ಮನೋಹರ ಗ್ರಂಥಮಾಲೆಯ ಜಿ.ಬಿ. ಜೋಶಿ `ಯಯಾತಿ~ಯನ್ನು ಪ್ರಕಟಿಸಿದ್ದು.

 

ಅಷ್ಟರಲ್ಲಿ ನಾನು ಬ್ರಿಟನ್ನಿನಲ್ಲಿ ಒಂದು ವರುಷ ಕಳೆದಿದ್ದೆ. ಅಲ್ಲಿ ಸಂವೇದನಾತ್ಮಕವಾಗಿ ಪ್ರತಿ ಗಳಿಗೆಗೆಂಬಂತೆ ನಾನು ಬೆಳೆದರೂ, ಇಂಗ್ಲಿಷ್ ದೈನಂದಿನ ಸಂಸ್ಕೃತಿಯಲ್ಲಿ ನನ್ನ ಪ್ರಜ್ಞೆಯನ್ನು ಹೆಣೆದುಕೊಳ್ಳುವದು ನನ್ನಿಂದ ಸಾಧ್ಯವಾಗಿರಲಿಲ್ಲ. `ಯಯಾತಿ~ಗೆ ಕನ್ನಡದಲ್ಲಿ ಬಂದ ಪ್ರತಿಕ್ರಿಯೆ ನನ್ನಲ್ಲಿ ಮಿಡಿಯುತ್ತಿದ್ದ `ಇವನಾರವ-ಇವನಾರವ~ ಸಂಕಟವನ್ನೇ ಹೊಚ್ಚಿಹಾಕಿಬಿಟ್ಟಿತು. ನಾನು ಭಾರತಕ್ಕೆ ಮರಳುವದು, ಧಾರವಾಡದಲ್ಲಿ ಮನೆ ಮಾಡುವದು ಎಂಬ ನಿರ್ಣಯ ಕೈಕೊಂಡೆ. ಇಂಗ್ಲಂಡಿನಲ್ಲಿದ್ದಾಗಲೇ `ತುಘಲಕ್~ ನಾಟಕ ಬರೆಯಲಾರಂಭಿಸಿದೆ.ಆದರೆ ನನ್ನ ಬವಣೆಗಳಿನ್ನೂ ಮುಗಿದಿರಲಿಲ್ಲ. `ಯಯಾತಿ~ ನಾಟಕದ ಇಡಿಯ ಪಠ್ಯವನ್ನು ಗ್ರಂಥಮಾಲೆಯ ಸಲಹೆಗಾರರಾದ ಕೀರ್ತಿನಾಥ ಕುರ್ತಕೋಟಿ ತಿದ್ದಿ ಬರೆದಿದ್ದರು. `ತುಘಲಕ್~ದಲ್ಲಿ ನಾನು ಹೇರಳವಾಗಿರುವ ವ್ಯಾಕರಣ ದೋಷಗಳಲ್ಲಿ, ಕಲಕುಮಲಕು ನುಡಿಕಟ್ಟುಗಳಲ್ಲಿ ಒಂಟಿಯಾಗಿ ನುಗ್ಗಿದ್ದೆ. `ತುಘಲಕ್~ದ ಪ್ರಥಮ ಆವೃತ್ತಿಯಲ್ಲಿ ಆ ದುಡುಕಿನ ಪರಿಣಾಮ ಅಜರಾಮರವಾಗಿದೆ. ನಾಟಕಕ್ಕೆ ಉತ್ಸಾಹದ ಸ್ವಾಗತ ದೊರೆತರೂ, `ಕಾರ್ನಾಡರಿಗೆ ಕನ್ನಡ ಬರುವದಿಲ್ಲ~ ಎಂದು ಗೇಲಿ ಮಾಡುವವರ ಸಂಖ್ಯೆಯೂ ಕಡಿಮೆಯಾಗಿರಲಿಲ್ಲ. ನಾನತ್ತ ಲಕ್ಷ್ಯ ಕೊಡಲಿಲ್ಲ.ಆದರೆ ನಾನು ಒಂದು ದಿನ ನನ್ನ ಮಿತ್ರ ಅಶೋಕ ಕುಲಕರ್ಣಿಗೆ ಒಂದು ಜೋಕು ಹೇಳಿದೆ. ಅವನು ಅದನ್ನು ಕೇಳಿ ಹೊಟ್ಟೆ ತುಂಬ ನಕ್ಕು, `ಜೋಕು ಛಲೋ ಅದ. ಆದರೆ ನೀನು ಬಹಳ ಕೆಟ್ಟ ಕನ್ನಡ ಮಾತಾಡತೀ ಬಿಡು~, ಎಂದ. ನಾನು ದಬಕ್ಕನೆ ಎಚ್ಚತ್ತೆ. `ಇನ್ನು ಕನ್ನಡದಲ್ಲೇನಾದರೂ ಸಾಧಿಸುವದಿದ್ದರೆ ಭಾಷೆಯನ್ನು ಕುರಿತ ಸಮಸ್ಯೆಗಳ ಬಗ್ಗೆ ನಾನು ಇಂಥ ಹಗುರವಾದ ಮನೋಧರ್ಮವನ್ನಿಟ್ಟು ಕೊಳ್ಳುವದು  ಘಾತಕ~ ಎಂದು ನಿರ್ಧರಿಸಿದೆ.ನಾನಾಗ ಮದ್ರಾಸಿನಲ್ಲಿ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಆಫೀಸು ನನ್ನ ವೈಯಕ್ತಿಕ ಬಳಕೆಗಾಗಿ ನನಗೊಂದು ಹೆರಾಲ್ಡ್ ಕಾರನ್ನು ಕೊಟ್ಟಿತ್ತು. ಆ ಕಾರಿನಲ್ಲಿ ಪ್ರತಿವರ್ಷ ಮೂರು ವಾರ ಮದ್ರಾಸಿನ ಸುತ್ತಮುತ್ತಲಿನ ನಿಸರ್ಗ, ಮಂದಿರಗಳು, ಕೇರಳ-ಆಂಧ್ರದ ಸಾಂಸ್ಕೃತಿಕ ಕೇಂದ್ರಗಳು ಇವನ್ನೆಲ್ಲ ವೀಕ್ಷಿಸಿ ಸೊಗಸುವದು ಸಾಧ್ಯವಿತ್ತು. ಆದರೆ ನಾನು ಆ ಆಮಿಷವನ್ನು ಬದಿಗೊತ್ತಿ ಪ್ರತಿವರ್ಷ ಧಾರವಾಡಕ್ಕೆ, ಅಲ್ಲಿಗೆ ಕೀರ್ತಿ ಆನಂದದಿಂದ ಕಾಲೇಜು ರಜದಲ್ಲಿ ಬರುವ ಸಮಯಕ್ಕೆ ಸರಿಯಾಗಿ ಬರಲಾರಂಭಿಸಿದೆ. ಪ್ರತಿ ಸಂಜೆ ಗ್ರಂಥಮಾಲೆಯ `ಅಟ್ಟ~ದ ಸುಪ್ರಸಿದ್ಧ `ಹರಟೆ~ಯಲ್ಲಿ ವಿದ್ಯಾರ್ಥಿಯಂತೆ ಪಾಲುಗೊಂಡೆ. ಉತ್ತರ ಕರ್ನಾಟಕದ ಆಡುಮಾತನ್ನು ನನ್ನದಾಗಿಸುವುದೆಂದು ನಿರ್ಧರಿಸಿ, ಜಡಭರತ, ಕೀರ್ತಿ, ರಾ.ಕು. ರಾವಬಹಾದ್ದೂರರಂಥ ಉತ್ತರ ಕರ್ನಾಟಕದ ಲೇಖಕರ ಕೃತಿಗಳನ್ನು ಅವುಗಳಿಂದ ಭಾಷೆಯ ದೃಷ್ಟಿಯಿಂದ ನನಗೇನು ಸಿಗುತ್ತದೆ ಎಂಬ ಗುರಿಯನ್ನೇ ಎದುರಿಗಿಟ್ಟುಕೊಂಡು ಹೆಕ್ಕಲಾರಂಭಿಸಿದೆ.ನಾನು ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್‌ನ ನೌಕರಿಯನ್ನು ಬಿಡುವ ಗಳಿಗೆ ಸಮೀಪಿಸಿದಂತೆ, ಕನ್ನಡದ ಪದರು-ಪದರುಗಳಲ್ಲಿ ಹೊಕ್ಕು ಹಾಯುವ ಹಲವಾರು ಅದ್ಭುತ ಅವಕಾಶಗಳು ಒಂದರ ಹಿಂದೆ ಇನ್ನೊಂದಾಗಿ ನನ್ನನ್ನು ಸ್ವಾಗತಿಸಿಕೊಂಡವು.ಇನ್ನೂ ನೌಕರಿಯಲ್ಲಿದ್ದಾಗಲೇ ಯು.ಆರ್. ಅನಂತಮೂರ್ತಿಯ `ಸಂಸ್ಕಾರ~ ಓದಿ ಮೆಚ್ಚಿ, ಅದನ್ನಾದರಿಸಿ ಚಿತ್ರಕತೆ ಬರೆದು, ಮುಖ್ಯ ಪಾತ್ರ ವಹಿಸಿ ಆ ಕಾದಂಬರಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ನನ್ನದಾಗಿಸಿಕೊಂಡೆ. ಚಂದ್ರಶೇಖರ ಕಂಬಾರರ `ಜೋಕುಮಾರಸ್ವಾಮಿ~ಯಲ್ಲಿ ಗೌಡನ ಪಾತ್ರವನ್ನು ಆಡುತ್ತಿದ್ದಂತೆ ಅಂತೂ ನನಗೂ ಹೀಗೆ ಕನ್ನಡ ಬಳಸಲು ಬಂದಿದ್ದರೆ ಎಂಥ ಶ್ರೇಷ್ಠ ನಾಟಕಕಾರನಾಗಬಹುದಿತ್ತಲ್ಲ ಎಂದು ವ್ಯಥೆ ಪಟ್ಟಿದ್ದು ನೆನಪಿದೆ. ಆ ಕಾಲದಲ್ಲಿ (1971) ಉತ್ತರ ಕರ್ನಾಟಕದ ಆಡುನುಡಿಯ ಸೊಗಡು-ಸೌಂದರ‌್ಯ ಹಳೆಯ ಮೈಸೂರಿನವರಿಗಿನ್ನೂ ಸೋಜಿಗದ ವಿಷಯವಾಗಿತ್ತು.ಕಂಬಾರರ ಗೌಡನಿಗೆ ಸಮಾಂತರವಾಗಿ ಲಂಕೇಶರ `ಈಡಿಪಸ್~ನ ಸಾಧನೆ ನಡೆಯಿತು. (`ನೀವು ನನ್ನ ಸಾಲುಗಳನ್ನು ಆಡುತ್ತಿದ್ದಂತೆ ನಾನು ನನ್ನ ಭಾಷಾಂತರದ ಸೊಗಸನ್ನು ಛ್ಞ್ಜಿಟ ಮಾಡುತ್ತಿದ್ದೆ~, ಎಂದು ಲಂಕೇಶ್ ಹೇಳಿದರು). ಮುಂದೆ `ಕಾಡು~ ಚಿತ್ರಕ್ಕಾಗಿ ಶ್ರೀಕೃಷ್ಣ ಆಲನಹಳ್ಳಿ ಬರೆದ ಸಂಭಾಷಣೆ (`ಕನ್ನಡ ಚಲನಚಿತ್ರಗಳಲ್ಲೇ ಈವರೆಗೆ ಇಂಥ ಸಮರ್ಥ ಭಾಷೆ ಕೇಳಲು ಸಿಕ್ಕಿಲ್ಲ~, ಎಂದು ಹೊಗಳಿದ್ದರು. ವೈಎನ್ಕೆ.), `ಒಂದಾನೊಂದು ಕಾಲದಲ್ಲಿ~ಗಾಗಿ ಜಿ.ಬಿ. ಜೋಶಿ ಬರೆದ ಸಂವಾದ ಇವೆಲ್ಲವುಗಳನ್ನು ಒಳಗಿಂದ ಅನುಭವಿಸಿದ್ದು `ತಲೆದಂಡ~ದಲ್ಲಿ ವಚನಕಾರರ ಕೊಡುಗೆಯನ್ನು ಅರ್ಥೈಸುವುದರಲ್ಲಿ ಸಹಕಾರಿಯಾಯಿತು. ಕುವೆಂಪು ಅವರ `ಕಾನೂರು ಹೆಗ್ಗಡಿತಿ~ ಹಾಗೂ ಪೂಚಂತೇ ಅವರ `ಚಿದಂಬರ ರಹಸ್ಯ~ ನನ್ನೆದುರಿಗೆ ಮಲೆನಾಡಿನ ಪ್ರಪಂಚವನ್ನು ತೆರೆದಿಟ್ಟವು. `ದ.ರಾ. ಬೇಂದ್ರೆ~ ಚಿತ್ರದ ಕೊಳಹು ಹಾಕುತ್ತಿದ್ದಾಗ ಕೀರ್ತಿ ಜೊತೆಗೆ ನಡೆಸಿದ ಚರ್ಚೆ, `ಅಡಿಗ~ ಚಿತ್ರದ ಮೊದಲು ಅನಂತಮೂರ್ತಿಯ ಜೊತೆಗೆ ನಡೆದ ವಿಮರ್ಶೆ, `ಕನಕಪುರಂದರ~ ಚಿತ್ರಕ್ಕೆ ಅಡಿಪಾಯವಾಗಿ ಬಳಸಿದ ಏ.ಕೆ. ರಾಮಾನುಜನ್ನರ ಪ್ರಬಂಧ, ಅದಕ್ಕೆ ಸಂಗೀತ ಯೋಜನೆ ಮಾಡಬೇಕಾಗಿ ಬಂದಾಗ ಭಾಸ್ಕರ ಚಂದಾವರಕರ ಜೊತೆಗೆ ದಾಸರ ಪದಗಳ ಶಬ್ದ ಸೌಂದರ್ಯವನ್ನು, ರಚನಾವಿಧಾನವನ್ನು ಕುರಿತು ಮಾಡಿದ ಕೂಲಂಕಷ ವಿವೇಚನೆ -- ಏನೆಂದು ಹೇಳಲಿ?ಇದಕ್ಕೆಲ್ಲ ಸಮಾಂತರವಾಗಿ ಅಥವಾ ಈ ಘಟನೆಗಳಲ್ಲೇ ಹೆಣೆದುಕೊಂಡು ಬಿ.ವಿ. ಕಾರಂತರೊಡನೆ ನಿರಂತರವಾಗಿ ನಡೆದ ನಾಟಕ-ಚಲನಚಿತ್ರ-ಸಾಹಿತ್ಯ- ಸಂಗೀತ-ಹರಟೆಗಳ ಜೊತೆಗೆ, ಕುಡಿತದ ಅಮಲಿನಲ್ಲಿ ಜಗತ್ತನ್ನೇ ನಡುಗಿಸಬಲ್ಲಂಥ ಮಹತ್ವದ, ಅದಕ್ಕಾಗಿ ಯಾವ ಬಡಿದಾಟಕ್ಕೆ ಇಳಿಯುವದೂ ಸಮರ್ಥನೀಯವೆನಿಸಿದ ದಿವ್ಯದರ್ಶನಗಳನ್ನು ಸೃಷ್ಟಿಸಿ ಮಾರನೆಯ ದಿನ ಮುಂಜಾನೆ ಅವುಗಳೆಲ್ಲ ಸಂಪೂರ್ಣ ವಿಸ್ಮರಣವಾಗಿವೆಯಲ್ಲ ಎಂದು ತೀರ ವಿಷಾದ ಪಡದ ತಿಕ್ಕಾಟ ಕೂಡ ನನ್ನ ಕನ್ನಡವನ್ನು ಹರಿತಗೊಳಿಸುತ್ತಲೇ ಇತ್ತು.ಕಾರಂತರಿಗಾಗಲಿ ನನಗಾಗಲಿ ಈ ಎಲ್ಲ ತೊಡಗು (involvement) ಕೇವಲ ಹವ್ಯಾಸಕ್ಕಾಗಿ, ವಿಲಾಸಕ್ಕಾಗಿ, ಕಾಲಾಪಹಕ್ಕಾಗಿ ಇರದೆ ಹೊಟ್ಟೆಪಾಡಿಗಾಗಿ ಇತ್ತು ಎಂಬ ಅಂಶ ಈ ಸಂಬಂಧವನ್ನಿನ್ನೂ ಭದ್ರಗೊಳಿಸಿತ್ತು.ಈಗ ಅದನ್ನೆಲ್ಲ ನೆನೆದಾಗ ಕನ್ನಡವನ್ನು ಸಾಹಿತ್ಯವಾಗಿ ಇಷ್ಟೊಂದು ಪ್ರತಿಭಾವಂತರ ಕೃತಿಗಳಲ್ಲಿ ಅಭ್ಯಾಸ ಮಾಡುವ, ಆಡುನುಡಿಯಾಗಿ ಇಷ್ಟೊಂದು ವಿವಿಧವಾದ (ನನಗೇ ಗೊತ್ತಿರದಂಥ) ಸಂದರ್ಭಗಳಲ್ಲಿ ಬಳಸುವ ಸೌಭಾಗ್ಯ ಇನ್ನೆಷ್ಟು ಕನ್ನಡಿಗರ ಪಾಲಿಗೆ ಬಂದಿರಬಹುದು ಎಂದು ನಾನು ಕೊಂಚ ಅಹಂಕಾರದಿಂದಲೇ ಬೀಗುತ್ತೇನೆ.ಈಗಿತ್ತ ನಾನು ಮರಾಠಿ ನಾಟಕಕಾರ ಮಹೇಶ ಎಲಕುಂಚವಾರನ ಮೂರು ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ಈ ಉಪಕ್ರಮದ ಹಿಂದೆ ಕೂಡ ಇಂಥದೇ ಸ್ವಾರ್ಥವಿತ್ತು. ಎಲಕುಂಚವಾರ ಅತ್ಯಂತ ಸಂವೇದನಾಶೀಲ ನಾಟಕಕಾರ ಮಾತ್ರವಲ್ಲ, ಅವನು ತನ್ನ ಸಂಭಾಷಣೆಯಲ್ಲಿ ಉದ್ಗಾರಗಳನ್ನು, ಸಾಮಾನ್ಯವೆನಿಸುವ ದಿನನಿತ್ಯದ ನುಡಿಕಟ್ಟನ್ನು, ಅರ್ಧಮರ್ಧ ವಾಕ್ಯಗಳನ್ನು, ಮೌನವನ್ನು ಬಳಸಿದ ರೀತಿ ಇನ್ನು ಯಾವ ಭಾರತೀಯ ನಾಟಕಕಾರನಿಗೂ ಸಾಧ್ಯವಾಗಿಲ್ಲ. ಶಬ್ದಗಳನ್ನು ಬಳಸದೆ ಎದೆ ಕಲಕುವ ಅರ್ಥ ಮೂಡಿಸಬಲ್ಲ ಕಲಾಕಾರ ಅವನು.ಇಷ್ಟೆಲ್ಲ ಎಂದ ಮೇಲೆ ಕನ್ನಡದಲ್ಲಿ ನಾನು ಮತ್ತೆ ಓದಿ ಸಂತಸಪಟ್ಟಿರುವ, ಬಿಡಿಬಿಡಿ ಶಬ್ದಗಳನ್ನೆತ್ತಿ ಸವಿಯುತ್ತ ಗಂಟೆಗಟ್ಟಲೆ ಕಳೆದಿರುವ ಗ್ರಂಥ ಎಂದರೆ `ಕನ್ನಡ ನಿಘಂಟು~. ಅದರಲ್ಲಿ ಕಾವ್ಯವಿದೆ, ಜಾನಪದವಿದೆ, ದೈನಂದಿನ ಜೀವನದ ಸಿಹಿ-ಕಹಿ-ಹುಳಿಗಳನ್ನು ನೀಡುವ ಶಬ್ದ ಸಮುಚ್ಚಯವಿದೆ. ನಾನು ಬದುಕಿರುವಾಗಲೇ ಆ ಗ್ರಂಥದ ಎಂಟೂ ಭಾಗಗಳು ಪ್ರಕಟವಾಗಿ ನನ್ನ ಜೀವನ ಎಷ್ಟು ಶ್ರೀಮಂತವಾಗಿದೆ ಎಂದು ಬಣ್ಣಿಸುವದು ಅಸಾಧ್ಯ. ನನ್ನ ಮಟ್ಟಿಗಂತೂ ಕನ್ನಡದ ಸಮಕಾಲೀನ ಬಾಳಿನ `ಕವಿರಾಜ ಮಾರ್ಗ~ ಈ `ಕನ್ನಡ ನಿಘಂಟು~.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry