ಬುಧವಾರ, ಜೂನ್ 23, 2021
22 °C
ಜೆಡಿಎಸ್‌ ಕಾರ್ಯಕರ್ತರ, ಅಭಿಮಾನಿಗಳ ಮೆರವಣಿಗೆ

ನಾಮಪತ್ರ ಸಲ್ಲಿಸಿದ ಗೂಳಿಹಟ್ಟಿ ಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ  ಮಾಜಿ ಸಚಿವ ಗೂಳಿಹಟ್ಟಿ ಡಿ.ಶೇಖರ್ ಶುಕ್ರವಾರ ಅಪಾರ ಅಭಿಮಾನಿಗಳೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಗೂಳಿಹಟ್ಟಿ ಡಿ.ಶೇಖರ್‌ ಅವರು ತೆರೆದ ವಾಹನದಲ್ಲಿ ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಯಲ್ಲಿ ಸಾಗಿದರು. ರಸ್ತೆಯುದ್ದಕ್ಕೂ ಅಭಿಮಾನಿಗಳತ್ತ ಕೈಬೀಸಿ ಮತಯಾಚನೆ ಮಾಡಿದರು.

ಮೆರವಣಿಗೆಯುದ್ದಕ್ಕೂ ಪಕ್ಷದ ಬಾವುಟ ಹಿಡಿದು ಕುಣಿದು ಕುಪ್ಪಳಿಸಿದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಗೂಳಿಹಟ್ಟಿ ಶೇಖರ್‌ಗೆ ಜಯಕಾರ ಕೂಗಿದರು. ಡೊಳ್ಳು, ತಮಟೆ ವಾದ್ಯದ ನಡುವೆ ಕಾರ್ಯಕರ್ತರ ಹರ್ಷೊದ್ಗಾರ ಮುಗಿಲು ಮುಟ್ಟಿತ್ತು.ಉರಿಬಿಸಿಲಿಗೆ ಕೆಲವರು ತಲೆ ಮೇಲೆ ಟೋಪಿಗಳನ್ನು ಹಾಕಿಕೊಂಡಿದ್ದರೆ ಮತ್ತೆ ಕೆಲವರು ಬಾವುಟಗಳನ್ನು ಟೋಪಿಯಾಗಿಸಿಕೊಂಡು, ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳುವ ಪ್ರಯತ್ನಿಸುತ್ತಿದ್ದದು ಕಂಡು ಬಂದಿತು.‘ನಾನು ಸ್ಥಳೀಯ ವ್ಯಕ್ತಿ. ನಗರದ ಹಳೆ ಮಾಧ್ಯಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವನು. ಜಿಲ್ಲೆಯ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದೇನೆ. ಜಿಲ್ಲೆಯ ಅಭಿವೃದ್ದಿ ಬಗ್ಗೆ ಸಾಕಷ್ಟು ಕನಸು ಕಂಡಿದ್ದೇನೆ. ಎಲ್ಲವನ್ನು ನನಸಾಗಿಸಲು ಮತದಾರರು ಗೆಲ್ಲಿಸಿ ಸಂಸತ್ತಿಗೆ ಕಳಿಸಬೇಕು’ ಎಂದು ವಿನಂತಿಸಿದರು.ಗೂಳಿಹಟ್ಟಿ ಜೊತೆ ಪಕ್ಷದ ರಾಜ್ಯಘಟಕದ ಅಧ್ಯಕ್ಷ ಎ.ಕೃಷ್ಣಪ್ಪ, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಡಿ.ಯಶೋಧರ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್, ಮಾಜಿ ಸಚಿವ ಸತ್ಯನಾರಾಯಣ ವಾಹನದಲ್ಲಿದ್ದರು.ಇದಕ್ಕೂ ಮುನ್ನ ಕನಕವೃತ್ತದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಮತದಾರರು ನನ್ನನ್ನು ಆಶೀರ್ವದಿಸಿ ಲೋಕಸಭೆ ಕಳಿಸಿದರೆ ಬರದ ನಾಡು ಚಿತ್ರದುರ್ಗ ಜಿಲ್ಲೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದರು.

ಕ್ರೀಡಾ ಸಚಿವನಾಗಿದ್ದಾಗ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಜಿಲ್ಲೆಯ ಜನರ ಕಷ್ಟ-ಸುಖಗಳನ್ನು ಅರಿತಿದ್ದೇನೆ. ಅದಕ್ಕಾಗಿಯೇ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.ಕೇಂದ್ರದಲ್ಲಿ ತೃತೀಯ ರಂಗ ಅಧಿಕಾರಕ್ಕೆ ಬರುತ್ತದೆ. ಜೆಡಿಎಸ್ ವರಿಷ್ಠ ದೇವೇಗೌಡರು ಮತ್ತೆ ಪ್ರಧಾನಿಯಾಗುತ್ತಾರೆ. ಜಿಲ್ಲೆಯ ಅಭಿವೃದ್ಧಿಯ ನನ್ನ ಕನಸು ನನಸಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ ಮಾತನಾಡಿ, ‘ಚಿತ್ರದುರ್ಗ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಭದ್ರಾ ಮೇಲ್ದಂಡೆ ಯೋಜನೆ ಮತ್ತು ರೈಲ್ವೆ ಯೋಜನೆಯನ್ನು ತುರ್ತಾಗಿ ಕಾರ್ಯರೂಪಕ್ಕೆ ತರಬೇಕಿದೆ. ಬರಪೀಡಿತ ಚಿತ್ರದುರ್ಗ ಜಿಲ್ಲೆಯ ಅಭಿವೃದ್ದಿಗೆ ಗೂಳಿಹಟ್ಟಿ ಡಿ.ಶೇಖರ್‌ ಅವರನ್ನು ಮತದಾರರು ಗೆಲ್ಲಿಸಿ ಸಂಸತ್ತಿಗೆ ಕಳಿಸಿಬೇಕಿದೆ’ ಎಂದರು.ಗೂಳಿಹಟ್ಟಿ ಶೇಖರ್ ಆಸ್ತಿ ₨ 80 ಲಕ್ಷ

ಚಿತ್ರದುರ್ಗ:
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೂಳಿಹಟ್ಟಿ ಶೇಖರ್ ಅವರು ಶುಕ್ರವಾರ ಚುನಾವಣಾ ಅಧಿಕಾರಿಗಳಿಗೆ ಆಸ್ತಿ ವಿವರ ಸಲ್ಲಿಸಿದ್ದು, ಆ ಪ್ರಕಾರ ಶೇಖರ್ ಅವರ ಒಟ್ಟು ₨ 80.60 ಲಕ್ಷ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಹೊಂದಿದ್ದಾರೆ.

ಬೆಂಗಳೂರಿನಲ್ಲಿ ಓಂ ಶಕ್ತಿ ಗ್ರಾನೈಟ್ ಕಂಪೆನಿಯಲ್ಲಿ ₨ ೫೧.೭೮ ಲಕ್ಷ ಹೂಡಿಕೆ ಮಾಡಿದ್ದಾರೆ. ಹೊಳಲ್ಕೆರೆ ತಾಲೂಕಿನ ಪಾಪೇನಹಳ್ಳಿಯಲ್ಲಿರುವ ಪಿತ್ರಾರ್ಜಿತ ಆಸ್ತಿ ೨.೨೦ ಎಕರೆ ಕೃಷಿ ಜಮೀನು ಇದೆ. ಇದರ ಮೌಲ್ಯ ₨ ೧೨ ಲಕ್ಷ. ಬೆಂಗಳೂರಿನಲ್ಲಿ ಬಿಡಿಎ ನಿವೇಶನ ಖರೀದಿಗಾಗಿ ₨ ೮.೫೦ ಲಕ್ಷ ಮುಂಗಡ ಹಣ ನೀಡಿದ್ದಾರೆ. ಬೆಂಜ್ ಕಾರ್ ಖರೀದಿಗಾಗಿ ₨ ೩.೫೦ ಲಕ್ಷ ಮುಂಗಡ ಹಣ ನೀಡಿದ್ದಾರೆ.ನಗದು ₨ ೯೦ ಸಾವಿರ ಹಣವಿದೆ. ನಾಗರತ್ನ ಎಂಬುವವರಿಗೆ ನೀಡಿರುವ ಕೈ ಸಾಲ ₨  ೨೦ ಲಕ್ಷ ಬರಬೇಕಿದೆ. ೧೫೦ ಗ್ರಾಂ ಚಿನ್ನಾಭರಣವಿದ್ದು, ಅದರ ಮೌಲ್ಯ ₨ ೪.೫೦ ಲಕ್ಷ. ಹೊಸದುರ್ಗದಲ್ಲಿ ₨ ೪.೮೦ ಲಕ್ಷ ಮೌಲ್ಯದ ಆಸ್ತಿ ಹೊಂದಿದ್ದಾರೆ. ಹೊಸದುರ್ಗ ಎಸ್‌ಬಿಎಂ ಶಾಖೆಯಲ್ಲಿ ಜಮೀನು ಅಭಿವೃದ್ಧಿಗಾಗಿ ₨ ೬.೮೨ ಲಕ್ಷ ಸಾಲ ಮಾಡಿದ್ದಾರೆ.ಹೊಸದುರ್ಗ ತಾಲೂಕಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಜನಪ್ರತಿನಿಧಿ ಕಾಯ್ಕೆ ಅಡಿಯಲ್ಲಿ ಇವರ ವಿರುದ್ಧ ಒಂದು ಪ್ರಕರಣ ದಾಖಲಾಗಿದ್ದು ವಿಚಾರಣೆ ಹಂತದಲ್ಲಿದೆ’ ಎಂದು ಅವರು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.