ನಾಪತ್ತೆಯಾದ ಎಂಜಿನಿಯರ್‌: ಆರಂಭವಾಗದ ಕಾಮಗಾರಿ

7

ನಾಪತ್ತೆಯಾದ ಎಂಜಿನಿಯರ್‌: ಆರಂಭವಾಗದ ಕಾಮಗಾರಿ

Published:
Updated:

ಕನಕಗಿರಿ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಿಂದಿನ ಶಾಸಕತ್ವದ ಅವಧಿಯ ಕೊನೆಯ ದಿನಗಳಲ್ಲಿ ಭೂಮಿ ಪೂಜೆ ನೆರವೇರಿಸಿದ ಕಾಮಗಾರಿ­ಯೊಂದು ಆರಂಭವಾಗದೆ ನನೆಗುದಿಗೆ ಬಿದ್ದಿದೆ.ಸ್ಥಳೀಯ ಇಬ್ರಾಹಿಮ್‌ ಮಸೀದಿ ರಸ್ತೆಯಿಂದ ಗೊರಳಕೇರಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ರುದ್ರಸ್ವಾಮಿ ಪ್ರೌಢಶಾಲೆ ಸೇರಿದಂತೆ ಇತರೆ ಶಾಲೆಗಳಿಗೆ ವಿದ್ಯಾರ್ಥಿಗಳು ಇದೇ ರಸ್ತೆ ಮೂಲಕ ತೆರಳಬೇಕಾಗಿದೆ.90ರ ದಶಕದಲ್ಲಿ ಮಾಜಿ ಸಚಿವ ನಾಗಪ್ಪ ಸಾಲೋಣಿ ಅವಧಿಯಲ್ಲಿ ಇಲ್ಲಿ ಕಿರು ಸೇತುವೆ ನಿರ್ಮಾಣವಾಗಿದ್ದು ಅದೀಗ ಸದ್ಯದ ಸ್ಥಿತಿಗೆ ಸಂಚಾರಕ್ಕೆ ಸಾಲುತ್ತಿಲ್ಲ, ಕೆಲ ಕಿಡಿಗೇಡಿಗಳು ಸೇತು­ವೆಗೆ ಬಳಸಿದ ಕಬ್ಬಿಣದ ಸರಳುಗಳನ್ನು ಕಿತ್ತಿಕೊಂಡು ಹೋಗಿದ್ದು ಎರಡು ಕಡೆ ಆತಂಕದ ಪರಿಸರದ ನಿರ್ಮಾಣವಾ­ಗಿದೆ, ವಿದ್ಯಾರ್ಥಿಗಳು ಆಯ ತಪ್ಪಿ ಬಿದ್ದರೆ ಸಾವು ಗತಿ ಎನ್ನುವಂತಾಗಿದೆ.ವಿದ್ಯಾರ್ಥಿಗಳು, ರೈತರು ಸೈಕಲ್‌ನಲ್ಲಿ ಶಾಲೆ, ಹೊಲಗಳಿಗೆ ಇದೇ ರಸ್ತೆ ಮೂಲಕ ಹೋಗುತ್ತಿದ್ದು ಆತಂಕದಲ್ಲಿ ಸಂಚರಿಸಬೇಕಾಗಿದೆ ಎಂದು ಎಸ್‌ಎಫ್‌ಐ ಮುಖಂಡ ನೀಲಕಂಠ ಬಡಿಗೇರ ತಿಳಿಸುತ್ತಾರೆ.ಚುನಾವಣೆಯ ಪೂರ್ವದ ಎರಡು ತಿಂಗಳ ಹಿಂದಷ್ಟೆ ಆಗಿನ ಶಾಸಕ ಶಿವರಾಜ ತಂಗಡಗಿ ಬೃಹತ್ ಸೇತುವೆ ನಿರ್ಮಾಣಕ್ಕೆ ರೂ 30 ಲಕ್ಷ ಮೀಸಲಿಟ್ಟು ಭೂಮಿ ಪೂಜೆ ನೆರವೇರಿಸಿ ಇಲ್ಲಿಗೆ ಏಳು ತಿಂಗಳು ಗತಿಸಿದರೂ ನಯಾ ಪೈಸೆಯ ಕಾಮಗಾರಿ ಆರಂಭಗೊಂಡಿಲ್ಲ ಎಂದು ಅವರು ದೂರುತ್ತಾರೆ.ಕಾಮಗಾರಿಯ ಉಸ್ತುವಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಟ್ಟಿದ್ದು ಎರಡು ತಿಂಗಳ ಹಿಂದೆ ಎಂಜಿನಿಯರ್‌ ನಯೀಮ ಎಂಬುವವರು ಮೂರು ದಿನದೊಳಗೆ ಕೆಲಸ ಆರಂಭಿಸುವುದಾಗಿ ಹೇಳಿದ್ದರು, ಅವರೀಗ ಈ ಕಡೆಗೆ ತಲೆ ಹಾಕಿಲ್ಲ, ಜವಾಬ್ದಾರಿಯಿಂದ ವರ್ತಿ­ಸುವ ಬದಲಾಗಿ ಮಾಧ್ಯಮದವರಿಗೆ  ಸುಳ್ಳು ಹೇಳಿದ್ದಾರೆ ಎಂದು ಬಡಿಗೇರ ಆಕ್ರೋಶ ವ್ಯಕ್ತಪಡಿಸುತ್ತಾರೆ.ದಿನ ನಿತ್ಯ ಸಾವಿರಾರು ವಿದ್ಯಾರ್ಥಿಗಳು ರಸ್ತೆಯಲ್ಲಿ ಮೈ, ಕೈ ತಿಕ್ಕಿಕೊಳ್ಳುತ್ತಾ  ಜೀವದ ಭಯದಿಂದ ಸಂಚರಿಸುತ್ತಿದ್ದರೂ ಸ್ಥಳೀಯ ಸಂಸ್ಥೆಯ ಜನಪ್ರತಿನಿಧಿಗಳು ‘ಕ್ಯಾರೆ’ ಎನ್ನದೆ ನಿದ್ರೆಗೆ ಜಾರಿದ್ದಾರೆ ಎಂದು ಬಡಿಗೇರ ದೂರುತ್ತಾರೆ.ಚುನಾವಣೆಯ ಪುಕ್ಕಟೆ ಪ್ರಚಾರಕ್ಕಾಗಿ ತಂಗಡಗಿ ಅವರು ಫೆಬ್ರವರಿ ತಿಂಗಳಲ್ಲಿ ಅನುದಾನ ಇಲ್ಲದೆ ಭೂಮಿ ಪೂಜೆ ನೆರವೇರಿಸಿದರು ಎಂಬ ಟೀಕೆಗಳು ಸಹ ಕೇಳಿ ಬಂದಿವೆ,

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry