ಬುಧವಾರ, ನವೆಂಬರ್ 13, 2019
28 °C

ನಾಮಪತ್ರ ಸಲ್ಲಿಕೆಗೆ ಮೆರವಣಿಗೆಯ ರಂಗು

Published:
Updated:
ನಾಮಪತ್ರ ಸಲ್ಲಿಕೆಗೆ ಮೆರವಣಿಗೆಯ ರಂಗು

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಸೋಮವಾರ ಮೂರು ನಾಮಪತ್ರ ಸಲ್ಲಿಕೆಯಾಗಿವೆ.ಕಾಂಗ್ರೆಸ್, ಕನ್ನಡ ಚಳವಳಿ ವಾಟಾಳ್ ಪಕ್ಷ ಹಾಗೂ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ತಾಲ್ಲೂಕು ಕಚೇರಿಗೆ ಕಾಲ್ನಡಿಗೆ ಮೂಲಕ ಸಾಗಿ ಉಮೇದುವಾರಿಕೆ ಸಲ್ಲಿಸಿದರು. ಬ್ಯಾಂಡ್‌ಸೆಟ್ ಶಬ್ದಕ್ಕೆ ಆಯಾ ಪಕ್ಷದ ಮುಖಂಡರು, ಕಾರ್ಯಕರ್ತರು ಹೆಜ್ಜೆಹಾಕಿದರು. ಜೋಡಿರಸ್ತೆ ಮಾರ್ಗವಾಗಿ ತಾಲ್ಲೂಕು ಕಚೇರಿಗೆ ಸಾಗಿದರು.ಹೀಗಾಗಿ, ಜೋಡಿರಸ್ತೆಯಲ್ಲಿ ಸಂಚಾರ ವ್ಯತ್ಯಯಗೊಂಡಿತು. ತಾಲ್ಲೂಕು ಕಚೇರಿ ಮುಂಭಾಗ ಎಲ್ಲ ಪಕ್ಷದ ಮುಖಂಡರು, ಕಾರ್ಯಕರ್ತರ ದಂಡು ನೆರೆದಿತ್ತು. ತಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ನಂತರ ಮತ್ತೆ ಪಕ್ಷದ ಕಚೇರಿಗಳತ್ತ ಅವರ ಬೆಂಬಲಿಗರು ಮೆರವಣಿಗೆ ಮೂಲಕ ಸಾಗಿದರು.`ಚುನಾವಣೆ ವ್ಯವಸ್ಥೆ ಬದಲಿಸಿ'

ನಾಮಪತ್ರ ಸಲ್ಲಿಕೆಗೂ ಮೊದಲು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಕೊಳದ ಗಣಪತಿ, ಮಾರಮ್ಮ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ ಹಾಗೂ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ತಮ್ಮ ಬೆಂಬಲಿಗರೊಂದಿಗೆ ತಾಲ್ಲೂಕು ಕಚೇರಿಗೆ ಮೆರವಣಿಗೆ ಮೂಲಕ ಸಾಗಿ ಉಮೇದುವಾರಿಕೆ ಸಲ್ಲಿಸಿದರು.ವಾಟಾಳ್ ನಾಗರಾಜ್ ಮಾತನಾಡಿ, `ಪ್ರಸ್ತುತ ಚುನಾವಣೆಗಳು ವ್ಯಾಪಾರೀಕರಣದ ವೇಷ ತೊಟ್ಟಿವೆ. ಸಂಸತ್ ಹಾಗೂ ವಿಧಾನಸಭೆಗೆ ಆದರ್ಶ ವ್ಯಕ್ತಿಗಳು ಆಯ್ಕೆಯಾಗಿ ಬರುತ್ತಿಲ್ಲ. ಅಕ್ರಮ ಚಟುವಟಿಕೆಯಲ್ಲಿ ತೊಡಗಿರುವ ಮಂದಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣಾ ವ್ಯವಸ್ಥೆ ಬದಲಾಯಿಸಲು ಆಯೋಗ ಕ್ರಮಕೈಗೊಳ್ಳಬೇಕು' ಎಂದು ಒತ್ತಾಯಿಸಿದರು.ವಾಟಾಳ್ ನಾಗರಾಜ್ ಅವರ ಪುತ್ರ ಮಹದೇವಪ್ರಸಾದ್, ಪುತ್ರಿ ಅನುಪಮಾ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.ಚಾಮರಾಜೇಶ್ವರನಿಗೆ ಪೂಜೆ

ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟರಂಗಶೆಟ್ಟಿ ಪಕ್ಷದ ಕಚೇರಿಯಿಂದ ಮೆರವಣಿಗೆ ಆರಂಭಿಸಿದರು. ನಂತರ, ಚಾಮರಾಜೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಅಲ್ಲಿಂದ ಜೋಡಿರಸ್ತೆ ಮಾರ್ಗವಾಗಿ ತಾಲ್ಲೂಕು ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.ನಂತರ ಮಾತನಾಡಿದ ಪುಟ್ಟರಂಗಶೆಟ್ಟಿ, `ಇಂದಿನಿಂದ ಅಧಿಕೃತವಾಗಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸುತ್ತೇನೆ. ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಎಲ್ಲ ವರ್ಗದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈ ಬಾರಿಯೂ ಮತದಾರರು ನನಗೆ ಆಶೀರ್ವಾದ ಮಾಡಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಂಸದ ಆರ್. ಧ್ರುವನಾರಾಯಣ ಮಾತನಾಡಿ, `ರಾಜ್ಯದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಜನರು ಬೇಸತ್ತಿದ್ದಾರೆ. ಆ ಪಕ್ಷ ಈಗ ಮೂರು ಹೋಳಾಗಿದೆ. ರಾಜ್ಯದ ಮತದಾರರು ಬದಲಾವಣೆ ಬಯಸುತ್ತಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.ಕೆಜೆಪಿ ಪ್ರಚಾರದ ಭರಾಟೆ

ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಪಕ್ಷದ ಕಚೇರಿಯಿಂದ ಮೆರವಣಿಗೆ ಆರಂಭಿಸಿದರು. ನಂತರ, ವೀರಭದ್ರೇಶ್ವರ ದೇಗುಲ, ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.ಬಳಿಕ ದೇವಸ್ಥಾನದ ಮುಂಭಾಗದಿಂದ ಜೋಡಿರಸ್ತೆ ಮಾರ್ಗವಾಗಿ ತಾಲ್ಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.ನಂತರ ಮಾತನಾಡಿದ ಅವರು, `ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಮತದಾರರಿಗೆ ಅರಿವು ಇದೆ. ಈಗಾಗಲೇ, ಕ್ಷೇತ್ರದಲ್ಲಿ ಶೇ. 60ರಷ್ಟು ಪ್ರಚಾರ ಪೂರ್ಣಗೊಳಿಸಿದ್ದೇನೆ. ಉಳಿದ ಪ್ರಚಾರ ಕಾರ್ಯವನ್ನು ಈಗ ಆರಂಭಿಸಲಾಗುವುದು. ಪ್ರಚಾರದ ವೇಳೆ ಜನರು ಹೆಚ್ಚಿನ ಬೆಂಬಲ ನೀಡುತ್ತಿದ್ದಾರೆ. ಹೀಗಾಗಿ, ನನಗೆ ಗೆಲ್ಲುವ ವಿಶ್ವಾಸವಿದೆ' ಎಂದು ಹೇಳಿದರು.

ಪ್ರತಿಕ್ರಿಯಿಸಿ (+)