ಮಂಗಳವಾರ, ಜನವರಿ 21, 2020
29 °C

ನಾಪೋಕ್ಲು: ಹುತ್ತರಿ ಕೋಲಾಟ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಪೋಕ್ಲು: ಜಿಲ್ಲೆಯ ಸಾಂಪ್ರದಾಯಿಕ ಹುತ್ತರಿ ಕೋಲಾಟದಲ್ಲಿ ಒಂದಾದ ಮಕ್ಕಿ ಶಾಸ್ತಾವು ನಾಡ್‌ಮಂದ್‌ ಕೋಲು ಬಿದ್ದಾಟಂಡ ವಾಡೆಯಲ್ಲಿ ಬುಧವಾರ ಆಕರ್ಷಕವಾಗಿ ಜರುಗಿತು.ನಾಪೋಕ್ಲು ನಾಡಿಗೆ ಸಂಬಂಧಿಸಿದ ಬೇತು, ಕೊಳಕೇರಿ ಹಾಗೂ ನಾಪೋಕ್ಲು ನಾಡಿನ ತಕ್ಕ ಮುಖ್ಯಸ್ಥರು ಒಟ್ಟಾಗಿ ಹುತ್ತರಿ ಕೋಲಾಟವನ್ನು ಆಚರಿಸಿ ಹಬ್ಬದ ಮಹತ್ವವನ್ನು ಸಾರಿದರು. ಬೇತು ಗ್ರಾಮದ ಮಕ್ಕಿ ಶಾಸ್ತಾವು ದೇವಾಲಯದಿಂದ ಕೊಂಡೀರ ಕುಟುಂಬದ ಮುಖ್ಯಸ್ಥರು ದೇವರ ಕೋಲು, ಪಟ್ಟು, ಹಾಗೂ ಬೆಳ್ಳಿಯ ಕಡತಲೆಯನ್ನು ಸಾಂಪ್ರದಾಯಿಕ ಕಾಪಾಳ ನೃತ್ಯ, ಕೊಂಬು, ವಾಲಗ ದುಡಿಕೊಟ್ ಪಾಟ್‌ನೊಂದಿಗೆ ಮೆರವಣಿಗೆಯಲ್ಲಿ ಅಗಮಿಸುವುದರ ಮೂಲಕ ಹುತ್ತರಿ ಕೋಲಾಟಕ್ಕೆ ಚಾಲನೆ ದೊರೆಯಿತು.

ಮಧ್ಯಾಹ್ನ ಕುರುಂಬರಾಟ್‌ ಎಂಬ ತಾಣದಿಂದ ಬೇತು ಗ್ರಾಮದಿಂದ ಗ್ರಾಮಸ್ಥರು ಮೆರವಣಿಗೆಯಲ್ಲಿ ಬರುತ್ತಿದ್ದಂತೆ ಮಂದ್‌ನಲ್ಲಿ ಬಿದ್ದಾಟಂಡ ಹಿರಿಯರು ಸಾಂಪ್ರದಾಯಿಕ ಉಡುಪು ಧರಿಸಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಬರಮಾಡಿಕೊಂಡರು.ಪ್ರತಿವರ್ಷ ಕೊಡಗಿನ ಪ್ರಮುಖ ಹಬ್ಬವಾದ ಹುತ್ತರಿಯ ನಂತರ ಮೂರು ಮತ್ತು ನಾಲ್ಕನೇ ದಿನ ಗುರು ಪೊನ್ನಪ್ಪನ ಕೈಮಡದ ಸಮೀಪಕ್ಕೆ ಮಕ್ಕಿ ಶಾಸ್ತಾವು ದೇವರು ಬರುವುದಾಗಿ ಮಾತು ಕೊಟ್ಟ ಹಿನ್ನೆಲೆಯಲ್ಲಿ ಆ ಎರಡು ದಿನಗಳಂದು ಹುತ್ತರಿ ಕೋಲಾಟವನ್ನು ವಿಶಿಷ್ಟವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.ಕೋಲಾಟದ ವಿವಿಧ ಪ್ರಕಾರಗಳು ಅಲ್ಲಲ್ಲಿ ಪ್ರಚಲಿತದಲ್ಲಿದ್ದರೂ ದೇವರ ಹೆಸರಿನಲ್ಲಿ ಭಕ್ತಿಪೂರ್ವಕವಾಗಿ ನಡೆಯುವ ಹುತ್ತರಿ ಕೋಲಾಟವಿದು. ಸುಮಾರು 800 ವರ್ಷಗಳಿಂದ ಈ ಸಾಂಪ್ರದಾಯಿಕ ಆಚರಣೆ ಚಾಲ್ತಿಯಲ್ಲಿದೆ. ಇಲ್ಲಿನ ಮಂದ್‌ ಮರ ( ಕಿನ್ನಿಗೋಳಿ ವೃಕ್ಷ)ದ ಸುತ್ತ ಹುತ್ತರಿ ಕೋಲಾಟ ಪ್ರತಿ ವರ್ಷ ಆಕರ್ಷಣೀಯವಾಗಿ ಜರುಗುತ್ತದೆ.ಹುತ್ತರಿ ಕೋಲಾಟವನ್ನು ವಿವಿಧ ಹಂತಗಳಲ್ಲಿ ಆಬಾಲವೃದ್ಧರಾದಿಯಾಗಿ ಮಂದ್‌ಗೆ ಪ್ರದಕ್ಷಿಣೆ ಬರುತ್ತಾ ಕಾಪಾಳರ ಕೊಟ್‌ಗೆ ತಕ್ಕಂತೆ ಲಯಬದ್ಧವಾಗಿ ಕೋಲು ಹೊಡೆಯುತ್ತ ಸಂಭ್ರಮಿಸಿದರು. ಹುತ್ತರಿ ಕೋಲಾಟದ ಪೋಯಿಲೆ ಪೊಯಿಲೆ ಹಾಡಿನ ಲಯವನ್ನು ಸವಿಯಲು ಬಹಳಷ್ಟು ಮಂದಿ ನೆರೆದಿದ್ದರು. ಮೂರು ಗ್ರಾಮಗಳ ಜನರು ವಿವಿಧ ಸ್ತರಗಳ ಕೋಲಾಟಗಳನ್ನು ಪ್ರದರ್ಶಿಸಿದರು. ಸಂಸದ ವಿಶ್ವನಾಥ್‌ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)