ನಾನೇ ಯುವರ್ಸ್‌ ಮೇಯರ್!

7

ನಾನೇ ಯುವರ್ಸ್‌ ಮೇಯರ್!

Published:
Updated:

ಬೆಂಗಳೂರು: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನುಬಾಹಿರವಾಗಿ ಅಂಟಿಸುವ ಭಿತ್ತಿಪತ್ರ ಅಥವಾ ಫೆಕ್ಸ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಾದ ಬೆಂಗಳೂರಿನ ಪ್ರಥಮ ಪ್ರಜೆಯೇ ಇದೀಗ ಎಲ್ಲೆಂದರಲ್ಲಿ ತಮ್ಮ ಫ್ಲೆಕ್ಸ್ ಹಾಕುವ ಮೂಲಕ ಸಾರ್ವಜನಿಕರ ಟೀಕೆಗೂ ಗುರಿಯಾಗಿದ್ದಾರೆ. `ನಿಮ್ಮ ಮೇಯರ್ ಡಿ. ವೆಂಕಟೇಶಮೂರ್ತಿ, ಯುವರ್ಸ್‌ ಮೇಯರ್ ಡಿ. ವೆಂಕಟೇಶಮೂರ್ತಿ~ ಎಂಬ ಫ್ಲೆಕ್ಸ್‌ಗಳನ್ನು ಪ್ರಮುಖ ರಸ್ತೆಗಳ ವಿದ್ಯುತ್, ಟೆಲಿಫೋನ್ ಕಂಬಗಳು, ರಸ್ತೆ ಸೂಚನಾ ಫಲಕಗಳ ಬಳಿ ಹಾಕಿರುವುದು ನಗರದ ಅಂದವನ್ನು ಕೆಡಿಸಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎರಡು ತಿಂಗಳ ಹಿಂದೆಯಷ್ಟೇ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷ-ಭೇದ ಮರೆತು ತಮ್ಮ ಅಥವಾ ನೆಚ್ಚಿನ ನಾಯಕರ ಹುಟ್ಟು ಹಬ್ಬ ಅಥವಾ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ಸಿಕ್ಕ ಸಿಕ್ಕ ಕಡೆ ಶುಭಾಶಯ ಕೋರುವಂತಹ ಫ್ಲೆಕ್ಸ್ ಹಾಕುವುದಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ್ದರು.ಸರ್ವ ಸದಸ್ಯರೂ ಈ ಸ್ವಯಂ ನೀತಿಸಂಹಿತೆ ಪಾಲಿಸಬೇಕೆಂದು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಆದರೆ, ಇಂತಹ ನೀತಿಸಂಹಿತೆ ಕೇವಲ ಚರ್ಚೆಗೆ ಸೀಮಿತವಾಗಿಯೇ ವಿನಹ ಅನುಷ್ಠಾನಕ್ಕೆ ಬರುತ್ತಿಲ್ಲ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.ಮುಖ್ಯಮಂತ್ರಿ, ಸಚಿವರು ಅಥವಾ ಶಾಸಕರ ಹುಟ್ಟು ಹಬ್ಬದ ಸಮಯದಲ್ಲೂ ನಗರದ ತುಂಬಾ ಇಂತಹ ಅನಧಿಕೃತ ಫ್ಲೆಕ್ಸ್‌ಗಳೇ ರಾರಾಜಿಸುತ್ತವೆ. ಇದು ನಗರದ ಸೌಂದರ್ಯಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.`ಪಾಲಿಕೆ ಸದಸ್ಯರಿಗೆ ನೀತಿ ಪಾಠ ಹೇಳಬೇಕಾದ ಮಹಾಪೌರರೇ ತಮ್ಮ ಫ್ಲೆಕ್ಸ್‌ಗಳನ್ನು ಎಲ್ಲೆಂದರಲ್ಲಿ ಕಾನೂನುಬಾಹಿರವಾಗಿ ಹಾಕಿರುವುದು ಸರಿಯಾದ ಕ್ರಮವಲ್ಲ. ಕಾನೂನು- ನಿಯಮ ಎಲ್ಲರಿಗೂ ಒಂದೇ. ರಾಜ್ಯ ಸರ್ಕಾರ ಕೂಡಲೇ ಇಂತಹ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಮೇಯರ್ ಅಥವಾ ಯಾರೇ ಆಗಲಿ, ಅನಧಿಕೃತವಾಗಿ ಫ್ಲೆಕ್ಸ್ ಹಾಕಿದರೆ ದಂಡ ವಿಧಿಸಲು ಅಥವಾ ಕಾನೂನುರೀತ್ಯ ಕ್ರಮ ಜರುಗಿಸಲು ಮುಂದಾಗಬೇಕು~ ಎಂದು ಬಸವನಗುಡಿಯ ನಿವಾಸಿ ರಾಮಚಂದ್ರ ಒತ್ತಾಯಿಸಿದರು.`ಮೇಯರ್ ಆಯ್ಕೆಯಾದ ಕೂಡಲೇ ಎಲ್ಲರಿಗೂ ಅವರ ಪರಿಚಯವಾಗಿದೆ. ಹೀಗಿರುವಾಗ, ಸಿಕ್ಕ ಸಿಕ್ಕ ಕಡೆಗಳಲ್ಲಿ ತಮ್ಮ ಫ್ಲೆಕ್ಸ್ ಹಾಕುವ ಮೂಲಕ ಡಿ. ವೆಂಕಟೇಶಮೂರ್ತಿ ನಾನು ನಿಮ್ಮ ಮೇಯರ್ ಅಂತ ತೋರ್ಪಡಿಸಿಕೊಳ್ಳುವುದರಲ್ಲಿ ಅರ್ಥವೇನಿದೆ~ ಎಂದು ಯಶವಂತಪುರದ ರಾಕೇಶ್ ಖಾರವಾಗಿ ಪ್ರಶ್ನಿಸಿದರು.`ಉದ್ಯಾನ ನಗರಿಯಲ್ಲೆಲ್ಲಾ ಬರೀ ಭಿತ್ತಿಪತ್ರ, ಫ್ಲೆಕ್ಸ್‌ಗಳೇ ತುಂಬಿರುವುದರಿಂದ ನಗರದ ಅಂದ ಹಾಳಾಗುತ್ತಿದೆ. ನಗರದ ಸೌಂದರ್ಯವನ್ನು ಕಾಪಾಡಬೇಕಾದ ಪಾಲಿಕೆಯೇ ಅದರ ಅಂದ ಹಾಳು ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಕ್ರಮ ಯಾರಿಗೂ ಶೋಭೆ ತರುವಂಥದ್ದಲ್ಲ~ ಎಂದು ಮಲ್ಲೇಶ್ವರಂನ ಸವಿತಾ ಆಕ್ಷೇಪ ವ್ಯಕ್ತಪಡಿಸಿದರು.ಕೆಲವು ಕಡೆಗಳಲ್ಲಿ ಮಾರ್ಗ ಗುರುತಿಸುವಂತಹ ಸೂಚನಾ ಫಲಕಗಳಿಗೇ ಫ್ಲೆಕ್ಸ್ ಹಾಕಿರುವುದು ವಾಹನ ಸವಾರರ ಕೆಂಗಣ್ಣಿಗೂ ಗುರಿಯಾಗಿದೆ. `ಒಬ್ಬ ಜವಾಬ್ದಾರಿಯುತ ಮೇಯರ್ ಈ ರೀತಿ ವರ್ತಿಸುವುದನ್ನು ನಾವು ನಿರೀಕ್ಷಿಸಿರಲಿಲ್ಲ. ಮಾರ್ಗಸೂಚಿಯೇ ಕಾಣದಂತೆ ಅಡ್ಡಲಾಗಿ ಫ್ಲೆಕ್ಸ್ ಹಾಕಿದರೆ ಹೇಗೆ? ಇದರಿಂದ ನಿಜಕ್ಕೂ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಪೊಲೀಸರು ಕೂಡಲೇ ಇಂತಹ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು~ ಎಂದು ಟೆಂಪೋ ಚಾಲಕ ರವಿ ಒತ್ತಾಯಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry