ಸೋಮವಾರ, ನವೆಂಬರ್ 18, 2019
23 °C

ನಾಮಪತ್ರ: ಹರಿದು ಬಂದ ಜನಸಾಗರ

Published:
Updated:

ಕಾರವಾರ: ಉಮೆದುವಾರಿಕೆ ಸಲ್ಲಿಸಲು ಬುಧವಾರ ಕೊನೆಯ ದಿನವಾಗಿದ್ದರಿಂದ ಕಾಂಗ್ರೆಸ್, ಜೆಡಿಎಸ್, ಕೆಜೆಪಿ, ಬಿಎಸ್‌ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಇಲ್ಲಿಯ ಚುನಾವಣಾಧಿಕಾರಿಗಳ ಕಚೇರಿಗೆ ಆಗಮಿಸಿದ್ದರಿಂದ ಕಾರವಾರ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿತ್ತು.ನಗರದಲ್ಲಿ ಎಲ್ಲಿ ನೋಡಿದರಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕಂಡುಬಂದರು. ಜೆಡಿಎಸ್ ಹಾಗೂ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಗಳು ಮೆರವಣಿಗೆ ಹೊರಡಲು ಇಲ್ಲಿಯ ಮಿತ್ರ ಸಮಾಜ ಮೈದಾನ ಆಯ್ಕೆಮಾಡಿಕೊಂಡಿದ್ದರಿಂದ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ ಉಂಟಾಯಿತು.ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ತಾಲ್ಲೂಕಿನ ಹಾಗೂ ಅಂಕೋಲಾ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಂದ ಸಾವಿರಾರು ಜನ ಆಗಮಿಸಿದ್ದರಿಂದ ಹಳ್ಳಿಗಳಲ್ಲಿ ಬಿಕೋ ಎನ್ನುವ ವಾತಾವರಣವಿತ್ತು.ನಾಮಪತ್ರ ಸಲ್ಲಿಸಲು ಜನರನ್ನು ಕರೆತರಲು ಪಕ್ಷದವರು ಪ್ರಯಾಣಿಕರು ಟೆಂಪೊಗಳನ್ನು ಬಾಡಿಗೆಗೆ ಪಡೆದಿದ್ದರಿಂದ ಕಾರವಾರ-ಅಂಕೋಲಾದ ಮಧ್ಯೆ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಟೆಂಪೊಗಳ ಸಂಚಾರವೇ ಇರಲಿಲ್ಲ.ಇದರಿಂದಾಗಿ ಗ್ರಾಮೀಣ ಭಾಗಕ್ಕೆ ಹೋಗುವ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.ನಾಮಪತ್ರ ಸಲ್ಲಿಸಲು ಮಹಿಳೆಯರೂ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. `ಸೈಲ್ ಅವರು ನಾಮಪತ್ರ ಸಲ್ಲಿಸುವುದಿದೆ. ಬರಬೇಕು ಎಂದು ಟಿಂಪೊ ವ್ಯವಸ್ಥೆ ಮಾಡಿದ್ದರು. ಅದಕ್ಕಾಗಿ ನಾವು ಬಂದಿದ್ದೇವೆ' ಎಂದು ಮಹಿಳೆಯೊಬ್ಬಳು `ಪ್ರಜಾವಾಣಿ'ಗೆ ತಿಳಿಸಿದರು.ಊಟಕ್ಕಾಗಿ ಪರದಾಟ: ಏಕಕಾಲದಲ್ಲಿ ಸಾವಿರಾರು ಜನರು ನಗರದತ್ತ ಮುಖಮಾಡಿದ್ದರಿಂದ ಊಟಕ್ಕೂ ಪರದಾಡಬೇಕಾಯಿತು. ಸಸ್ಯ ಹಾಗೂ ಮಾಂಸಹಾರಿ ಹೋಟೆಲ್‌ಗಳಲ್ಲಿ ಭರ್ಜರಿ ವಹಿವಾಟು ನಡೆಯಿತು. ಮಧ್ಯಾಹ್ನ 2 ಗಂಟೆಯೊಳಗೆ ಊಟ ಖಾಲಿಯಾಗಿದೆ ಎನ್ನುವ ಫಲಕಗಳು ಹೋಟೆಲ್‌ನ ಹೊರಗಡೆ ಕಂಡುಬಂದಿತು.

ಪ್ರತಿಕ್ರಿಯಿಸಿ (+)