ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ

7

ನಾಮಪತ್ರ ಸಲ್ಲಿಕೆ ಇಂದಿನಿಂದ ಆರಂಭ

Published:
Updated:

ಉಡುಪಿ: ಮಾ.18ರಂದು ನಡೆಯುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆಗಳು ನಡೆದಿದ್ದು ಉಡುಪಿ-ಚಿಕ್ಕಮಗಳೂರು ಸೇರಿ ಒಟ್ಟು 1510 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತಿದೆ. ಅವುಗಳಲ್ಲಿ 759 ಸೂಕ್ಷ್ಮ ಹಾಗೂ 261 ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.ರಜತಾದ್ರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಡಾ.ಎಂ.ಟಿ.ರೇಜು, ಇದೇ 22ರಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದು, ಮಾದರಿ ನೀತಿ ಸಂಹಿತೆ ಈಗಾಗಲೇ ಜಾರಿಗೆ ಬಂದಿದೆ. ಇದೇ 22ರಿಂದ 29ರವರೆಗೆ ಬೆ.11ರಿಂದ ಸಂಜೆ 3ರವರೆಗೆ  ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಚಿಕ್ಕಮಗಳೂರಿನ ಅಭ್ಯರ್ಥಿಗಳೂ ಇಲ್ಲಿಯೇ ನಾಮಪತ್ರ ಸಲ್ಲಿಸಬೇಕು ಎಂದರು.ಮಾ.1ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮಾ.3ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ.  ಮಾ.16ರಂದು ಸಂಜೆ 5ಕ್ಕೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ಮಾ.18ರಂದು ಚುನಾವಣೆ, ಮಾ.21ರಂದು ಮತ ಎಣಿಕೆ ನಡೆಯಲಿದೆ. ಉಡುಪಿ ಕುಂಜಿ ಬೆಟ್ಟುವಿನ ಡಾ.ಟಿ.ಎ.ಪೈ ಆಂಗ್ಲಮಾಧ್ಯಮ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ ಎಂದರು.23ರ ವರೆಗೆ ಹೊಸ ಮತದಾರರ ಸೇರ್ಪಡೆ:  ಉಡುಪಿ ಜಿಲ್ಲೆಯ ಉಡುಪಿ, ಕಾರ್ಕಳ, ಕಾಪು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದರೆ, ಚಿಕ್ಕಮಗಳೂರಿನಲ್ಲಿ ಚಿಕ್ಕಮಗ ಳೂರು, ಮೂಡಿಗೆರೆ, ತರೀಕೆರೆ ಮತ್ತು ಶೃಂಗೇರಿಯನ್ನು ಒಳಗೊಂಡಿದೆ. ಒಟ್ಟು ಮತದಾರರ ಸಂಖ್ಯೆ 12.45 ಲಕ್ಷ. ಉಡುಪಿ ಜಿಲ್ಲೆಯಲ್ಲಿ ಒಟ್ಟು 6.26,876 ಮತದಾರರಿದ್ದು ಅವರಲ್ಲಿ ಶೇ 99.14ರಷ್ಟು ಮತದಾರರು ಫೋಟೊ ಗುರುತಿನ ಚೀಟಿ ಹೊಂದಿದ್ದಾರೆ. ಚಿಕ್ಕಮಗಳೂರಿನಲ್ಲಿ 6.18ಲಕ್ಷ ಮತದಾರರಿದ್ದು ಅಲ್ಲಿ ಶೇ 95.89ರಷ್ಟು ಮತದಾರರು ಫೋಟೊ ಗುರುತಿನ ಚೀಟಿ ಹೊಂದಿದ್ದಾರೆ. ಹೀಗಾಗಿ ಇನ್ನುಳಿದ ಮತದಾರರಿಗೆ ಗುರುತಿನ ಚೀಟಿ ಹಾಗೂ ಹೊಸ ಮತದಾರರು ಇದೇ  23ರವರೆಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದರು.ವೆಚ್ಚಮಿತಿ ರೂ.40 ಲಕ್ಷ : 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಅಭ್ಯರ್ಥಿಗೆ ರೂ.25 ಲಕ್ಷದವರೆಗೆ ಚುನಾವಣಾ ವೆಚ್ಚ ಮಾಡಲು ಅವಕಾಶವಿತ್ತು. ಈ ಬಾರಿ ಚುನಾವಣಾ ವೆಚ್ಚವನ್ನು ರೂ.40 ಲಕ್ಷದವರೆಗೆ ಮಾಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.ಚುನಾವಣೆಗಾಗಿ ಜಿಲ್ಲಾಡಳಿತ ಒಟ್ಟು ರೂ.4 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠ ಡಾ.ಬೋರಲಿಂಗಯ್ಯ, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಶರ್ಮ, ಹೆಚ್ಚುವರಿ ಡಿ.ಸಿ ಕುಮಾರ್ ಇದ್ದರು.

ನೀತಿ ಸಂಹಿತೆ ಉಲ್ಲಂಘನೆ ತಡೆಗೆ ಅಧಿಕಾರಿ ನೇಮಕ

ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳನ್ನು ಗಮನಿಸಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಗಟ್ರೂಡ್ ವೇಗಸ್ ಅವರನ್ನು ಚಿಕ್ಕಮಗಳೂರು ಜಿಲ್ಲಾಮಟ್ಟದ ಎಂಸಿಸಿ ಅಧಿಕಾರಿ ಯನ್ನಾಗಿ ಜಿಲ್ಲಾ ಚುನಾವಣಾಧಿಕಾರಿ ನೇಮಿಸಿದ್ದಾರೆ.ನೀತಿ ಸಂಹಿತೆ ಉಲ್ಲಂಘನೆಯಾಗುವ ಅಥವಾ ಉಲ್ಲಂಘನೆಯಾಗಿದೆ ಎಂದು ವರದಿಯಾಗುವ ಪಕ್ರರಣಗಳು ಕಂಡುಬಂದ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry