ಮಂಗಳವಾರ, ನವೆಂಬರ್ 19, 2019
23 °C

ನಾಮಪತ್ರ ಸಲ್ಲಿಕೆಗೂ ಮುನ್ನ ರಂಗೇರಿದ ಪ್ರಚಾರ

Published:
Updated:

ತುಮಕೂರು: ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಇನ್ನೂ ಆರಂಭಗೊಂಡಿಲ್ಲ. ಆದರೆ ಜಿಲ್ಲೆಯಲ್ಲಿ ಹದಿನೈದು ದಿನಗಳ ಹಿಂದಿನಿಂದಲೇ ಪ್ರಚಾರ ರಂಗೇರಿದೆ. ನೆತ್ತಿ ಸುಡುವ ಪ್ರಖರ ಬಿಸಿಲನ್ನು ಲೆಕ್ಕಿಸದೆ; ಟಿಕೆಟ್ ಘೋಷಣೆಯಾಗಿರುವ ಅಭ್ಯರ್ಥಿಗಳ ಬೆಂಬಲಿಗರು ಈಗಾಗಲೇ ಮನೆ-ಮನೆ ಪ್ರಚಾರವನ್ನೂ ಒಂದು ಸುತ್ತು ಮುಗಿಸಿದ್ದಾರೆ.ಇದಕ್ಕೆ ಪೂರಕವಾಗಿ ಕೆಲ ಅಭ್ಯರ್ಥಿಗಳ ಕುಟುಂಬವೂ ಸಾಥ್ ನೀಡಿದ್ದು; ಪ್ರತಿ ಮನೆ ಭೇಟಿ ನಡೆಸುತ್ತಿದೆ. ಮನೆಯ ಮತದಾರರ ಮನ ಗೆಲ್ಲಲು ವಿಶೇಷ ತಂತ್ರ ಅನುಸರಿಸುತ್ತಿದೆ. ಮಹಿಳೆಯರಿಗೆ ಅರಿಶಿಣ-ಕುಂಕುಮ ನೀಡಿ ಮತದಾನ ಮಾಡುವಂತೆ ಮನವೊಲಿಸುತ್ತಿದೆ. ಜತೆಗೆ ತಮಗೆ ಎಲ್ಲಿ ಕಷ್ಟ ಎಂಬಂಥ ಸನ್ನಿವೇಶ ಕಂಡು ಬರುತ್ತಿದೆ ಅಲ್ಲಿಯೇ ಠಿಕಾಣಿ ಹೂಡಿ, ಜನರ ಮನ ಗೆಲ್ಲುವ ಯತ್ನಗಳು ಬಿರುಸುಗೊಂಡಿವೆ.ಕ್ಷೇತ್ರದ ಕೇಂದ್ರ ಸ್ಥಳಗಳಲ್ಲಿ ರಾಜ್ಯ ನಾಯಕರ ಸಮಾವೇಶ ನಡೆಯುತ್ತಿವೆ. ರಾಷ್ಟ್ರೀಯ ನಾಯಕರ ಸಮಾವೇಶ ನಿಗದಿಗೊಳ್ಳಬೇಕಿದೆ. ಈಗಾಗಲೇ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ,      ಎಚ್.ಡಿ.ಕುಮಾರಸ್ವಾಮಿ, ಡಿ.ವಿ.ಸದಾನಂದಗೌಡ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರಚಾರ ನಡೆಸಿದ್ದಾರೆ.ಜಿಲ್ಲೆಯು ರಾಜ್ಯ ರಾಜಕಾರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಹಿಂದೆ ಜೆಡಿಎಸ್- ಕಾಂಗ್ರೆಸ್ ಭದ್ರಕೋಟೆ ಎಂಬಂಥ ಸ್ಥಿತಿ ನೆಲೆಸಿತ್ತು. 2008ರಲ್ಲಿ ಬದಲಾದ ಪರಿಸ್ಥಿತಿಯಲ್ಲಿ ಬಿಜೆಪಿಯೂ ಹಿಡಿತ ಸಾಧಿಸಲು ಯತ್ನಿಸಿತು. ಈಗಿನ ಕಾಲಘಟ್ಟದಲ್ಲಿ ಜಿಲ್ಲೆಯ ಮೇಲೆ ಹಿಡಿತ ಸಾಧಿಸಲು ನಾಲ್ಕು ಪಕ್ಷಗಳು ಹಣಾಹಣಿ ನಡೆಸಿವೆ.ಶಿರಾದಲ್ಲಿ ಸಮಾವೇಶಗಳದ್ದೇ ಪೈಪೋಟಿ. ಕಾಂಗ್ರೆಸ್-ಜೆಡಿಎಸ್ ನಿತ್ಯವೂ ಕ್ಷೇತ್ರದ ವಿವಿಧೆಡೆ ಸಮಾವೇಶ ಆಯೋಜಿಸಿ, ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿವೆ. ಭರ್ಜರಿ ಔತಣಕೂಟಗಳು ನಡೆದಿವೆ. ಪುಟ್ಟ ಕಾರ್ಯಕ್ರಮವಿದ್ದರೂ ಎರಡು ಪಕ್ಷದ ಮುಖಂಡರ ಹಾಜರಿ ಎದ್ದು ಕಾಣುತ್ತಿದೆ. ಬಿಜೆಪಿ ಮೂಲ ಕಾರ್ಯಕರ್ತರ ಪಡೆಯನ್ನೇ ನೆಚ್ಚಿಕೊಂಡು ಪ್ರಚಾರ ನಡೆಸುತ್ತಿದೆ.ತುಮಕೂರು ನಗರದಲ್ಲಿ ಕೆಜೆಪಿ-ಬಿಜೆಪಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿವೆ. ಸಚಿವರು ಸಮಾವೇಶ ನಡೆಸಿದ್ದಾರೆ. ಪ್ರಚಾರಕ್ಕೆ ಚುರುಕು ನೀಡಿದ್ದಾರೆ. ಕೆಜೆಪಿ ಅಭ್ಯರ್ಥಿ ಈಗಾಗಲೇ ಒಂದು ಸುತ್ತಿನ ಮನೆಮನೆ ಪ್ರಚಾರ ಮುಗಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗಿದ್ದು, ಇನ್ನಷ್ಟೇ ಪ್ರಚಾರ ಚುರುಕುಗೊಳ್ಳಬೇಕಿದೆ. ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗಿಲ್ಲ. ಆದರೆ ಟಿಕೆಟ್ ಪೈಪೋಟಿ ಮುಂದುವರೆದಿದೆ.ಮಧುಗಿರಿಯಲ್ಲಿ ಕಾಂಗ್ರೆಸ್ ಈಗಾಗಲೇ ಪ್ರಚಾರ ಆರಂಭಿಸಿದೆ. ಜೆಡಿಎಸ್‌ನಲ್ಲಿ ಟಿಕೆಟ್ ಗೊಂದಲವಿದ್ದರೂ; ಐಎಎಸ್ ಅಧಿಕಾರಿ ವೀರಭದ್ರಯ್ಯ ಪುತ್ರ ಕಾರ್ತೀಕ್ ರ‌್ಯಾಲಿ ಮೂಲಕ ಕ್ಷೇತ್ರ ಸುತ್ತು ಹಾಕಿದ್ದಾರೆ. ಚಿತ್ರ ನಿರ್ಮಾಪಕ ಸತ್ಯಪ್ರಕಾಶ್ ಜೆಡಿಎಸ್ ಟಿಕೆಟ್‌ಗೆ ದುಂಬಾಲು ಬಿದ್ದಿದ್ದಾರೆ. ಬಿಜೆಪಿ ಮಹಿಳಾ ಅಭ್ಯರ್ಥಿಗೆ ಮಣೆ ಹಾಕಿದ್ದು, ಚುನಾವಣೆಗೆ ಮುನ್ನ ಸದ್ದು ಮಾಡಿದ್ದ ಸ್ಥಳೀಯರ ವೇದಿಕೆ ಸುಮ್ಮನಾಗಿದೆ.ಪಾವಗಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂಘ-ಸಂಸ್ಥೆಗಳ ಬೆಂಬಲ ಪಡೆಯುವ ತಂತ್ರಗಾರಿಕೆ ನಡೆಸಿದ್ದರೆ, ಕೆಜೆಪಿ ಸಮಾವೇಶ ನಡೆಸಿದೆ. ಜೆಡಿಎಸ್ ಟಿಕೆಟ್ ನಿರೀಕ್ಷೆಯಂತೆ ಮಾಜಿ ಶಾಸಕ ತಿಮ್ಮರಾಯಪ್ಪ ಅವರಿಗೆ ಸಿಕ್ಕಿದ್ದು, ಬಿಜೆಪಿ ಹೊಸ ಮುಖಕ್ಕೆ ಮಣೆ ಹಾಕಿದೆ. ನಾಲ್ವರು ಪ್ರಚಾರ ಚುರುಕುಗೊಳಿಸಿದ್ದಾರೆ. ಕಾರ್ಯಕರ್ತರ ಪಕ್ಷಾಂತರ ಬಿರುಸುಗೊಂಡಿದೆ.ಕೊರಟಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಒತ್ತಡದಲ್ಲೂ ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಅಧ್ಯಕ್ಷರ ಕುಟುಂಬ ಕ್ಷೇತ್ರದಲ್ಲೇ ಬೀಡು ಬಿಟ್ಟಿದೆ. ಜೆಡಿಎಸ್- ಕೆಜೆಪಿ ಅಭ್ಯರ್ಥಿಗಳು ಮೂರು ತಿಂಗಳಿಂದಲೂ ಸಿದ್ಧತೆ ನಡೆಸಿದ್ದು, ಬಿಜೆಪಿ ಪ್ರಚಾರಕ್ಕೆ ಚಾಲನೆ ನೀಡಬೇಕಿದೆ. `ಜಾತಿ ಗಣಿತ' ಬಿರುಸುಗೊಂಡಿದೆ.ತುರುವೇಕೆರೆಯಲ್ಲಿ ಹಾಲಿ ಶಾಸಕರಿಗೆ ಜೆಡಿಎಸ್ ಟಿಕೆಟ್ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದು, ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ. ಕಾಂಗ್ರೆಸ್ ಮತ್ತೊಮ್ಮೆ ಚಿತ್ರರಂಗಕ್ಕೆ ಮಣೆ ಹಾಕುವ ಲಕ್ಷಣ ಗೋಚರಿಸಿದ್ದು, ಸ್ಥಳೀಯ ಘಟಕ ಆಕ್ರೋಶ ವ್ಯಕ್ತಪಡಿಸಿದೆ. ಕೆಜೆಪಿ ಪ್ರಚಾರ ಬಿರುಸುಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಮುಳುಗಿದೆ.ಕುಣಿಗಲ್ ಜೆಡಿಎಸ್‌ನಲ್ಲಿ ಗೊಂದಲ ಮುಂದುವರಿದಿದೆ. ಎರಡೂ ಕಡೆಯಿಂದ ಸಂಭ್ರಮಾಚರಣೆ ನಡೆದಿದ್ದರೂ; ಟಿಕೆಟ್ ಘೋಷಣೆಯಾಗಿಲ್ಲ. ಕಾಂಗ್ರೆಸ್ ಹಾಲಿ ಶಾಸಕರ `ಕೈ' ಹಿಡಿದಿದೆ. ಬಿಜೆಪಿ ಕೃಷ್ಣಕುಮಾರ್ ಈಗಾಗಲೇ ಪ್ರಚಾರ ನಡೆಸಿದ್ದಾರೆ.ತಿಪಟೂರು ಕ್ಷೇತ್ರದಲ್ಲಿ ಬಿಜೆಪಿ- ಕಾಂಗ್ರೆಸ್- ಕೆಜೆಪಿ ಪ್ರಚಾರ ಆರಂಭಿಸಿ ತಿಂಗಳು ಕಳೆದಿದೆ. ಒಂದು ಸುತ್ತಿನ ಮನೆ-ಮನೆ ಪ್ರಚಾರವನ್ನೂ ಮುಗಿಸಿದ್ದಾರೆ. ಜೆಡಿಎಸ್ ಲಿಂಗರಾಜು ಅವರಿಗೆ ಟಿಕೆಟ್ ನೀಡಿದ್ದು, ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಅವರು ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರಕ್ಕಿಳಿಯಬೇಕಿದೆ.ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್ ಟಿಕೆಟ್ ಕೈತಪ್ಪುತ್ತಿದ್ದಂತೆ ಕೆಜೆಪಿ ಸೇರಿದ ಮಾಜಿ ಶಾಸಕರು ಹಳ್ಳಿಗಳನ್ನು ಸುತ್ತಲು ಆರಂಭಿಸಿದ್ದಾರೆ. ಎಲ್ಲೆಡೆ ಜೆಡಿಎಸ್ ಕಾರ್ಯಕರ್ತರನ್ನು ಕೆಜೆಪಿಗೆ ಕರೆತರಲು ಹರ ಸಾಹಸ ಪಡುತ್ತಿದ್ದಾರೆ. ಕಾಂಗ್ರೆಸ್ ಹೊಸಬರಿಗೆ ಅವಕಾಶ ನೀಡಿದ್ದು, ಬಿಜೆಪಿ- ಜೆಡಿಎಸ್ ನಿರೀಕ್ಷೆಯಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಚುನಾವಣಾ ಕಣ ರಂಗೇರಿದ್ದು, ಹಳ್ಳಿ ಹಳ್ಳಿಗಳಲ್ಲೂ ಚುನಾವಣೆ ಜಪ ಕಂಡುಬರುತ್ತಿದೆ.ಚಿಕ್ಕನಾಯಕನಹಳ್ಳಿಯಲ್ಲಿ ಮಾಜಿ ಶಾಸಕರದ್ದೇ ಪೈಪೋಟಿ. ಕಾಂಗ್ರೆಸ್ ಅಭ್ಯರ್ಥಿ ಪ್ರಕಟಗೊಳ್ಳಬೇಕಿದ್ದು, ಉಳಿದ ಮೂರು ಪ್ರಮುಖ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿವೆ. ಗುಬ್ಬಿಯಲ್ಲಿ ಕಾಂಗ್ರೆಸ್ ಸ್ಥಳೀಯರಿಗೆ ಆದ್ಯತೆ ನೀಡಿದೆ. ಜೆಡಿಎಸ್ ಹಾಲಿ ಶಾಸಕರನ್ನೇ ಕಣಕ್ಕಿಳಿಸಿದೆ. ಬಿಜೆಪಿ, ಕೆಜೆಪಿ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ.ನಾಲ್ಕು ಪ್ರಮುಖ ಪಕ್ಷಗಳಲ್ಲಿ ಬಿಜೆಪಿ ಮಾತ್ರ ಮಧುಗಿರಿಯಲ್ಲಿ ಮಹಿಳೆಗೆ ಮನ್ನಣೆ ನೀಡಿದೆ. ಬೇರೆ ಯಾವ ಪಕ್ಷಗಳು ಇಲ್ಲಿಯವರೆಗೆ ಪ್ರಕಟಿಸಿದ ಪಟ್ಟಿಯಲ್ಲಿ ಮಹಿಳೆಗೆ ಮನ್ನಣೆ ನೀಡಿಲ್ಲ. ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಪೂರ್ಣಗೊಂಡಿದ್ದು, ಪ್ರಚಾರದ ಕಣ ರಂಗೇರಿದೆ. ಇದರ ಜತೆ ಕಾರ್ಯಕರ್ತರ ಪಕ್ಷಾಂತರ ಪರ್ವವೂ ಹೆಚ್ಚಿದೆ.

ಪ್ರತಿಕ್ರಿಯಿಸಿ (+)