ನಾಪೋಕ್ಲು: ಹೂಮಳೆಗೆ ಒದ್ದೆಯಾದ ಕಾಫಿ

7

ನಾಪೋಕ್ಲು: ಹೂಮಳೆಗೆ ಒದ್ದೆಯಾದ ಕಾಫಿ

Published:
Updated:

ನಾಪೋಕ್ಲು: ನಾಪೋಕ್ಲು- ಮೂರ್ನಾಡು ವ್ಯಾಪ್ತಿಯಲ್ಲಿ ಶನಿವಾರ ಮಳೆಯಾಗಿದೆ.ಮೂರ್ನಾಡು ಸಮೀಪದ ಕಿಗ್ಗಾಲು, ಕೊಡಂಬೂರು, ಬಲಮುರಿ ಬಾವಲಿ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದರೆ, ನಾಪೋಕ್ಲುವಿನ ಬೇತು ಗ್ರಾಮದಲ್ಲಿ ಹದಿನೈದು ಸೆಂಟ್ಸ್ ಮಳೆಯಾಗಿದೆ.ಭಾನುವಾರ ಬೆಳಿಗ್ಗೆ ಬಲ್ಲಮಾವಟಿ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಕಾಫಿ ಕೆಲಸ ಪೂರೈಸುವ ಮುನ್ನವೇ ದಿಢೀರ್ ಮಳೆಯಾಗಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.ಪ್ರತಿ ವರ್ಷ ಈ ಅವಧಿಯಲ್ಲಿ ಕಾಫಿ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿರುತ್ತಾರೆ. ಫೆಬ್ರುವರಿ ಅಂತ್ಯದಲ್ಲಿ ಅಥವಾ ಮಾರ್ಚ್ ಮೊದಲ ವಾರದಲ್ಲಿ ಮಳೆ ಬಂದರೆ ರೋಬಸ್ಟಾ ಕಾಫಿಗೆ ಉತ್ತಮ ಎಂಬುದು ಸಾರ್ವತ್ರಿಕ ಅಭಿಪ್ರಾಯ.

ಅದಕ್ಕೂ ಮುನ್ನ ಮಳೆಯಾದರೆ ನಿರೀಕ್ಷಿತ ಪ್ರಮಾಣದಷ್ಟು ಕಾಫಿ ಹೂ ಅರಳುವುದಿಲ್ಲ. ಇದರಿಂದ ಮುಂದಿನ ವರ್ಷದ ಕಾಫಿ ಫಸಲಿಗೆ ಧಕ್ಕೆಯುಂಟಾಗುತ್ತದೆ.ಮೂರ್ನಾಡು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದ್ದು, ಕಾಫಿ ಫಸಲಿಗೆ ಧಕ್ಕೆಯಿಲ್ಲ. ಕಡಿಮೆ ಪ್ರಮಾಣದ ಮಳೆಯಾದಲ್ಲಿ ಹೂವು ಸರಿಯಾಗಿ ಅರಳದೇ ಫಸಲಿಗೆ ಧಕ್ಕೆಯುಂಟಾಗುತ್ತದೆ. ಈಗಾಗಲೆ ಕಾಫಿ ಕೊಯ್ಲು ಪೂರೈಸಿರುವ ಕೆಲವು ಭಾಗಗಳಲ್ಲಿ ತುಂತುರು ನೀರಾವರಿ ವ್ಯವಸ್ಥೆ ಕೈಗೊಂಡು ಕೃತಕವಾಗಿ ಹೂವರಳಿಸುವ ಕಾರ್ಯದಲ್ಲಿ ಕಾಫಿ ಬೆಳೆಗಾರರರು ನಿರತರಾಗಿದ್ದಾರೆ.ಬಾವಲಿ ಗ್ರಾಮದ ಹಲವು ತೋಟಗಳಲ್ಲಿ ಈಗಾಗಲೇ ಕಾಫಿಯ ಹೂಗಳು ಅರಳಿ ಕಂಗೊಳಿಸುತ್ತಿವೆ. ಇದೇ ಸಂದರ್ಭದಲ್ಲಿ ಮಳೆಯಾಗಿರುವುದರಿಂದ ಹಲವು ಬೆಳೆಗಾರರ ಶ್ರಮ ಹಾಗೂ ಹಣ ಉಳಿತಾಯವಾಗಿದೆ.ಕಾರ್ಮಿಕರ ಕೊರತೆಯಿಂದಾಗಿ ಬಹುತೇಕ ತೋಟಗಳಲ್ಲಿ ಕಾಫಿ ಕೊಯ್ಲು ಕಾರ್ಯ ಅರ್ಧದಷ್ಟು ಪೂರ್ಣಗೊಂಡಿಲ್ಲ. ಈಗ ಬೀಳುತ್ತಿರುವ ಮಳೆಯಿಂದ ಹೂವರಳಿ ಕಾಫಿ ಕೊಯ್ಲು ಮಾಡುವಂತೆಯೂ ಇಲ್ಲ. ಫಸಲು ಬಿದ್ದು ನಷ್ಟವಾಗುತ್ತದೆ ಎಂಬುದು ಬೆಳೆಗಾರರ ಅಳಲು.ಕಳೆದ ವರ್ಷ ನಾಪೋಕ್ಲು ವ್ಯಾಪ್ತಿಯಲ್ಲಿ ಫೆಬ್ರವರಿ 23ಕ್ಕೆ ಮೊದಲ ಮಳೆಯಾಗಿತ್ತು. ಈ ವರ್ಷ ಅದಕ್ಕೂ ಮೊದಲೇ ಮಳೆ ಸುರಿದಿದೆ.ಬಹುತೇಕ ಭಾಗಗಳಲ್ಲಿ ನಿರೀಕ್ಷಿತ ಅವಧಿಗಿಂತ ಮುನ್ನವೇ ಮಳೆ ಸುರಿದಿರುವುದರಿಂದ ಕಾಫಿ ಕಣದಲ್ಲಿ ಒಣಗಲು ಹಾಕಿರುವ ಕಾಫಿ ಒದ್ದೆಯಾಗಿ ನಷ್ಟ ಸಂಭವಿಸುತ್ತಿದೆ. ಕೆಲಸ ಪೂರೈಸಲು ಬೆಳೆಗಾರರು ಪರದಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry