ಶನಿವಾರ, ಜನವರಿ 25, 2020
29 °C

ನಾನೇ ಕಾರಣ: ವರ್ತೂರು ತಪ್ಪೊಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: `ನನ್ನ ಬಣದ ಸದಸ್ಯರು ನಗರಸಭೆ ಆಡಳಿತದ ಚುಕ್ಕಾಣಿ ಹಿಡಿದ ನಂತರ ಮೂರು ವರ್ಷಗಳ ಅವಧಿಯಲ್ಲಿ ನಗರಸಭೆ ಆಡಳಿತದಲ್ಲಿ ಆಗಿರುವ ವೈಫಲ್ಯ ಮತ್ತು ಜನರಿಗೆ ಆಗಿರುವ ತೊಂದರೆಗೆ ನಾನೇ ಹೊಣೆಗಾರ~ ಎಂದು ಜಿಲ್ಲಾ ಉಸ್ತುವಾರಿ ಸಚಿವ  ಆರ್.ವರ್ತೂರು ಪ್ರಕಾಶ್ ಒಪ್ಪಿಕೊಂಡರು.ನಗರದ ನಗರಸಭೆ ಕಚೇರಿಗೆ ಸೋಮವಾರ ದಿಢೀರನೆ ಭೇಟಿ ನೀಡಿದ ಅವರು ಸುದ್ದಿಗಾರರೊಡನೆ ಮಾತನಾಡಿ, ಕುಡಿಯುವ ನೀರು ಪೂರೈಕೆ, ಬೀದಿ ದೀಪ, ಕಸ ವಿಲೇವಾರಿ, ಕೊಳವೆ ಬಾವಿಗಳ ಮೇಲ್ವಿಚಾರಣೆ... ಹೀಗೆ ಯಾವ ವಿಭಾಗದಲ್ಲಿಯೂ ನಗರಸಭೆ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಹೇಳಿದರು.ಆರು ತಿಂಗಳಿಂದ ಕಸ ವಿಲೇವಾರಿ ಮಾಡುವರಿಗೆ ಹಣ ಪಾವತಿಸಿಲ್ಲ, ಬೀದಿ ದೀಪ ದುರಸ್ತಿ ಮಾಡುವರಿಗೆ ರೂ.50 ಲಕ್ಷ ಪಾವತಿಸಬೇಕಾಗಿದೆ. ಕೊಳವೆ ಬಾವಿಗಳ ಮತ್ತು ಪಂಪ್‌ಗಳ ಮೇಲ್ವಿ ಚಾರಣೆ ಮಾಡಿದವರಿಗೆ ರೂ.75 ಲಕ್ಷ ಕೊಡಬೇಕಿದೆ. ನಗರಸಭೆ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಆಡಳಿತಕ್ಕೆ ಹೊಸ ಚೈತನ್ಯ ಮೂಡಿಸುವ ಪ್ರಯತ್ನದಲ್ಲೆ ಇಂದು ಭೇಟಿ ನೀಡಿರುವೆ ಎಂದರು.ಮೂರು ವರ್ಷಗಳ ಅವಧಿಯಲ್ಲಿ ನಗರಸಭೆ ಸದಸ್ಯರು, ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪೌರಾಯುಕ್ತರು ಉತ್ತಮವಾಗಿ ಕೆಲಸ ಮಾಡುತ್ತಾರೆಂಬ ನಂಬಿಕೆಯಿಂದ ಸುಮ್ಮನಿದ್ದೆ, ಅವರ ಆಡಳಿತ ವೈಖರಿ ಕಾದು ನೋಡಿದೆ. ಆದರೆ, ಅವರು ನಿರೀಕ್ಷೆ-ಯಂತೆ ಕೆಲಸ ಮಾಡಿಲ್ಲ. ಅದರ ಸಂಪೂರ್ಣ ಹೊಣೆ ನಾನೇ ಹೊತ್ತು ಇಂದಿನಿಂದ ನಗರಸಭೆ ಸರಿಪಡಿಸುವ ಕಾರ್ಯಕ್ಕೆ ಮುಂದಾಗಿರುವೆ ಎಂದರು.ಸೂಚನೆ: ಒಂದು ತಿಂಗಳ ಒಳಗೆ ನಗರಸಭೆ ಆಡಳಿತದಲ್ಲಿ ಬದಲಾವಣೆ ತಂದೇ ತರುವೆ. ಈ ನಿಟ್ಟಿನಲ್ಲಿ ಕೆಲವು ಕಠಿಣ ನಿರ್ಧಾರ ಕೈಗೊಳ್ಳುವೆ. ನಗರಸಭೆಗೆ ಜನತೆ, ಅಂಗಡಿ ಮುಂಗಟ್ಟುಗಳಿಂದ 3 ಕೋಟಿ ರೂಪಾಯಿ ತೆರಿಗೆ ಬಾಕಿ ಇದೆ.ತೆರಿಗೆ ಸಂಗ್ರಹಣೆಗೆ ಸದಸ್ಯರೇ ಅಡ್ಡಿಯಾಗಿರುವುದು ನನ್ನ ಗಮನಕ್ಕೂ ಬಂದಿದೆ. ತೆರಿಗೆ ಸಂಗ್ರಹಣೆಗೆ ಅಡ್ಡಿಯನ್ನುಂಟು ಮಾಡುವ ಯಾವುದೇ ವ್ಯಕ್ತಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಪೊಲೀಸ್ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವೆ ಎಂದರು. ತೆರಿಗೆ ವಸೂಲಿಗೆ ಅಡ್ಡಿಯುಂಟು ಮಾಡುವ ನಗರಸಭೆ ಸದಸ್ಯರ ಸದಸ್ಯತ್ವವನ್ನೇ ರದ್ದುಗೊಳಿಸಲು ಶಿಫಾರಸು ಮಾಡುವೆ ಎಂದರು.ನೀರು ಕಳವು: ನಗರದ ಕೆಲವು ಬಡಾವಣೆಗಳಲ್ಲಿ ಬಂಡವಾಳ ಶಾಹಿಗಳು, ಹಣಬಲ, ತೋಳ್ಬಲ ಇರುವರು ರೈಸಿಂಗ್ ಮೈನ್‌ನಿಂದ ನೀರನ್ನು ನೇರವಾಗಿ ಕದಿಯುತ್ತಿದ್ದಾರೆ. ನಗರದಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಜನರ ಮನೆ ಬಾಗಿಲಿಗೆ ಸರಬರಾಜು ಮಾಡಲು ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ನಲ್ಲಿ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದರು.ನೀರಿನ ಸಮಸ್ಯೆ ನಿವಾರಣೆಗೆ ನಗರಸಭೆ ವ್ಯಾಪ್ತಿಯಲ್ಲಿ ತುರ್ತಾಗಿ 50 ಕೊಳವೆಬಾವಿ ಕೊರೆಯಲು ಕ್ರಮ ಕೈಗೊಳ್ಳಲಾಗಿದೆ. ರೂ.25 ಲಕ್ಷ ವೆಚ್ಚದಲ್ಲಿ ಅಂತರ್ಜಲ ಪತ್ತೆ ಹಚ್ಚುವ ಯಂತ್ರ ತರಿಸಲಾಗಿದೆ. ಯಂತ್ರ ಸೂಚಿಸುವ ಸ್ಥಳಗಳಲ್ಲೆ ಕೊಳವೆ ಬಾವಿ ಕೊರೆಯಲಾಗುವುದು ಎಂದರು.ಆಡಳಿತ ಸುಧಾರಣೆ ಮತ್ತು ತೆರಿಗೆ ವಸೂಲಿ, ಮೂಲ ಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಎಲ್ಲರೂ ಸಹಕರಿಸಿದರೆ ಮಾದರಿ ನಗರಸಭೆಯನ್ನಾಗಿ ಮಾರ್ಪಡಿಸಲಾಗುವುದು. ಒಂದು ತಿಂಗಳೊಳಗೆ ಬದಲಾವಣೆ ಕಾಣಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಅಧ್ಯಕ್ಷೆ ನಾಜಿಯಾ, ಉಪಾಧ್ಯಕ್ಷ ಖಲೀಲ್ ಅಹಮದ್, ಪೌರಾಯುಕ್ತೆ ಆರ್.ಶಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ರಘು, ಸದಸ್ಯರಾದ ವಿ.ಕೆ.ರಾಜೇಶ್, ಸೋಮಶೇಖರ್, ಜಾಫರ್, ಕುಸುಮಾ ಹಾಜರಿದ್ದರು.ಇದೇ ಸಂದರ್ಭದಲ್ಲಿ, ಬೀದಿ ದೀಪ ನಿರ್ವಹಣೆ ಮಾಡುವರು, ಕಸ ವಿಲೇವಾರಿ ಮಾಡುವರು, ನೀರಿನ ಟ್ಯಾಂಕರ್ ಮಾಲೀಕರು, ಪಂಪ್ ರಿಪೇರಿ ಮಾಡುವರು ಸೇರಿದಂತೆ ಹಲವರು ಸಚಿವರಿಗೆ ಮನವಿ ಸಲ್ಲಿಸಿ, ತಮಗೆ ನಗರಸಭೆ ನೀಡಬೇಕಾದ ಹಣವನ್ನು ಕೂಡಲೇ ಬಿಡುಗಡೆ ಮಾಡಿಸಬೇಕು ಎಂದು ಕೋರಿದರು.

ಪ್ರತಿಕ್ರಿಯಿಸಿ (+)