ನಾನೂ ಬೀದಿ ಬೆಳಕಿನಲ್ಲಿಯೇ ಓದಿದ್ದು: ಸಿ.ಎಂ

7

ನಾನೂ ಬೀದಿ ಬೆಳಕಿನಲ್ಲಿಯೇ ಓದಿದ್ದು: ಸಿ.ಎಂ

Published:
Updated:
ನಾನೂ ಬೀದಿ ಬೆಳಕಿನಲ್ಲಿಯೇ ಓದಿದ್ದು: ಸಿ.ಎಂ

ಬೆಂಗಳೂರು: ‘ನಾನು ಕೂಡ ವಿಶ್ವೇಶ್ವ­ರಯ್ಯ ಅವರಂತೆ ಬೀದಿ ದೀಪದ ಬೆಳಕಿ­ನ­ಲ್ಲಿಯೇ ಓದಿದ್ದು, ಆದರೆ,  ಅವರಂತೆ ಮೇಧಾವಿ ಆಗಲಿಲ್ಲ ಅಷ್ಟೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸ್ಯ ಚಟಾಕಿ ಹಾರಿಸಿದರು.ಕರ್ನಾಟಕ ಎಂಜಿನಿಯರ್‌ಗಳ ಒಕ್ಕೂಟವು  ವಿಶ್ವೇಶ್ವರಯ್ಯ ಅವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಂತ್ರಿಕ ಕಾರ್ಯಾಗಾರದ ಸಮಾ­ರೋಪ ಸಮಾರಂಭದಲ್ಲಿ ಅವರು ಮಾತ­ನಾಡಿದರು.‘ವಿಶ್ವೇಶ್ವರಯ್ಯ ಅವರಿಗಿದ್ದ ಪ್ರಾಮಾಣಿ­ಕತೆ, ದಕ್ಷತೆ, ಶಿಸ್ತು ಹಾಗೂ ಸಮಾಜಮುಖಿ ಧೋರಣೆಗಳು  ರಾಜ­ಕಾರಣಿ­ಗಳು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಎಲ್ಲರಲ್ಲೂ ಇರಬೇಕು. ಆಗ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.‘ದೊಡ್ಡ ದೊಡ್ಡ ಅಣೆಕಟ್ಟು  ನಿರ್ಮಾಣ ಮಾಡಲು ವಿದೇಶಿ ಎಂಜಿನಿ­ಯರ್‌­ಗಳಿಂದ ಮಾತ್ರ ಸಾಧ್ಯ ಎಂದು ಭಾವಿಸಿದ್ದ ಕಾಲದಲ್ಲಿ ವಿಶ್ವೇಶ್ವರಯ್ಯ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬೆಂಬಲದಿಂದ ಕನ್ನಂಬಾಡಿ­ಯಂತಹ ಅಣೆಕಟ್ಟನ್ನು ನಿರ್ಮಾಣ ಮಾಡಿದ್ದರು. ಕಡು ಬಡತನದಲ್ಲಿ ಹುಟ್ಟಿ, ಬೀದಿ ದೀಪದ ಬೆಳಕಿನಲ್ಲಿ ಓದಿದ್ದ ಅವರು ಒಬ್ಬ  ಮೇಧಾವಿಯಾಗಿ  ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಯುಗಪುರುಷ’ ಎಂದು ಬಣ್ಣಿಸಿದರು.‘ಸಿಮೆಂಟು ಬಳಸದೇ ಕೇವಲ ಗಾರೆ­ಯಿಂದಲೇ ಅಣೆಕಟ್ಟು ನಿರ್ಮಾಣ ಮಾಡಿ­ರುವುದು ಅದ್ಭುತವೇ ಸರಿ. ಪ್ರಸ್ತುತ ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿದಿದೆ. ಹೀಗಿದ್ದರೂ ಕೂಡ ಗುಣಮಟ್ಟ ಇಲ್ಲವಾಗಿದೆ. ಈ ಬಗ್ಗೆ ಎಲ್ಲ ಎಂಜಿನಿಯರ್‌ಗಳು ಚರ್ಚೆ ನಡೆಸ­ಬೇಕಿದೆ’ ಎಂದು ಸಲಹೆ ನೀಡಿದರು.ಮುದ್ದೇನಹಳ್ಳಿಯಲ್ಲಿ ಸಂಶೋಧನಾ ಸಂಸ್ಥೆ: ‘ಎಂಜಿನಿಯರ್‌ಗಳ ವೃತ್ತಿಪರತೆ ಹೆಚ್ಚಿಸಲು ವಿಶ್ವೇಶ್ವರಯ್ಯ ಅವರ ಹುಟ್ಟೂ­ರಾದ ಮುದ್ದೇನಹಳ್ಳಿ ಸಮೀಪ ತಾಂತ್ರಿಕ ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ ಮಾಡಿ, ತರಬೇತಿ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.ಒಕ್ಕೂಟದ ಅಧ್ಯಕ್ಷ ಎಂ.ನಾಗರಾಜು ಅವರು ಮಂಡಿಸಿದ ಬೇಡಿಕೆಗೆ ಸ್ಪಂದಿಸಿದ ಸಿದ್ದರಾಮಯ್ಯ ಅವರು, ‘ಎಂಜಿನಿಯರ್ ಗಳು ವೃತ್ತಿ­ಯಲ್ಲಿ ಸದಾ ಪರಿಷ್ಕೃತ ಜ್ಞಾನವನ್ನು ಸಂಪಾದಿಸುವ ಅಗತ್ಯವಿದೆ. ಹಾಗಾಗಿ ಆಗಾಗ್ಗೆ ತರಬೇತಿ ಪಡೆಯುವುದು ಅಗತ್ಯವಿರುವುದರಿಂದ. ಈ ಬೇಡಿಕೆ­ಯನ್ನು ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು  ತಿಳಿಸಿದರು.ಅಲ್ಲಿ ಒಂದೇ ಒಂದು ಗುಂಡಿಯಿಲ್ಲ!

‘ಚೀನಾದ ಡ್ಯಾಲಿಯನ್ ಹಾಗೂ ಶಾಂಘೈ ನಗರಗಳಿಗೆ ಭೇಟಿ ನೀಡಿದ್ದೆ. ರಸ್ತೆಯಲ್ಲಿ ಒಂದೇ ಒಂದು ಗುಂಡಿಗಳಿಲ್ಲ. ಭಾರತೀಯರು ಈ ರೀತಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೇ ಹೋದರೂ ಕನಿಷ್ಠ ಗುಣಮಟ್ಟದ ರಸ್ತೆಗಳು ಬೇಡವೇ? ಇದು ನಮಗೆ ಯಾಕೆ ಸಾಧ್ಯವಿಲ್ಲ?’ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ  ಪ್ರಶ್ನಿಸಿದರು.‘2001ರಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದೆ. 12 ವರ್ಷಗಳ ನಂತರ ಮತ್ತೆ ಚೀನಾಗೆ ಹೋಗಿ ಬಂದೆ. ಚೀನಾ ಸಂಪೂರ್ಣ ಬದಲಾಗಿದೆ. ಶಾಂಘೈನಿಂದ 50 ಕಿ.ಮೀ ದೂರದ ವಿಮಾನ ನಿಲ್ದಾಣಕ್ಕೆ ಗಂಟೆಗೆ 450 ಕಿ.ಮೀ ವೇಗದಲ್ಲಿ ಚಲಿಸುವ ಅಯಸ್ಕಾಂತ ಶಕ್ತಿಯಾಧಾರಿತ ರೈಲಿನಲ್ಲಿ ಸಂಚರಿಸಿದೆ. ಕೇವಲ 6 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಿದ್ದೇನೆ. ನಾವಿನ್ನೂ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನು ಕೂಡ ಸಮರ್ಪಕವಾಗಿ ಮಾಡುತ್ತಿಲ್ಲ’ ಎಂದು ಅವರು ಬೇಸರ  ವ್ಯಕ್ತಪಡಿಸಿದರು.‘ಸಂಪನ್ಮೂಲವಿದೆ, ಅದನ್ನು ಬಳಸಿಕೊಳ್ಳುವ ಚಾಕಚಕ್ಯತೆ ತಿಳಿದಿದೆ. ಆದರೆ ಇಚ್ಛಾಶಕ್ತಿಯ ಕೊರತೆ­ಯಿಂದಲೇ ಭಾರತೀಯರು ಹಿಂದುಳಿದಿದ್ದಾರೆ. ಚೀನಾ  ಭರದಿಂದ ಅಭಿವೃದ್ಧಿ ಸಾಧಿಸುತ್ತಿದೆ ’ ಎಂದು ವಿಶ್ಲೇಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry