ಸೋಮವಾರ, ಆಗಸ್ಟ್ 26, 2019
20 °C

ನಾನೊಬ್ಬ ಕ್ರಿಕೆಟಿಗ, ಭಯೋತ್ಪಾದಕ ಅಲ್ಲ: ಚಾಂಡಿಲ

Published:
Updated:

ಫರಿದಾಬಾದ್ (ಪಿಟಿಐ/ಐಎಎನ್‌ಎಸ್):  ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತಮ್ಮ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ) ವಿಧಿಸಿರುವುದಕ್ಕೆ ರಾಜಸ್ತಾನ ರಾಯಲ್ಸ್ ಆಟಗಾರ ಅಜಿತ್ ಚಾಂಡಿಲ ಆಘಾತ ವ್ಯಕ್ತಪಡಿಸಿದ್ದಾರೆ.`ಮೋಕಾ ವಿಧಿಸಿದಕ್ಕೆ ನನಗೆ ಹಾಗೂ ನನ್ನ ಕುಟುಂಬಕ್ಕೆ ಆಘಾತವಾಗಿದೆ. ನಾನೊಬ್ಬ ಕ್ರಿಕೆಟಿಗ, ಭಯೋತ್ಪಾದಕ ಅಲ್ಲ' ಎಂದು ಚಾಂಡಿಲ ಸೋಮವಾರ ಇಲ್ಲಿ ನುಡಿದರು.ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಚಾಂಡಿಲ, ತಮ್ಮ ಹಿರಿಯ ಸಹೋದರನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮೂರು ದಿನಗಳ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರ ಜಾಮೀನು ಅವಧಿ ಸೋಮವಾರ ಕೊನೆಗೊಂಡಿದೆ.`ನನ್ನ ಬಂಧನದ ಮರುದಿನವೇ ಹಿರಿಯ ಸಹೋದರ ಆಸ್ಪತ್ರೆಗೆ ದಾಖಲಾಗಿದ್ದರು. ಆಗಿನಿಂದ ನನ್ನ ಜೀವನದಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ಆದರೆ ಕುಟುಂಬ ನನ್ನ ಬೆಂಬಲಕ್ಕಿದೆ. ಶೀಘ್ರದಲ್ಲೆ ಜನತೆಗೆ ಸತ್ಯ ತಿಳಿಯಲಿದೆ. ನಾನು ಅಮಾಯಕ' ಎಂದು ಚಾಂಡಿಲ ತಮ್ಮ ನಿವಾಸದಲ್ಲಿ ತಿಳಿಸಿದ್ದಾರೆ.ಮತ್ತೊಬ್ಬ ಬುಕ್ಕಿ ಬಂಧನ

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದಡಿ ದೆಹಲಿ ಪೊಲೀಸರು ಮತ್ತೊಬ್ಬ ಬುಕ್ಕಿಯನ್ನು ಬಂಧಿಸಿದ್ದು, ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 30ಕ್ಕೆ ಏರಿದೆ.ಚಂದ್ರೇಶ್ ಜೈನ್ ಅಲಿಯಾಸ್ ಜೂಪಿಟರ್ ಎಂಬ ಬುಕ್ಕಿಯನ್ನು ಜೈಪುರದಲ್ಲಿ ಬಂಧಿಸಿದ್ದ ದೆಹಲಿ ಪೊಲೀಸರು ಭಾನುವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.`ಜೈನ್ ಅವರನ್ನು ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ' ಎಂದು ವಿಶೇಷ ಪೊಲೀಸ್ ಆಯುಕ್ತ (ವಿಶೇಷ ಘಟಕ) ಎಸ್.ಎನ್. ಶ್ರೀವಾಸ್ತವ ತಿಳಿಸಿದ್ದಾರೆ.

Post Comments (+)